| ರಂಗಸ್ವಾಮಿ ಎಂ.ಮಾದಾಪುರ, ಮೈಸೂರು
ಕಾರ್ಗಿಲ್ ವಿಜಯ ದಿವಸ(Kargil Vijay Diwas-ಜುಲೈ 26)ದ ಸಂಭ್ರಮದ ಸಂದರ್ಭದಲ್ಲೇ ಮತ್ತೊಂದು ಸಿಹಿ ಸುದ್ದಿ ಹೊರಬಿದ್ದಿದೆ. ಸೈನಿಕರು, ಮಾಜಿ ಸೈನಿಕರು, ದೇಶಪ್ರೇಮಿಗಳ ಎರಡು ದಶಕಗಳ ಬೇಡಿಕೆಯಾಗಿದ್ದ ‘ಯುದ್ಧ ಸ್ಮಾರಕ’ ನಿರ್ಮಾಣಕ್ಕೆ ಮುಹೂರ್ತ ನಿಗದಿಯಾಗಿದೆ.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿ ‘ವಾರ್ ಮೆಮೋರಿಯಲ್’ ನಿರ್ಮಾಣ ಕಾಮಗಾರಿಗೆ ಜುಲೈ 29ರಂದು ಭೂಮಿ ಪೂಜೆ ನಡೆಯಲಿದೆ. ಅಂದು ಮಧ್ಯಾಹ್ನ ೧೨ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸೈನಿಕ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆಗಳು ಅಗತ್ಯ ಸಿದ್ಧತೆ ಮಾಡಿಕೊಂಡಿವೆ. ಯೋಜನೆ ಜಾರಿಯಾಗಲು ಶ್ರಮಿಸಿದ ಮಾಜಿ ಸೈನಿಕ ಅಧಿಕಾರಿಗಳು, ಮಾಜಿ ಸೈನಿಕರು, ಸೈನಿಕ ಸಂಘಟನೆಗಳ ಪ್ರಮುಖರನ್ನು ಸನ್ಮಾನಿಸಲು ಉದ್ದೇಶಿಸಲಾಗಿದೆ.
ಮೈಸೂರಿನಲ್ಲಿ ಯುದ್ಧ ಸ್ಮಾರಕ ಮಾಡಬೇಕೆಂಬುದು ಮಾಜಿ ಸೈನಿಕರ ಬಹುವರ್ಷಗಳ ಬೇಡಿಕೆ ಆಗಿತ್ತು. ಬರೋಬ್ಬರಿ 21 ವರ್ಷಗಳ ಹಿಂದೆ, ಅಂದರೆ 2000ರಲ್ಲಿ ವೀಕೇರ್ ನಿವೃತ್ತ ಸೈನಿಕರ ಟ್ರಸ್ಟ್‌ನ ಎಂ.ಎನ್.ಸುಬ್ರಹ್ಮಣ್ಯ, ರಾಜ್ಯ ಸರ್ಕಾರ ಮತ್ತು ಮೈಸೂರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಒಂದು ದಶಕ ಯಾರೂ ಸ್ಪಂದಿಸಲಿಲ್ಲ. 2021ರಲ್ಲಿ ಮತ್ತೊಮ್ಮೆ ಮನವಿ ಸಲ್ಲಿಸಿದ ಬಳಿಕ ಜಾಗ ಹುಡುಕುವ ಪ್ರಕ್ರಿಯೆ ಪ್ರಾರಂಭವಾಯಿತು.
2016ರಲ್ಲಿ ಮೈಸೂರು ಉಪ ವಿಭಾಗಾಧಿಕಾರಿಯಾಗಿ ಬಂದ ಸಿ.ಎಲ್.ಆನಂದ್ ಸ್ವತಃ ಮಾಜಿ ಸೈನಿಕರು. ಯೋಜನೆಗೆ ಬಗ್ಗೆ ವಿಶೇಷ ಆಸಕ್ತಿ ವಹಿಸಿದ ಅವರು, ಸರ್ಕಾರಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು. ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾದ ಮೇಲೂ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದ ಮೈಸೂರಿನ ಪ್ರಸ್ತಾವನೆಯ ಫಾಲೋಅಪ್ ಮಾಡಿದ್ದರು.
