ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ರಾಜ್ಯಾದ್ಯಂತ ಮುಂದಿನ ಐದು ದಿನಗಳು ಗುಡುಗು ಸಹಿತ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ. ಈ ಕುರಿತು ಹವಾಮಾನ ಇಲಾಖೆ (Weather report) ಮುನ್ಸೂಚನೆಯನ್ನು ನೀಡಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ.
ರಾಜ್ಯಾದ್ಯಂತ ಗುಡುಗು, ಮಿಂಚಿನ ಮಳೆಯಾಗಲಿದ್ದು, ಗಾಳಿಯ ವೇಗವು ಉತ್ತರ ಒಳನಾಡಿನಲ್ಲಿ ಗಂಟೆಗೆ 30-40ಕಿ.ಮೀ ತಲುಪುವ ಸಾಧ್ಯತೆ ಇದೆ. ಮುಂದಿನ 24 ಗಂಟೆಯಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿ ವೇಗವು ಗಂಟೆ 40-45ಕಿ.ಮೀ ಇಂದ 55 ಕಿ.ಮೀ ವೇಗದಲ್ಲಿ ಬೀಸಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಧಾರಾಕಾರ ಮಳೆಯಾಗಲಿದ್ದು, ಗರಿಷ್ಠ ಉಷ್ಣಾಂಶ 24 ಹಾಗೂ ಕನಿಷ್ಠ ಉಷ್ಣಾಂಶವು 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಈ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಚಾಮರಾಜನಗರ ಮತ್ತು ಮೈಸೂರಲ್ಲಿ ಅಲ್ಲಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ದಾವಣಗೆರೆ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮತ್ತು ಮಂಡ್ಯದಲ್ಲಿ ವ್ಯಾಪಕ ಮಳೆಯಾಗಲಿದೆ. ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಧಾರವಾಡ, ಬೆಳಗಾವಿ, ಹಾವೇರಿ, ಬಾಗಲಕೋಟೆ, ವಿಜಯನಗರ, ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಒಮ್ಮೊಮ್ಮೆ ಬಿರುಸಿನೊಂದಿಗೆ ಮಳೆಯಾಗಲಿದೆ. ಮಲೆನಾಡಿನ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗಿನಲ್ಲಿ ಸಾಧಾರಣ ಮಳೆಯಾಗಬಹುದು.
ಈ ಬಾರಿಯೂ ವಾಡಿಕೆಯಂತೆ ಮುಂಗಾರು ಮಳೆಯಾಗಲಿದ್ದು, ಕಡಿಮೆಯಾಗುವ ಯಾವುದೇ ಮುನ್ಸೂಚನೆ ಇಲ್ಲ. ಜೂನ್ 21ರಿಂದ ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಎ. ಪ್ರಸಾದ್ ತಿಳಿಸಿದ್ದಾರೆ.
ಇದನ್ನೂ ಓದಿ: Rain News: ಭಾರಿ ಮಳೆಗೆ ಮುಳುಗಿದ ಶಿವಮೊಗ್ಗ, ಹಾಸನ; ತೇಲಿ ಹೋದ ಹತ್ತಾರು ಬೈಕ್‌ಗಳು, ಕಾರುಗಳ ವಾಟರ್ ರೈಡಿಂಗ್
ಮಳೆ ಬಂದರೂ ಏರಲಿದೆ ತಾಪಮಾನ
ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದರೂ ವಾತಾವರಣದಲ್ಲಿ ಕೂಲ್ ಆಗಿರುವುದಿಲ್ಲ. ಬದಲಿಗೆ ತಾಪಮಾನ ಏರಿಕೆ ಆಗಲಿದೆ. ಗರಿಷ್ಠ ಉಷ್ಣಾಂಶವು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 4-5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ 3-4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.
ದಾವಣಗೆರೆಯಲ್ಲಿ ಮಳೆ ಅಬ್ಬರ
ದಾವಣಗೆರೆಯ ಚನ್ನಗಿರಿ ಪಟ್ಟಣದಲ್ಲಿ ಜೂ.20ರಂದು ವರುಣನ ಆರ್ಭಟ ಜೋರಾಗಿತ್ತು. ಸತತ ಒಂದು ಗಂಟೆ ಕಾಲ ಸುರಿದ ಮಳೆಗೆ ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ಗಳು ಮುಳುಗಿದ್ದವು. ಮನೆಗಳ ಮುಂಭಾಗ ನಾಲ್ಕೈದು ಅಡಿ ನೀರು ನಿಂತ ಪರಿಣಾಮ ಜನರು ಹೊರಗೆ ಬರಲು ಹೋಗಲು ಪರದಾಡಿದರು.
ಮಳೆಗೆ ಮುಳುಗಿದ ಹೊಯ್ಸಳ ನಗರ
ಹಾಸನ ನಗರದಲ್ಲೂ ಭಾರಿ ಮಳೆಯಾಗುತ್ತಿದ್ದು, ಹೊಯ್ಸಳ ನಗರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆ ತುಂಬ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡಿದರು. 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ.
ಮನೆಯಲ್ಲಿದ್ದ ಫ್ರಿಡ್ಜ್, ವಾಷಿಂಗ್ ಮಷಿನ್, ಟಿವಿ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು ನೀರುಪಾಲಾಗಿದೆ. ಇದರಿಂದಾಗಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳೆದುಕೊಂಡು ಜನರು ಕಂಗಾಲಾಗಿದ್ದಾರೆ. ಮನೆಯೊಳಗೆ ನುಗ್ಗಿರುವ ನೀರನ್ನು ಹೊರ ಹಾಕಲು ಹರಸಾಹಸ ಪಡುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ನೆರವಿನೊಂದಿಗೆ ನೀರನ್ನು ಹೊರಹಾಕುತ್ತಿದ್ದು, ಸೂಕ್ತ ಪರಿಹಾರಕ್ಕಾಗಿ ಜನರು ಆಗ್ರಹಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