ಬೆಂಗಳೂರು: ಮತದಾರರ ಮಾಹಿತಿ ಕಳವು ಮತ್ತು ಮತದಾರರ ಪಟ್ಟಿಯಿಂದ ಹೆಸರುಗಳನ್ನು ಡಿಲೀಟ್ ಮಾಡಿರುವ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕಿಂಗ್ ಪಿನ್ ಎಂದು ಕಾಂಗ್ರೆಸ್ ನೇರ ಆರೋಪ ಮಾಡಿದೆ. ಇಷ್ಟೆಲ್ಲ ದಾಖಲೆಗಳಿದ್ದರೂ ಮುಖ್ಯಮಂತ್ರಿಗಳ ವಿರುದ್ಧ ಕೇಸು ದಾಖಲಾಗಿಲ್ಲ, ಬಿಬಿಎಂಪಿ ಕಮೀಷನರ್ ಮೇಲೆ ಕೇಸು ದಾಖಲಾಗಿಲ್ಲ. ಈ ಪ್ರಕರಣದ ಮೊದಲ ಮತ್ತು ಎರಡನೇ ಆರೋಪಿಗಳಾಗಿರುವ ಇವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಕೆಂಡ ಕಾರಿದೆ.
ಬೆಂಗಳೂರಿನಾದ್ಯಂತ ಶನಿವಾರ ಹಲವು ಕಡೆಗಳಲ್ಲಿ ಮತದಾರರ ಪಟ್ಟಿಗಳ ಪರಿಶೀಲನೆ, ಎಲ್ಲೆಲ್ಲಿ ಯಾರ ಹೆಸರು ಡಿಲೀಟ್ ಆಗಿದೆ ಎಂಬುದರ ಅವಲೋಕನ, ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ಮತ್ತು ಚುನಾವಣಾ ಆಯೋಗಕ್ಕೆ ದೂರು ನೀಡುವುದು ಸೇರಿದಂತೆ ಹಲವು ಬಗೆಗಳಲ್ಲಿ ಕಾಂಗ್ರೆಸ್ ಸಕ್ರಿಯವಾಗಿತ್ತು. ಇದಾದ ಬಳಿಕ ಸಂಜೆ ಮೂರು ಗಂಟೆಯ ಹೊತ್ತಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ದಿಲ್ಲಿಯಿಂದ ವಿಮಾನದಲ್ಲಿ ಬಂದು ಪತ್ರಿಕಾಗೋಷ್ಠಿ ನಡೆಸಿದರು. ಅವರ ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿ,ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಿಎಂ ಮತ್ತು ಬಿಜೆಪಿ ಮೇಲೆ ಪ್ರಹಾರದ ಮೇಲೆ ಪ್ರಹಾರ ನಡೆಸಿದರು.
ರಣದೀಪ್ ಸುರ್ಜೇವಾಲಾ ಹೇಳಿದ್ದೇನು?
ಈ ಹಗರಣದಲ್ಲಿ ಪ್ರತಿ ಗಂಟೆಗೊಂದು ಹೊಸ ದಾಖಲೆ ಸಿಗುತ್ತಿದೆ. ಬಿಜೆಪಿ ಇಡೀ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿದೆ ಎಂದು ಹೇಳಿದ ರಣದೀಪ್ ಸುರ್ಜೇವಾಲಾ, ಸಿಎಂ ಅವರು ಒಂದು ಕಡೆ ಇದು ಸುಳ್ಳು ಆರೋಪ ಅಂತಾರೆ. ಇನ್ನೊಂದು ಕಡೆ ತನಿಖೆ ಮಾಡಿಸ್ತೀವಿ ಅಂತಾರೆ. ಯಾವುದಾದರೂ ಪೊಲೀಸ್ ಆಫೀಸರ್ ಸಿಎಂ ವಿರುದ್ದ ಹೋಗ್ತಾರಾʼʼ ಎಂದು ಕೇಳಿದರು.
