Site icon Vistara News

ವಿಸ್ತಾರ TOP 10 NEWS | ವಿಜಯ್‌ ಮಲ್ಯ ಸಂಕಷ್ಟದಿಂದ `ಮಹಾʼ ಸರ್ಕಾರಕ್ಕೆ ರಿಲೀಫ್‌ವರೆಗೆ ಪ್ರಮುಖ ಸುದ್ದಿಗಳಿವು

top 10 news 11072022

ಬೆಂಗಳೂರು: ಉದ್ಯಮಕ್ಕಾಗಿ ಸಾವಿರಾರು ಕೋಟಿ ರೂ. ಸಾಲ ಪಡೆದು ಮರುಪಾವತಿಸದೆ ವಿದೇಶಕ್ಕೆ ಕಾಲ್ಕಿತ್ತಿರುವ ವಿಜಯ್‌ ಮಲ್ಯಗೆ ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್‌ 4 ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಿದೆ. ಏಕನಾಥ ಶಿಂಧೆ ಜತೆಗೆ ಆಗಮಿಸಿದ 16 ಶಾಸಕರ ವಿರುದ್ಧ ತಕ್ಷಣಕ್ಕೆ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್‌ ಹೇಳಿರುವುದು ಮಹಾರಾಷ್ಟ್ರ ಸರ್ಕಾರಕ್ಕೆ ರಿಲೀಫ್‌ ನೀಡಿದೆ. ಪಿಎಸ್‌ಐ ಹಗರಣದಲ್ಲಿ ಸೆರೆಯಾಗಿರುವ ಎಡಿಜಿಪಿ ಅಮೃತ್‌ ಪಾಲ್‌ ಡೈರಿಯಲ್ಲಿರುವ ಮಾಹಿತಿ ಕುರಿತು ರಾಜಕಾರಣಿಗಳಿಗೆ ನಡುಕ ಶುರುವಾಗಿದೆ. ಎಐಎಡಿಎಂಕೆ ಪಕ್ಷ ಇಬ್ಭಾಗ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಮಕ್ಕಳಿಗೆ ಅಕ್ರಮವಾಗಿ 312 ಕೋಟಿ ರೂ. ರವಾನೆ, ಮಲ್ಯಗೆ 4 ತಿಂಗಳ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂಕೋರ್ಟ್
ಮದ್ಯದ ಉದ್ಯಮಿ ವಿಜಯ್‌ ಮಲ್ಯ ಅವರಿಗೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ೪ ತಿಂಗಳ ಸೆರೆವಾಸದ ಶಿಕ್ಷೆಯನ್ನು ಸುಪ್ರೀಂಕೋರ್ಟ್‌ ಸೋಮವಾರ ಪ್ರಕಟಿಸಿದೆ. ಮಲ್ಯಗೆ ಸುಪ್ರೀಂಕೋರ್ಟ್‌ ೨,೦೦೦ ರೂ. ದಂಡವನ್ನೂ ವಿಧಿಸಿದೆ. ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿ ತನ್ನ ಮಕ್ಕಳಿಗೆ ೪೦ ದಶಲಕ್ಷ ಡಾಲರ್‌ ಹಣವನ್ನು ( 312 ಕೋಟಿ ರೂ.) ಅಕ್ರಮವಾಗಿ ವರ್ಗಾಯಿಸಿದ ಆರೋಪವನ್ನು ಮಲ್ಯ ಎದುರಿಸುತ್ತಿದ್ದರು. ಈ ೪೦ ದಶಲಕ್ಷ ಡಾಲರ್‌ ಹಣವನ್ನು ೪ ವಾರದೊಳಗೆ ಠೇವಣಿ ಇಡಬೇಕು. ಇಲ್ಲದಿದ್ದರೆ ಆಸ್ತಿ ಜಪ್ತಿ ಮಾಡಲಾಗುವುದು ಎಂದೂ ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

2. Maha politics: ಶಿಂಧೆ ಸರ್ಕಾರಕ್ಕೆ ಬಿಗ್‌ ರಿಲೀಫ್‌, 16 ಶಾಸಕರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಂತೆ ಸುಪ್ರೀಂ ಸೂಚನೆ
ಮಹಾರಾಷ್ಟ್ರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಮತ್ತು ಶಿವಸೇನಾ ಶಿಂಧೆ ಬಣದ ನೇತೃತ್ವದ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೋಮವಾರ ಬಿಗ್‌ ರಿಲೀಫ್‌ ನೀಡಿದೆ. ರಾಜ್ಯದಲ್ಲಿನ ಬಿಕ್ಕಟ್ಟಿಗೆ ಸಂಬಂಧಿಸಿ ಉದ್ಧವ್‌ ಠಾಕ್ರೆ ಬಣ ಸಲ್ಲಿಸಿದ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿರುವ ಸುಪ್ರೀಂಕೋರ್ಟ್‌, ಮಂಗಳವಾರವೂ ಅದನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇಲ್ಲ ಎಂದಿದೆ. ಶಿವಸೇನೆಯ ಶಿಂಧೆ ಬಣವನ್ನು ಸರಕಾರ ರಚನೆಗೆ ಆಹ್ವಾನಿಸಿದ ಮಹಾರಾಷ್ಟ್ರ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಉದ್ಧವ್‌ ಠಾಕ್ರೆ ಬಣ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೩. PSI Scam | ಅಮೃತ್‌ ಪಾಲ್‌ ಡೈರಿ ಸೀಕ್ರೆಟ್‌: ರಾಜಕಾರಣಿಗಳು, ಅಧಿಕಾರಿಗಳಿಗೆ ನಡುಕ
ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪ್ರಕರಣದಲ್ಲಿ ಇಲ್ಲಿಯವರೆಗೆ ಬಂಧಿತನಾಗಿರುವ ಅತ್ಯಂತ ಹಿರಿಯ ಸರ್ಕಾರಿ ಅಧಿಕಾರಿ ಅಮೃತ್‌ ಪಾಲ್‌ ಬಳಿ ಡೈರಿಯೊಂದು ಪತ್ತೆಯಾಗಿದ್ದು, ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ನಡುಕ ಆರಂಭವಾಗಿದೆ. 545 ಪಿಎಸ್‌ಐ ನೇಮಕಾತಿ ಕುರಿತಂತೆ ಒಎಂಆರ್‌ ಶೀಟ್‌ ತಿದ್ದುವ ಹಾಗೂ ಬ್ಲೂಟೂತ್‌ ಉಪಕರಣಗಳ ಮೂಲಕ ಭ್ರಷ್ಟಾಚಾರದ ಆರೋಪದಲ್ಲಿ ಈಗಾಗಲೆ ತನಿಖೆ ನಡೆಯುತ್ತಿದೆ. ತನಿಖೆಯ ಮುಂದುವರಿದ ಭಾಗವಾಗಿ, ನೇಮಕದ ಹೊಣೆ ಹೊತ್ತಿದ್ದ ಎಡಿಜಿಪಿ ಅಮೃತ್‌ ಪಾಲ್‌ ಅವರನ್ನು ಕಳೆದ ವಾರ ಸಿಐಡಿ ಬಂಧಿಸಿತ್ತು. ಪಿಎಸ್‌ಐ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅನೇಕ ಮಹತ್ವದ ಅಂಶಗಳು, ಅಮೃತ್‌ ಪಾಲ್ ಬಳಿಯಿಂದ ಸಿಕ್ಕಿರುವ ಡೈರಿಯಲ್ಲಿವೆ ಎನ್ನಲಾಗಿದೆ. ಮುಖ್ಯವಾಗಿ ರಾಜಕೀಯ ಮುಖಂಡರು, ಐಎಎಸ್ ಅಧಿಕಾರಿಗಳು, ಡಿವೈಎಸ್‌ಪಿಗಳು, ಪ್ರಭಾವಿಗಳ ಹೆಸರು ಉಲ್ಲೇಖವಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

4. AIADMK Tussle: ತಮಿಳುನಾಡು ವಿಪಕ್ಷ ಗೊಂದಲ; ಎಐಎಡಿಎಂಕೆಯಿಂದ ಪನ್ನೀರಸೆಲ್ವಂ ಉಚ್ಚಾಟನೆ
ತಮಿಳುನಾಡು ಎಐಎಡಿಎಂಕೆ ಪಕ್ಷದ ಉಭಯ ನಾಯಕತ್ವ ಅಧಿಕೃತವಾಗಿ ರದ್ದುಗೊಂಡಿದೆ. ಇಂದು ಪಕ್ಷದ ಸಾಮಾನ್ಯ ಸಭೆ ನಡೆದಿತ್ತು. ಅದರಲ್ಲಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಇತ್ತ ಒ.ಪನ್ನೀರಸೆಲ್ವಂಗೆ ತೀವ್ರ ಹಿನ್ನಡೆಯಾಗಿದ್ದಷ್ಟೇ ಅಲ್ಲ, ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದಡಿ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನದಿಂದಲೇ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಪನ್ನೀರಸೆಲ್ವಂ ಅವರು ಎಐಎಡಿಎಂಕೆಯ ಸಹ ಸಂಯೋಜಕರಾಗಿದ್ದರು, ಅಲ್ಲದೆ ಖಜಾಂಚಿಯೂ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೀಗ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದಲೂ ವಜಾಗೊಳಿಸಲಾಗಿದೆ. ಹಾಗೆಯೇ, ಪನ್ನೀರಸೆಲ್ವಂ ಬೆಂಬಲಿಗರಾದ ಆರ್‌.‌ ವೈಥಿಲಿಂಗಮ್‌, ಜೆಸಿಡಿ ಪ್ರಭಾಕರ್‌ ಮತ್ತು ಮನೋಜನ್‌ ಪಾಂಡಿಯನ್‌ ಅವರನ್ನೂ ಉಚ್ಚಾಟನೆ ಮಾಡಲಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)
ವಿಸ್ತಾರ Explainer: ಎಐಎಡಿಎಂಕೆ ಬಿರುಕು, ಅಣ್ಣಾ ದ್ರಾವಿಡ ಕಳಗಂನಲ್ಲಿ ಅಣ್ಣಂದಿರ ಕಾಳಗವೇಕೆ?

೫. ಅಬು ಸಲೇಂನನ್ನು ಜೀವನಪೂರ್ತಿ ಜೈಲಲ್ಲಿ ಇರಿಸುವಂತಿಲ್ಲ, 25 ವರ್ಷದ ಬಳಿಕ ಬಿಡುಗಡೆ ಮಾಡಲೇಬೇಕೆಂದ ಸುಪ್ರೀಂ
