ಮೈಸೂರು: ಕಾವೇರಿ ಜಲ ವಿವಾದ (Cauvery water dispute) ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ರಾಜ್ಯ ಸರ್ಕಾರ (Government of Karnataka) ಸಿದ್ಧವಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮಧ್ಯಪ್ರವೇಶ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾವೇರಿ ವಿವಾದವನ್ನು ಕೋರ್ಟ್ ಹೊರಗೆ ತೀರ್ಮಾನ ಮಾಡಿಕೊಳ್ಳಲು ಅವಕಾಶ ಇದೆ. ಇದನ್ನೇ ನಾವು ಅನೇಕ ಬಾರಿ ಕೇಳಿದ್ದೇವೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರೂ (Former Prime Minister and JDS supremo HD DeveGowda) ಪತ್ರ ಬರೆದಿದ್ದಾರೆ. ಈಗ ಬಿಜೆಪಿ- ಜೆಡಿಎಸ್ ಮೈತ್ರಿ ಆಗಿದೆ. ಈ ಕಾರಣಕ್ಕಾದರೂ ದೇವೇಗೌಡರ ಮಾತನ್ನು ಬಿಜೆಪಿಯವರು ಕೇಳ್ತಾರಾ ನೋಡೋಣ ಎಂದು ಹೇಳಿದರು.
ಬಿಜೆಪಿ ಜತೆಗೆ ದೇವೇಗೌಡರಿಗೆ ಹೊಸ ಪ್ರೇಮ
ದೇವೇಗೌಡರಿಗೆ ಈಗ ಬಿಜೆಪಿ ಜತೆಗೆ ಹೊಸ ಪ್ರೇಮ. ಅವರು ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಲಿ. ಆದರೆ, ಸರ್ಕಾರ ಸರಿಯಾದ ನಿರ್ಧಾರ ಕೈಗೊಳ್ಳಲಿಲ್ಲ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿರುವುದನ್ನು ನಾವು ಒಪ್ಪುವುದಿಲ್ಲ. ಸರ್ಕಾರ ಎಲ್ಲ ಹಂತದಲ್ಲೂ ನಾಡಿನ ಜನರ ರಕ್ಷಣೆಗೆ ಬದ್ಧವಾಗಿಯೇ ಇದೆ. ಕಾನೂನು ತಜ್ಞರು ಸರಿಯಾಗಿ ವಾದ ಮಾಡಿಲ್ಲ ಎಂಬ ಆರೋಪ ಸುಳ್ಳು. ಹಿಂದಿನ ಎಲ್ಲ ಸರ್ಕಾರಗಳು ಇದ್ದಾಗಲೂ ಇದ್ದ ಲೀಗಲ್ ಟೀಮ್ ಈಗಲೂ ಇದೆ. ಅವರೇ ವಾದ ಮಾಡಿದ್ದಾರೆ. ಕಾನೂನು ತಜ್ಞರಲ್ಲಿ ಯಾವ ಬದಲಾವಣೆ ಆಗಿಲ್ಲ. ಹೀಗಾಗಿ ಸಮರ್ಥ ವಾದ ಮಂಡಿಸಿಲ್ಲ ಎಂಬುದರಲ್ಲಿ ಅರ್ಥವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿ ಕಾವೇರಿ ಹೋರಾಟ ಹಾಗೂ ಬೆಂಗಳೂರು ಬಂದ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಬಂದ್, ಪ್ರತಿಭಟನೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಪ್ರತಿಭಟನೆಯಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು. ಪ್ರತಿಭಟನೆ ಹೇಗೆ ಸಂವಿಧಾನಾತ್ಮಕ ಹಕ್ಕಾಗಿದೆಯೋ? ಹಾಗೆಯೇ ಸಾಮಾನ್ಯ ಜನರಿಗೂ ಹಕ್ಕು ಇರುತ್ತದೆ. ಹಾಗಾಗಿ ಅವರ ಹಕ್ಕಿಗೆ ಧಕ್ಕೆ ತರಬೇಡಿ. ಜನರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ 144 ಸೆಕ್ಷನ್ ಜಾರಿ ಮಾಡಿದ್ದೇವೆ. ಜನರ ಹಕ್ಕನ್ನು ರಕ್ಷಿಸಿಸುವುದು ಸರ್ಕಾರದ ಕರ್ತವ್ಯ. ಅದೇ ಕೆಲಸವನ್ನು ನಾವು ಮಾಡಿದ್ದೇವೆ ಎಂದು ಹೇಳುವ ಮೂಲಕ 144 ಸೆಕ್ಷನ್ ಜಾರಿಯನ್ನು ಸಮರ್ಥಿಸಿಕೊಂಡರು.