ʻʻಚಿಲುಮೆ ಸಂಸ್ಥೆ ವಿರುದ್ಧ ಯಾಕೆ ಎಫ್ ಐ ಆರ್ ಆಗಿಲ್ಲ? ಡಿಎಪಿ ಹೊಂಬಾಳೆ ಹಾಗೂ ಕೃಷ್ಣಪ್ಪ ರವಿಕುಮಾರ್, ಭೈರಪ್ಪ ಶೃತಿ ವಿರುದ್ಧ ಯಾಕೆ ಎಫ್ಐಆರ್ ದಾಖಲಾಗಿಲ್ಲ? ಸಿಎಂ ಬೊಮ್ಮಾಯಿ ಹಾಗೂ ಬಿಬಿಎಂಪಿ ದಾಖಲೆಗಳ ಕಳ್ಳತನ ಆಗಿರುವ ಮಾಹಿತಿ ಎಲ್ಲಿಗೆ ಹೋಗಿದೆ ಅಂತ ಯಾಕೆ ತಿಳಿಸುತ್ತಿಲ್ಲ? ಸಿಎಂ ಬೊಮ್ಮಾಯಿ ಯಾಕೆ ಇದುವರೆಗೆ ಡಿಜಿಟಲ್ ಸಮೀಕ್ಷಾ ಆ್ಯಪ್ ಸೀಜ್ ಮಾಡಿಲ್ಲ? ಸಿಎಂ ಬೊಮ್ಮಾಯಿ ಯಾಕೆ ಉತ್ತರ ಕೊಡ್ತಿಲ್ಲ? ಚಿಲುಮೆ ಸಂಸ್ಥೆಗೆ ಯಾರು ಹಣ ನೀಡ್ತಿದ್ದಾರೆ? ಉಚಿತವಾಗಿ ಕೆಲಸ ಮಾಡುವ ಸಂಸ್ಥೆಗೆ ಎಲ್ಲಿಂದ ಕೋಟಿ ಕೋಟಿ ಹಣ ಬರ್ತಿದೆ? ಚಿಲುಮೆ ಸಂಸ್ಥೆ ೧೫ ಸಾವಿರ ಉದ್ಯೋಗಿಗಳನ್ನು ಹೇಗೆ ನೇಮಕ ಮಾಡಿಕೊಂಡಿದೆʼʼ ಎಂದು ಪ್ರಶ್ನಿಸಿದರು.
ʻʻಚಿಲುಮೆ ಉಚಿತವಾಗಿ ಮತಜಾಗೃತಿ ಮಾಡಿದ್ದು ಏಕೆ? ಚಿಲುಮೆಗೆ ಯಾರು ಹಣ ನೀಡ್ತಾರೆ? ಚಿಲುಮೆಗೆ ಜಾಹೀರಾತು ನೀಡಲು ಹಣ ಎಲ್ಲಿಂದ ಬಂತು? ಹಣದ ಮೂಲ ಯಾರು ಬಹಿರಂಗವಾಗಬೇಕುʼʼ ಎಂದು ಹೇಳಿದರು ಸುರ್ಜೇವಾಲಾ.
ʻʻಪ್ರತಿಯೊಬ್ಬರ ಡಾಟಾ ಸಂಗ್ರಹ ಮಾಡಲು ೨೫ ರೂ. ಚಾರ್ಜ್ ಮಾಡಲಾಗಿದೆ. ೧೦ ರೂಗಳನ್ನ ಟೀಮ್ ಲೀಡರ್‌ಗೆ ಕೊಡಲಾಗಿದೆ. ಇದಕ್ಕೆಲ್ಲ ಎಲ್ಲಿಂದ ಹಣ ಬಂದಿದೆ. ಇದಕ್ಕೆ ಎಷ್ಟು ಕೋಟಿ ಹಣ ಖರ್ಚು ಮಾಡಲಾಗಿದೆʼʼ ಎಂದು ಕೇಳಿದರು ಸುರ್ಜೇವಾಲಾ. ಇದರ ಬಗ್ಗೆ ಯಾಕೆ ಇ.ಡಿ, ಐಟಿ ಕಣ್ಣು ಬಿಟ್ಟಿಲ್ಲ ಎನ್ನುವುದು ಅವರ ಪ್ರಶ್ನೆ.
