Site icon Vistara News

ವಿಸ್ತಾರ TOP 10 NEWS | ಹೊತ್ತಿ ಉರಿದ ಲಂಕೆಯಿಂದ ಹಾರಿದ ಗೊಟಬಯ ಹಾಗೂ ದಿನದ ಪ್ರಮುಖ ಸುದ್ದಿಗಳಿವು

vistara top 10 09072022

ಬೆಂಗಳೂರು: ದೋಷಪೂರಿತ ನೀತಿ, ಅತಿಯಾದ ಭ್ರಷ್ಟಾಚಾರ ಮುಂತಾದ ಕಾರಣಕ್ಕೆ ನೆರೆ ರಾಷ್ಟ್ರ ಶ್ರೀಲಂಕಾ ಅರಾಜಕತೆಗೆ ದೂಡಲ್ಪಟ್ಟಿದ್ದು, ಪ್ರತಿಭಟನೆಯ ಭಯದಿಂದಾಗಿ ಅಧ್ಯಕ್ಷ ರಾಜಪಕ್ಸ ದೇಶಬಿಟ್ಟು ಹಾರಿದ್ದಾರೆ. ಅಮರನಾಥದಲ್ಲಿ ತೀವ್ರ ಮಳೆಯಿಂದ ಅನಾಹುತ ಮುಂದುವರಿದಿದೆ, ರಾಜ್ಯದೆಲ್ಲೆಡೆ ಮಳೆ ಭೀಕರತೆ ಮುಂದುವರಿದಿದೆ, ಕೆಲವೆಡೆ ಭೂಕಂಪನವೂ ಆಗಿದೆ ಎಂಬುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ತೀವ್ರ: ಅಧ್ಯಕ್ಷ ಗೊಟಬಯ ರಾಜಪಕ್ಸ ಅಧಿಕೃತ ನಿವಾಸ ಬಿಟ್ಟು ಪರಾರಿ, ಪ್ರಧಾನಿ ರಾಜೀನಾಮೆ
ತೀವ್ರ ಆರ್ಥಿಕ ಸಂಕಷ್ಟ ಮತ್ತು ಅರಾಜಕತೆಯಿಂದ ತತ್ತರಿಸುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಶನಿವಾರ ಕೊಲಂಬೋದಲ್ಲಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ರಾಜೀನಾಮೆ ಒತ್ತಾಯಿಸಿ ಬೃಹತ್‌ ಪ್ರತಿಭಟನೆ ನಡೆದಿದೆ. ಪ್ರತಿಭಟನಾಕಾರರು ರಾಷ್ಟ್ರಪತಿಗಳ ನಿವಾಸವನ್ನು ಸುತ್ತುವರೆದು ಮುತ್ತಿಗೆ ಹಾಕಲು ಸಜ್ಜಾಗುತ್ತಿದ್ದಂತೆಯೇ ರಾಜಪಕ್ಸ ಪರಾರಿಯಾಗಿದ್ದಾರೆ. ಪ್ರಧಾನಿ ರನಿಲ್‌ ವಿಕ್ರಮಸಿಂಘೆ ರಾಜೀನಾಮೆ ನೀಡಿದ್ದಾರೆ.(ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

2. ಭೀಕರ ಮಳೆಗೆ ನಲುಗಿದ ಕರುನಾಡು; ಕರಾವಳಿಯಲ್ಲಿ ಮುಂದುವರಿದ ರೆಡ್‌ ಅಲರ್ಟ್
ಭೀಕರ ಮಳೆಗೆ ಕರುನಾಡು ತತ್ತರಿಸಿದ್ದು, ವಿವಿಧೆಡೆ ಅಪಾರ ಪ್ರಮಾಣದ ಬೆಳೆ ಹಾಗೂ ಮನೆಗಳಿಗೆ ಹಾನಿಯಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಕೆರೆ-ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯಿಂದ ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತವಾಗಿದ್ದು, ವಿವಿಧೆಡೆ ಮಳೆಯಿಂದ ಶಾಲಾ-ಕಾಲೇಜಿಗಳಿಗೆ ರಜೆ ಘೋಷಿಸಲಾಗಿದೆ. ಕರಾವಳಿಯಲ್ಲಿ ಇನ್ನೂ ಎರಡು ದಿನ ರೆಡ್ ಅಲರ್ಟ್ ಮುಂದುವರಿದಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

