Site icon Vistara News

Fire Accident: ಗ್ಯಾರೇಜ್‌ನಲ್ಲಿ ವೆಲ್ಡಿಂಗ್ ಗ್ಯಾಸ್‌‌ ಟ್ಯಾಂಕ್‌ ಸ್ಫೋಟ; ನಾಲ್ವರಿಗೆ ಗಾಯ, 2 ಕಾರು ಸುಟ್ಟು ಕರಕಲು

fire accident

ಬೆಂಗಳೂರು: ಬಸವೇಶ್ವರ ನಗರದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯ ಗ್ಯಾರೇಜ್‌ನಲ್ಲಿ ವೆಲ್ಡಿಂಗ್‌ ಗ್ಯಾಸ್‌ ಟ್ಯಾಂಕ್‌ ಸ್ಫೋಟಗೊಂಡು ನಾಲ್ವರು ಗಾಯಗೊಂಡಿರುವ ಘಟನೆ (Fire Accident) ಶನಿವಾರ ಸಂಜೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕಳ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಅವಘಡದಲ್ಲಿ ಗ್ಯಾರೇಜ್‌ನಲ್ಲಿ‌ ನಿಲ್ಲಿಸಿದ ಎರಡು ಕಾರುಗಳು ಸುಟ್ಟು ಕರಕಲಾಗಿವೆ.

ಘಟನೆಯಲ್ಲಿ ಗ್ಯಾರೇಜ್‌ನಲ್ಲಿದ್ದ ವಸ್ತುಗಳು ಮಾತ್ರವಲ್ಲದೆ, ಬೆಂಕಿಯ ತೀವ್ರತೆಗೆ ಸುತ್ತಮುತ್ತಲಿನ ಎರಡು ಮೂರು ಮನೆಗಳ ಗಾಜುಗಳು ಪುಡಿಪುಡಿಯಾಗಿದೆ. ಇನ್ನು ಅಂಗಡಿಯ ಶೀಟ್‌ಗಳು 50 ರಿಂದ‌ 60 ಅಡಿ ಹಾರಿ ಬಿದ್ದಿವೆ. ಜಾರ್ಜ್ ಎಂಬುವವರ ಗ್ಯಾರೇಜ್‌ನಲ್ಲಿ ಅವಘಡ ಸಂಭವಿಸಿದ್ದು, ಮಾಲೀಕ, ಕೆಲಸಗಾರ ಹಾಗೂ ಇಬ್ಬರು ದಾರಿಹೋಕರು ಸೇರಿ ನಾಲ್ವರು ಗಾಯಗೊಂಡಿದ್ದಾರೆ.

ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಭೇಟಿ ನೀಡಿ ಪರಿಶೀಲಿಸಿ, ಸಂಜೆ ಆರು ಗಂಟೆ ಸುಮಾರಿಗೆ ಗ್ಯಾರೇಜ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೇಲ್ನೋಟಕ್ಕೆ ವೆಲ್ಡಿಂಗ್ ಗ್ಯಾಸ್ ಟ್ಯಾಂಕ್ ಸ್ಫೋಟದಿಂದ ಘಟನೆ ಸಂಭವಿಸಿರುವ ಸಾಧ್ಯತೆ ಇದೆ. ಘಟನೆಯಲ್ಲಿ ಗ್ಯಾರೇಜ್ ಮಾಲೀಕ ಹಾಗೂ ಕೆಲಸಗಾರ ಹಾಗೂ ಇಬ್ಬರು ಸಾರ್ವಜನಿಕರಿಗೆ ಗಾಯಗಳಾಗಿವೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಫೋಟದ ತೀವ್ರತೆಗೆ ಗ್ಯಾರೇಜ್ ಸುತ್ತಮುತ್ತ ಇರೋ ಮನೆಗಳ ಗ್ಲಾಸ್ ಗಳು ಜಖಂಗೊಂಡಿವೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ | Kodagu News: ಕಾವೇರಿ ನದಿಗೆ ಸ್ನಾನಕ್ಕೆಂದು ತೆರಳಿದ್ದ ಯುವಕ ನೀರುಪಾಲು

ಸ್ಥಳಕ್ಕೆ ಶಾಸಕ ಪ್ರಿಯಕೃಷ್ಣ ಆಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದರು. ವೆಲ್ಡಿಂಗ್ ಗ್ಯಾಸ್ ಸೋರಿಕೆಯಾದ ಮಾಹಿತಿ ಸಿಕ್ಕಿದೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ. ರೆವೆನ್ಯೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡುತ್ತಾರೆ. ಮೊದಲು ಗ್ಯಾರೇಜ್ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು, ಸುರಕ್ಷತಾ ಕ್ರಮ ತೆಗೆದುಕೊಂಡಿದ್ದಾರಾ ಎಂಬುದನ್ನು ನೋಡಬೇಕು. ನಿರ್ಲಕ್ಷ್ಯವಿದ್ದರೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

Exit mobile version