Site icon Vistara News

Weather report: ಬೆಂಗಳೂರಲ್ಲಿ ಮರೆಯಾಗುವ ಸೂರ್ಯ; ಕರಾವಳಿಯಲ್ಲಿ ಅಬ್ಬರಿಸುವ ವರುಣ

Rain News

Rain News

ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ (Weather report) ಮುಂದುವರಿದಿದೆ. ಜೂನ್‌ 19-20ರಂದು ಕರಾವಳಿ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಗುಡುಗು ಸಹಿತ ಮಳೆಯಾಗುವ (rain alert) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather Update) ನೀಡಿದೆ.

ಮಲೆನಾಡಿನ ಭಾಗಗಳಾದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗಿನಲ್ಲೂ ಧಾರಾಕಾರ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ರಾಮನಗರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ

ಉತ್ತರ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ ಮತ್ತು ವಿಜಯನಗರದಲ್ಲಿ ಒಂದೆರಡು ಕಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವ ರಾತ್ರಿಯ ವೇಳೆಗೆ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಬೀಸಲಿದೆ ಬಿರುಗಾಳಿ, ಇರಲಿದೆ ಗುಡುಗು, ಮಿಂಚು

ಮುಂದಿನ 24 ಗಂಟೆಯಲ್ಲಿ ಒಳನಾಡಿನ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಸಾಧ್ಯತೆ ಇದೆ. ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ತಲುಪುವ ಸಾಧ್ಯತೆ ಇದೆ. ಕರಾವಳಿಯ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ. ಮಳೆಯ ನಡುವೆಯೂ ಗರಿಷ್ಠ ಉಷ್ಣಾಂಶವು ರಾಜ್ಯದ ಒಂದೆರಡು ಕಡೆಗಳಲ್ಲಿ 4-5 ಹಾಗೂ ಕೆಲವು ಕಡೆಗಳಲ್ಲಿ 3-4 ಡಿಗ್ರಿ ಸೆಲ್ಸಿಯಸ್ ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ.

ಮುಂದುವರಿದ ಮೀನುಗಾರರಿಗೆ ಎಚ್ಚರಿಕೆ

ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿಮೀ ಇಂದ 55 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಪ್ರವಾಸಿಗರ ಹುಚ್ಚಾಟ; ಲೈಫ್‌ಗಾರ್ಡ್‌ಗಳಿಗೆ ಪ್ರಾಣ ಸಂಕಟ

ಕಡಲತೀರದಲ್ಲಿ ಪ್ರವಾಸಿಗರ ಹುಚ್ಚಾಟವು ಲೈಫ್‌ಗಾರ್ಡ್‌ಗಳಿಗೆ ಪ್ರಾಣಸಂಕಟವಾಗಿದೆ. ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಎಫೆಕ್ಟ್‌ನಿಂದಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಉತ್ತರಕನ್ನಡದ ಕುಮಟಾ ತಾಲೂಕಿನ ಗೋಕರ್ಣದ ಓಂ ಬೀಚ್‌ನಲ್ಲಿ ಎಲ್ಲಿ ಕಣ್ಣುಹಾಯಿಸಿದರೂ ಪ್ರವಾಸಿಗರಿಂದ ತುಂಬಿಹೋಗಿತ್ತು. ಕಡಲತೀರದಲ್ಲಿ ಅಲರ್ಟ್ ಇದ್ದರೂ ಲೈಫ್‌ಗಾರ್ಡ್ ಮಾತಿಗೆ ಕ್ಯಾರೆ ಎನ್ನದೆ ಅಲೆಗಳು ಅಪ್ಪಳಿಸುತ್ತಿದ್ದರೂ, ಬಂಡೆಗಳ ಮೇಲೆ ನಿಂತಿದ್ದರು. ಪ್ರವಾಸಿಗರ ಹುಚ್ಚಾಟಕ್ಕೆ ಲೈಫ್‌ಗಾರ್ಡ್‌ಗಳು ಹೈರಣಾದರು.

ಕೊಪ್ಪಳದಲ್ಲಿ ಹಲವು ದಿನಗಳಿಂದ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದರು. ಭಾನುವಾರ ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ಧಾರಾಕಾರ ಮಳೆಯಾಗಿದೆ. ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿಗಳಿಂದ ಅಭಿವೃದ್ದಿ ಪಡಿಸಿದ ಗಿಣಗೇರಿ ಕೆರೆ ಕಳೆದ ವರ್ಷ ಭರ್ತಿಯಾಗಿತ್ತು. ಈ ವರ್ಷ ಜೂನ್ ಮೂರನೆಯ ವಾರದವರೆಗೂ ಮಳೆಯಾಗದೆ ರೈತರು ನಿರಾಸೆರಾಗಿದ್ದರು. ಭಾನುವಾರ ಸುರಿದ ಮಳೆಗೆ ರೈತರು ಸಂತಸ ವ್ಯಕ್ತಪಡಿಸಿದ್ದು, ಉತ್ತಮ ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಮಂಗಳೂರಲ್ಲಿ ಭಾರಿ ಮಳೆ ದಾಖಲು

ರಾಜ್ಯದಲ್ಲಿ ಶನಿವಾರ ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ದಕ್ಷಿಣ ಕನ್ನಡದ ಮಂಗಳೂರು ವಿಮಾನ ನಿಲ್ದಾಣದಲ್ಲಿ 12 ಸೆಂ.ಮೀ ನಷ್ಟು ಮಳೆಯಾಗಿದ್ದರೆ, ಪಣಂಬೂರಿನಲ್ಲಿ 10 ಸೆಂ.ಮೀ ಮಳೆಯಾಗಿದೆ. ಮುಲ್ಕಿ, ಉಪ್ಪಿನಂಗಡಿ, ಮಂಕಿ ತಲಾ 6 ಸೆಂ.ಮೀ ಮಳೆಯಾಗಿದೆ.

ಇದನ್ನೂ ಓದಿ: Free Bus service : ನಮ್‌ ಹೆಂಡ್ರಿಗೆ ನಾವಿಲ್ವಾ? ಸಿದ್ದರಾಮಯ್ಯ ಏನ್‌ ಫ್ರೀ ಕೊಡೋದು? ನೋಡಲೇಬೇಕಾದ ವಿಡಿಯೊಗಳಿವು!

ಹೊನ್ನಾವರ , ಕುಮಟ, ಕಾರವಾರ, ಕದ್ರಾ ತಲಾ 4 ಹಾಗೂ ಮಾಣಿ, ಕ್ಯಾಸಲ್ ರಾಕ್, ಶಿರಾಳಿ, ಗೋಕರ್ಣ , ಕೋಟ ಮತ್ತು ಸುಳ್ಯ, ಸಿಂಧನೂರಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಗೇರುಸೊಪ್ಪ, ಬೆಳ್ತಂಗಡಿ, ಕೊಲ್ಲೂರು, ಭಾಗಮಂಡಲದಲ್ಲಿ ತಲಾ 2 ಹಾಗೂ ಉಡುಪಿ, ಕುಂದಾಪುರ, ಕಾರ್ಕಳ, ಸಿದ್ದಾಪುರ, ಅಂಕೋಲಾ , ಧರ್ಮಸ್ಥಳ, ಪುತ್ತೂರು ಎಚ್‌ಎಂಎಸ್ ತಲಾ 1 ಸೆಂ.ಮೀ ಮಳೆಯಾಗಿದೆ. ಗರಿಷ್ಠ ಉಷ್ಣಾಂಶ 39.1 ಡಿಗ್ರಿ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version