| ರಂಗಸ್ವಾಮಿ ಎಂ.ಮಾದಾಪುರ, ಮೈಸೂರು
ದಸರಾ ಮಹೋತ್ಸವದ (Mysore Dasara 2022) ಅತ್ಯಾಕರ್ಷಣೆ ಎಂದರೆ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುವ ಜಂಬೂ ಸವಾರಿ. ಪ್ರತಿ ಬಾರಿಯೂ ವಿಜಯ ದಶಮಿಯಂದು ಜಂಬೂ ಸವಾರಿ ಮೆರವಣಿಗೆ ಮಧ್ಯಾಹ್ನ ಪ್ರಾರಂಭವಾಗಿ ಸಂಜೆ ಹೊತ್ತಿಗೆ ಮುಗಿಯುತ್ತಿತ್ತು. ಈ ಬಾರಿ ಸಂಜೆ ಶುರುವಾಗಿ ರಾತ್ರಿ ಮುಗಿಯಲಿದೆ. ವಿದ್ಯುತ್ ದೀಪಗಳ ಬೆಳಕಿನಲ್ಲಿ ವಿಜಯ ದಶಮಿ ಮೆರವಣಿಗೆ ಸಾಗಲಿದೆ.
ದಸರಾ ಮಹೋತ್ಸವ-2022ರ ಅಧಿಕೃತ ಆಹ್ವಾನ ಪತ್ರಿಕೆ ಪ್ರಕಟವಾಗಿದೆ. ಮೈಸೂರು ಜಿಲ್ಲಾಡಳಿತ ಈಗಾಗಲೇ ಉದ್ಘಾಟಕರಾದ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಪ್ರಮುಖರಿಗೆ ಆಹ್ವಾನ ಪತ್ರಿಕೆ ನೀಡಿದೆ. ಆಹ್ವಾನ ಪತ್ರಿಕೆಯ ಪ್ರಕಾರ, ದಸರಾ ಉದ್ಘಾಟನೆ ಸೆಪ್ಟೆಂಬರ್ 26ರಂದು ಬೆಳಗ್ಗೆ 9.45ರಿಂದ 10.05ಕ್ಕೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನೆರವೇರಲಿದೆ.
ಇದನ್ನೂ ಓದಿ | Mysore Dasara 2022 | ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಸಚಿವ ಎಸ್.ಟಿ.ಸೋಮಶೇಖರ್ ಆಹ್ವಾನ
ಮಧ್ಯಾಹ್ನ ನಂದಿ ಪೂಜೆ: ಜಗತ್ಪ್ರಸಿದ್ಧ ಜಂಬೂ ಸವಾರಿ ಮೆರವಣಿಗೆ ಅಕ್ಟೋಬರ್ 5ರಂದು ನಡೆಯಲಿದೆ. ಅಂದು ಮಧ್ಯಾಹ್ನ 2.36ರಿಂದ 2.50ಕ್ಕೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜ ಪೂಜೆ ನೆರವೇರಲಿದೆ. ನಂದಿ ಧ್ವಜ ಶಿವನ ವಾಹನವಾದರೆ, ವೀರಗಾಸೆ ಶಿವನ ರುದ್ರಾವತಾರ ವೀರಭದ್ರನ ಪ್ರತೀಕ. ಪ್ರತಿ ಬಾರಿಯೂ ನಂದಿ ಧ್ವಜಕ್ಕೆ ಮುಖ್ಯಮಂತ್ರಿ ಪೂಜೆ ಸಲ್ಲಿಸುವ ಮೂಲಕ ವಿಜಯ ದಶಮಿ ಮೆರವಣಿಗೆಗೆ ಚಾಲನೆ ನೀಡುವುದು ವಾಡಿಕೆ. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಹೊತ್ತಿಗೆ ಮಧ್ಯಾಹ್ನ 3 ಗಂಟೆಯಾಗಲಿದೆ. ಅಲ್ಲಿವರೆಗೂ ಅರಮನೆ ಆವರಣ, ಆಲ್ಬರ್ಟ್ ವಿಕ್ಟರ್ ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆಗಳಲ್ಲಿ ಸೇರುವ ಜನರಿಗೆ ಯಾವುದೇ ಮನರಂಜನೆ ಇರುವುದಿಲ್ಲ. ನಂದಿ ಧ್ವಜ ಪೂಜೆಯಾದ ಮೇಲೆ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳ ಸುಮಾರು 50 ಕಲಾತಂಡಗಳು, ಅಂದಾಜು 30ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಅರಮನೆಯಿಂದ ಬನ್ನಿಮಂಟಪದತ್ತ ಹೊರಡಲಿವೆ.
