Site icon Vistara News

Cyclone Mocha: ಮೋಚಾ ಚಂಡಮಾರುತ ಇಂದು ಉಗ್ರ, ಭಾರಿ ಮಳೆ ಸೂಚನೆ

Cyclone mocha

ಬೆಂಗಳೂರು: ಮೋಚಾ ಚಂಡಮಾರುತ (Cyclone Mocha) ಇಂದು ಹೆಚ್ಚು ಉಗ್ರಸ್ವರೂಪವನ್ನು ತಾಳಲಿದೆ ಹಾಗೂ ಬಾಂಗ್ಲಾದೇಶ- ಮ್ಯಾನ್ಮಾರ್‌ ಗಡಿಯತ್ತ ಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ (weather alert) ನೀಡಿದೆ.

“ಮೋಚಾ’ ಮೇ 12ರಂದು 2.30 ಗಂಟೆ ಸುಮಾರಿಗೆ ಆಗ್ನೇಯ ದಿಕ್ಕಿನ ಮಧ್ಯ ಬಂಗಾಳ ಕೊಲ್ಲಿಯ ಮೇಲೆ, ಪೋರ್ಟ್‌ಬ್ಲೇರ್‌ನ ಪಶ್ಚಿಮ-ವಾಯುವ್ಯಕ್ಕೆ 520 ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿದೆ” ಎಂದು ಶುಕ್ರವಾರ ಬೆಳಗ್ಗೆ ಹವಾಮಾನ ಇಲಾಖೆ ಟ್ವೀಟ್ ಮಾಡಿದೆ. ಚಂಡಮಾರುತದ ಹೆಸರು “ಮೋಚಾ’ ಅನ್ನು ಯೆಮೆನ್ ದೇಶ ಸೂಚಿಸಿದೆ. ಜಗತ್ತಿಗೆ ಕಾಫಿಯನ್ನು ಪರಿಚಯಿಸಿದ ಕೆಂಪು ಸಮುದ್ರದ ಬಂದರು ನಗರದ ಹೆಸರು ಇದು.

ಮೋಚಾ ಚಂಡಮಾರುತದ ಪರಿಣಾಮ ಈಶಾನ್ಯ ರಾಜ್ಯಗಳಾದ ತ್ರಿಪುರಾ ಮತ್ತು ಮಿಜೋರಾಂನಲ್ಲಿ ಶನಿವಾರದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ನಾಗಾಲ್ಯಾಂಡ್, ಮಣಿಪುರ ಮತ್ತು ದಕ್ಷಿಣ ಅಸ್ಸಾಂನಲ್ಲಿ ಭಾನುವಾರ ಮಳೆಯಾಗಬಹುದು. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ಎಂಟು ತಂಡಗಳನ್ನು ನಿಯೋಜಿಸಿದ್ದು, 200 ಕೋಸ್ಟ್‌ ಗಾರ್ಡ್‌ಗಳನ್ನು ಸಜ್ಜುಗೊಳಿಸಿದೆ. ಮೀನುಗಾರರು, ಹಡಗುಗಳು, ದೋಣಿಗಳು ಮತ್ತು ಟ್ರಾಲರ್‌ಗಳು ಭಾನುವಾರದವರೆಗೆ ಮಧ್ಯ ಮತ್ತು ಈಶಾನ್ಯ ಬಂಗಾಳ ಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರಕ್ಕೆ ಹೋಗದಂತೆ ಇಲಾಖೆ ಎಚ್ಚರಿಸಿದೆ. ಮಧ್ಯ ಬಂಗಾಳ ಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರದಲ್ಲಿ ನೌಕಾಯಾನ ಮಾಡುವವರಿಗೆ ಕರಾವಳಿಗೆ ಮರಳಲು ಸೂಚಿಸಲಾಗಿದೆ.

ಈ ನಡುವೆ ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಮಳೆ ಅಬ್ಬರಿಸಿದೆ. ಶುಕ್ರವಾರ ಮೋಡ ಕವಿದ ವಾತಾವರಣ ಮುಂದುವರಿದಿದೆ. ಇನ್ನೂ 3 ದಿನ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಂಡ್ಯದಲ್ಲಿ ಗುರುವಾರ ಬಂದ ಬಿರುಗಾಳಿ, ಮಳೆ, ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ.

ಇದನ್ನೂ ಓದಿ: Cyclone Mocha: ಮೇ 12ರಂದು ತೀವ್ರಗೊಳ್ಳಲಿದೆ ಮೋಚಾ ಚಂಡಮಾರುತ, ಈ ಹೆಸರಿಗೆ ಕಾರಣವೇನು?

Exit mobile version