ಹಲವರ ಪ್ರಯತ್ನದ ಫಲವಾಗಿ ಯೋಜನೆಯೂ ಸಿದ್ಧವಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಲ್ಲಿಸಿದ ಪ್ರಸ್ತಾವನೆಗೆ ಸರ್ಕಾರದ ಒಪ್ಪಿಗೆ ದೊರಕಿತು. 1.41 ಕೋಟಿ ರೂ. ವೆಚ್ಚದ ಯೋಜನೆಗೆ ತಾಂತ್ರಿಕ ಅನುಮೋದನೆ, ಆಡಳಿತಾತ್ಮಕ ಅನುಮೋದನೆ ದೊರಕಿತು. ಜಿಲ್ಲಾಡಳಿತ ಕಚೇರಿ ಪಾರಂಪರಿಕ ಕಟ್ಟಡವಾದ ಪರಿಣಾಮ ಪಾರಂಪರಿಕ ಇಲಾಖೆಯ ಹೆರಿಟೇಜ್ ಕಮಿಟಿಯ ಅನುಮತಿಯನ್ನೂ ಪಡೆಯಲಾಯಿತು.
ಚಾಮರಾಜನಗರದಿಂದ ಬೃಹತ್ ಶಿಲೆಯೂ ಬಂದು ಉದ್ಯಾನದಲ್ಲಿ ಬಿತ್ತು. ಹಲವು ಹಣ, ಶಿಲೆ ಎಲ್ಲವೂ ಇದ್ದರೂ ಹಲವು ಅಡೆ-ತಡೆಗಳನ್ನು ಹೊಂದಿದ್ದ ಯುದ್ಧ ಸ್ಮಾರಕ ಯೋಜನೆ ಚಾಲನೆ ದೊರೆಯುವ ಹಂತಕ್ಕೆ ಬಂದಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆಗೆ 50 ಲಕ್ಷ ರೂ. ಮೊದಲ ಕಂತಿನ ಅನುದಾನ ಬಿಡುಗಡೆ ಆಗಿದೆ. ಗುತ್ತಿಗೆ ಷರತ್ತಿನ ಅನ್ವಯ, ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಯಲು ಎಂಬುದು ಎಲ್ಲರ ಆಶಯವಾಗಿದೆ.
1.35 ಕೋಟಿ ರೂಪಾಯಿ ಮೌಲ್ಯದ ‘ಸೇವೆ’
ಮೈಸೂರಿನಲ್ಲಿ ದೇಶದಲ್ಲೇ ಅಪರೂಪ ಹಾಗೂ ಪಾರಂಪರಿಕ ಶೈಲಿಯ ಯುದ್ಧ ಸ್ಮಾರಕ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಚಾಮರಾಜನಗರ ಜಿಲ್ಲೆಯ ಕ್ವಾರಿಯಿಂದ 33 ಕ್ಯೂಬಿಕ್ ಮೀಟರ್ ಉತ್ಕೃಷ್ಟ ಕಲ್ಲುಗಳ ಸ್ಲಾಬ್ ತರಲಾಗಿದೆ. ಚಾಮರಾಜನರದ ಜಿಲ್ಲೆಯ ಅಮಚವಾಡಿ ನಿವಾಸಿ, ಕ್ವಾರಿ ಮಾಲೀಕ ಎಚ್.ಎಂ.ಪುಟ್ಟಮಾದಯ್ಯ ಬಿನ್ ಪಟೇಲ್ ಮಾದಪ್ಪ ಎಂಬುವವರು 33 ಕ್ಯೂಬಿಕ್ ಮೀಟರ್ ಕಪ್ಪು ಶಿಲೆಯನ್ನು ದಾನ ಮಾಡಿದ್ದರು. ಸರ್ಕಾರಕ್ಕೆ ರಾಜಧನ ಹಾಗೂ ವಿವಿಧ ಶುಲ್ಕಗಳನ್ನು ತಾವೇ ಪಾವತಿಸಿ ಉಚಿತವಾಗಿ ಕೊಡುಗೆ ನೀಡಿದ್ದರು. ಮತ್ತೊಬ್ಬ ಕ್ವಾರಿ ಮಾಲೀಕ ಎ.