Site icon Vistara News

ವಿಸ್ತಾರ TOP 10 NEWS | ಬ್ರಿಟನ್‌ಗೆ ʼರಿಷಿʼ ಪ್ರಧಾನಿಯಿಂದ ಸೈನಿಕರೊಂದಿಗೆ ಮೋದಿ ದೀಪಾವಳಿವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 24102022

ಬೆಂಗಳೂರು: ಅನೇಕ ಏಳುಬೀಳುಗಳನ್ನು ಕಾಣುತ್ತಿರುವ ಬ್ರಿಟನ್‌ ರಾಜಕೀಯದಲ್ಲಿ ನಡೆದ ಮಹತ್ವದ ಬದಲಾವಣೆಯಲ್ಲಿ ಭಾರತೀಯ ಮೂಲದ ರಿಷಿ ಸುನಕ್‌ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಆರು ವರ್ಷದಲ್ಲಿ ಐದನೇ ಪ್ರಧಾನಿಯಾಗಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮಾಗಡಿ ತಾಲೂಕಿನ ಬಂಡೇಮಠ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಬೆಳಗಾವಿಯಲ್ಲಿ ಮಾಂಜಾ ದಾರಕ್ಕೆ ಸಿಲುಕಿ ಬಾಲಕ ಮೃತಪಟ್ಟಿದ್ದಾನೆ, ಸೈನಿಕರೊಂದಿಗೆ ಮೋದಿ ದೀಪಾವಳಿ ಆಚರಿಸಿಕೊಂಡಿದ್ದಾರೆ, ಮಂಗಳವಾರ ಘಟಿಸುವ ಸೂರ್ಯಗ್ರಹಣದ ಕುರಿತು ಸಮಗ್ರ ಮಾಹಿತಿ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Rishi Sunak | ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್‌ ಬ್ರಿಟನ್‌ ನೂತನ ಪ್ರಧಾನಿ, ಅ.28ಕ್ಕೆ ಪದಗ್ರಹಣ

ಲಂಡನ್: ಭಾರತ ಮೂಲದ ರಿಷಿ ಸುನಕ್ (Rishi Sunak) ಅವರು ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ಅಕ್ಟೋಬರ್ 28ರಂದು ಪದಗ್ರಹಣ ಮಾಡಲಿದ್ದಾರೆ. 45 ದಿನಗಳಷ್ಟೇ ಪ್ರಧಾನಿಯಾಗಿದ್ದ ಲಿಜ್ ಟ್ರಸ್ ರಾಜೀನಾಮೆ ಹಿನ್ನೆಲೆಯಲ್ಲಿ ಪ್ರಧಾನಿ ಆಯ್ಕೆ ಪ್ರಕ್ರಿಯೆಗಳು ನಡೆದಿದ್ದವು. ಸುನಕ್ ಅವರಿಗೆ 196 ಕನ್ಸರ್ವೇಟಿವ್ ಪಕ್ಷದ ಸಂಸದರ ಬೆಂಬಲ ವ್ಯಕ್ತವಾಗಿತ್ತು. ಆದರೆ, ಪ್ರತಿಸ್ಪರ್ಧಿ ಪೆನ್ನಿ ಮೋರ್ಡಾಂಟ್ ಅವರಿಗೆ ಕೇವಲ 27 ಸಂಸದರು ಬೆಂಬಲ ಘೋಷಿಸಿದ್ದರು. ಮತದಾನ ನಡೆಯಬೇಕಿದ್ದರೆ, ಕನಿಷ್ಠ 10 ಸಂಸದರ ಬೆಂಬಲವನ್ನು ಪೆನ್ನಿ ಅವರ ಪಡೆಯಬೇಕಿತ್ತು. ಆದರೆ, ಅವರು ವಿಫಲವಾದ ಹಿನ್ನೆಲೆಯಲ್ಲಿ ಸುನಕ್ ಅವರನ್ನು ಮುಂದಿನ ಪ್ರಧಾನಿಯಾಗಿ ಘೋಷಿಸಲಾಯಿತು.
ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಅವರನ್ನು ವಿವಾಹವಾಗಿರುವ ರಿಷಿ ಸುನಕ್ ಅವರು, ಇಂಗ್ಲೆಂಡ್‌ ರಾಜನಗಿಂತಲೂ ಹೆಚ್ಚು ಶ್ರೀಮಂತರಾಗಿದ್ದಾರೆ. ಅವರ ಬಗ್ಗೆ ಗೊತ್ತಿರದ ಸಂಗತಿಗಳು ಇಲ್ಲಿವೆ ಓದಿ.