3. ರಾಜ್ಯದ ವಿವಿಧೆಡೆ ಕಂಪಿಸಿದ ಭೂಮಿ, ಜನತೆಯಲ್ಲಿ ಆತಂಕ
ರಾಜ್ಯಾದ್ಯಂತ ಮಳೆ ಹಾಗೂ ರೆಡ್‌ ಅಲರ್ಟ್‌ ಮುಂದುವರಿದಿರುವಂತೆಯೇ ಶನಿವಾರ ವಿವಿಧೆಡೆ ಭೂಕಂಪನದಿಂದ ಜನರಲ್ಲಿ ಆತಂಕ ಮೂಡಿತ್ತು. ಪ್ರಮುಖವಾಗಿ ರಾಜ್ಯದ ವಿಜಯಪುರ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್‌ ಮಾಪಕದಲ್ಲಿ 3 ರಿಂದ 4.4 ಪ್ರಮಾಣದಲ್ಲಿ ಕಂಪನವಾಗಿದ್ದು, ಕೆಲವು ಕಡೆ ಮನೆ ಬಿರುಕು ಬಿಟ್ಟಿದೆ. ತೀವ್ರ ಹಾನಿಯಾಗಿಲ್ಲವಾದರೂ, ಭೂಮಿ ಕಂಪಿಸಿದ್ದಕ್ಕೆ ಜನರು ಭಯಭೀತವಾಗಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

4. ಬಿಜೆಪಿ ವಿರುದ್ಧ `ದೇಶದ್ರೋಹಿʼ ಅಸ್ತ್ರ: ದೇಶಾದ್ಯಂತ ಕಾಂಗ್ರೆಸ್‌ ಅಭಿಯಾನ
ಭಯೋತ್ಪಾದನೆ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ಕಾಂಗ್ರೆಸ್‌ ಪಕ್ಷ ಬೆಂಬಲ ನೀಡುತ್ತದೆ ಎಂದು ಅನೇಕ ವರ್ಷಗಳಿಂದ ಹೇಳುತ್ತಿರುವ ಬಿಜೆಪಿ ಅಸ್ತ್ರಕ್ಕೆ ಕಾಂಗ್ರೆಸ್‌ ತಿರುಗೇಟು ನೀಡಲು ಮುಂದಾಗಿದೆ. ಇತ್ತೀಚಿನ ಅನೇಕ ಘಟನೆಗಳನ್ನು ಮುಂದಿಟ್ಟುಕೊಂಡು, ಬಿಜೆಪಿ ಪದಾಧಿಕಾರಿಗಳೇ ಭಯೋತ್ಪಾದನೆ ಹಾಗೂ ಇನ್ನಿತರೆ ಸಮಾಜವಿರೋಧಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ವಾಗ್ದಾಳಿ ಮಾಡುತ್ತಿದೆ. ಇದೆಲ್ಲದರ ಹಿನ್ನೆಲೆಯಲ್ಲಿ, ಬಿಜೆಪಿ ಪಕ್ಷವು ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದೆ ಎಂದು ನಿರೂಪಿಸಲು ದೇಶಾದ್ಯಂತ ಕಾಂಗ್ರೆಸ್‌ ಶನಿವಾರ ಏಕಕಾಲದಲ್ಲಿ 22 ನಗರಗಳಲ್ಲಿ ಸುದ್ದಿಗೋಷ್ಠಿ ನಡೆಸಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೫. Live Updates: ಅಮರನಾಥ ಯಾತ್ರೆ ದುರಂತ; ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆ
ಜಮ್ಮು-ಕಾಶ್ಮೀರದ ಅಮರನಾಥ ಗುಹಾ ದೇವಾಲಯದ ಮೂಲ ಶಿಬಿರದ ಬಳಿ ನಡೆದ ಮಹಾ ಮೇಘಸ್ಫೋಟದಲ್ಲಿ ಮೃತಪಟ್ಟ ಯಾತ್ರಿಕರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಸುಮಾರು 40ಮಂದಿ ಗಾಯಗೊಂಡಿದ್ದಾರೆ. ಭಾರತೀಯ ಸೇನೆ ಯೋಧರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸುಮಾರು 30-35ಮಂದಿ ನಾಪತ್ತೆಯಾಗಿದ್ದು, ಐವರು ಮಾತ್ರ ಪತ್ತೆಯಾಗಿದ್ದಾರೆ. ಅತಿಯಾದ ಮಳೆಯಿಂದಾಗಿ ಪರ್ವತ ಪ್ರದೇಶದಿಂದ ಒಂದೇ ಸಮನೆ ನೀರು ಚಿಮ್ಮುತ್ತಿದೆ. ಇದರಿಂದಾಗಿ ಗುಡ್ಡಗಳು ಕುಸಿದು ಬೀಳುತ್ತಿದ್ದು, ಶಿಬಿರದಲ್ಲಿದ್ದ 25ಕ್ಕೂ ಹೆಚ್ಚು ಟೆಂಟ್‌ಗಳು, ಯಾತ್ರಿಕರಿಗೆ ಅಡುಗೆ ಮಾಡಲೆಂದು ನಿರ್ಮಿಸಲಾಗಿದ್ದ ಮೂರು ಟೆಂಟ್‌ಗಳೆಲ್ಲ ಕೊಚ್ಚಿಕೊಂಡು ಹೋಗಿವೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)
ಅಮರನಾಥ ಯಾತ್ರೆಗೆ ತೆರಳಿದ್ದ ರಾಜ್ಯದ ಯಾತ್ರಿಕರು ಸೇಫ್; ಯಾತ್ರೆ ರದ್ದಾದ ಹಿನ್ನೆಲೆ ವಾಪಸ್

