Site icon Vistara News

Weather Report: ಉತ್ತರಕನ್ನಡ ಜಿಲ್ಲೆಗೆ ರೆಡ್‌ ಅಲರ್ಟ್‌ ಘೋಷಣೆ: ಸಮುದ್ರಕ್ಕೆ ಇಳಿಯದಂತೆ ವಾರ್ನಿಂಗ್‌

kodagu rain effect

ಬೆಂಗಳೂರು: ರಾಜ್ಯದ ಹಲವೆಡೆ ಬಿಟ್ಟುಬಿಡದೇ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಗುರುವಾರ ಮಧ್ಯಾಹ್ನದಿಂದಲ್ಲೇ ಉತ್ತರಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಜುಲೈ 9ರ ಬೆಳಗ್ಗೆ 8:30ರವರೆಗೆ ಗಾಳಿ ಸಹಿತ ಭಾರೀ ಮಳೆ ಮುನ್ಸೂಚನೆಯನ್ನು ನೀಡಲಾಗಿದೆ.

ಸಮುದ್ರ ಮಟ್ಟದಲ್ಲಿ ಭಾರಿ ಪ್ರಮಾಣದ ಅಲೆಗಳು ಏಳುವ ಸಾಧ್ಯತೆ ಇದ್ದು, ಕಡಲತೀರ ಹಾಗೂ ನದಿಪಾತ್ರದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ

ಈಗಾಗಲೇ ರಾಜ್ಯದ 13 ಜಿಲ್ಲೆಗಳಲ್ಲಿ ತೀವ್ರ ಪ್ರಮಾಣದಲ್ಲಿ ಮಳೆ ಆಗಲಿದ್ದು, 22 ಕಡೆ ಭಾರಿ ಪ್ರಮಾಣದ ಮಳೆಯಾಗಲಿರುವ ವರದಿಯಾಗಿದೆ. ನೈರುತ್ಯ ಮುಂಗಾರು ಚುರುಕಾಗಿದ್ದು, ಜತೆಗೆ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿದ್ದು, ಕರಾವಳಿ, ದಕ್ಷಿಣ ಒಳನಾಡು ಭಾಗಗಳಲ್ಲಿ ತೀವ್ರ ಪ್ರಮಾಣದಲ್ಲಿ ಮಳೆಯಾಗಲಿದೆ.

ಕರಾವಳಿ ಜಿಲ್ಲೆಗಳಿಗೆ ಎರಡು ದಿನ ರೆಡ್‌ ಅಲರ್ಟ್‌

ಕರಾವಳಿಯ ಉಡುಪಿ, ದಕ್ಷಿಣಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಜುಲೈ 8, 9ರಂದು ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಜುಲೈ 10, 11ರಂದು ಆರೆಂಜ್‌ ಅಲರ್ಟ್‌ ನೀಡಲಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಹಾವೇರಿ, ಧಾರವಾಡ, ರಾಯಚೂರು, ಕಲಬುರುಗಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್ ನೀಡಲಾಗಿದ್ದು, ಉಳಿದಂತೆ ಬೀದರ್, ವಿಜಯಪುರ, ಬಾಗಲಕೋಟೆ, ವಿಜಯಪುರ, ಬಳ್ಳಾರಿ ಹಾಗೂ ಗದಗ, ಕೊಪ್ಪಳ, ಭಾಗಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಉತ್ತರ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗಲಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಜುಲೈ 6,7 ಮತ್ತು 8ರಂದು ಮಳೆಯಾಗಲಿದ್ದು, ಚಿಕ್ಕಮಗಳೂರು, ಕೊಡುಗು, ಶಿವಮೊಗ್ಗಕ್ಕೆ ಆರೆಂಜ್‌ ಅಲರ್ಟ್‌ ನೀಡಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಲಿದ್ದು, ಯಾವುದೇ ಅಲರ್ಟ್‌ ಘೋಷಣೆ ಮಾಡಿಲ್ಲ.

ಮೀನುಗಾರಿಕೆಗೆ ಇಳಿಯಬೇಡಿ

ಕರಾವಳಿ ಭಾಗದಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ. ಸಮುದ್ರದಲ್ಲಿ ಗಾಳಿ ವೇಗವು ಪ್ರತಿ ಗಂಟೆಗೆ 40-50 ಕಿ.ಮೀ ಬೀಸಲಿದ್ದು, ಸುರಕ್ಷತೆ ದೃಷ್ಟಿಯಿಂದ ಕಡಲ ತೀರಕ್ಕೆ ಇಳಿಯಂತೆ ಸೂಚನೆ ನೀಡಲಾಗಿದೆ.

ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆ

ಕೊಡಗಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ಜುಲೈ 8ರಂದು ರಜೆಯನ್ನು ವಿಸ್ತರಿಸಲಾಗಿದೆ. ಈ ಸಂಬಂಧ ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ ಆದೇಶಿಸಿದ್ದಾರೆ. ಜಿಲ್ಲೆಯ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ| Rain News | ರಾಜ್ಯದಲ್ಲಿ ಸತತ ಮಳೆ, ಭರ್ತಿಯತ್ತ ಸಾಗಿದ ಪ್ರಮುಖ ಜಲಾಶಯಗಳು

Exit mobile version