Site icon Vistara News

Weather Report: ಕರಾವಳಿಯಲ್ಲಿ ಮತ್ತೆರಡು ದಿನ ರೆಡ್‌ ಅಲರ್ಟ್‌: ಜುಲೈ 9ರಂದು ಶಾಲಾ-ಕಾಲೇಜುಗಳಿಗೆ ರಜೆ

rain

ಬೆಂಗಳೂರು: ರಾಜ್ಯಾದ್ಯಂತ ನೈರುತ್ಯ ಮುಂಗಾರು ಚುರುಕು ಪಡೆದುಕೊಂಡಿದ್ದು, ಹಲವೆಡೆ ವ್ಯಾಪಕ ಮಳೆಯಾಗುತ್ತಿದೆ. ಕರಾವಳಿಯ ಬಹುತೇಕ ಕಡೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಜುಲೈ 9, 10ರಂದು ರೆಡ್‌ ಅಲರ್ಟ್‌ ಘೋಷಣೆ ಮುಂದುವರಿದಿದೆ. ನಂತರದ ಮೂರು ದಿನ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಹಾವೇರಿ, ಧಾರವಾಡ, ಬೀದರ್‌, ಕಲಬುರುಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದಂತೆ ರಾಯಚೂರು, ವಿಜಯಪುರ, ಬಾಗಲಕೋಟೆ, ವಿಜಯಪುರ, ಬಳ್ಳಾರಿ ಹಾಗೂ ಗದಗ, ಕೊಪ್ಪಳದಲ್ಲಿ ಸಾಧರಣದಿಂದ ಮಧ್ಯಮ ಪ್ರಮಾಣದಲ್ಲಿ ಮಳೆಯಾಗಲಿದೆ.

ಇದನ್ನೂ ಓದಿ | Rain News | ನಿಲ್ಲದ ಮಳೆ ಗೋಳು, ಜಲಾವೃತ ಪ್ರದೇಶಗಳು ಸಾಲು ಸಾಲು

ದಕ್ಷಿಣ ಒಳನಾಡಿನ ಬಹುತೇಕ ಕಡೆ ಐದು ದಿನ ಮಳೆಯಾಗಲಿದ್ದು, ಮೊದಲ ಎರಡು ದಿನ ಚಿಕ್ಕಮಗಳೂರು, ಕೊಡುಗು, ಶಿವಮೊಗ್ಗಕ್ಕೆ ಆರೆಂಜ್‌ ಅಲರ್ಟ್‌ ನೀಡಲಾಗಿದೆ. ಹಾಸನ ಜಿಲ್ಲೆಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಜತೆಗೆ ರಾಜಧಾನಿ ಬೆಂಗಳೂರಿನಲ್ಲಿ ಸಾಧಾರಣದಿಂದ ಹಗುರ ಮಳೆಯಾಗಲಿದ್ದು, ಯಾವುದೇ ಅಲರ್ಟ್‌ ಘೋಷಣೆ ಮಾಡಿಲ್ಲ.

ಭಾರಿ ಮಳೆಗೆ ಅರ್ಧಕ್ಕೆ ಮುಳುಗಿದ ಮನೆ

ಈ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಕಲಬುರಗಿಯಲ್ಲಿ ಕಳೆದ 2 ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಜುಲೈ 9ರಂದು ಭಾರಿ ಮಳೆ ಮುನ್ಸೂಚನೆ ಹಿನ್ನೆಲೆ ಎಲ್ಲ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಜೆ ಘೋಷಿಸಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶಿಸಿದ್ದಾರೆ.

ಇತ್ತ ಉತ್ತರಕನ್ನಡ ಭಾಗದಲ್ಲೂ ವರುಣ ಅಬ್ಬರ ಮುಂದುವರಿದಿದ್ದು, ಅತಿ ಹೆಚ್ಚು ಮಳೆಯಾಗುತ್ತಿರುವ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ. ಜುಲೈ 9 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದು, ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ ಹಾಗೂ ಜೋಯಿಡಾ ತಾಲೂಕುಗಳಿಗೆ ಮಾತ್ರ ರಜೆ ನೀಡಲಾಗಿದೆ. ಯಲ್ಲಾಪುರ, ಹಳಿಯಾಳ ಹಾಗೂ ದಾಂಡೇಲಿ ತಾಲೂಕುಗಳ ಶಾಲೆ, ಕಾಲೇಜಿಗೆ ರಜೆ ಇರುವುದಿಲ್ಲ. ಜತೆಗೆ ಕೊಡುಗು ಜಿಲ್ಲೆಯ ಶಾಲಾ- ಕಾಲೆಜುಗಳಿಗೆ ರಜೆ ವಿಸ್ತರಣೆಯಾಗಿದ್ದು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್‌ ಘೋಷಿಸಿದ್ದಾರೆ.

ಇದನ್ನೂ ಓದಿ | ಮನೆಯೊಳಗೆ ನೀರು ನುಗ್ಗಿದರೆ ₹10 ಸಾವಿರ ಪರಿಹಾರ: ಮಳೆ ಹಾನಿ ಕುರಿತು ಸಿಎಂ ಬೊಮ್ಮಾಯಿ ಸಭೆ

Exit mobile version