Site icon Vistara News

Weather Report: ಕೊಡಗು, ಕಲಬುರಗಿಯಲ್ಲಿ ಭಾರಿ ಮಳೆ; ಮುಂದಿನ 24 ಗಂಟೆಯಲ್ಲಿ ಕರಾವಳಿಯಲ್ಲಿ ಭಾರಿ ವರ್ಷಧಾರೆ ನಿರೀಕ್ಷಿತ

Weather Forecast

ಬೆಂಗಳೂರು: ಮಳೆಯ ಅಬ್ಬರ ಮುಂದುವರಿದಿದ್ದು, ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಗುಡುಗು ಸಹಿತ ಮಳೆಯಾಗುವ (Rain Update) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Weather Report) ನೀಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯ ಕೆಲವು ಭಾಗದಲ್ಲಿ ಗುಡುಗು, ಮಿಂಚು ಸಹಿತ (Karnataka rain news) ಮಳೆಯಾಗಲಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ,ಚಾಮರಾಜನಗರ ಮತ್ತು ದಾವಣಗೆರೆ, ಚಿತ್ರದುರ್ಗ, ಕೊಡಗು ಸೇರಿದಂತೆ ಮಂಡ್ಯ, ಮೈಸೂರು, ತುಮಕೂರು, ವಿಜಯನಗರ, ಶಿವಮೊಗ್ಗ, ರಾಮನಗರ, ಹಾಸನ ಜಿಲ್ಲೆಗಳಲ್ಲಿ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ.

ಇತ್ತ ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್‌, ಬಾಗಲಕೋಟೆ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ ಸೇರಿದಂತೆ ಯಾದಗಿರಿ, ರಾಯಚೂರು, ವಿಜಯಪುರದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಾಗ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿಯ ಹೊತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Weather Report: ರಾಯಚೂರಿನಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಅಬ್ಬರ; ಕೊಚ್ಚಿ ಹೋಯ್ತು ಸಾವಿರಾರು ಕ್ವಿಂಟಲ್‌ ಭತ್ತ

ಕಲಬುರಗಿ, ಕೊಡಗಿನಲ್ಲಿ ಅಬ್ಬರಿಸಿದ ಮಳೆ

ಗುರುವಾರ (ಏ.27) ಸಂಜೆ ವೇಳೆಗೆ ಕಲಬುರಗಿಯಲ್ಲಿ ಬಿರುಗಾಳಿ ಸಹಿತ ಗುಡುಗು, ಸಿಡಿಲಿನೊಂದಿಗೆ ಭಾರಿ ಮಳೆ ಆಗಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಕಲಬುರಗಿ ಜನರಿಗೆ ವರುಣ ತಂಪೇರೆದಿದ್ದಾನೆ. ಹಲವೆಡೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಜನ-ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಹಲವು ದಿನಗಳ ಬಳಿಕ ಕೊಡಗು ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಎರಡು ತಿಂಗಳಿಂದ ಮಳೆ ಇಲ್ಲದೆ ಕಂಗಲಾಗಿದ್ದ ಕೊಡಗಿನ ಕೃಷಿಕರು ಸಂತಸಗೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ಕಂಡು ಬಂತು.

Exit mobile version