2. ಬಂಡೇಮಠ ಶ್ರೀ ಆತ್ಮಹತ್ಯೆಗೆ ಖಾಸಗಿ ವಿಡಿಯೊ ಕಾರಣ? ಮಹಿಳೆ, ಗ್ಯಾಂಗ್‌ನಿಂದ ಬ್ಲ್ಯಾಕ್‌ಮೇಲ್‌

ಮಾಗಡಿ ತಾಲೂಕಿನ ಕಂಚುಗಲ್‌ ಬಂಡೇಮಠದ ಶ್ರೀ ಬಸವಲಿಂಗ ಸ್ವಾಮೀಜಿ (೪೫) ಅವರ ಆತ್ಮಹತ್ಯೆಗೆ ಒಂದು ಖಾಸಗಿ ವಿಡಿಯೊ ಕಾರಣ. ಅದನ್ನು ಹಿಡಿದುಕೊಂಡು ಒಬ್ಬ ಮಹಿಳೆ ಮತ್ತು ಗ್ಯಾಂಗ್‌ ಅವರನ್ನು ಬ್ಲ್ಯಾಕ್‌ ಮೇಲ್‌ ಮಾಡುತ್ತಿತ್ತು ಎಂದು ತಿಳಿದುಬಂದಿದೆ. ಸ್ವಾಮೀಜಿ ಅವರು ಬರೆದಿರುವ ಎರಡು ಪುಟಗಳ ಡೆತ್‌ ನೋಟದಲ್ಲಿ ಈ ಬಗ್ಗೆ ಉಲ್ಲೇಖ ಮಾಡಿದ್ದಾರೆ ಎಂದು ಹೇಳಲಾಗಿದೆ.
ಬಂಡೇ ಮಠ ಅತ್ಯಂತ ಪ್ರಭಾವಿ ಮತ್ತು ಜನಪ್ರಿಯ ಮಠಗಳಲ್ಲಿ ಒಂದು. ಬಹುದೊಡ್ಡ ಭಕ್ತ ವೃಂದವನ್ನು ಹೊಂದಿದೆ. ಇಂಥ ಮಠದಲ್ಲಿ ಈ ರೀತಿಯ ವಿದ್ಯಮಾನಗಳು ನಡೆದಿವೆ ಎನ್ನುವುದು ಪ್ರಚಾರವಾದರೆ ಮಠ ಮತ್ತು ತಮ್ಮ ಮರ್ಯಾದೆಗೆ ಕುಂದುಂಟಾಗುತ್ತದೆ ಎಂದು ಭಾವಿಸಿ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. ವಾಲ್ಮೀಕಿ ಶ್ರೀಗಳ ಕೈಗೆ ಸುಗ್ರೀವಾಜ್ಞೆ ಪ್ರತಿಯಿತ್ತ ಸರ್ಕಾರ; 257 ದಿನದ ಪ್ರತಿಭಟನೆ ಅಂತ್ಯ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಮೀಸಲಾತಿ (Reservation in Karnataka) ಹೆಚ್ಚಳಕ್ಕೆ ಆಗ್ರಹಿಸಿ ಕಳೆದ 257 ದಿನಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಅಂತ್ಯಗೊಂಡಿದೆ. ಭಾನುವಾರ ಮೀಸಲಾತಿ ಹೆಚ್ಚಿಸಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ವಾಪಸ್‌ ಪಡೆದುಕೊಳ್ಳಲಾಗಿದೆ. ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಕಳೆದ ಫೆಬ್ರವರಿ 10 ರಿಂದ ಅಹೋರಾತ್ರಿ ಧರಣಿ ಆರಂಭವಾಗಿತ್ತು. ಒಟ್ಟಾರೆಯಾಗಿ ಎಂಟೂವರೆ ತಿಂಗಳಿನಿಂದ ಅಹೋರಾತ್ರಿ ಧರಣಿ ನಡೆಯುತ್ತಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. ಭಯೋತ್ಪಾದನೆಗೆ ಅಂತ್ಯ ಹಾಡಿದ ಕಾರ್ಗಿಲ್ ಎಂದ ಮೋದಿ: ಸೈನಿಕರ ಜತೆ ಮೋದಿ ದೀಪಾವಳಿ ಆಚರಣೆ

