ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುರುಘಾಶ್ರೀಗಳ ಬಂಧನವಾಗಿದೆ. ಈಗ ಅವರನ್ನು ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂಬ ಸುದ್ದಿಯನ್ನು ಓದಿದ್ದೀರಿ. ಇದರಿಂದಾಗಿ ಪುರುಷತ್ವ ಪರೀಕ್ಷೆ ಬಗ್ಗೆ ಜನರಲ್ಲೂ ಕುತೂಹಲ ಸಹಜ. ಮುರುಘಾಶ್ರೀ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯನ್ನು ಪುರುಷತ್ವ ಪರೀಕ್ಷೆ(Potency Test)ಗೆ ಒಳಪಡಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಕಾನೂನಾತ್ಮಕ ಕ್ರಿಯೆಯಾಗಿದೆ. ಇನ್‌ಫ್ಯಾಕ್ಟ್, ರೇಪ್ ಕೇಸ್‌ಗಳಲ್ಲಿ ಆರೋಪಿಯನ್ನು ಪುರುಷತ್ವ ಪರೀಕ್ಷೆಗೆ ಒಳಪಡಿಸುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಕೂಡ ಈ ಹಿಂದೆಯೇ ಹೇಳಿದೆ.
ಪುರುಷತ್ವ ಪರೀಕ್ಷೆಯ ಅಗತ್ಯದ ಬಗೆಗೂ ಭಿನ್ನಾಭಿಪ್ರಾಯಗಳಿವೆ. ಪುರುಷತ್ವವನ್ನು ಸಾಬೀತುಪಡಿಸುವುದು ವೈದ್ಯಕೀಯವಾಗಿ ತುಂಬ ಸಂಕೀರ್ಣವಾದ ಕ್ರಿಯೆ. ಹಾಗಾಗಿ, ಕಾನೂನಾತ್ಮಕವಾಗಿ ಯಾವುದೋ ಒಂದು ಪರೀಕ್ಷೆ ಮೂಲಕ ಆರೋಪಿ ಲೈಂಗಿಕ ಕ್ರಿಯೆ ನಡೆಸಲು ಸಮರ್ಥನೋ, ಅಸಮರ್ಥನೋ ಎಂದು ಪತ್ತೆ ಹಚ್ಚುವುದು ಕಷ್ಟ ಎಂಬುದು ಹಲವರ ವಾದ. ಈ ಹಿನ್ನೆಲೆಯಲ್ಲಿ ಪುರುಷತ್ವ ಪರೀಕ್ಷೆ ಎಂದರೇನು, ಪರೀಕ್ಷಾ ವಿಧಾನಗಳಾವವು, ಸುಪ್ರೀಂ ಕೋರ್ಟ್ ಏನು ಹೇಳಿದೆ, ಪುರುಷತ್ವ ಪರೀಕ್ಷೆ ಅಗತ್ಯವೇ ಇತ್ಯಾದಿ ಸಂಗತಿಗಳ ಬಗ್ಗೆ ತಿಳಿದುಕೊಳ್ಳೋಣ.
ಪುರುಷತ್ವ ಪರೀಕ್ಷೆ ಎಂದರೇನು?
