Site icon Vistara News

ವಿಸ್ತಾರ TOP 10 NEWS | ನೂಪುರ್‌ ಶರ್ಮಾ ಬೆಂಬಲಿಗನ ಶಿರಚ್ಛೇದ ಹಾಗೂ ಇತರ 9 ಪ್ರಮುಖ ಸುದ್ದಿಗಳು ಇಲ್ಲಿವೆ

VISTARA top 10 28062022

ಬೆಂಗಳೂರು: ಅನೇಕ ದಿನಗಳಿಂದ ದೇಶ ವಿದೇಶಗಳಲ್ಲಿ ವಿವಾದ, ಪ್ರತಿಭಟನೆಗೆ ಕಾರಣವಾಗಿದ್ದ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಹೇಳಿಕೆ ಪ್ರಕರಣದ ಮುಂದಿನ ಭಾಗವಾಗಿ, ರಾಜಸ್ಥಾನದ ಹಿಂದು ಯುವಕನ ಬರ್ಬರ ಶಿರಚ್ಛೇದ ನಡೆದಿದೆ. ಬಹುತೇಕ ಶಾಂತವಾಗುತ್ತಿದ್ದ ವಿವಾದ ಮತ್ತೆ ಭುಗಿಲೇಳುವ ಸೂಚನೆಯನ್ನು ಈ ಘಟನೆ ನೀಡಿದೆ. ಮಹಾರಾಷ್ಟ್ರದಲ್ಲಿ ಮುಂದುವರಿದ ರಾಜಕೀಯ ಹಗ್ಗಜಗ್ಗಾಟ, ಕರ್ನಾಟಕದಲ್ಲಿ ಶೇ.40 ಕಮಿಷನ್‌ ಪ್ರಕರಣಕ್ಕೆ ಪ್ರಧಾನಿ ಮೋದಿ ಕಚೇರಿ ಮಧ್ಯಪ್ರವೇಶ, ಮಹತ್ವದ ಜಿಎಸ್‌ಟಿ ಮಂಡಳಿ ಸಭೆ ಸೇರಿದಂತೆ ದಿನದ ಪ್ರಮುಖ ಹತ್ತು ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS ಇಲ್ಲಿದೆ.

1. ನೂಪುರ್‌ ಶರ್ಮಾ ಬೆಂಬಲಿಸಿ ಪೋಸ್ಟ್‌ ಹಾಕಿದ ಹಿಂದು ಯುವಕನ ಶಿರಚ್ಛೇದ; ರಸ್ತೆ ಮಧ್ಯೆ ರಕ್ತದೋಕುಳಿ
ಪ್ರವಾದಿ ಮೊಹಮ್ಮದ್‌ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುವ ಮೂಲಕ ವಿವಾದ ಸೃಷ್ಟಿಸಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾರಿಗೆ ಬೆಂಬಲ ವ್ಯಕ್ತಪಡಿಸಿ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಹಾಕಿದ್ದ ಹಿಂದು ಯುವಕನ ಶಿರಚ್ಛೇದ ಮಾಡಲಾಗಿದೆ. ಈ ಭೀಕರ ಘಟನೆ ನಡೆದಿದ್ದು ರಾಜಸ್ಥಾನದ ಉದಯಪುರದಲ್ಲಿ. ಇಲ್ಲಿನ ಮಾಲ್ಡಾಸ್‌ ರಸ್ತೆಯಲ್ಲಿ ಇಬ್ಬರು ಮುಸ್ಲಿಂ ಯುವಕರು ಸೇರಿ ಹುಡುಗನ ತಲೆ ಕತ್ತರಿಸಿದ್ದಾರೆ. ಹಾಡಹಗಲಲ್ಲೇ ರಕ್ತದೋಕುಳಿಯಾಗಿದೆ. ಮೃತನನ್ನು ಕನ್ನಯ್ಯ ಲಾಲ್‌ (27)ಎಂದು ಗುರುತಿಸಲಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೨. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಮುಂದಾದ ಬಿಜೆಪಿ; ಏಕನಾಥ್‌ ಶಿಂಧೆಗೆ ಉಪಮುಖ್ಯಮಂತ್ರಿ ಹುದ್ದೆ ಆಫರ್‌
ಮಹಾರಾಷ್ಟ್ರದಲ್ಲಿ ಶಿವಸೇನೆ ಸರ್ಕಾರ ಅತಂತ್ರವಾಗಿದೆ. ೧೬ ಬಂಡಾಯ ಶಾಸಕರ ಅನರ್ಹತೆ ನೋಟಿಸ್‌ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಜು.11ರವರೆಗೆ ಮುಂದೂಡಿದೆ. ಇದೇ ಹೊತ್ತಲ್ಲಿ ಬಿಜೆಪಿ ಫುಲ್‌ ಅಲರ್ಟ್‌ ಆಗಿದ್ದು, ಸರ್ಕಾರ ರಚನೆಗೆ ಮುಂದಾಗಿದೆ. ಶಿವಸೇನೆ ಬಂಡಾಯ ಶಾಸಕ ಏಕನಾಥ್‌ ಶಿಂಧೆಗೆ ಉಪ ಮುಖ್ಯಮಂತ್ರಿ ಹುದ್ದೆಯ ಆಫರ್‌ ಕೊಡುವ ಮೂಲಕ ಮೈತ್ರಿಗೆ ಆಹ್ವಾನಿಸಿದೆ ಎಂದು ಮೂಲಗಳು ತಿಳಿಸಿವೆ.  (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

3. 40% ಕಮಿಷನ್‌ ಅಂಗಳಕ್ಕೆ ಮೋದಿ ಕಚೇರಿ ಎಂಟ್ರಿ: ಗುತ್ತಿಗೆದಾರರಿಗೆ ಖುಷಿ, ಸರ್ಕಾರಕ್ಕೆ ನಡುಕ
ರಾಜ್ಯ ಸರ್ಕಾರವನ್ನು ಅನೇಕ ದಿನಗಳವರೆಗೆ ಕಾಡಿ ಹಿರಿಯ ಸಚಿವರೊಬ್ಬರ ರಾಜೀನಾಮೆಗೂ ಕಾರಣವಾದ ನಲವತ್ತು ಪರ್ಸೆಂಟ್‌ ಕಮಿಷನ್‌ ಹಗರಣದಲ್ಲಿ ಇದೀಗ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರ ಕಚೇರಿ ಮಧ್ಯಪ್ರವೇಶ ಮಾಡಿದೆ. ಸುಮಾರು ಒಂದು ವರ್ಷದ ಹಿಂದೆ ಗುತ್ತಿಗೆದಾರರ ಸಂಘ ನೀಡಿದ್ದ ದೂರಿನ ಕುರಿತು ಪ್ರಧಾನಿ ಕಾರ್ಯಾಲಯ ಪ್ರಕ್ರಿಯೆ ಆರಂಭಿಸಿರುವುದು ಗುತ್ತಿಗೆದಾರರಲ್ಲಿ ಸಂತಸ ಮೂಡಿಸಿದ್ದರೆ, ಸರ್ಕಾರದಲ್ಲಿ ನಡುಕ ಹುಟ್ಟಿಸಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

4. G7 summit: ಜರ್ಮನಿಯಲ್ಲಿ ಫ್ರೆಂಚ್‌ ಅಧ್ಯಕ್ಷರ ಜತೆ ಮೋದಿ ಚಾಯ್‌ ಪೆ ಚರ್ಚಾ!
ಜಿ 7 ಶೃಂಗಸಭೆಗಾಗಿ (G7 summit) ಜರ್ಮನಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿ ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಚಹಾ ಸೇವನೆ ಮಾಡುತ್ತ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇಬ್ಬರೂ ನಾಯಕರು ಕೈಯಲ್ಲಿ ಚಹಾ ಕಪ್‌ ಹಿಡಿದುಕೊಂಡು ಸೌಹಾರ್ದಯುತ ಮಾತುಕತೆ ನಡೆಸಿರುವ ಫೋಟೋ ಈಗ ವೈರಲ್‌ ಆಗಿದೆ. ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರೊಂದಿಗೆ ತಾವಿರುವ ಫೋಟೋವೊಂದನ್ನು ನರೇಂದ್ರ ಮೋದಿ ಜೂ.27 ರಂದು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡು “ನನ್ನ ಸ್ನೇಹಿತ ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ’ ಎಂದು ಕ್ಯಾಪ್ಷನ್‌ ಬರೆದುಕೊಂಡಿದ್ದರು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

5. GST ಮಂಡಳಿಯ 47ನೇ ಸಭೆ ಇಂದು ಆರಂಭ, ಹಲವು ವಸ್ತುಗಳ ತೆರಿಗೆ ಬದಲಾವಣೆ ನಿರೀಕ್ಷೆ
ಜಿಎಸ್‌ಟಿ ಮಂಡಳಿಯ ೪೭ನೇ ಸಭೆ ಚಂಡಿಗಢದಲ್ಲಿ ಇಂದು (ಜೂ.೨೮) ಆರಂಭವಾಗಲಿದೆ. ಎರಡು ದಿನ ನಡೆಯಲಿರುವ ಸಭೆಯಲ್ಲಿ ಹಲವು ವಸ್ತುಗಳು ಮತ್ತು ಸೇವೆಗಳ ಜಿಎಸ್‌ಟಿ ದರಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಹಲವು ಮಹತ್ವದ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

6. Reliance jio ಅಧ್ಯಕ್ಷರಾಗಿ ಆಕಾಶ್‌ ಅಂಬಾನಿ ನೇಮಕ, ಮಗನಿಗೆ ಪಟ್ಟಾಭಿಷೇಕ ಮಾಡಿದ ಮುಕೇಶ್‌
ಭಾರತದ ಅತಿದೊಡ್ಡ ಕಂಪನಿಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಡಿಜಿಟಲ್‌ ವಿಭಾಗವಾಗಿರುವ ರಿಲಯನ್ಸ್‌ ಜಿಯೊ ಇನ್ಫೋಕಾಂ ನಿರ್ದೇಶಕ ಸ್ಥಾನಕ್ಕೆ ಮುಕೇಶ್‌ ಅಂಬಾನಿ ರಾಜೀನಾಮೆ ನೀಡಿದ್ದು, ಪುತ್ರ ಆಕಾಶ್‌ ಅಂಬಾನಿ ಅವರನ್ನು ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನೇಮಿಸಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