6. ಟೆಲಿಕಾಂ ಕ್ಷೇತ್ರಕ್ಕೆ ಅದಾನಿ ಗ್ರೂಪ್‌ ಅಚ್ಚರಿಯ ಪ್ರವೇಶ; ಜಿಯೊ, ಏರ್‌ಟೆಲ್‌ಗೆ ನೇರ ಪೈಪೋಟಿ?
ಬಿಲಿಯನೇರ್‌ ಉದ್ಯಮಿ ಗೌತಮ್‌ ಅದಾನಿ ಅವರು ಟೆಲಿಕಾಂ ಸ್ಪೆಕ್ಟ್ರಮ್‌ ಖರೀದಿಸಲು ಯೋಜಿಸುತ್ತಿರುವುದಾಗಿ ಹೇಳಿದ್ದಾರೆ. ಇದರೊಂದಿಗೆ ಟೆಲಿಕಾಂ ಕ್ಷೇತ್ರಕ್ಕೆ ಅದಾನಿ ಗ್ರೂಪ್‌ ಅಚ್ಚರಿಯ ಪ್ರವೇಶ ಮಾಡಲಿದೆ. ನೇರವಾಗಿ ರಿಲಯನ್ಸ್‌ ಜಿಯೊ ಮತ್ತು ಭಾರ್ತಿ ಏರ್‌ಟೆಲ್‌ಗೆ ಪೈಪೋಟಿ ನೀಡಲಿದೆ. ಸ್ಪೆಕ್ಟ್ರಮ್‌ ಹರಾಜು ಜುಲೈ ೨೬ರಂದು ನಡೆಯಲಿದೆ. ೫ಜಿ ಸ್ಪೆಕ್ಟ್ರಮ್‌ ಹರಾಜು ಕೂಡ ನಡೆಯಲಿದೆ. ಜಿಯೊ, ಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ಈ ಹರಾಜಿನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೭. ಟ್ವಿಟರ್‌ ಖರೀದಿಸುವ 34 ಲಕ್ಷ ಕೋಟಿ ರೂ. ಡೀಲ್‌ ರದ್ದುಪಡಿಸಿದ ಎಲಾನ್‌ ಮಸ್ಕ್‌
ಸಾಮಾಜಿಕ ಜಾಲ ತಾಣ ಟ್ವಿಟರ್‌ ಕಂಪನಿಯನ್ನು ಖರೀದಿಸುವ ೪೪ ಶತಕೋಟಿ ಡಾಲರ್‌ ಮೊತ್ತದ (ಅಂದಾಜು ೩೪ ಲಕ್ಷ ಕೋಟಿ ರೂ.) ಡೀಲ್‌ ಅನ್ನು ಎಲಾನ್‌ ಮಸ್ಕ್‌ ರದ್ದುಪಡಿಸಿದ್ದಾರೆ. ಟ್ವಿಟರ್‌ ತನ್ನಲ್ಲಿರುವ ನಕಲಿ ಖಾತೆಗಳ ಲೆಕ್ಕವನ್ನು ಸ್ಪಷ್ಟವಾಗಿ ಕೊಟ್ಟಿಲ್ಲ ಎಂದು ವಿಶ್ವದ ನಂ.೧ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಆರೋಪಿಸಿದ್ದಾರೆ. ಡೀಲ್‌ ಮುರಿದು ಬೀಳಲು ಇದೇ ಕಾರಣ ಎಂದಿದ್ದಾರೆ. ಇದೀಗ ಟ್ವಿಟರ್‌ ಎಲಾನ್‌ ಮಸ್ಕ್‌ ವಿರುದ್ಧ ಕಾನೂನು ಸಮರಕ್ಕೆ ಸಜ್ಜಾಗಿದೆ. ಈ ನಡುವೆ ಟ್ವಿಟರ್‌ ಆಡಳಿತ ಮಂಡಳಿ ಅಧ್ಯಕ್ಷ ಬ್ರೆಟ್‌ ಟೇಲರ್‌, ಕಂಪನಿ ಈಗಲೂ ಡೀಲ್‌ ಅನ್ನು ಪೂರ್ಣಗೊಳಿಸಲು ಬದ್ಧವಾಗಿದೆ ಎಂದಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

