Site icon Vistara News

Weather Report: ಮತ್ತೆ ಸೈಕ್ಲೋನ್ ಎಫೆಕ್ಟ್; ರಾಜ್ಯಾದ್ಯಂತ ಇನ್ನೂ 5 ದಿನ ಭಾರಿ ಮಳೆ

Rain alert

Rain Effect

ಬೆಂಗಳೂರು: ರಾಜ್ಯಾದ್ಯಂತ ಮೇ 11ರವರೆಗೆ ಭಾರಿ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಈಗ ಪ್ರಭಾವ ತೀವ್ರಗೊಂಡಿದೆ. ಮುಂದಿನ 12 ಗಂಟೆಯಲ್ಲಿ ಚಂಡಮಾರುತವಾಗಿ ಪರಿವರ್ತನೆ ಆಗಲಿದೆ. ಇದರ ಪ್ರಭಾವದಿಂದಾಗಿ ರಾಜ್ಯದಲ್ಲಿ ಮುಂದಿನ ಐದು ದಿನಗಳು ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.

ಸೈಕ್ಲೋನ್‌ ಎಫೆಕ್ಟ್‌ನಿಂದಾಗಿ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಬಳ್ಳಾರಿ, ಕೊಡಗು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರಕ್ಕೆ ಯಾವುದೇ ಅಲರ್ಟ್‌ ನೀಡಿಲ್ಲವಾದರೂ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಈ ವೇಳೆ ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರಲಿದೆ. ಗುಡುಗು, ಮಿಂಚಿನ ಮಳೆಯಾಗಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಈ ಸಮಯಲ್ಲಿ ಗಾಳಿಯ ವೇಗವು 50 ಕಿ.ಮೀ ದಾಟುವ ಸಾಧ್ಯತೆ ಇದೆ.

ಮೈಸೂರು ಮತ್ತು ಮಂಡ್ಯ, ಹಾವೇರಿ ಮತ್ತು ಧಾರವಾಡ, ವಿಜಯನಗರ, ಬೆಳಗಾವಿ ಮತ್ತು ಗದಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಭಾಗಗಳಲ್ಲಿ ಒಣ ಹವೆ ಇರಲಿದೆ. ಹಾಸನ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Dog Lovers: ಮನೆಯಲ್ಲಿ ನಾಯಿ ಇದೆಯೇ ಎಚ್ಚರ! ನಿಮ್ಮ ಹೊಟ್ಟೆಯಲ್ಲಿ ಬೆಳೆಯಲಿದೆ ವೈರಾಣುಗಡ್ಡೆ

ಉಡುಪಿಯಲ್ಲಿ ಹೈ ಅಲರ್ಟ್‌

ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತದಿಂದ ಚಂಡಮಾರುತ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಐದು ದಿನಗಳಲ್ಲಿ ಸಮುದ್ರದ ಅಲೆಗಳಲ್ಲಿ ಏರಿಳಿತ ಉಂಟಾಗುವ ಮತ್ತು ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಾರ್ವಜನಿಕರಿಗೆ ಕೆಲವು ಸೂಚನೆಯನ್ನು ನೀಡಿದೆ.

ಮೀನುಗಾರರು, ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳುವುದನ್ನು ಕಡ್ಡಾಯವಾಗಿ ನಿಷೇಧ ಮಾಡಲಾಗಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ಸಮುದ್ರ, ನದಿ ತೀರ ಪ್ರದೇಶಗಳಲ್ಲಿ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ನೆರೆ ಪೀಡಿತ, ತಗ್ಗು ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಲಾಗಿದೆ. ಇನ್ನು ಸಹಾಯವಾಣಿಯನ್ನು ತೆರೆದಿದ್ದು, 0820-2574802 ಅಥವಾ ಟೋಲ್‌ ಫ್ರೀ ನಂಬರ್‌ 1077 ಕರೆ ಮಾಡಬಹುದಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version