ರಾಜಕೀಯಕ್ಕಾಗಿ ಎ ಟೀಂ, ಬಿ ಟೀಂ ಅನ್ನಬೇಡಿ!
ರಾಜ್ಯ ಕಾಂಗ್ರೆಸ್ ಡಿಎಂಕೆ ಬಿ ಟೀಮ್ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಎಐಡಿಎಂಕೆ ಬಿಜೆಪಿ ಜತೆ ಇತ್ತಲ್ಲ, ಆಗ ಅದು ಯಾವ ಟೀಮ್? ಸುಮ್ಮನೆ ರಾಜಕೀಯ ಕಾರಣಕ್ಕೆ ಏನೇನೋ ಹೇಳಿಕೆ ಕೊಡಬಾರದು. ಸುಮ್ಮನೆ ಬಿ ಟೀಮ್ ಎ ಟೀಮ್ ಅನ್ನಬಾರದು ಎಂದು ಹೇಳಿದರು.
ಬಿಜೆಪಿಯವರು ಚಡ್ಡಿಗಳು
ಬಿಜೆಪಿಯಿಂದ ಚಡ್ಡಿ ಚಳವಳಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರನ್ನು ನಾವೂ ಮೊದಲಿನಿಂದಲೂ ಚಡ್ಡಿಗಳು ಎಂದೇ ಕರೆಯುತ್ತಿದ್ದೇವೆ. ಈಗ ಅವರು ಚಡ್ಡಿ ಚಳವಳಿ ಮಾಡುತ್ತಿದ್ದಾರೆ. ಚಳವಳಿ ಮಾಡಲಿ ಬಿಡಿ ಎಂದು ಉತ್ತರಿಸಿದರು.
ಚಾಮರಾಜನಗರಕ್ಕೆ ಭೇಟಿ ನೀಡುವುದೇ ಗಟ್ಟಿಯಾಗಲು
ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡುತ್ತಿರುವುದರ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ನಾನು ಚಾಮರಾಜನಗರಕ್ಕೆ ಹೋಗುವುದೇ ಗಟ್ಟಿ ಆಗಲು. ಚಾಮರಾಜನಗರ ಜಿಲ್ಲೆಯಲ್ಲಿ ಇಂದು ವಾಸ್ತವ್ಯ ಮಾಡಲಿದ್ದೇನೆ. ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಅನ್ನೋ ವಿಚಾರ ಸುಳ್ಳು. ನಾನು ಗಟ್ಟಿಯಾಗಿದ್ದೇನೆ. ಗಟ್ಟಿಯಾಗೇ ಇರುತ್ತೇನೆ. ನೀವು ನನ್ನನ್ನು ವೀಕ್ ಮಾಡಲು ಯತ್ನಿಸುತ್ತಿದ್ದೀರ ಎಂದು ಮಾಧ್ಯಮದವರಿಗೆ ಹೇಳಿದರು.
ಇದನ್ನೂ ಓದಿ: Cauvery water dispute : ನಿರುತ್ತರ ಮುಖ್ಯಮಂತ್ರಿ ಎಂದು ಟೀಕಿಸಿದ ಬಿಜೆಪಿ; ಸಿದ್ದರಾಮಯ್ಯಗೆ 7 ಪ್ರಶ್ನೆ!
ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಅನ್ನುವ ಅಪವಾದವೇ ಈಗ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳುವ ಮೂಲಕ ಚಾಮರಾಜನಗರ ಭೇಟಿ ಬಗ್ಗೆ ಸ್ಪಷ್ಟನೆ ನೀಡಿದರು. ಚಾಮರಾಜನಗರಕ್ಕೆ ನಾನು ಹೋಗುತ್ತಿರುವುದೇ ಅಧಿಕಾರದಲ್ಲಿ ಗಟ್ಟಿಯಾಗಿ ನೆಲೆಯೂರಲು ಎಂದು ಹೇಳಿದರು.