8. ಚಾಮರಾಜಪೇಟೆ ಮೈದಾನದ ಸ್ವಚ್ಛತೆಗಿಳಿದ ಪೌರಕಾರ್ಮಿಕರು: ಬಂದ್‌ ಶತಃಸಿದ್ಧ ಎಂದ ʻವೇದಿಕೆʼ
ಚಾಮರಾಜಪೇಟೆಯಲ್ಲಿರುವ ಮೈದಾನದ ವಿವಾದ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ. ಮೈದಾನ ಯಾರದ್ದು ಎಂಬ ಗೊಂದಲದ ಮಧ್ಯೆಯೇ ಇದೀಗ ಬಕ್ರೀದ್‌ ಹಬ್ಬ ಬಂದಿದ್ದು(ಜುಲೈ 10), ಪೌರಕಾರ್ಮಿಕರು ಪೂರಕೆ ಹಿಡಿದು ಸ್ವಚ್ಛ ಕಾರ್ಯದಲ್ಲಿ ತೊಡಗಿರುವ ಚಿತ್ರಣ ಕಂಡು ಬಂದಿದೆ. ಸ್ವಚ್ಛಗೊಳಿಸಲು ಪಾಲಿಕೆಯಿಂದ ಆದೇಶ ಇಲ್ಲದಿದ್ದರೂ ಸ್ಥಳೀಯರ ಒತ್ತಾಯಕ್ಕೆ ಸ್ವಚ್ಛಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೆಲ್ಲದರ ನಡುವೆ, ಜುಲೈ 12ರಂದು ಚಾಮರಾಜಪೇಟೆ ಬಂದ್‌ಗೆ ಕರೆ ನೀಡಿರುವುದನ್ನು ಹಿಂಪಡೆಯುವುದಿಲ್ಲ ಎಂದು ʻಚಾಮರಾಜಪೇಟೆ ನಾಗರಿಕ ಬಂಧುಗಳ ಹಿತರಕ್ಷಣಾ ವೇದಿಕೆʼ ತಿಳಿಸಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೯. Nityanand Swamy | ನಿತ್ಯಾನಂದ ಸ್ವಾಮಿಯನ್ನು ಮದುವೆ ಆಗುವ ಆಸೆಯಂತೆ ಈ ನಟಿಗೆ!
ಪುನೀತ್‌ ರಾಜ್‌ಕುಮಾರ್‌ ನಟನೆಯ ರಾಜಕುಮಾರ ಮತ್ತು ಜೇಮ್ಸ್‌ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ತಮಿಳು ನಟಿ ಪ್ರಿಯಾ ಆನಂದ್‌ ಈಗ ತಮ್ಮ ಹೇಳಿಕೆ ಮೂಲಕ ಸಖತ್‌ ಸುದ್ದಿಯಲ್ಲಿದ್ದಾರೆ. ನಿತ್ಯಾನಂದ ಸ್ವಾಮಿ (Nityanand Swamy) ಬಗ್ಗೆ ಅವರು ಹೇಳಿಕೆಯೊಂದನ್ನು ಹಂಚಿಕೊಂಡಿದ್ದು, ಅದೀಗ ಚರ್ಚೆಗೆ ಗ್ರಾಸವಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

10. ಆರಗ ಜ್ಞಾನೇಂದ್ರ ರಾಜೀನಾಮೆಗೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಹಿಂದು ಜಾಗರಣಾ ವೇದಿಕೆಯಿಂದ ಪ್ರತಿಭಟನೆ
ರಾಜ್ಯದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಿಂದು ಜಾಗರಣಾ ವೇದಿಕೆ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದೆ. ರಾಜ್ಯದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲ ಎಂದು ಹಿಂಜಾವೇ ಆಕ್ರೋಶ ವ್ಯಕ್ತಪಡಿಸಿದ್ದು, ಗೃಹಸಚಿವ ಆರಗ ಜ್ಞಾನೇಂದ್ರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಸಲಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

Exit mobile version