ಪ್ರತಿ ವರ್ಷದಂತೆ ಈ ವರ್ಷವೂ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿಯನ್ನು ಸೈನಿಕರು ಜತೆ ಆಚರಿಸುತ್ತಿದ್ದಾರೆ. ಸೋಮವಾರ ಬೆಳಗ್ಗೆ ಕಾರ್ಗಿಲ್‌(PM in Kargil)ಗೆ ತೆರಳಿ, ಯೋಧರನ್ನು ಉದ್ದೇಶಿಸಿ, ಭಯೋತ್ಪಾದೆಯನ್ನು ಕೊನೆಗಾಣಿಸುವುದೇ ದೀಪಾವಳಿ. ಆ ಕೆಲಸವನ್ನು ಕಾರ್ಗಿಲ್ ಸಾಧ್ಯವಾಗಿಸಿದೆ ಎಂದು ತಿಳಿಸಿದರು. ಪ್ರಧಾನಿ ಮೋದಿ ಅವರು 2014ರಿಂದಲೂ ದೀಪಾವಳಿಯನ್ನು ಯೋಧರ ಜತೆ ಆಚರಿಸುತ್ತಿದ್ದಾರೆ. ಕಾರ್ಗಿಲ್‌ನಲ್ಲಿ ಪಡೆಗಳು ಭಯೋತ್ಪಾದನೆಯನ್ನು ಹೊಸಕಿ ಹಾಕಿವೆ. ಇದಕ್ಕೆ ನಾನು ಸಾಕ್ಷಿಯಾಗಿದ್ದು ನನ್ನ ಸುದೈವ ಎಂದು ಮೋದಿ ಬಣ್ಣಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
Deepavali 2022 | ಆಧ್ಯಾತ್ಮಿಕವಾಗಿಯೂ ಮಹತ್ವ ಪಡೆದ ಪರ್ವ ಈ ದೀಪಾವಳಿ