ಸಂಜೆ ಪುಷ್ಪಾರ್ಚನೆ
ವಿಜಯ ದಶಮಿ ಮೆರವಣಿಗೆ ಅಂದಾಜು ಒಂದೂವರೆ ಎರಡು ಕಿ.ಮೀ.ನಷ್ಟು ಉದ್ದದ ಮನರಂಜನೆಯ ಪ್ಯಾಕೇಜ್. ನಂದಿ ಧ್ವಜ ಮತ್ತು ನಿಶಾನೆ ಹೊತ್ತ ಅರ್ಜುನ ಆನೆ ಆಯುರ್ವೇದಿಕ್ ವೃತ್ತ ತಲುಪಿದ ಮೇಲೆ ಅರಮನೆ ಅಂಗಳದಲ್ಲಿ ಕುಳಿತವರಿಗೆ ಚಿನ್ನದ ಅಂಬಾರಿ ಕಾಣಿಸಲಿದೆ.
ಈ ಬಾರಿ ಐತಿಹಾಸಿಕ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಶ್ರೀ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಷ್ಪಾರ್ಚನೆ ಮಾಡಲಿದ್ದಾರೆ. ಇದಕ್ಕಾಗಿ ಸಂಜೆ 5.07 ರಿಂದ 5.18ರವರೆಗೆ ಸಲ್ಲುವ ಶುಭ ಮೀನ ಲಗ್ನ ನಿಗದಿಪಡಿಸಲಾಗಿದೆ. ಅಂದರೆ ಚಿನ್ನದ ಅಂಬಾರಿ ಹೊರಡುವುದೇ ಸುಮಾರು 5.30 ಆಗಲಿದೆ. ಅರಮನೆಯಿಂದ ಹೊರಗೆ ಬರುವ ಹೊತ್ತಿಗೆ ಸಂಜೆ 6 ಗಂಟೆ ಆಗಬಹುದು. ಆಲ್ಬರ್ಟ್ ವಿಕ್ಟರ್ ರಸ್ತೆ ಮತ್ತು ಸಯ್ಯಾಜಿರಾವ್ ವೃತ್ತದಲ್ಲಿ ವಿದ್ಯುತ್ ದೀಪಗಳ ಬೆಳಕಿನಲ್ಲೇ ಚಿನ್ನದ ಅಂಬಾರಿ ಸಾಗಲಿದೆ. ಅಂಬಾರಿ ಬನ್ನಿಮಂಟಪ ತಲುಪುವ ಹೊತ್ತಿಗೆ 8 ಗಂಟೆ ರಾತ್ರಿ ಆಗಬಹುದು ಎಂದು ಅಂದಾಜಿಸಲಾಗಿದೆ.