ಮಹದೇವಪುರ ಕ್ಷೇತ್ರದಲ್ಲಿ ಡಾಟಾ ಸಂಗ್ರಹ ಪ್ರತಿಯೊಂದು ಮನೆಗೂ ಭೇಟಿ ನೀಡಲಾಗಿದೆ. ಎಲ್ಲಾ ಅಪಾರ್ಟ್‌ಮೆಂಟ್‌ಗಳ ವಿವರ ಪಡೆಯಲಾಗಿದೆ. ಆಧಾರ್, ವೋಟರ್ ಐಡಿ, ಮೊಬೈಲ್ ನಂಬರ್ ಸಂಗ್ರಹಿಸಲಾಗಿದೆ. ಇಷ್ಟೆಲ್ಲಾ ಆದರೂ ಏನೂ ಆಗಿಲ್ಲ ಅಂತಿದ್ದಾರೆ. ಸಿಎಂ ಬೊಮ್ಮಾಯಿ ಬೇಸ್ ಲೆಸ್ ಅಲಿಗೇಶನ್ ಅಂತಾರೆ. ಕೆ.ಆರ್.ಪುರಂ ಮಾಜಿ ಶಾಸಕರು ಚಿಲುಮೆಗೆ ೧೭.೫೦ ಲಕ್ಷ ರೂ. ಕೊಟ್ಟಿದ್ದಾರೆ. ಅಫಿಡವಿಟ್‌ನಲ್ಲಿಯೇ ಅದನ್ನು ತೋರಿಸಿದ್ದಾರೆ. ಯಾವ ಕಾರಣಕ್ಕೆ ಈ ಹಣ ನೀಡಲಾಯಿತು? ಇದರ ಬಗ್ಗೆ ಸಿಎಂ ಬೊಮ್ಮಾಯಿ ಏನು ಹೇಳ್ತಾರೆʼʼ ಎಂದು ಕೇಳಿದರು ಡಿ.ಕೆ. ಶಿವಕುಮಾರ್.
ಬೇಡಿಕೆಗಳೇನು?
ಎಲ್ಲಾ ೨೮ ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆಗೆ ಬಿಬಿಎಂಪಿ ಅನುಮತಿ ನಿಡಿದೆ. 28 ಜನ ಬಿಎಲ್ಓಗಳನ್ನು ನೇಮಕ ಮಾಡುವುದಕ್ಕೆ ಅನುಮತಿ ನೀಡಿದ ಎಆರ್‌ಒಗಳನ್ನು ಬಂಧಿಸಬೇಕು, ದಾಖಲೆಗಳನ್ನು ಸೀಜ್ ಮಾಡಬೇಕು ಎಂದು ಅವರು ಆಗ್ರಹಿಸಿದರು. ಈ ವಿಚಾರದಲ್ಲಿ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಎಲ್ಲೆಲ್ಲಿಗೆ ಪತ್ರ ಬರೆಯಬೇಕೋ ಬರಿಬೇಕೋ ಅಲ್ಲಿಗೆಲ್ಲ ಬರೀತೇವೆ ಎಂದಿದ್ದಾರೆ.
ವೋಟರ್ ಗೇಟ್ ಹಗರಣ ಎಂದ ಸಿದ್ದರಾಮಯ್ಯ
ʻʻಇದು ವೋಟರ್ ಗೇಟ್ ಹಗರಣ. ಇದರಲ್ಲಿ ಸಿಎಂ ನೇರ ಭಾಗಿದಾರಿ. ಇದು ದೊಡ್ಡ ಷಡ್ಯಂತ್ರ. ನನಗೂ ಇದಕ್ಕೆ ಸಂಬಂಧ ಇಲ್ಲ ಎಂದು ಹೇಳಲು ಬರಲ್ಲ. ಸಿಎಂ ಇದಕ್ಕೆ ಉತ್ತರದಾಯಿ. ಬೊಮ್ಮಾಯಿ ಕೇವಲ ಸುಳ್ಳು ಹೇಳುತ್ತಿದ್ದಾರೆ. ಏನಾದರೂ ಆರೋಪ ಮಾಡಿದರೆ ಹಿಂದಿನ ಸರ್ಕಾರ ಮಾಡಿದೆ ಎನ್ನುತ್ತಾರೆ. ಹಾಗಾದರೆ ಅವರು ವಿರೋಧ ಪಕ್ಷದಲ್ಲಿ ಇದ್ದಾಗ ಕಡ್ಲೆಪುರಿ ತಿನ್ನುತ್ತಿದ್ರಾ?ʼʼ- ಹೀಗೆಂದು ಹೇಳಿದರು ಸಿದ್ದರಾಮಯ್ಯ.
ʻʻಮಾನ ಮರ್ಯಾದೆ ಇದ್ದರೆ ಮೊದಲು ರಾಜೀನಾಮೆ ಕೊಡಿ. ಹಗರಣಗಳ ಮೇಲೆ ಹಗರಣ ಮಾಡಿ ಬಚಾವು ಆಗಲು ಕಾನೂನು ಬಿಡಲ್ಲ. ಬೊಮ್ಮಾಯಿ ಕೂಡಲೇ ಬಂಧನ ಆಗಬೇಕು, ಬಿಬಿಎಂಪಿ ಆಯುಕ್ತರ ವಿರುದ್ಧ ಎಫ್ ಐ ಆರ್ ಆಗಬೇಕುʼʼ ಎಂದು ಒತ್ತಾಯಿಸಿದರು.