ಬೆಂಗಳೂರು: ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ ಮುಂದುವರಿಯಲಿದ್ದು, ಭರ್ಜರಿಯಾಗಿ ಸುರಿಯಲಿದೆ ಎಂದು ಹವಾಮಾನ ಇಲಾಖೆ (Weather Report) ಮುನ್ನೆಚ್ಚರಿಕೆಯನ್ನು ನೀಡಿದೆ. ಅಲ್ಲದೆ, ಮುಂದಿನ 3 ಗಂಟೆಗಳಲ್ಲಿ ಬಾಗಲಕೋಟೆ, ಬೆಂಗಳೂರು, ವಿಜಯಪುರ, ಚಿಕ್ಕಬಳ್ಳಾಪುರ, ಧಾರವಾಡ, ಗದಗ, ಕೊಪ್ಪಳ, ಮಂಡ್ಯ, ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಯಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಎರಡು ದಿನ ಭಾರಿ ಮಳೆ ಸುರಿಯಲಿದ್ದು, ಸಂಜೆ ವೇಳೆಗೆ ಹೊರಗೆ ಹೋಗುವವರು ಎಚ್ಚರಿಕೆಯನ್ನು ವಹಿಸಲು ಸೂಚನೆ ನೀಡಲಾಗಿದೆ. ಸಂಜೆ ವೇಳೆಗೆ ಗುಡುಗು – ಸಿಡಿಲಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಹೆಚ್ಚು ಇರುವುದರಿಂದ ಈ ವೇಳೆ ವಾಹನಗಳಲ್ಲಿ ಹೊರಗೆ ಹೋಗುವುದು, ಮರದ ಕೆಳಗೆ ಆಶ್ರಯ ಪಡೆಯುವುದು, ಹೊಲಗಳಲ್ಲಿ ಕೆಲಸ ಮಾಡುವುದು ಸೇರಿದಂತೆ ಇನ್ನಿತರ ಚಟುವಟಿಕೆಯಲ್ಲಿ ತೊಡಗುವಾಗ ಮುಂಜಾಗ್ರತೆ ವಹಿಸಲು ಸೂಚನೆ ನೀಡಲಾಗಿದೆ.
ಗುಡುಗು ಸಹಿತ ಮಳೆ ಶುರುವಾದಲ್ಲಿ ಕೂಡಲೇ ಮನೆ ಸೇರಿಕೊಳ್ಳಬೇಕು. ಇಲ್ಲವೇ ಸುರಕ್ಷಿತ ಜಾಗದಲ್ಲಿ ಆಶ್ರಯವನ್ನು ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ಈಗಾಗಲೇ ನೀಡಲಾಗಿದೆ. ಜತೆಗೆ ಗಾಳಿಯ ವೇಗವೂ ಹೆಚ್ಚಿಗೆ ಇರಲಿರುವುದರಿಂದ ವಾಹನ ಸಂಚಾರದ ಸಮಯದಲ್ಲಿ ಜಾಗ್ರತೆ ವಹಿಸಬೇಕಿದೆ.
ರಾಜ್ಯದಲ್ಲಿ ಒಟ್ಟಾರೆಯಾಗಿ ಐದು ದಿನ ಮಳೆ ಸುರಿಯಲಿದ್ದು, ಕೊನೆಯ ಮೂರು ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿಯಲ್ಲಿ ಹೇಳಿದೆ.