೧೯೯೩ರಲ್ಲಿ ನಡೆದ ಮುಂಬಯಿ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲಾಗಿರುವ ಅಬು ಸಲೇಂನನ್ನು ಜೀವನಪೂರ್ತಿ ಜೈಲಿನಲ್ಲಿ ಇಟ್ಟುಕೊಳ್ಳುವಂತಿಲ್ಲ. ೨೫ ವರ್ಷದ ಜೈಲು ಶಿಕ್ಷೆ ಅವಧಿ ಪೂರ್ತಿಯಾದ ಕೂಡಲೇ ಆತನನ್ನು ಬಿಡುಗಡೆ ಮಾಡಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್‌ ಸೋಮವಾರ ಹೇಳಿದೆ. ೨೦೦೫ರಲ್ಲಿ ಅಬು ಸಲೇಂನನ್ನು ಪೋರ್ಚುಗಲ್‌ನಿಂದ ಗಡಿಪಾರು ಮಾಡಿಕೊಳ್ಳುವಾಗ ಆತನ ಶಿಕ್ಷೆ ಅವಧಿ ೨೫ ವರ್ಷಕ್ಕಿಂತ ಹೆಚ್ಚು ಇರುವುದಿಲ್ಲ ಎಂಬ ವಾಗ್ದಾನವನ್ನು ಕೇಂದ್ರ ಸರ್ಕಾರ ಅಲ್ಲಿನ ಸರ್ಕಾರ ನೀಡಿತ್ತು. ಈ ಮಾತನ್ನು ಉಳಿಸಿಕೊಳ್ಳುವುದು ಸರ್ಕಾರದ ಹೊಣೆಗಾರಿಕೆ ಆಗಿರುತ್ತದೆ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

6. ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ವರುಣಾರ್ಭಟ, ಜುಲೈ 15ರವರೆಗೆ ಭಾರಿ ಮಳೆ ಸಾಧ್ಯತೆ
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಉತ್ತರ ಭಾರತದ ಭಾಗದಲ್ಲಂತೂ ಮಳೆ ತಂದಿರುವ ಅವಾಂತರಗಳು ಅಷ್ಟಿಷ್ಟಲ್ಲ. ಪ್ರವಾಹ, ಭೂಕುಸಿತದಿಂದ ಜನರು ಹೈರಾಣಾಗಿ ಹೋಗಿದ್ದಾರೆ. ಇತ್ತ ದಕ್ಷಿಣ ಭಾರತದಲ್ಲೂ ಮಳೆಯ ರೌದ್ರ ನರ್ತನ ಮುಂದುವರಿದಿದೆ. ಇನ್ನು ಐದು ದಿನಗಳ ಕಾಲ ಮಳೆ ಹೀಗೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ದೆಹಲಿ, ಮುಂಬೈ, ರಾಜಸ್ಥಾನ, ತೆಲಂಗಾಣ, ಹರಿಯಾಣ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಕೇರಳ ಸೇರಿದಂತೆ ಈ ಎಲ್ಲ ರಾಜ್ಯಗಳಲ್ಲಿ ಇನ್ನು ಐದು ದಿನಗಳ ಕಾಲ ಮಳೆ ಅಬ್ಬರಿಸಲಿದೆ. ಈಗಾಗಲೇ ಕೇರಳದ ಕರಾವಳಿ ಜಿಲ್ಲೆಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿರುವುದರಿಂದ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

7. ಮೋದಿಯಿಂದ ನೂತನ ಸಂಸತ್‌ ಭವನದ ಭವ್ಯ ರಾಷ್ಟ್ರೀಯ ಲಾಂಛನ ಅನಾವರಣ