7. ಯಶಸ್ವಿನಿ ಯೋಜನೆ ಗಾಂಧಿ ಜಯಂತಿಯಿಂದ ಮರು ಜಾರಿ: ಸಚಿವರ ಸುಳಿವು
ಸಹಕಾರ ಕ್ಷೇತ್ರದ ಆರೋಗ್ಯ ವಿಮೆಯಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದ ಯಶಸ್ವಿನಿ ಯೋಜನೆ ಇದೇ ವರ್ಷದ ಗಾಂಧಿ ಜಯಂತಿಯಿಂದ ಮರು ಜಾರಿ ಆಗುವಂತೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಈ ಕುರಿತು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಸುಳಿವು ನೀಡಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೮. Earthquake in Karnataka | ಕೊಡಗಿನಲ್ಲಿ ಒಂದೇ ದಿನ ಎರಡು ಬಾರಿ ಕಂಪಿಸಿದ ಭೂಮಿ
ಮಂಗಳವಾರ (ಜೂನ್‌ 28) ಬೆಳಗ್ಗೆ ಭೂ ಕಂಪನವಾದ ಬೆನ್ನಲ್ಲೆ ಚೆಂಬು ಗ್ರಾಮದಲ್ಲಿ ಮತ್ತೆ ಭೂ ಕಂಪಿಸಿದೆ. ಒಂದೇ ದಿನ ಎರಡು ಬಾರಿ ಭೂಮಿ ಕಂಪಿಸಿದ್ದು, ಸಂಜೆ 4.40ರ ಸುಮಾರಿಗೆ ಭೂ ಕಂಪನದ ಅನುಭವ ಆಗಿದೆ ಎಂದು ಹೇಳಲಾಗಿದೆ. ಮಂಗಳವಾರ (ಜೂನ್‌ 28) ಬೆಳಗ್ಗೆ 7.45ಕ್ಕೆ 3.4 ಸೆಕೆಂಡುಗಳ ಕಾಲ ಕಂಪನದ ಅನುಭವ ಆಗಿತ್ತು. ಕೊಡುಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿಪ್ರದೇಶವಾಗಿರುವ ಕರಿಕೆ, ಪೆರಾಜೆ, ಭಾಗಮಂಡಲ, ಮಡಿಕೇರಿ, ನಾಪೋಕ್ಲು ಸೇರಿದಂತೆ ಹಲವೆಡೆ ಭೂ ಕಂಪಿಸಿತ್ತು. ಸಂಜೆಯೂ ಮತ್ತೊಮ್ಮೆ ಕಂಪಿಸಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೯. ಅರಬ್ಬಿ ಸಮುದ್ರದಲ್ಲಿ ಒಎನ್‌ಜಿಸಿ ಹೆಲಿಕಾಪ್ಟರ್‌ ತುರ್ತು ಜಲಸ್ಪರ್ಶ , ನಾಲ್ವರ ದುರ್ಮರಣ, ಐವರ ರಕ್ಷಣೆ
ಏಳು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್‌ಗಳಿದ್ದ ಒಎನ್‌ಜಿಸಿ ಹೆಲಿಕಾಪ್ಟರ್‌ ಒಂದು ಮುಂಬಯಿ ಸಮೀಪದ ಅರಬ್ಬೀ ಸಮುದ್ರದಲ್ಲಿ ಮಂಗಳವಾರ ತುರ್ತು ಜಲ ಸ್ಪರ್ಶ ಮಾಡುವಾಗ ಉಂಟಾದ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಉಳಿದ ಐವರನ್ನು ರಕ್ಷಿಸಲಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೧೦. ತೇಪೆ ಹಾಕಿದ ಬಟ್ಟೆ ಅಸಲಿಯಾಗದು: ಪಠ್ಯ ತಿದ್ದೋಲೆಗೆ ನಿರಂಜನಾರಾಧ್ಯ ಆಕ್ರೋಶ
ಪಠ್ಯಪುಸ್ತಕ ಪರಿಷ್ಕರಣೆ ವಾದ-ಪ್ರತಿವಾದ ಮುಂದುವರಿದಿದ್ದು, ಈ ಶೈಕ್ಷಣಿಕ ವರ್ಷವೆಲ್ಲವೂ ಪಠ್ಯ ಪುಸ್ತಕ ದೋಷಗಳನ್ನು ತಿದ್ದುವ ಕೆಲಸದಲ್ಲಿಯೇ ಮುಗಿದು ಹೋಗಲಿದೆ ಎಂದು ಶಿಕ್ಷಣ ತಜ್ಞ ಹಾಗೂ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾ ಪೋಷಕ ನಿರಂಜನಾರಾಧ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ತೇಪೆ ಹಾಕಿದ ಬಟ್ಟೆ ಎಂದಿಗೂ ಅಸಲಿಯಾಗದು ಎಂದು ಕುಟುಕಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

Exit mobile version