17 ಜಿಲ್ಲೆಗಳಲ್ಲಿ ಜೋರು ಮಳೆ
ದಕ್ಷಿಣ ಒಳನಾಡಿನ 17 ಜಿಲ್ಲೆಗಳ ಬಹುತೇಕ ಕಡೆ ಜೋರು ಮಳೆಯಾಗುವ ಸಾಧ್ಯತೆ ಇದ್ದು, ಗುಡುಗು ಮಿಂಚಿನ ಎಚ್ಚರಿಕೆಯನ್ನು ನೀಡಲಾಗಿದೆ. ಗಾಳಿಯ ವೇಗವೂ ಹೆಚ್ಚೇ ಇರಲಿದ್ದು, 40-50 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಉಳಿದಂತೆ ಉತ್ತರ ಒಳನಾಡು, ಕರಾವಳಿ ಭಾಗದ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ ಹೆಚ್ಚು
ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಗುಡುಗು-ಸಿಡಿಲಿನ ಅಬ್ಬರ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನು ಬೆಳಗ್ಗೆ ಹೊತ್ತಿನಲ್ಲಿ ಬಿಸಿಲೂ ಇರಲಿದೆ ಎಂದು ಹೇಳಲಾಗುತ್ತಿದ್ದು, ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ. ಅದರಲ್ಲೂ ಸಂಜೆ ವೇಳೆಗೆ ಗಾಳಿ ಸಹಿತ ಮಳೆಯಬ್ಬರ ಹೆಚ್ಚಾಗಲಿದ್ದು, ಈ ಸಂದರ್ಭದಲ್ಲಿ ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ.
ಗುಡುಗು, ಸಿಡಿಲಿಗೆ ಇರಲಿ ಈ ಮುನ್ನೆಚ್ಚರಿಕೆ
ಗುಡುಗು ಸಿಡಿಲಿನಿಂದಾಗುವ ಅಪಾಯಗಳನ್ನು ತಗ್ಗಿಸಲು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA Guidelines) ತಿಳಿಸಿದ್ದು, ಕೆಲವೊಂದು ಸಲಹೆ ಸೂಚನೆಗಳನ್ನು ಪಾಲಿಸುವಂತೆ ಮಾರ್ಗಸೂಚಿಯನ್ನು ಮಂಗಳವಾರ (ಮೇ 23) ಬಿಡುಗಡೆ ಮಾಡಿತ್ತು.
ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಪಾಲಿಸಬೇಕಾದ ಸಲಹೆ ಸೂಚನೆಗಳು
- ಹೊರಗೆ ಹೋಗುವಾಗ ಹವಾಮಾನ ಮುನ್ಸೂಚನೆ ಸಂದೇಶಗಳನ್ನು ಪರಿಶೀಲಿಸಿ
- ಮಳೆ ಸಮಯದಲ್ಲಿ ವಿಶೇಷವಾಗಿ ಹೊಲ, ತೋಟದಲ್ಲಿ ಕೆಲಸ ಮಾಡಲು ಮನೆಯಿಂದ ಹೊರಗೆ ಹೋಗಬೇಡಿ.
- ಗುಡುಗು-ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ, ಸುರಕ್ಷಿತವಾದ ಕಟ್ಟಡಗಳಲ್ಲಿ ಆಶ್ರಯ ಪಡೆಯುವುದು.
- ಬೆಟ್ಟಗಳು, ಪರ್ವತ ಶ್ರೇಣಿಗಳು ಅಥವಾ ಶಿಖರಗಳಂತಹ ಎತ್ತರದ ಪ್ರದೇಶಗಳಲ್ಲಿರಬಾರದು. ಅಲ್ಲದೆ, ಕೆಳಗೆ ಪ್ರವಾಹ ಇಳಿದು ಬರದಂತಹ ತಗ್ಗು ಪ್ರದೇಶದಲ್ಲಿ ಆಶ್ರಯ ಪಡೆಯಿರಿ.
- ನೀರಿನ ಮೂಲಗಳಾದ ಕೆರೆ ಮತ್ತು ನದಿಗಳಿಂದ ದೂರವಿರಿ.
- ವಿದ್ಯುತ್ ಉಪಕರಣ, ವಿದ್ಯುತ್ ಲೈನ್ಗಳು, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರಿ.
- ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ವಾಹನ ನಿಲ್ಲಿಸಿ ವಾಹನದಲ್ಲಿಯೇ ಆಶ್ರಯ ಪಡೆಯುವುದು. ಗುಡುಗು ಸಿಡಿಲಿನ ಸಮಯದಲ್ಲಿ ಗುಂಪಿನಲ್ಲಿದ್ದರೆ, ಅಪಾಯವನ್ನು ಕಡಿಮೆ ಮಾಡಲು ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವುದು.
- ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುತ್ತಿದ್ದರೆ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವುದು.
- ವಿದ್ಯುತ್ ಅಥವಾ ಟೆಲಿಫೋನ್ ಕಂಬಗಳು ಅಥವಾ ಮರಗಳ ಕೆಳಗೆ ಆಶ್ರಯ ಪಡೆಯಬಾರದು, ಇವು ಮಿಂಚನ್ನು ಆಕರ್ಷಿಸುತ್ತವೆ.
- ಅರಣ್ಯ ಪ್ರದೇಶದಲ್ಲಿದ್ದರೆ ಸಣ್ಣ ಮರಗಳ ಕೆಳಗೆ ಆಶ್ರಯ ಪಡೆಯಿರಿ. ಲೋಹದ ವಸ್ತುಗಳನ್ನು ಬಳಸಬಾರದು. ಬೈಕುಗಳು, ವಿದ್ಯುತ್ ಅಥವಾ ದೂರವಾಣಿ ಕಂಬಗಳು, ತಂತಿ ಬೇಲಿ, ಯಂತ್ರಗಳು ಇತ್ಯಾದಿಗಳಿಂದ ದೂರವಿರಿ. ಸಿಡಿಲಿನ ಸಂದರ್ಭದಲ್ಲಿ ಮೊಬೈಲ್ ಫೋನ್ಗಳನ್ನು ಬಳಸಬೇಡಿ.
- ಕಬ್ಬಿಣದ ಸರಳುಗಳಿಂದ ಕೂಡಿದ ಛತ್ರಿಗಳನ್ನು ಬಳಸಬಾರದು.
- ಗುಡುಗು ಸಿಡಿಲಿನ ಸಮಯದಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ. ಬೆಂಕಿ ಮತ್ತು ವಿದ್ಯುತ್ ಸಂಪರ್ಕದಿಂದ ದೂರವಿರಿ.
- ಮಕ್ಕಳು, ವಯೋವೃದ್ಧರು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಗಮನಹರಿಸುವುದು.
- ಸಿಡಿಲಿನ ಸಂದರ್ಭದಲ್ಲಿ, ಕಟ್ಟಡದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ವಿದ್ಯುತ್ ಹರಿಯುವ ಸಾಧ್ಯತೆ ಇದೆ. ಹೀಗಾಗಿ ಆಗ ಸ್ನಾನ ಮಾಡಬಾರದು, ಪಾತ್ರೆ ತೊಳೆಯಬಾರದು, ಬಟ್ಟೆ ಒಗೆಯಬಾರದು.
- ಗುಡುಗು ಸಿಡಿಲಿನ ಮುನ್ಸೂಚನೆ ಅಥವಾ ಮುನ್ನೆಚ್ಚರಿಕೆ ಇದ್ದಲ್ಲಿ ಪ್ರಯಾಣವನ್ನು ಮುಂದೂಡಿ.
- ಗುಡುಗು ಸಿಡಿಲಿನ ಸಮಯದಲ್ಲಿ ಮೋಟರ್ ಸೈಕಲ್ ಅಥವಾ ಇನ್ನಿತರೆ ಯಾವುದೇ ತೆರೆದ ವಾಹನ ಸಂಚಾರ ಬೇಡ.
ಇದನ್ನೂ ಓದಿ: Rahul Gandhi: ರಾಹುಲ್‌ಗೆ ಹೊಸದಾಗಿ ಪಾಸ್‌ಪೋರ್ಟ್ ನೀಡಲು ಸುಬ್ರಮಣಿಯನ್ ಸ್ವಾಮಿ ವಿರೋಧ, ಕಾರಣ ಏನು?
- ಆಟದ ಮೈದಾನ, ಉದ್ಯಾನವನಗಳು, ಕಡಲ ತೀರಗಳಿಗೆ ಹೋಗುವುದನ್ನು ತಪ್ಪಿಸಿ. ದೋಣಿ ವಿಹಾರ ಅಥವಾ ಈಜುತ್ತಿದ್ದರೆ, ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವುದು.