ಬೆಂಗಳೂರು: ರಾಜ್ಯಕ್ಕೆ ಮುಂದಿನ 5 ದಿನ ಗುಡುಗು ಸಹಿತ ಮಳೆಯಾಗುವ (Rain News) ಮುನ್ಸೂಚನೆ (Weather report) ಇದ್ದು, ಕರಾವಳಿಗರಿಗೆ ಅಲರ್ಟ್ ನೀಡಲಾಗಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಬಿರುಗಾಳಿ ಬೀಸಲಿದ್ದು, ಜತೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿ.ಮೀ ಇಂದ 55 ಕಿ.ಮೀ ವೇಗದಲ್ಲಿ ಬೀಸಲಿದೆ. ಹೀಗಾಗಿ ಐದು ದಿನಗಳು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ (Fisheries warning) ಸೂಚಿಸಲಾಗಿದೆ.
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಈ ಜಿಲ್ಲೆಗಳಲ್ಲೂ ಮಳೆ ಸಾಧ್ಯತೆ
ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಯಾದಗಿರಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು ಭಾಗದಲ್ಲೂ ಧಾರಾಕಾರ ಮಳೆಯಾಗಲಿದೆ. ಕೋಲಾರ, ಮೈಸೂರು, ಮಂಡ್ಯ, ರಾಮನಗರ ಮತ್ತು ಶಿವಮೊಗ್ಗ, ತುಮಕೂರಿನ ಕೆಲವು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಗುಡುಗು ಮುನ್ನೆಚ್ಚರಿಕೆ
ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಸಾಧ್ಯತೆ ಇದ್ದು, ಗಾಳಿಯ ವೇಗವು ಗಂಟೆಗೆ 40-50 ಕಿ.ಮೀ ತಲುಪುವ ಸಾಧ್ಯತೆ ಇದೆ. ಜತೆಗೆ ಮುಂದಿನ 48 ಗಂಟೆಯಲ್ಲಿ ಗರಿಷ್ಠ ಉಷ್ಣಾಂಶವು ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಕರಾವಳಿಯ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Free Bus: ಫಸ್ಟ್ ಡೇ ಬಸ್ ಫುಲ್! 5.71 ಲಕ್ಷ ಮಹಿಳೆಯರ ಪ್ರಯಾಣ, ಇದರ ವೆಚ್ಚ 1.4 ಕೋಟಿ; ಇದು ಮೊದಲ ದಿನದ ನಾರಿ ‘ಶಕ್ತಿ’
ಈ ಜಿಲ್ಲೆಗಳಲ್ಲಿ ಇರಲಿದೆ ಒಣಹವೆ
ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿಯಲ್ಲಿ ಯಾವುದೇ ಮಳೆ ಮುನ್ಸೂಚನೆ ಇಲ್ಲ. ಒಣಹವೆ ಇರಲಿದೆ. ಜತೆಗೆ ವಿಜಯಪುರ, ರಾಯಚೂರು, ಕೊಪ್ಪಳ,ಹಾವೇರಿ, ಹಾಗೂ ಧಾರವಾಡ, ಬೆಳಗಾವಿಯಲ್ಲೂ ಇದೆ ರೀತಿಯ ವಾತಾವರಣ ಇರಲಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