5. ಗ್ರಹಣದಲ್ಲಿ ಈ ದೇವರುಗಳಿಗೆ ಇಲ್ಲ ಪೂಜೆ-ಪುನಸ್ಕಾರ; ಹೋಗುವ ಮುಂಚೆ ಒಮ್ಮೆ ಗಮನಿಸಿ

ಮಂಗಳವಾರ ಕೇತುಗ್ರಸ್ತ ಖಂಡಗ್ರಾಸ ಸೂರ್ಯಗ್ರಹಣ (Solar Eclipse 2022) ಹಿನ್ನೆಲೆ ಬೆಂಗಳೂರಿನ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತಿದೆ. ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ದಿನವಿಡಿ ದರ್ಶನ ಇದ್ದರೆ, ಕಾಡುಮಲ್ಲೇಶ್ವರನಿಗೆ ದರ್ಬಾಬಂಧನ ಹಾಕಲಾಗುತ್ತಿದೆ. ಹಾಗಾದರೆ ಯಾವ್ಯಾವ ದೇಗುಲದಲ್ಲಿ, ಯಾವ ಸಮಯದಲ್ಲಿ ಪೂಜೆ-ಪುನಸ್ಕಾರ ಇರಲಿದೆ, ನಿರ್ಬಂಧ ಹೇರಲಾಗುತ್ತಿದೆ ಎಂಬುದರ ಮಾಹಿತಿ ಇಲ್ಲಿದೆ.
ಹೆಚ್ಚಿನ ಓದಿಗಾಗಿ: Solar Eclipse 2022 | ಸೂರ್ಯ ಗ್ರಹಣ ಏಕೆ ಸಂಭವಿಸುತ್ತಿದೆ? ಇದನ್ನು ನೋಡುವುದು ಹೇಗೆ?
ಹೆಚ್ಚಿನ ಓದಿಗಾಗಿ: Solar Eclipse 2022 | ಕೇತುಗ್ರಸ್ತ ಸೂರ್ಯ ಗ್ರಹಣ ಹಿನ್ನೆಲೆ ಸಾರ್ವಜನಿಕರಿಗಿಲ್ಲ ನಾಳೆ ಹಾಸನಾಂಬೆ ದರ್ಶನ

6. ಯಾರೋ ಹಾರಿಸಿದ ಗಾಳಿಪಟದ ಮಾಂಜಾ ದಾರ ಬಾಲಕನ ಪ್ರಾಣ ತೆಗೆಯಿತು

ಯಾರೋ ಹಾರಿಸಿದ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಐದು ವರ್ಷದ ಬಾಲಕನೊಬ್ಬ ಮೃತಪಟ್ಟ ದಾರುಣ ಘಟನೆ ಬೆಳಗಾವಿಯ ಗಾಂಧಿನಗರದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ವರ್ಧನ್ ಬ್ಯಾಳಿ (5) ಮೃತ ಬಾಲಕ ಎಂದು ಗುರುತಿಸಲಾಗಿದೆ. ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಗೆ ತಂದೆಯ ಜೊತೆಗೆ ಬೆಳಗಾವಿಗೆ ಬಂದಿದ್ದ ಬಾಲಕ, ಬಟ್ಟೆ ತೆಗೆದುಕೊಂಡು ಊರಿಗೆ ತಂದೆಯ ಜೊತೆಗೆ ಬೈಕ್ ಮೇಲೆ ಹೋಗುವಾಗ ಈ ಘಟನೆ ನಡೆದಿದೆ. ಬೈಕ್ ಮೇಲೆ ಮುಂದೆ ಕುಳಿತಿದ್ದ ಬಾಲಕ ವರ್ಧನ್ ಕೊರಳಿಗೆ ಗಾಳಿಪಟದ ಮಾಂಜಾದಾರ ಬಿಗಿದುಕೊಂಡಿದೆ. ದಾರ ತೆಗೆಯಲು ಎಷ್ಟೇ ಪ್ರಯತ್ನಪಟ್ಟರೂ ಅದು ಬಿಡಿಸಲಾಗದೆ ಕೊರಳಿಗೆ ಇನ್ನಷ್ಟು ಬಿಗಿಯಾಗಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ಓದಿಗಾಗಿ: ವಿಸ್ತಾರ Explainer | ಅಮಾಯಕರ ಜೀವ ತೆಗೆಯುತ್ತಿರುವ ಚೈನೀಸ್ ಮಾಂಜಾ ದಾರ, ನಿಷೇಧ ಇದ್ದರೂ ಸಿಗೋದು ಹೇಗೆ?

7. ಕಾಫಿರರನ್ನು ಕೊಲ್ಲಿ ಎಂದು ಕೂಗುತ್ತಾ ಕೊಚ್ಚಿದರು! ಹರ್ಷ ಕೊಲೆ ನಡೆದದ್ದು ಹೀಗೆ | ಸ್ಫೋಟಕ ವಿವರ

ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷನ ಕೊಲೆಗೆ ಬಳಸಿದ ರಕ್ತಸಿಕ್ತ ಆಯುಧದ ಜತೆಗೆ ಪಾತಕಿಗಳು ಸೆಲ್ಫಿ ತೆಗೆದುಕೊಂಡಿದ್ದರು. ಹರ್ಷನನ್ನು ಕೊಚ್ಚುವಾಗ ʼಕಾಫಿರರನ್ನು ಕೊಲ್ಲೋಣʼ ಎಂದು ಘೋಷಣೆ ಕೂಗಿದ್ದರು ಎಂಬುದು ಬಯಲಾಗಿದೆ. ಕೊಲೆ ಪ್ರಕರಣದ ಹಿಂದಿನ ಸ್ಫೋಟಕ ವಿವರಗಳನ್ನು ಎನ್‌ಐಎ ಬಿಚ್ಚಿಟ್ಟಿದ್ದು, ಎನ್‌ಐಎ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಈ ವಿವರಗಳು ದಾಖಲಾಗಿವೆ. 2022ರ ಫೆಬ್ರವರಿಯಲ್ಲಿ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ನಡೆದಿತ್ತು. ಹತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನಂತರ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿತ್ತು. ಎನ್‌ಐಎನಿಂದ ಹತ್ತು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಹಲವು ಭಯಾನಕ ಸತ್ಯಗಳು ಬಹಿರಂಗಗೊಂಡಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Coimbatore Blast | ಕೊಯಮತ್ತೂರು ಸ್ಫೋಟ ಆಕಸ್ಮಿಕವಲ್ಲ, ಭಯೋತ್ಪಾದನಾ ಕೃತ್ಯ?

ಭಾನುವಾರ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟ (Coimbatore Blast) ಪ್ರಕರಣವು ಆಕಸ್ಮಿಕ ಸ್ಫೋಟವಲ್ಲ, ಅದು ಭಯೋತ್ಪಾದನೆ ಕೃತ್ಯವಾಗಿತ್ತು ಎಂಬ ಸಂಗತಿಯು ಇದೀಗ ಬೆಳಕಿಗೆ ಬಂದಿದೆ. ಗುಪ್ತಚರದ ಉನ್ನತ ಮೂಲಗಳನ್ನು ಉಲ್ಲೇಖಿಸಿ ಈ ಮಾಧ್ಯಮಗಳು ಕುರಿತು ವರದಿ ಮಾಡುತ್ತಿವೆ. ಈ ಸ್ಫೋಟದಲ್ಲಿ ಜಮೇಶಾ ಮುಬಿನ್ ಎಂಬಾತ ಮೃತಪಟ್ಟಿದ್ದ. ಅಸಲಿಗೆ ಆತನೇ ಈ ಸ್ಫೋಟದ ರೂವಾರಿ ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ, ಈ ಪ್ರಕರಣವನ್ನು ಎನ್ಐಎ ತನಿಖೆ ನಡೆಸುವ ಸಾಧ್ಯತೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. IND VS PAK | ಪಾಕ್‌ ವಿರುದ್ಧ ಭಾರತದ ಗೆಲುವಿನಿಂದ ಟಿ20 ವಿಶ್ವ ಸಮರಕ್ಕೆ ಮತ್ತಷ್ಟು ರಂಗು

