Site icon Vistara News

Weather Report: ಬಿಪರ್‌ಜಾಯ್‌ ಸೈಕ್ಲೋನ್‌ಗೆ ಕರುನಾಡು ಥಂಡಾ; ಭಾರಿ ಮಳೆ ಎಚ್ಚರಿಕೆ, ಹೈವೇವ್‌ ಅಲರ್ಟ್

Rain News surathkal beach

ಬೆಂಗಳೂರು/ಮಂಗಳೂರು: ಬಿಪರ್‌ಜಾಯ್‌ ಚಂಡಮಾರುತ ಎಫೆಕ್ಟ್‌ನಿಂದಾಗಿ (Biparjoy Cyclone Effect) ಜನರು ತತ್ತರಿಸಿ ಹೋಗಿದ್ದು, ಕರಾವಳಿಯಲ್ಲಿ ಮಳೆಯ ಅಬ್ಬರ (Rain News) ಮುಂದುವರಿಯಲಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿಯ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ (Weather Report) ಇಲಾಖೆ ಹೇಳಿದೆ.

ಭಾರಿ ಗಾತ್ರದಲ್ಲಿ ಅಪ್ಪಳಿಸುತ್ತಿರುವ ಅಲೆಗಳು

ಮಂಗಳೂರು ಸುತ್ತಮುತ್ತ ಗುರುವಾರ (ಜೂ.15) ಬೆಳಗ್ಗೆ ಧಾರಾಕಾರ ಮಳೆಯಾಗುತ್ತಿದೆ. ಮಂಗಳೂರಿನ ಹೊರವಲಯದ ಸುರತ್ಕಲ್ ಬಳಿಯ ಬೀಚ್‌ನಲ್ಲಿ ಅಲೆಗಳ ಅಬ್ಬರದಿಂದ ಕಡಲತಡಿ ನಿವಾಸಿಗಳು ಆತಂಕದಲ್ಲಿ ದಿನದೂಡುವಂತಾಗಿದೆ. ಭಾರೀ ಗಾತ್ರದಲ್ಲಿ ಸಮುದ್ರದ ಅಲೆಗಳು ಏಳುತ್ತಿದೆ. ಕಡಲತೀರದ ನಿವಾಸಿಗಳ ಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಸಿಗರನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದವರು ಇದೀಗ ಸೈಕ್ಲೋನ್‌ನಿಂದಾಗಿ ಬೆರಳಣಿಕೆಯಷ್ಟು ಪ್ರವಾಸಿಗರು ಮಾತ್ರ ಬೀಚ್‌ಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ಸಮುದ್ರಕ್ಕೆ ಇಳಿಯುವಂತಿಲ್ಲ

ಉತ್ತರ ಕನ್ನಡದಲ್ಲಿ ಜಿಲ್ಲಾಡಳಿತವು ಜೂ.19ರವರೆಗೆ ಹೈ ವೇವ್ ಅಲರ್ಟ್ ಘೋಷಿಸಿದೆ. ಚಂಡಮಾರುತದ ಪ್ರಭಾವವು ಮುಂದುವರಿಯಲಿದ್ದು, ಸಮುದ್ರದಲ್ಲಿ 3 ರಿಂದ 4 ಮೀ ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ಯಾರೂ ಸಹ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಸಮುದ್ರ ಪ್ರಕ್ಷುಬ್ಧವಾಗುವುದರಿಂದ ತೀರ ಪ್ರದೇಶದ ನಿವಾಸಿಗಳು ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ.

ಚಂಡಮಾರುತದ ಪರಿಣಾಮವನ್ನು ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಈಗಾಗಲೇ ಕಂಟ್ರೋಲ್ ರೂಂ ಮೂಲಕ ಸಾರ್ವಜನಿಕರಿಗೆ ಸಹಾಯವಾಣಿ ತೆರೆಯಲಾಗಿದೆ. ಕಡಲತೀರಗಳಲ್ಲಿ ಪ್ರವಾಸಿಗರ ಮೇಲೆ ನಿಗಾ ಇರಿಸಲು ಲೈಫ್‌ಗಾರ್ಡ್‌ಗಳಿಗೆ ಸೂಚನೆಯನ್ನು ನೀಡಲಾಗಿದೆ.

ಭಾರೀ ಮಳೆಯ ಎಚ್ಚರಿಕೆ

ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಸಾಧ್ಯತೆ ಇದ್ದು ಗಾಳಿಯ ವೇಗವು ಗಂಟೆಗೆ 40-50 ಕಿ.ಮೀ ತಲುಪುವ ಸಾಧ್ಯತೆ ಇದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 24 ಗಂಟೆಯಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿ.ಮೀ ಇಂದ 55 ಕಿ.ಮೀ ವೇಗದಲ್ಲಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಜತೆಗೆ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಲಿದ್ದಾನೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಜತೆಗೆ ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಕೆಲವು ಕಡೆ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Suicide Case : ಹೊಟ್ಟೆನೋವು ತಾಳಲಾರದೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ

ರಾಜಧಾನಿಯಲ್ಲಿ ವರುಣಾಘಾತ

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಮೇಲ್ಮೈ ಮಾರುತಗಳು ಕೆಲವೊಮ್ಮೆ ಪ್ರಬಲವಾಗಿರಲಿದೆ. ಇದರಿಂದಾಗಿ ಜಿಟಿ ಜಿಟಿ ಮಳೆಯೊಂದಿಗೆ ಕೆಲವೊಮ್ಮೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಾಗಿರಲಿದೆ. ಗರಿಷ್ಠ ಉಷ್ಣಾಂಶ 32 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version