ಪ್ರಧಾನಿ ನರೇಂದ್ರ ಮೋದಿಯವರು ನೂತನ ಸಂಸತ್‌ ಭವನದ ಮೇಲೆ ಭವ್ಯವಾದ ರಾಷ್ಟ್ರೀಯ ಲಾಂಛನವನ್ನು ಸೋಮವಾರ ಅನಾವರಣಗೊಳಿಸಿದರು. ನೂತನ ಸಂಸತ್‌ ಭವನ ಕಟ್ಟಡದ ಕೇಂದ್ರ ಭಾಗದ ಚಾವಣಿಯ ಮೇಲೆ ಪ್ರತಿಷ್ಠಾಪನೆಯಾಗಿರುವ ರಾಷ್ಟ್ರೀಯ ಲಾಂಛನವನ್ನು ಕಂಚಿನಿಂದ ತಯಾರಿಸಲಾಗಿದೆ. ಇದು ೬.೫ ಮೀಟರ್‌ ಎತ್ತರ ಮತ್ತು ೪.೪ ಮೀಟರ್‌ ಅಗಲವಿದ್ದು, ೯,೫೦೦ ಕೆ.ಜಿ ತೂಕವಿದೆ. ರಾಷ್ಟ್ರ ಲಾಂಛನಕ್ಕೆ ಪೂರಕವಾಗಿ ಉಕ್ಕಿನಿಂದ ತಯಾರಿಸಿದ ೬,೫೦೦ ಕೆ.ಜಿ ತೂಕದ ರಚನೆಯನ್ನೂ ಅಳವಡಿಸಲಾಗಿದೆ. ಒಟ್ಟು ಎಂಟು ಹಂತಗಳಲ್ಲಿ ಈ ಲಾಂಛನವನ್ನು ನಿರ್ಮಿಸಲಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೮. ಎಸಿಬಿ ವಿರುದ್ಧ ಮತ್ತೆ ಹರಿಹಾಯ್ದ ಹೈಕೋರ್ಟ್‌: ಬೆದರಿಕೆ ಆರೋಪ ಲಿಖಿತ ದಾಖಲು
ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಎಡಿಜಿಪಿ ಸೀಮಂತ್‌ಕುಮಾರ್‌ ಸಿಂಗ್‌ ಅವರ ವಿರುದ್ಧ ಮಾತನಾಡಿದ್ದಕ್ಕೆ ತಮಗೆ ಬೆದರಿಕೆ ಒಡ್ಡಲಾಗಿತ್ತು ಎಂದು ಕಳೆದ ವಾರ ಅಚ್ಚರಿಯ ವಿಚಾರವನ್ನು ಬಹಿರಂಗಪಡಿಸಿದ್ದ ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರು ಆರೋಪವನ್ನು ದಾಖಲು ಮಾಡಿಸಿದ್ದಾರೆ. ಹಾಲಿ ನ್ಯಾಯಮೂರ್ತಿಯೊಬ್ಬರು ನನ್ನ ಪಕ್ಕದಲ್ಲಿ ಬಂದು ಕುಳಿತು, ತಮಗೆ ದೆಹಲಿಯಿಂದ ಈ ಕುರಿತು ಕರೆ ಬಂದಿರುವುದಾಗಿ ತಿಳಿಸಿದರು. ದೂರವಾಣಿ ಕರೆ ಮಾಡಿದವರು ನನ್ನ ಕುರಿತು ಮಾಹಿತಿ ಕೇಳಿದ್ದಾರೆ ಎಂದು ಹೇಳಿದರು. ನಾನು ಯಾವುದೇ ರಾಜಕೀಯ ಪಕ್ಷದ ಜತೆಗೆ ಸಂಬಂಧ ಹೊಂದಿಲ್ಲ ಎಂದು ನಾನು ಹೇಳಿದೆ. ಇಷ್ಟಕ್ಕೂ ನ್ಯಾಯಾಧೀಶರು ಸುಮ್ಮನಾಗದೆ, ಎಡಿಜಿಪಿ (ಸೀಮಂತ್‌ಕುಮಾರ್‌ ಸಿಂಗ್‌) ಉತ್ತರ ಭಾರತದವರಾಗಿದ್ದು, ಬಹಳ ಪ್ರಭಾವಶಾಲಿಯಾಗಿದ್ದಾರೆ. ನಿಮ್ಮ ವರ್ಗಾವಣೆಯನ್ನೂ ಮಾಡಿಸಬಹುದು ಎಂದು ತಿಳಿಸಿದರು ಎಂದು ದಾಖಲು ಮಾಡಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

9. ಖಾಸಗಿ ನೌಕರರ ನಿವೃತ್ತಿ ವಯಸ್ಸು 58 ಅಲ್ಲ 60: ಹೈಕೋರ್ಟ್‌ ಮಹತ್ವದ ಆದೇಶ