ಸಿಂಪಲ್ ಆಗಿ ಹೇಳಬೇಕು ಎಂದರೆ, ವ್ಯಕ್ತಿಯೊಬ್ಬ ಲೈಂಗಿಕ ಕ್ರಿಯೆ(ಸಂಭೋಗ) ನಡೆಸಲು ದೈಹಿಕವಾಗಿ ಶಕ್ತನಾಗಿದ್ದಾನೆಯೇ ಇಲ್ಲವೇ ಎಂಬುದನ್ನು ವೈದ್ಯಕೀಯ ಪರೀಕ್ಷೆಯ ಮೂಲಕ ತಿಳಿದುಕೊಳ್ಳುವುದಾಗಿದೆ. ವಿವಾದಿತ ದೇವಮಾನವರಾದ ನಿತ್ಯಾನಂದ ಸ್ವಾಮೀಜಿ, ಆಸಾರಾಮ್ ಬಾಪು ಅವರ ವಿರುದ್ಧದ ರೇಪ್ ಪ್ರಕರಣಗಳ ವಿಚಾರಣೆ ವೇಳೆ, ತಾವು ಲೈಂಗಿಕವಾಗಿ ಸಮರ್ಥರಲ್ಲ ಎಂಬ ವಾದವನ್ನು ಕೋರ್ಟ್ ಮುಂದೆ ಇಟ್ಟಿದ್ದರು. ಆಗ ಕೋರ್ಟ್ ಪುರುಷತ್ವ ಪರೀಕ್ಷೆ ನಡೆಸಲು ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅದೇ ರೀತಿ, ಮುರುಘಾಶ್ರೀಗಳ ಪ್ರಕರಣದಲ್ಲೂ ಪುರುಷತ್ವ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಪುರುಷತ್ವ ಪರೀಕ್ಷೆ ವೇಳೆ, ಆರೋಪಿಯು ಲೈಂಗಿಕ ಕ್ರಿಯೆ ಕೈಗೊಳ್ಳಲು ದೈಹಿಕವಾಗಿ ಸಮರ್ಥನಾಗಿದ್ದಾನೆಯೇ ಎಂದು ತಿಳಿದುಕೊಳ್ಳಲಾಗುತ್ತದೆ. ವೈದ್ಯರು ಮೂರು ವೈದ್ಯಕೀಯ ವಿಧಾನಗಳ ಮೂಲಕ ಪುರುಷತ್ವವನ್ನು ಪರೀಕ್ಷೆಗೆ ಒಳಪಡಿಸುತ್ತಾರೆ.
ವೀರ್ಯ ವಿಶ್ಲೇಷಣೆ
ಪುರುಷರ ವೀರ್ಯ ವಿಶ್ಲೇಷಣೆ ಪುರುಷತ್ವ ಸಾಬೀತುಪಡಿಸುವಾಗ ಮಹತ್ವದ ಪಾತ್ರವನ್ನು ವಹಿಸುತ್ತದೆ. ವೀರ್ಯ ಮತ್ತು ವೀರ್ಯಾಣಗಳನ್ನು ಪರೀಕ್ಷಿಸಿ, ವೀರ್ಯದ ಫಲವತ್ತತೆಯನ್ನು ಪರೀಕ್ಷಿಸಲಾಗುತ್ತದೆ. ದಂಪತಿಗಳಿಗೆ ಮಕ್ಕಳಾಗದಿದ್ದಾಗಲೂ ಪುರುಷರಿಗೆ ಇದೇ ರೀತಿಯ ಪರೀಕ್ಷೆ ಮಾಡಿ, ಸಂತಾನೋತ್ಪತ್ತಿಯ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳಲಾಗುತ್ತದೆ. ವೀರ್ಯದಾನ ಮಾಡುವಾಗಲೂ ಇದೇ ವಿಧಾನವನ್ನು ಕಾಣಬಹುದು. ಜನನ ನಿಯಂತ್ರಣಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೂ, ಪರೀಕ್ಷೆಯ ಸಂದರ್ಭದಲ್ಲಿ ವೀರ್ಯಾಣುಗಳ ಗುಣಲಕ್ಷಣಗಳನ್ನು ಪರೀಕ್ಷೆ ಮೂಲಕ ತಿಳಿದುಕೊಳ್ಳಬಹುದಾಗಿದೆ. ಈ ಪರೀಕ್ಷೆಯ ವೇಳೆ, ವ್ಯಕ್ತಿಗೆ ಹಸ್ತಮೈಥುನ ಮಾಡಿಕೊಳ್ಳಲು ಹೇಳಲಾಗುತ್ತದೆ, ಬಳಿಕ ಅದನ್ನು ಸಂಗ್ರಹಿಸಿ ಅದರಲ್ಲಿರುವ ಫಲವತ್ತತೆಯನ್ನು ತಿಳಿದುಕೊಳ್ಳಲಾಗುತ್ತದೆ.
ಪೀನೈಲ್ ಡಾಪ್ಲರ್ ಅಲ್ಟ್ರಾಸೌಂಡ್
ಈ ಪರೀಕ್ಷೆಯು ಶಿಶ್ನದೊಳಗೆ ಮತ್ತು ಹೊರಗೆ ರಕ್ತ ಎಷ್ಟು ಮತ್ತು ಹೇಗೆ ಹರಿಯುತ್ತದೆ ಎಂಬುದನ್ನು ತೋರಿಸುತ್ತದೆ. ಇದನ್ನು ಪ್ರಾಥಮಿಕವಾಗಿ ಓರಲ್ ಮೆಡಿಕೇಷನ್(ಮೌಖಿಕ ಔಷಧ)ಗಳಿಗೆ ಪ್ರತಿಕ್ರಿಯಿಸದ (ವಯಾಗ್ರದಂತಹ) ತೀವ್ರವಾದ ನಿಮಿರುವಿಕೆಯ ಅಪಸಾಮಾನ್ಯ (erectile dysfunction) ಕ್ರಿಯೆ ಹೊಂದಿರುವ ಪುರುಷರಿಗೆ ಬಳಸಲಾಗುತ್ತದೆ.
ರಕ್ತವು ಯಾವ ದಿಕ್ಕಿನಲ್ಲಿ ಹರಿಯುತ್ತಿದೆ ಎಂಬುದನ್ನು ಹೇಳಲು ಡಾಪ್ಲರ್ ಪರಿಣಾಮವನ್ನು ಬಳಸಲಾಗುತ್ತದೆ. ನಿಮಿರುವಿಕೆಯನ್ನು ಹೊಂದಲು, ರಕ್ತವು ಶಿಶ್ನಕ್ಕೆ ಹರಿಯಬೇಕಾಗುತ್ತದೆ. ಆದರೆ ವೆನಸ್ ಲೀಕ್ ಸಿಂಡ್ರೋಮ್ ಎಂದು ಕರೆಯಲಾಗುವ ಪರಿಸ್ಥಿತಿಯಲ್ಲಿ ನರಗಳು ಸರಿಯಾದ ಸಮಯದಲ್ಲಿ ಮುಚ್ಚಿಹೋಗುವುದಿಲ್ಲ, ಆದ್ದರಿಂದ ಹೆಚ್ಚಿನ ರಕ್ತವು ಶಿಶ್ನದಿಂದ ಹೊರಬರುತ್ತದೆ ಮತ್ತು ನಿಮಿರುವಿಕೆ ಸ್ಥಿರವಾಗಿರುವುದಿಲ್ಲ. ಡಾಪ್ಲರ್ ಅಲ್ಟ್ರಾಸೌಂಡ್ ಈ ಸಮಸ್ಯೆಯನ್ನು ಕಂಡುಹಿಡಿಯಬಹುದು. ಈ ಸಮಸ್ಯೆ ಇದ್ದರೆ ಶಸ್ತ್ರಚಿಕಿತ್ಸೆ ಮಾತ್ರ ಪರಿಹಾರವಾಗಿದೆ. ಅಲ್ಲದೆ, ಮಧುಮೇಹದಿಂದಾಗಿ ನರಗಳ ಹಾನಿಯಿಂದ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ನರ ಸಂಕೇತಗಳು ಶಿಶ್ನವನ್ನು ತಲುಪದಿರಬಹುದು. ಆಗ ರಕ್ತದ ಹರಿವು ಸಾಮಾನ್ಯ, ಮಂದವಾದ ಶಿಶ್ನಕ್ಕೆ ಹೋಲುತ್ತದೆ. ಈ ಪರೀಕ್ಷೆಯಲ್ಲಿ ಆರೋಗ್ಯವಂಥ ವ್ಯಕ್ತಿಯೊಬ್ಬ ಲೈಂಗಿಕ ಕ್ರಿಯೆ ನಡೆಸಲು ಬೇಕಾಗುವ ಶಿಶ್ನದ ರಕ್ತ ಸಂಚಾರವನ್ನು ಪರೀಕ್ಷಿಸಲಾಗುತ್ತದೆ. ಅತ್ಯಾಚಾರ ಆರೋಪಿಯ ಪುರುಷತ್ವ ಪರೀಕ್ಷೆಯಲ್ಲಿ ಈ ಹಂತವೂ ಮುಖ್ಯವಾಗಿರುತ್ತದೆ. ಒಂದು ವೇಳೆ, ಎಲ್ಲವೂ ಸರಿಯಾಗಿದ್ದರೆ ಆರೋಪಿತ ಲೈಂಗಿಕ ಕ್ರಿಯೆ ನಡೆಸಲು ಶಕ್ತನಾಗಿದ್ದಾನೆಂದು ಪರಿಗಣಿಸಲಾಗುತ್ತದೆ.
