ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ (World Health Organization – WHO) ಕಾರ್ಯಕಾರಿ ಮಂಡಳಿಗೆ ಅಮೆರಿಕದ ಪ್ರತಿನಿಧಿಯಾಗಿ ಕರ್ನಾಟಕ ಮೂಲದ ಇಂಡಿಯನ್-ಅಮೆರಿಕನ್ ಸರ್ಜನ್ ಜನರಲ್ ವಿವೇಕ್ ಮೂರ್ತಿ (Vivek Murthy) ಅವರನ್ನು ಅಧ್ಯಕ್ಷ ಜೋ ಬೈಡೆನ್ (US President Joe Biden) ಅವರು ನೇಮಕ ಮಾಡಿದ್ದಾರೆ. ವಿವೇಕ್ ಮೂರ್ತಿ ಅವರು ಮಂಡ್ಯ ಮೂಲದವರಾಗಿದ್ದಾರೆ. 46 ವರ್ಷದ ವಿವೇಕ್ ಅವರು ಅಮೆರಿಕದ ಸರ್ಜನ್ ಜನರಲ್ (US Surgeon General) ಸೇವೆಯೊಂದಿಗೆ, ವಿಶ್ವ ಆರೋಗ್ಯ ಸಂಸ್ಥೆಯಲ್ಲೂ ಕೆಲಸ ಮಾಡಲಿದ್ದಾರೆ ಎಂದು ಅಮೆರಿಕದ ಶ್ವೇತ ಭವನವು (White House) ಹೇಳಿದೆ.
ಅಮೆರಿಕ ಸರ್ಜನ್ ಜನರಲ್ ಆಗಿ ವಿವೇಕ್ ಮೂರ್ತಿ ಅವರು ಕೆಲಸ ಮಾಡಲು 2021ರ ಮಾರ್ಚ್ ತಿಂಗಳಲ್ಲಿ ಸೆನೆಟ್ ತನ್ನ ಒಪ್ಪಿಗೆಯನ್ನು ನೀಡಿತ್ತು. ಇದಕ್ಕೂ ಹಿಂದೆ ಅಂದರೆ, ಒಬಾಮಾ ಆಡಳಿತದಲ್ಲೂ ಅವರು ಇದೇ ಹುದ್ದೆಯಲ್ಲಿ ಮುಂದುವರಿದಿದ್ದರು. ರಾಷ್ಟ್ರದ ವೈದ್ಯರಾಗಿ ಸಾರ್ವಜನಿಕರಿಗೆ ಸ್ಪಷ್ಟ, ಸ್ಥಿರ ಮತ್ತು ಸಮಾನ ಮಾರ್ಗದರ್ಶನ ಮತ್ತು ಸಂಪನ್ಮೂಲಗಳನ್ನು ಒದಗಿಸಲು ಲಭ್ಯವಿರುವ ಅತ್ಯುತ್ತಮ ವೈಜ್ಞಾನಿಕ ಮಾಹಿತಿಯನ್ನು ಅವಲಂಬಿಸಿ ಆರೋಗ್ಯಕರ ದೇಶಕ್ಕೆ ಅಡಿಪಾಯ ಹಾಕಲು ಸಹಾಯ ಮಾಡುವುದು ಸರ್ಜನ್ ಜನರಲ್ ಅವರ ಉದ್ದೇಶವಾಗಿದೆ. ಆ ಕರ್ತವ್ಯವವನ್ನು ವಿವೇಕ್ ಅವರು ನಿರ್ವಹಿಸುತ್ತಿದ್ದಾರೆ ಎಂದು ಶ್ವೇತಭವನವು ಹೇಳಿದೆ.
ಅಮೆರಿಕದ ಸರ್ಜನ್ ಜನರಲ್ ಹುದ್ದೆಗೇರಿದ ಭಾರತೀಯ ಮೂಲದ ಮೊದಲ ವ್ಯಕ್ತಿ ಇವರಾಗಿದ್ದಾರೆ. ಅವರು ಗಮನ ಸೆಳೆಯುವ ಮತ್ತು ಹಲವಾರು ನಿರ್ಣಾಯಕ ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಗಳಾದ್ಯಂತ ಕೆಲಸ ಮಾಡುವತ್ತ ಗಮನಹರಿಸಿದ್ದಾರೆ. ಹೆಚ್ಚುತ್ತಿರುವ ಆರೋಗ್ಯ ಕುರಿತಾದ ತಪ್ಪು ಮಾಹಿತಿ ಪ್ರಸರಣ, ಯುವ ಮಾನಸಿಕ ಆರೋಗ್ಯ ಬಿಕ್ಕಟ್ಟು, ಆರೋಗ್ಯ ಕಾರ್ಯಕರ್ತರ ಸಮುದಾಯದಲ್ಲಿ ಯೋಗಕ್ಷೇಮ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಲಾಗುತ್ತಿದೆ.
ಕರ್ನಾಟಕದಿಂದ ಅಮೆರಿಕಕ್ಕೆ ವಲಸೆ ಹೋದ ಲಕ್ಷ್ಮೀನರಸಿಂಹಯಯ್ಯ ಮೂರ್ತಿ ಮತ್ತು ಮೈತ್ರೇಯಾ ಮೂರ್ತಿ ದಂಪತಿಗೆ ಪುತ್ರ ಈ ವಿವೇಕ್ ಮೂರ್ತಿ. ಯಾರ್ಕ್‌ಷೈರ್‌ನ ಹಡರ್ಸ್‌ಫೀಲ್ಡ್‌ನಲ್ಲಿ ಜನಿಸಿದರು. ವಿವೇಕ್ ಅವರು ಮೈಸೂರು ಸಕ್ಕರೆ ಕಂಪನಿಯ ಮಾಜಿ ನಿರ್ದೇಶಕ ದಿವಂಗತ ಎಚ್.ಸಿ.ನಾರಾಯಣ ಮೂರ್ತಿಯವರ ಮೊಮ್ಮಗ. 1978 ರಲ್ಲಿ ಕುಟುಂಬವು ಅಟ್ಲಾಂಟಿಕ್ ಅನ್ನು ನ್ಯೂಫೌಂಡ್ಲ್ಯಾಂಡ್‌ಗೆ ಹೋಗಿ ನೆಲೆಸಿತು. ಇಲ್ಲಿ ಅವರ ತಂಜೆ ಜಿಲ್ಲಾ ವೈದ್ಯಕೀಯ ಅಧಿಕಾರಿಯಾಗಿ ಕೆಲಸ ಮಾಡಿದರು. ವಿವೇಕ ಮೂರು ವರ್ಷ ಇದ್ದಾಗ ಕುಟುಂಬವು ಮಿಯಾಮಿಗೆ ಸ್ಥಳಾಂತರಗೊಂಡಿತು. ಅಮೆರಿಕದಲ್ಲೇ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿರುವ ವಿವೇಕ್ ಅವರು ಒಬಾಮಾಡಳಿತದಲ್ಲಿ ಮೊದಲ ಬಾರಿಗೆ ಅಮೆರಿಕ ಸರ್ಜನ್ ಜನರಲ್ ಆಗಿ ಆಯ್ಕೆಯಾದರು.
ಈ ಸುದ್ದಿಯನ್ನೂ ಓದಿ: Sudha Murty: ಅಮೆರಿಕದಲ್ಲಿ ಕಾರ್ಯಕ್ರಮ ಎಂದು ಸುಧಾ ಮೂರ್ತಿ ಹೆಸರಲ್ಲಿ ವಂಚನೆ; ಇಬ್ಬರ ವಿರುದ್ಧ ಕೇಸ್