ಖಾಸಗಿ ಕಂಪನಿಗಳ ನೌಕರರ ನಿವೃತ್ತಿಯ ವಯಸ್ಸಿನ ಕುರಿತು ಕರ್ನಾಟಕ ಹೈಕೋರ್ಟ್‌ ಧಾರವಾಡ ಪೀಠ ಮಹತ್ವದ ಆದೇಶ ನೀಡಿದೆ. ಖಾಸಗಿ ನೌಕರರ ನಿವೃತ್ತಿ ವಯಸ್ಸನ್ನು 58 ವರ್ಷದಿಂದ 60 ವರ್ಷಕ್ಕೆ ಏರಿಸಬೇಕು ಎಂಬ ಸರ್ಕಾರದ ಆದೇಶವನ್ನು ನ್ಯಾಯಪೀಠ ಎತ್ತಿ ಹಿಡಿದಿದೆ. ಈ ಮೂಲಕ ಖಾಸಗಿ ನೌಕರರ ನಿವೃತ್ತಿಯ ವಯೋಮಿತಿ ಹೆಚ್ಚಳಕ್ಕೆ ಅಸ್ತು ಎಂದಿದೆ. ಕರ್ನಾಟಕ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶಗಳ ತಿದ್ದುಪಡಿ ನಿಯಮಗಳ ಮಾದರಿ ಅನ್ವಯ, ನೌಕರರ ನಿವೃತ್ತಿ ವಯಸ್ಸು ಏರಿಸಿ ಸರ್ಕಾರ 2017ರಲ್ಲಿ ಆದೇಶಿಸಿತ್ತು. ರಾಜ್ಯ ಸರ್ಕಾರದ ಈ ಆದೇಶವನ್ನು ಹರಿಹರದ ಗ್ರಾಸಿಂ ಇಂಡಸ್ಟ್ರೀಸ್ ಕಂಪನಿಯು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿತ್ತು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೧೦. ಗೋವಾದಲ್ಲಿ ಕಾಂಗ್ರೆಸ್‌ ಕಗ್ಗಂಟು; ಲೋಬೋ, ಕಾಮತ್‌ರನ್ನು ಅನರ್ಹಗೊಳಿಸಲು ಸ್ಪೀಕರ್‌ಗೆ ಅರ್ಜಿ
ಗೋವಾದಲ್ಲಿ ಕಾಂಗ್ರೆಸ್‌ನಲ್ಲಿ ಏಳು ಶಾಸಕರು ಬಂಡಾಯ ಎದ್ದ ಬೆನ್ನಲ್ಲೇ, ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ. ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿಯಿಂದ ಭರ್ಜರಿ ಹಣದ ಆಫರ್‌ ಬರುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಇನ್ನು ಪಕ್ಷದಲ್ಲಿ ಉಂಟಾದ ಈ ಗೊಂದಲಕ್ಕೆ ಪಕ್ಷದ ನಾಯಕರಾದ ಮೈಕಲ್‌ ಲೋಬೋ ಮತ್ತು ದಿಗಂಬರ್‌ ಕಾಮತ್‌ ಅವರೇ ಕಾರಣ ಎಂದೂ ಕಾಂಗ್ರೆಸ್‌ ಪ್ರಮುಖರು ಹೇಳಿದ್ದಾರೆ. ಈಗಾಗಲೇ ಮೈಕೆಲ್‌ ಲೋಬೋರನ್ನು ಗೋವಾ ವಿಧಾನಸಭೆ ವಿಪಕ್ಷ ನಾಯಕನ ಸ್ಥಾನದಿಂದ ವಜಾಗೊಳಿಸಲಾಗಿದೆ. ಇದೀಗ ಇನ್ನೂ ಮುಂದುವರಿದು ಮೈಕೆಲ್‌ ಲೋಬೋ ಮತ್ತು ದಿಗಂಬರ್‌ ಕಾಮತ್‌ರನ್ನು ಅನರ್ಹಗೊಳಿಸಬೇಕು ಎಂಬ ಅರ್ಜಿಯನ್ನು ವಿಧಾನಸಭೆ ಸ್ಪೀಕರ್‌ಗೆ ಸಲ್ಲಿಸಲಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

Exit mobile version