ಶ್ರೀನಾಥ್ ಬಿನ್ ಶಿವಶಂಕರ್‌ರೆಡ್ಡಿ 200 ಟನ್ ತೂಕದ ಕಚ್ಛಾಶಿಲೆಯನ್ನು ಯಾವುದೇ ಶುಲ್ಕ ಪಡೆಯದೆ ಶಿಲೆಯನ್ನು ಕತ್ತರಿಸಿ ಕೊಟ್ಟಿದ್ದರು. ಇದರಿಂದಾಗಿ ಕಲ್ಲಿನ ಬೆಲೆ 1 ಕೋಟಿ ರೂಪಾಯಿ ಮತ್ತು ವಿನ್ಯಾಸಗೊಳಿಸುವ ಶುಲ್ಕ 35 ಲಕ್ಷ ರೂ. ಸರ್ಕಾರಕ್ಕೆ ಉಳಿತಾಯವಾಗಿದೆ. ಐದು ತಿಂಗಳ ಹಿಂದೆಯೇ ಶಿಲೆ ಚಾಮರಾಜನಗರದಿಂದ ಮೈಸೂರಿಗೆ ಬಂದು ತಲುಪಿದ್ದು, ಮೈಸೂರು ಡಿಸಿ ಕಚೇರಿ ಸಮೀಪದ ಉದ್ಯಾನದಲ್ಲಿ ಇಡಲಾಗಿದೆ.
ಯುದ್ಧ ಸ್ಮಾರಕದ ಸ್ವರೂಪ
- 4 ಚದರ ಅಡಿ ವಿಸ್ತೀರ್ಣದಲ್ಲಿ ಯುದ್ಧ ಸ್ಮಾರಕ
- ಒಟ್ಟು ವೆಚ್ಚ 1.41 ಕೋಟಿ ರೂಪಾಯಿ
- ಸ್ಮಾರಕದ ಎತ್ತರ 33 ಅಡಿ
- ಭೂಸೇನೆ, ವಾಯುಸೇನೆ, ನೌಕಪಡೆ ಲೋಗೋ ಅಳವಡಿಕೆ
- ಮೇಲ್ಭಾಗದಲ್ಲಿ ಸಾರನಾಥ ಮಾದರಿಯ ರಾಷ್ಟ್ರಲಾಂಛನ ಅಳವಡಿಕೆ
- ಸ್ಮಾರಕದ ಪೀಠದ ಎತ್ತರ 10 ಅಡಿ
- ಸಮೀಪದಲ್ಲಿ ಎರಡು ಫೈಟರ್ ವಿಮಾನಗಳ ಮಾದರಿ ರಚನೆ
- ಅಮೆರಿಕನ್ ವೈಟ್ ಪೇಯಿಂಟ್ನಿಂದ ಅಕ್ಷರಗಳನ್ನು ಕೊರೆಯಲು ಪ್ಲ್ಯಾನ್
ಯುದ್ಧ ಸ್ಮಾರಕ ನಿರ್ಮಾಣಕ್ಕೆ ಜುಲೈ 29ರಂದು ಭೂಮಿಪೂಜೆ ನೆರವೇರಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಶಂಕುಸ್ಥಾಪನೆ ನೆರವೇರಿಸಲಿದ್ದು, ಜಿಲ್ಲಾಡಳಿತದ ಶಿಷ್ಟಾಚಾರದನ್ವಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ. ಯೋಜನೆ ಸಾಕಾರಗೊಳ್ಳಲು ೨೦ ವರ್ಷಗಳಿಂದ ಸಹಕರಿಸಿದ ಪ್ರಮುಖರನ್ನು ಸನ್ಮಾನಿಸಲಾಗುವುದು.
-ಸುಧಾಕರ್, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇದನ್ನೂ ಓದಿ | Draupadi Murmu | ಅಮೃತಕಾಲದಲ್ಲಿ ರಾಷ್ಟ್ರಪತಿ ಹುದ್ದೆ ಕೊಟ್ಟಿದ್ದಕ್ಕೆ ಧನ್ಯವಾದಗಳು: ದ್ರೌಪದಿ ಮುರ್ಮು