Site icon Vistara News

Karnataka Election 2023: ಕಡಲಾಳದಲ್ಲಿ ಸ್ಕ್ಯೂಬಾ ಡೈವಿಂಗ್‌; ಮದುವೆ ಮಂಟಪದಲ್ಲಿ ಮತದಾನ ಜಾಗೃತಿ

Scuba Diving in Murdeshwar.

ರ್ನಾಟಕ ವಿಧಾನಸಭೆ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ವಿನೂತನವಾಗಿ ಪ್ರಯತ್ನ ನಡೆದಿದೆ. ಹೊಸ ರೀತಿಯಲ್ಲಿ, ಕಡಲಾಳದಲ್ಲಿ ಸ್ಕ್ಯೂಬಾ ಡೈವಿಂಗ್‌ (Scuba diving) ಮೂಲಕ ನಡೆದಿರುವ ವಿಶಿಷ್ಟ ಯತ್ನವಿದು. ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದ ನೇತ್ರಾಣಿ ನಡುಗಡ್ಡೆ ಬಳಿ ಸ್ಕ್ಯೂಬಾ ಡೈವಿಂಗ್‌ ಮೂಲಕ ಮತದಾನ ಜಾಗೃತಿ ನಡೆಸಲಾಗಿದೆ. ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನಿಂದ ಸ್ವೀಪ್ ಕಾರ್ಯಕ್ರಮದಲ್ಲಿ ವಿನೂತನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ಭಟ್ಕಳ ತಾಲ್ಲೂಕಿನ ಕರಾವಳಿಯ ಕಡಲಾಳದಲ್ಲಿ ಅಪರೂಪದ ಹವಳ, ಜಲಚರಗಳ ನಡುವೆ ಮತದಾನ ಜಾಗೃತಿ ನಡೆಸಲಾಯಿತು(Voting awareness).

‘ಮತದಾನ ಸಂವಿಧಾನ ದೊರಕಿಸಿಕೊಟ್ಟ ಮಹತ್ವದ ಹಕ್ಕು’ ಎಂದು ಬರೆದ ಭಿತ್ತಿಚಿತ್ರವನ್ನು ಸ್ಕ್ಯೂಬಾ ಡೈವಿಂಗ್‌ ಮಾಡುವ ಮೂಲಕ ಕಡಲಿನಾಳದಲ್ಲಿ ಹಿಡಿದು ಪ್ರದರ್ಶಿಸಿ ಅದನ್ನು ದಾಖಲೀಕರಿಸಿಕೊಳ್ಳಲಾಯಿತು. ಇದರ ಫೋಟೋ ಹಾಗೂ ವಿಡಿಯೋಗಳನ್ನು ಮತದಾನದ ಉತ್ತೇಜನಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಭಟ್ಕಳ ತಾಲೂಕು ಪಂಚಾಯತ್‌, ಸ್ಕ್ಯೂಬಾ ಡೈವಿಂಗ್ ಅಡ್ವೆಂಚರ್ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗಿದೆ.

ಮುರ್ಡೇಶ್ವರದ ಬಳಿಯ ನೇತ್ರಾಣಿ ದ್ವೀಪದ ಬಳಿ ಕರ್ನಾಟಕದ ಖ್ಯಾತ ಸ್ಕ್ಯೂಬಾ ಡೈವಿಂಗ್‌ ಸಾಹಸ ಕ್ರೀಡೆ ಅವಕಾಶವಿದೆ. ಇಲ್ಲಿ ಸ್ಕ್ಯೂಬಾ ಅಡ್ವೆಂಚರ್‌ಗಾಗಿ ರಾಜ್ಯದ ಹಾಗೂ ದೇಶದ ಎಲ್ಲೆಡೆಗಳಿಂದ ಸಾಹಸಪ್ರಿಯರು ಆಗಮಿಸುತ್ತಾರೆ. ಸಾಗರದಡಿಯ ಹವಳದ ದಿಬ್ಬಗಳೂ ನೇತ್ರಾಣಿ ದ್ವೀಪದ ಬಳಿ ಇವೆ.

ಮದುವೆ ಮಂಟಪದಲ್ಲಿ ಮತದಾನ ಜಾಗೃತಿ ಮೂಡಿಸಿ ಗಮನ ಸೆಳೆದ ನವ ದಂಪತಿ

ಕುಷ್ಟಗಿಯಲ್ಲಿ ಭಾನುವಾರ ನಡೆದ ಕಡೇಕೊಪ್ಪ ಗ್ರಾಮದ ಜೀಗೇರಿ ಕುಟುಂಬದ ಮದುವೆ ಸಂಭ್ರಮದ ಸಮಾರಂಭದಲ್ಲಿ ನೂತನ ವಧು-ವರರು ಮೇ 10 ರಂದು ನಡೆಯುವ ಚುನಾವಣೆಯ ಮತದಾನ ಜಾಗೃತಿ ಮೂಡಿಸಿ ಗಮನ ಸೆಳೆದರು. ನೂತನ ದಂಪತಿಯಾದ ನಿಂಗಪ್ಪ ಜಿಗೇರಿ- ರೇಖಾ ಹಾಗೂ ರಾಚಪ್ಪ-ನಿವೇದಿತಾ ಅವರು, “ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ’ ಎಂಬ ಬರಹವಿದ್ದ ಫಲಕಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

ಇದನ್ನೂ ಓದಿ: Karnataka Election 2023: ಚುನಾವಣಾ ಅಕ್ರಮ ತಡೆಗೆ ಗಣಿ ಕಾರ್ಮಿಕರಿಗೆ ಮತದಾನ ಜಾಗೃತಿ ಅಭಿಯಾನ

ಮದುವೆಗೆ ಬಂದ ಕುಟುಂಬದವರು, ಸಂಬಂಧಿಕರು ಸ್ನೇಹಿತರು ಈ ಮಾದರಿ ಮದುವೆಯ ಈ ಸಂದೇಶವನ್ನು ಮೆಚ್ಚಿಕೊಂಡರಲ್ಲದೆ ಮತದಾನ ಜಾಗೃತಿಯನ್ನು ಸಾಕ್ಷೀಕರಿಸಿದರು. ಮದುವೆ ಕಾರ್ಯಕ್ರಮದ ಗಡಿಬಿಡಿಯಲ್ಲಿ ಮತದಾನವನ್ನು ಮರೆಯದಂತೆ ಈ ಹೊಸ ಜೋಡಿಗಳು ಮೇ 10 ರಂದು ತಪ್ಪದೇ ಮತದಾನ ಮಾಡುವಂತೆ ಮಾಡಿರುವ ಮನವಿ ವಿಶೇಷವೆನಿಸಿದೆ.

ಕುಷ್ಟಗಿಯಲ್ಲಿ ನಡೆದ ಮದುವೆ ವೇಳೆ ಮತದಾನ ಜಾಗೃತಿ.
Exit mobile version