Site icon Vistara News

ಕಳೆದ ಲೋಕಸಭೆಯಲ್ಲಿ ನಿಖಿಲ್‌ ಕುಮಾರಸ್ವಾಮಿಯನ್ನು ಸೋಲಿಸಿದ್ದು ನಾವೇ: ಶಾಸಕ ನರೇಂದ್ರಸ್ವಾಮಿ

PM Narendraswamy and Nikhil kumaraswamy

ಮಂಡ್ಯ: ಕಳೆದ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ನಿಂದ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ದ ನಿಖಿಲ್ ಕುಮಾರಸ್ವಾಮಿ‌ (Nikhil Kumaraswamy) ಅವರನ್ನು ಸೋಲಿಸಿದ್ದು ತಾವೇ ಎಂಬುದನ್ನು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ನಾಲ್ಕು ವರ್ಷಗಳ ಹಿಂದಿನ ಸತ್ಯವನ್ನು ಈಗ ಬಿಚ್ಚಿಟ್ಟಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧವಾಗಿ ತೊಡೆ ತಟ್ಟಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿತ್ತು. ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಂಚಿಕೊಂಡಿತ್ತು. ಅದರಂತೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲಾಗಿತ್ತು. ಆದರೆ, ಕಾಂಗ್ರೆಸ್‌ನಿಂದ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಸುಮಲತಾ ಅಂಬರೀಶ್‌ ಅವರಿಗೆ ಈ ಕಾರಣದಿಂದ ಟಿಕೆಟ್‌ ಮಿಸ್‌ ಆಗಿತ್ತು. ಹಾಗಾಗಿ ಅವರು ಬಿಜೆಪಿಯತ್ತ ವಾಲದೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರು.

ಇದನ್ನೂ ಓದಿ: ಇದೆಂಥಾ ದುರ್ವಿಧಿ; ಒಡಿಶಾ ರೈಲು ದುರಂತದಲ್ಲಿ ಗಾಯಗೊಂಡವರನ್ನು ಸಾಗಿಸುತ್ತಿದ್ದ ಬಸ್‌ ಅಪಘಾತ

ಒಂದು ಹಂತದಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಇಲ್ಲಿ ಇತ್ತು. ಇದಕ್ಕೆ ಕಾರಣವೂ ಹಲವು ಇತ್ತು. ಏಕೆಂದರೆ, ಮಂಡ್ಯ ಜಿಲ್ಲೆಯು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಭದ್ರಕೋಟೆಯಾಗಿದೆ. ಹೀಗಾಗಿ ಎರಡೂ ಕಡೆಯವರ ಮತಗಳು ಕ್ರೋಢೀಕರಣಗೊಂಡರೆ ಸಹಜವಾಗಿಯೇ ಭರ್ಜರಿ ಅಂತರದಿಂದಲೇ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರ ಇತ್ತು. ಆದರೆ, ಕೊನೆಯಲ್ಲಿ ಫಲಿತಾಂಶ ಬಂದಾಗ ಎಲ್ಲವೂ ಉಲ್ಟಾ ಆಗಿತ್ತು. ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದ ಸುಮಲತಾ ಗೆದ್ದು ಬೀಗಿದ್ದರು.

ಈ ನಿಟ್ಟಿನಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹಲವು ಬಾರಿ ಬಹಿರಂಗವಾಗಿಯೇ ಕುಟುಕಿದ್ದರು. ಆದರೆ, ಕಾಂಗ್ರೆಸ್‌ ನಾಯಕರು ಇದನ್ನು ನಿರಾಕರಿಸಿ, ತಾವು ಪ್ರಾಮಾಣಿಕವಾಗಿಯೇ ಗೆಲುವುಗಾಗಿ ಶ್ರಮ ವಹಿಸಿದ್ದೆವು ಎಂದು ಹೇಳಿಕೊಂಡಿದ್ದರು. ಈಗ ಶಾಸಕ ನರೇಂದ್ರ ಸ್ವಾಮಿ ಅವರ ಈ ಹೇಳಿಕೆ ಮತ್ತೊಂದು ಸುತ್ತಿನ ಚರ್ಚೆಗೆ ನಾಂದಿ ಹಾಡಿದೆ.

ಇದನ್ನೂ ಓದಿ: BJP Karnataka: ʼಹಿಂದು ಕಾರ್ಯಕರ್ತರʼ ರಕ್ಷಣೆಗೆ ವಕೀಲರ ಭದ್ರಕೋಟೆ: ಸಿದ್ದರಾಮಯ್ಯ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಮುಂದಾದ ಬಿಜೆಪಿ!

ನೋವನ್ನು ಪರೋಕ್ಷವಾಗಿ ತೋರಿಸಿದ್ದೆವು: ನರೇಂದ್ರ ಸ್ವಾಮಿ

ಮಂಡ್ಯದಲ್ಲಿ ಶನಿವಾರ ನಡೆದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ, ಪ್ರಥಮ ದಿನಗಳಲ್ಲಿ ನಮಗೆ ಆದ ನೋವನ್ನು ಪರೋಕ್ಷವಾಗಿ ಸಂಸತ್‌ ಚುನಾವಣೆಯಲ್ಲಿ ತೋರಿಸಿದವರು ನಾವು. ನನ್ನ ಈ ಹೇಳಿಕೆ ಬಗ್ಗೆ ಯಾರು ಬೇಕಾದರೂ, ಏನು ಬೇಕಾದರೂ ಬರೆದುಕೊಳ್ಳಲಿ. ಅವತ್ತಿನ ನೋವನ್ನು ಈ ಜಿಲ್ಲೆಯಲ್ಲಿ ತೋರಿಸಲು ಅವಕಾಶ ಸಿಕ್ಕಿದ್ದು, ಅದೊಂದೇ ಆಗಿತ್ತು. ಅದರಲ್ಲಿ ನಾವು ಯಶಸ್ವಿಯಾದೆವು. ಅವರು ಯಾರೂ ಏನು ಬೇಕಾದರೂ ಅರ್ಥ ಮಾಡಿಕೊಳ್ಳಲಿ, ನಮಗೆ ಅದು ಚಿಂತೆ ಇಲ್ಲ. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂದು ಹೇಳಿದರು. ಆ ಮೂಲಕ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದೇ ಕಾಂಗ್ರೆಸ್‌ನವರೇ ಎಂದು ಒಪ್ಪಿಕೊಂಡರು.

Exit mobile version