ಬೆಂಗಳೂರು: ರಾಜ್ಯದ ಹಲವು ಕಡೆ ಶುಕ್ರವಾರವೂ ಸೇರಿದಂತೆ ಇನ್ನೆರಡು ದಿನ ಮಳೆಯಾಗುವ (rain News) ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಸಣ್ಣ ಹಾಗೂ ಮಲೆನಾಡು, ಒಳನಾಡಿನಲ್ಲಿ ಪ್ರತ್ಯೇಕವಾಗಿ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಕೆಲವು ಸ್ಥಳಗಳಲ್ಲಿ ಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Weather report) ತಿಳಿಸಿದೆ.
ಉತ್ತರ ಒಳನಾಡಿನ (North Inland) ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದ್ದರೂ ಪ್ರಮಾಣ ಅತಿ ಕಡಿಮೆ ಎಂದು ಹೇಳಲಾಗಿದೆ. ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ಕೊಪ್ಪಳ, ಕಲಬುರಗಿ, ವಿಜಯಪುರ ಮತ್ತು ಬೀದರ್ ಜಿಲ್ಲೆಗಳಲ್ಲಿ ಕಡಿಮೆ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಉಳಿದ ಭಾಗಗಳಲ್ಲಿ ಶುಷ್ಕ ವಾತಾವರಣ ಇರಲಿದೆ ಎಂದು ಹೇಳಲಾಗಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ (South Inland) ಕೋಲಾರ, ತುಮಕೂರು, ಬೆಂಗಳೂರು ನಗರ, ರಾಮನಗರ ಮತ್ತು ಹಾಸನದ ಹಲವು ಕಡೆ ಜಿಟಿಜಿಟಿ ಮಳೆಯಾಗಲಿದೆ. ಉಳಿದ ಭಾಗಗಳಲ್ಲಿ ಒಣಹವೆ ಇದ್ದು, ಹೆಚ್ಚಿನ ಸಮಯ ಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಮಲೆನಾಡು ಪ್ರದೇಶದಲ್ಲಿಯೂ ತಗ್ಗಿದ ಮಳೆ
ಅತಿ ಹೆಚ್ಚು ಮಳೆಯಾಗುತ್ತಿದ್ದ ಮಲೆನಾಡು ಜಿಲ್ಲೆಗಳಲ್ಲಿ (Malnad Districts) ಸಹ ಮಳೆ ಪ್ರಮಾಣ ತೀವ್ರ ಗತಿಯಲ್ಲಿ ತಗ್ಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಸಾಧಾರಣ ಇಲ್ಲವೇ ಅದಕ್ಕಿಂತ ಕಡಿಮೆ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಇನ್ನು ಕರಾವಳಿ ಜಿಲ್ಲೆಗಳಾದ (coastal regions Rainfall) ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದ ಹಲವು ಕಡೆ ಕಡಿಮೆ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಲ್ಲಿ ಮಳೆ ಆಗುತ್ತಾ?
ಬೆಂಗಳೂರಲ್ಲಿ ಮಳೆ (Bangalore Rain today) ಮುನ್ಸೂಚನೆ ಇದೆಯಾದರೂ ಮಳೆ ಸುರಿದೇ ಬಿಡುವುದು ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಇಲ್ಲಿನ ಪರಿಸ್ಥಿತಿ 50:50 ಮಾದರಿಯಲ್ಲಿದೆ. ಇನ್ನು ಗರಿಷ್ಠ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ತಾಪಮಾನವು 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಶೇಕಡಾ 50ರಷ್ಟು ಜಿಲ್ಲೆಗಳಲ್ಲಿ ಮಳೆ ಕೊರತೆ
ಒಟ್ಟಾರೆಯಾಗಿ ರಾಜ್ಯದಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದ್ದು, ಅರ್ಧದಷ್ಟು ರಾಜ್ಯಗಳಲ್ಲಿ ಮಳೆ ಕೊರತೆ ಎದುರಾಗಿದೆ ಎಂದು ಸರ್ಕಾರ ಹೇಳಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ರಾಜ್ಯದಲ್ಲಿ ನೀರಿಗೆ ತೀವ್ರ ಸಮಸ್ಯೆಯಾಗಬಹುದು ಎಂಬ ಆತಂಕ ಕಾಡಿದೆ. ಅಲ್ಲದೆ, ಪ್ರಮುಖ ಜಲಾಶಯಗಳು ಇನ್ನೂ ತುಂಬುವ ಹಂತಕ್ಕೆ ಬಂದಿಲ್ಲ. ಇದರ ಜತೆಗೆ ಕೃಷಿ ಚಟುವಟಿಕೆ ಸೇರಿದಂತೆ ಇನ್ನಿತರ ಕಾರ್ಯಕ್ಕೆ ನೀರನ್ನು ಬಳಕೆ ಮಾಡಬೇಕಿದ್ದು, ಒಂದು ವೇಳೆ ಇದೇ ರೀತಿಯಾದ ಹವಾಮಾನ ಪರಿಸ್ಥಿತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ನೀರಿಗೆ ಪರದಾಡುವ ಸ್ಥಿತಿ ಬರಬಹುದು ಎಂದು ಅಂದಾಜಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