ಟಿ೨೦ ವಿಶ್ವ ಕಪ್‌ನ ಸೂಪರ್ 12 ಹಂತದ ಪಾಕಿಸ್ತಾನ ಮತ್ತು ಭಾರತ (IND VS PAK) ವಿರುದ್ಧದ ಭಾನುವಾರದ ಸೂಪರ್‌ ಥ್ರಿಲ್ಲಿಂಗ್‌ ಪಂದ್ಯದಲ್ಲಿ ಟೀಮ್‌ ಇಂಡಿಯಾ ಗೆದ್ದು ವಿಶ್ವ ಕಪ್‌ ಕೂಟಕ್ಕೆ ಮತಷ್ಟು ಮೆರುಗು ತಂದಿದೆ. ಅದರಲ್ಲೂ ಪಾಕ್‌ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದು ಅಭಿಮಾನಿಗಳಿಗೆ ಮತಷ್ಟು ಖುಷಿ ತಂದಿದೆ. ಜತೆಗೆ ಪಾಕ್‌ ಕೂಡ ಮುಂದಿನ ಪಂದ್ಯದಲ್ಲಿ ಗೆದ್ದು ಮತ್ತೊಮ್ಮೆ ಭಾರತ ವಿರುದ್ಧ ಮುಖಾಮುಖಿಯಾಗಬೇಕೆಂದು ಅಭಿಮಾನಿಗಳು ಬಯಸಿದ್ದಾರೆ. ಅಷ್ಟರ ಮಟ್ಟಿಗೆ ಕಾಂಗಾರೂ ನಾಡಿನ ವಿಶ್ವ ಸಮರ ಕ್ರೇಜ್‌ ಹುಟ್ಟಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ʻಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರʼ ಎಂಬ ಹೆಗ್ಗಳಿಕೆಗೆ ಪಾತ್ರವಾಯ್ತು ಕಾಂತಾರ!

ಬೆಂಗಳೂರು : ಕಾಂತಾರ ಸಿನಿಮಾ (Kantara Movie) ಅಕ್ಟೋಬರ್‌ 30ರಂದು ಬಿಡುಗಡೆಯಾಗಿತ್ತು. 200ಕೋಟಿ ರೂ. ಚಿತ್ರ ಈಗಾಗಲೇ ಗಳಿಕೆ ಕಂಡಿದೆ ಎನ್ನಲಾಗುತ್ತಿದೆ. ಪರಭಾಷೆಯಲ್ಲಿಯೂ ಕಾಂತಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೆ ದೀಪಾವಳಿಗೆ ಹೊಂಬಾಳೆ ಫಿಲಮ್ಸ್ ಸಿಹಿ ಸುದ್ದಿಯನ್ನು ಹಂಚಿಕೊಂಡಿದೆ. ಈವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿದೆ. ಕನ್ನಡದಲ್ಲಿ ಈವರೆಗೆ ಕೆಜಿಎಫ್‌, 777 ಚಾರ್ಲಿ ಬಗ್ಗೆಯೇ ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿದ್ದರು. ಇದೀಗ ಕಾಂತರ ಸಿನಿಮಾ ವಿಶ್ವದೆಲ್ಲಡೆ ತನ್ನ ಛಾಪು ಮೂಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

Deepavali Gift | ಸ್ಥಳೀಯ ಜನಪ್ರತಿನಿಧಿಗಳಿಗೆ ಸಚಿವ ಆನಂದ್‌ ಸಿಂಗ್‌ ಗಿಫ್ಟ್‌: 1 ಲಕ್ಷ ರೂ. ನಗದು, ಅರ್ಧ ಕೆಜಿ ಬೆಳ್ಳಿ!
Kerala Governor | ಕುಲಪತಿಗಳ ರಾಜೀನಾಮೆಗೆ ಕೇರಳ ರಾಜ್ಯಪಾಲ ಆದೇಶ, ಇಂದು ಸಂಜೆ ಹೈಕೋರ್ಟ್‌ನಲ್ಲಿ ವಿಚಾರಣೆ
ಪಲ್ಟಿ ಹೊಡೆಸದೇ ಇದ್ದಿದ್ದರೆ ನಾನು ಸಿಎಂ ಆಗಿರುತ್ತಿದ್ದೆ: ಕೊರಟಗೆರೆಯಲ್ಲಿ ಡಾ. ಜಿ. ಪರಮೇಶ್ವರ್‌ ಹೇಳಿಕೆ
BJP Target 150 | ಹಳೆ ಮೈಸೂರಿನಲ್ಲಿ ಗುರಿ ಸಾಧಿಸಲು ಬಿಜೆಪಿಯ 11 ಪ್ರಯತ್ನಗಳು

Exit mobile version