ಇಂದಿನಿಂದ ಬೆಳಕಿ ತಾಲೀಮು
ದಸರಾ ಮಹೋತ್ಸವದಲ್ಲಿ ಅಪರೂಪ ಎಂಬಂತೆ ಗಜಪಡೆಗೆ ಬೆಳಕಿನ ತಾಲೀಮು ನೀಡಲಾಗುತ್ತಿದೆ. ಸಾಮಾನ್ಯವಾಗಿ ವಿಜಯ ದಶಮಿಗೆ ಒಂದೂವರೆ ಅಥವಾ ಎರಡು ತಿಂಗಳು ಮುಂಚಿತವಾಗಿ ಗಜಪಯಣದ ಮೂಲಕ ಆನೆಗಳನ್ನು ಕಾಡಿನಿಂದ ನಾಡಿಗೆ ಕರೆದುಕೊಂಡು ಬರಲಾಗುತ್ತದೆ. ಅರಮನೆಯಲ್ಲಿ ಬೀಡು ಬಿಟ್ಟ ಆನೆಗಳಿಗೆ ನಿತ್ಯವೂ ಸ್ನಾನ, ಪೌಷ್ಟಿಕ ಆಹಾರ ನೀಡಿ ಸಲಹಲಾಗುತ್ತದೆ. ನಡಿಗೆ ತಾಲೀಮು, ಭಾರ ಹೊರುವ ತಾಲೀಮು, ಮರದ ಅಂಬಾರಿ ಹೊರುವ ತಾಲೀಮು ಹೀಗೆ ಮೂರು ಹಂತದ ತಾಲೀಮು ನೀಡಲಾಗುತ್ತದೆ. ಈ ಬಾರಿ ಹೆಚ್ಚುವರಿಯಾಗಿ ಬೆಳಕಿನ ತಾಲೀಮು ನೀಡಲಾಗುತ್ತಿದೆ. ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮುಹೂರ್ತ ವಿಳಂಬವಾಗಿರುವ ಕಾರಣ ಅಭಿಮನ್ಯು ವಿದ್ಯುತ್ ದೀಪದಲ್ಲಿ ಚಿನ್ನದ ಅಂಬಾರಿ ಹೊರಬೇಕಿದೆ. ಈ ಹಿನ್ನೆಲೆಯಲ್ಲಿ ಸೆಸ್ಕ್ ಅಧಿಕಾರಿಗಳು ಹಾಗೂ ಅರಣ್ಯಾಧಿಕಾರಗಳ ಸಮನ್ವಯದೊಂದಿಗೆ ಇಂದಿನಿಂದ ಬೆಳಕಿನ ತಾಲೀಮು ನಡೆಯಲಿದೆ.
ಈಗಾಗಲೇ ಜಂಬೂ ಸವಾರಿ ಸಾಗುವ ಆಲ್ಬರ್ಟ್ ವಿಕ್ಟರ್ ರಸ್ತೆ ಮತ್ತು ಸಯ್ಯಾಜಿ ರಾವ್ ರಸ್ತೆಗೆ ಎಲ್ಇಡಿ ಬಲ್ಬ್ಗಳ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ರಾತ್ರಿ ಹೊತ್ತು ಮರದ ಅಂಬಾರಿ ಹೊತ್ತು ಆನೆಗಳು ವಿದ್ಯುತ್ ದೀಪಗಳ ನಡುವೆ ಹೆಜ್ಜೆ ಹಾಕಲಿವೆ. ದಸರಾ ಶುರುವಾದ ಮೇಲೆ ಅಂದರೆ ಸೆ.26ರಿಂದ ಅ.3ರವರೆಗೆ ಏಳೆಂಟು ದಿನ ರಾತ್ರಿ ಹೊತ್ತು ಆನೆಗಳು ಬೆಳಕಿನ ತಾಲೀಮು ನಡೆಸಲಿವೆ.
| ಡಾ.ವಿ.ಕರಿಕಾಳನ್, ಡಿಸಿಎಫ್
ಇದನ್ನೂ ಓದಿ | Mysore Dasara 2022 | ಯುವ ದಸರಾದಲ್ಲಿ ಕಿಚ್ಚನ ಮೋಡಿ; ರಂಗುತರಲಿರುವ ಬಾಲಿವುಡ್ ಗಾಯಕರು