ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ದಿನ ಭರ್ಜರಿ (Rain News) ಮಳೆಯಾಗಲಿದೆ. ಈ ಕುರಿತು ಹವಾಮಾನ ಇಲಾಖೆ (Weather report) ಮುನ್ಸೂಚನೆಯನ್ನು ನೀಡಿದೆ. ಕರಾವಳಿಯ ಕೆಲವು ಭಾಗದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿರುಗಾಳಿ ಬೀಸಲಿದ್ದು, ಗುಡುಗು ಸಹಿತ ಮಳೆಯಾಗುವ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.
ಕಳೆದ ಮೂರು ದಿನದಿಂದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆ ಆಗಿತ್ತು. ಆದರೆ ಮುಂದಿನ ಮೂರು ದಿನಗಳು ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ದಾವಣಗೆರೆ, ತುಮಕೂರು, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಚಾಮರಾಜನಗರ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ವರುಣ ಗುಡುಗಲಿದ್ದಾನೆ. ಮಲೆನಾಡಿನ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗಿನಲ್ಲಿ ಮಳೆಯ ಸಿಂಚನವಾಗಲಿದೆ.
ಗುಡುಗು ಇರಲಿದೆ; ತಾಪಮಾನ ಏರಲಿದೆ
ರಾಜ್ಯಾದ್ಯಂತ ಮಳೆ ನಡುವೆಯೂ ಒಳನಾಡಿನ ಕೆಲವು ಕಡೆಗಳಲ್ಲಿ ತಾಪಮಾನ ಏರಿಕೆ ಆಗುವ ಸಾಧ್ಯತೆ ಇದೆ. ಬೀದರ್, ಧಾರವಾಡ, ಹಾವೇರಿ, ಕೊಪ್ಪಳದಲ್ಲಿ ಒಣಹವೆ ಇರಲಿದೆ. ಗರಿಷ್ಠ ಉಷ್ಣಾಂಶವು ಈ ಭಾಗದಲ್ಲಿ ಸಾಮಾನ್ಯಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ತಲುಪುವ ಸಾಧ್ಯತೆ ಇದೆ.
ಮೀನುಗಾರರಿಗೆ ಮುಂದುವರಿದ ನಿರ್ಬಂಧ
ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-50 ಕಿ.ಮೀ ಇಂದ 55 ಕಿ.ಮೀ ವೇಗದಲ್ಲಿ ಬೀಸಲಿದೆ. ಈ ಸಮಯದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಕಡಲತೀರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: Theft Case: ಕ್ಯಾಬ್ ಡ್ರೈವರ್‌ಗಳೇ Be Careful.. ಪ್ರಯಾಣಿಕರ ಸೋಗಿನಲ್ಲಿ ಬರ್ತಾನೆ ಸುಲಿಗೆಕೋರ!
ಜೂ.16ರಂದು ರಾಜ್ಯದ ಕರಾವಳಿ ಹಾಗೂ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಉತ್ತರ ಕನ್ನಡದ ಕ್ಯಾಸಲ್ ರಾಕ್‌ನಲ್ಲಿ 3 ಸೆಂ.ಮೀ ಮಳೆಯಾಗಿದೆ. ಕದ್ರಾ, ಉಡುಪಿಯ ಸಿದ್ದಾಪುರ ಹಾಗೂ ಕೊಲ್ಲೂರಿನಲ್ಲಿ 1 ಸೆಂ.ಮೀ ಮಳೆಯಾಗಿರುವ ವರದಿಯಾಗಿದೆ. ಇನ್ನು ಗರಿಷ್ಠ ಉಷ್ಣಾಂಶವು ರಾಯಚೂರಿನಲ್ಲಿ 39.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