ನಿಮಿರುವಿಕೆ ಪೂರಕ ಪರೀಕ್ಷೆ
ಈ ವಿಧಾನದಲ್ಲಿ ವೈದ್ಯರು ವ್ಯಕ್ತಿಯ ಶಿಶ್ನ ನಿಮಿರುವಿಕೆಯನ್ನು ಪರೀಕ್ಷಿಸುತ್ತಾರೆ. ಎರಡು ಹಂತಗಳಲ್ಲಿ ಶಿಶ್ನವು ಯಾವ ರೀತಿಯಲ್ಲಿರುತ್ತದೆ ಎಂಬುದನ್ನು ಕಂಡುಕೊಳ್ಳುವುದು ಈ ವಿಧಾನದ ಮುಖ್ಯ ಉದ್ದೇಶವಾಗಿರುತ್ತದೆ. ಅಂದರೆ, ಲೈಂಗಿಕವಾಗಿ ಪ್ರಚೋದನೆಗೊಂಡಾಗ ಮತ್ತು ಪ್ರಚೋದನೆ ಇಲ್ಲದಿರುವಾಗ ಶಿಶ್ನ ಯಾವ ರೀತಿ ನಿಮಿರುತ್ತದೆ ತಿಳಿದುಕೊಳ್ಳಲಾಗುತ್ತದೆ. ಈ ವಿಧಾನದಲ್ಲಿ ಒಟ್ಟಾರೆಯಾಗಿ ಶಿಶ್ನ ನಿಮಿರುವಿಕೆಯನ್ನು ತಿಳಿದುಕೊಳ್ಳಬಹುದು.
ಎನ್‌ಪಿಟಿ ಪರೀಕ್ಷೆ
ಎನ್‌ಪಿಟಿ ಎಂಬುದು Nocturnal Penile Tumescence ಎಂಬುದರ ಸಂಕ್ಷಿಪ್ತ ರೂಪ. ಈ ಪರೀಕ್ಷೆಯಲ್ಲಿ ವ್ಯಕ್ತಿಯೊಬ್ಬ ನಿದ್ರೆಯಲ್ಲಿ ಎಷ್ಟು ಬಾರಿ ಶಿಶ್ನದ ಗಡುಸುತನವನ್ನು ಪಡೆಯುತ್ತಾನೆ ಎಂಬುದನ್ನು ತಿಳಿಯಲಾಗುತ್ತದೆ. ವ್ಯಕ್ತಿಯ ಅರಿವಿಗೆ ಬಾರದಂತೆ ನಡೆಯುವ ನಿಮಿರುವಿಕೆಯನ್ನು ಉಪಕರಣದ ಮೂಲಕ ದಾಖಲಿಸಲಾಗುತ್ತದೆ. ನಿದ್ರಾವಸ್ಥೆಯಲ್ಲಿ ಸುಪ್ತ ