Site icon Vistara News

Weather Report: ರಾಜ್ಯದಲ್ಲಿ ಇನ್ನೆರಡು ದಿನ ವರುಣನ ಅಬ್ಬರ, ಇರಲಿ ಎಚ್ಚರ

Rain News

Rain News

ಬೆಂಗಳೂರು: ಕಳೆದೊಂದು ವಾರದಿಂದ ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು, ಮುಂದಿನ 24 ಗಂಟೆಯಲ್ಲಿ ಬಿರುಗಾಳಿ ಸಹಿತ ಮಳೆಯಾಗುವ (Karnataka Rains) ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಗುಡುಗು ಸಹಿತ ಧಾರಾಕಾರ (Heavy Rainfall) ಮಳೆಯಾಗಲಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಮತ್ತು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು ಸೇರಿದಂತೆ ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ವರುಣ ಅಬ್ಬರಿಸಲಿದ್ದಾನೆ.

ಉಳಿದಂತೆ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

ರಾಜ್ಯಾದ್ಯಂತ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗಲಿದ್ದು, ಮರದಡಿ ನಿಲ್ಲದಂತೆ ಎಚ್ಚರಿಕೆಯನ್ನು ನೀಡಲಾಗಿದೆ. ಕೆಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದ್ದು, ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಇದ್ದರೆ, ಕೆಲವು ಕಡೆ ಗರಿಷ್ಠ ಉಷ್ಣಾಂಶದ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Electricity Price Hike: ಎಲೆಕ್ಷನ್‌ ರಿಸಲ್ಟ್‌ ಮೊದಲೇ ಜನತೆಗೆ ವಿದ್ಯುತ್ ದರ ಏರಿಕೆಯ ಶಾಕ್‌! ಹೆಚ್ಚಳ ಎಷ್ಟು?

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಬೆಳಗ್ಗೆ ಬಿಸಿಲು ಇದ್ದರೆ ಮಧ್ಯಾಹ್ನದ ಸಮಯ ಮೋಡ ಕವಿದ ವಾತಾವರಣ ಇರಲಿದೆ. ರಾತ್ರಿಯ ಸಮಯದಲ್ಲಿ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ಗರಿಷ್ಠ ಉಷ್ಣಾಂಶ 33 ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಗುರುವಾರ (ಮೇ 11) ರಾಜ್ಯದಲ್ಲಿ ಗರಿಷ್ಠ ಉಷ್ಣಾಂಶ 40.0 ಡಿಗ್ರಿ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದೆ.

ಸಿಡಿಲು ಬಡಿದು ಎತ್ತು ಸಾವು

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ಶುಕ್ರವಾರ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ. ಮನೆಗೆ ಆಧಾರಸ್ತಂಭವಾಗಿದ್ದ ಎತ್ತು ಮೃತಪಟ್ಟಿದ್ದು, ಮಾಲೀಕರು ಕಂಗಾಲಾಗಿದ್ದಾರೆ. ರೈತ ಮರಿಬಸಪ್ಪ ಮಾಟ್ನರ್ ಎಂಬುವವರಿಗೆ ಸೇರಿದ ಎತ್ತು ಮೃತಪಟ್ಟಿದ್ದು, ಹಿರೇಹಡಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬುಡಸಮೇತ ಉರುಳಿ ಬಿದ್ದ ಮರ

ಇತ್ತ ಧಾರವಾಡದಲ್ಲಿ ಗಾಳಿ ಜತೆಗೆ ಮಳೆ ಅಬ್ಬರಿಸುತ್ತಿದೆ. ಮಳೆಯಿಂದಾಗಿ ಸವಾರರು ಪರದಾಡಿದರು. ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಬೃಹತ್ ಮರಗಳು ಧರೆಗೆ ಉರುಳಿದ್ದವು. ಮರ ಉರುಳುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ ನಲ್ಲಿ ಸೆರೆಯಿಡಿದರು. ಗಾಳಿಯ ರಭಸಕ್ಕೆ ಮರ ಸಂಪೂರ್ಣ ನೆಲಸಮವಾಗಿದೆ.

ಭತ್ತ ನೀರುಪಾಲು

ಗದಗ ಜಿಲ್ಲೆ‌ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಶುಕ್ರವಾರ ಸತತ ಒಂದು ಗಂಟೆಯಿಂದ ಸುರಿಯುತ್ತಿರುವ ಬಿರುಗಾಳಿ, ಮಳೆಗೆ ಮರಗಳು ಧರೆಗುರುತ್ತಿವೆ. ಪಟ್ಟಣದ ರಸ್ತೆಗಳೆಲ್ಲಾ ಮಿನಿ ಕೆರೆಯಂತಾಗಿದೆ. ದಿಢೀರ್‌ ಬಂದ ಮಳೆಗೆ ರಸ್ತೆಯ ಮೇಲೆ ಒಣಗಿಸಲು ಹಾಕಿದ್ದ ಭತ್ತ ನೀರುಪಾಲಾದ ಘಟನೆಯು ನಡೆದಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಳ್ಳಿ ಗ್ರಾಮದ ಹಲವು ರೈತರು ಸುಮಾರು 100 ಕ್ವಿಂಟಲ್ ಭತ್ತದ ರಾಶಿ ಮಾಡಿ ಹೈವೇಯಲ್ಲಿ ಒಣಗಿಸಲು ಹಾಕಿದರು. ಆದರೆ ಮಳೆಗೆ ಭತ್ತವೆಲ್ಲ ಕೊಚ್ಚಿಕೊಂಡು ಹೋಗಿದೆ.

Exit mobile version