ಬೆಂಗಳೂರು: ರಾಜ್ಯಾದ್ಯಂತ ಮುಂದಿನ 48 ಗಂಟೆಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರು (Bangalore Rain) ಸೇರಿದಂತೆ ಕರಾವಳಿಯಲ್ಲಿ ಮಳೆ ರಗಳೆ (Weather report) ಮುಂದುವರಿಯಲಿದೆ. ಇನ್ನೆರಡು ದಿನ ಮಳೆ ಆರ್ಭಟ ಇರಲಿದ್ದು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ಮಂಡ್ಯ ಹಾಗೂ ಚಾಮರಾಜನಗರದಲ್ಲಿ ವರುಣ ಅಬ್ಬರಿಸಲಿದ್ದಾನೆ.
ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು ಭಾಗದಲ್ಲೂ ವ್ಯಾಪಕ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ಮತ್ತು ಹಾಸನ, ಕೊಡಗು, ಕೋಲಾರ, ತುಮಕೂರು, ಕಲಬುರಗಿ ಸೇರಿದಂತೆ ಉತ್ತರ ಕನ್ನಡದಲ್ಲಿ ಧಾರಾಕಾರ ಮಳೆಯಾಗಲಿದೆ.
50 ಕಿ.ಮೀ ವೇಗದಲ್ಲಿ ಬೀಸಲಿರುವ ಗಾಳಿ
ರಾಜ್ಯಾದ್ಯಂತ ಬಿರುಗಾಳಿ ಸಹಿತ ಗುಡುಗು ಮಿಂಚಿನ ಮಳೆಯಾಗುವ ಸಾಧ್ಯತೆ ಇದೆ. ಈ ವೇಳೆ ಗಾಳಿ ವೇಗವು 40-50ಕಿ.ಮೀ ಇರಲಿದೆ. ಮಳೆ ನಡುವೆಯೂ ಗರಿಷ್ಠ ಉಷ್ಣಾಂಶವು ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಸಾಮಾನ್ಯವಾಗಿ ಮುಂಜಾನೆ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 33 ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Rain News: ಶುರುವಾಗಿದೆ ಮಳೆ ಅವಘಡ, ವರುಣಾರ್ಭಟಕ್ಕೆ ಎಲ್ಲೆಡೆ ಗಡಗಡ; ಗಾಳಿ-ಮಳೆಗೆ ಕುಸಿದ ಮನೆಗಳು
ವಿಜಯಪುರದಲ್ಲಿ ಗರಿಷ್ಠ ಉಷ್ಣಾಂಶ ದಾಖಲು
ಸೋಮವಾರ ಗರಿಷ್ಠ ಉಷ್ಣಾಂಶ 40.2 ಡಿಗ್ರಿ ಸೆಲ್ಸಿಯಸ್ ವಿಜಯಪುರದಲ್ಲಿ ದಾಖಲಾಗಿದೆ. ಬೆಳಗಾವಿಯ ಕಣಬರ್ಗಿ, ಮಂಡ್ಯದ ಬೆಳ್ಳೂರಲ್ಲಿ ತಲಾ 6 ಸೆಂ.ಮೀ ಮಳೆಯಾಗಿದೆ. ಉತ್ತರ ಕನ್ನಡ, ಧಾರವಾಡದ ಅಣ್ಣಿಗೆರೆಯಲ್ಲಿ ತಲಾ 5 ಸೆಂ.ಮೀ ಹಾಗೂ ಕುಂದಗೋಳದಲ್ಲಿ 4 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆ ವರುಣ ಅಬ್ಬರಿಸಿದ್ದಾನೆ.
ಸಿಎಂಗೆ ಶಾಸಕ ಸುರೇಶ್ ಕುಮಾರ್ ಪತ್ರ
ನಗರದ ಎಲ್ಲೆಡೆ ಶಿಥಿಲವಾಗಿರುವ ಮರಗಳು ಮತ್ತು ರೆಂಬೆಗಳಿಂದ ಆಗುತ್ತಿರುವ ಹಾನಿ ತಡೆಯುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ. ಇತ್ತೀಚೆಗೆ ನಗರದಲ್ಲಿ ಭಾರಿ ಗಾಳಿಯೊಂದಿಗೆ ಮಳೆ ಬಂದಾಗ ಅನೇಕ ಮರಗಳು ಮತ್ತು ದೊಡ್ಡ ರೆಂಬೆಗಳು ಕೆಳಕ್ಕೆ ಬೀಳುತ್ತಿದೆ. ಇದರಿಂದಾಗಿ ವ್ಯಕ್ತಿಗಳಿಗೆ ಮತ್ತು ವಾಹನಗಳಿಗೆ ಹಾನಿಯಾಗುತ್ತಿದೆ.
ಇದೀಗ ಮಳೆಗಾಲ ಶುರುವಾಗುತ್ತಿದ್ದು, ಇದರಿಂದ ಮರಗಳು ಇರುವ ರಸ್ತೆಗಳಲ್ಲಿ ಸಹಜವಾಗಿ ಆತಂಕ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆದ್ಯತೆಯ ಮೇರೆಗೆ ಎಲ್ಲ ರಸ್ತೆಗಳಲ್ಲಿರುವ ಮರಗಳ ಪರಿಶೀಲನೆ ಮಾಡಿ, ಬಿದ್ದು ಹೋಗಬಹುದಾದ ಮರಗಳು ಮತ್ತು ಕೊಂಬೆಗಳನ್ನು ಪಟ್ಟಿ ಮಾಡಿ ಅವುಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಅಗತ್ಯ ಕ್ರಮಕೈಗೊಳ್ಳಲು ವಿಶೇಷ ವ್ಯವಸ್ಥೆ ಯೋಜಿಸಲು ಬಿಬಿಎಂಪಿ ಮತ್ತು ಅಯುಕ್ತರಿಗೆ ಆದೇಶ ನೀಡಬೇಕೆಂದು ಕೋರಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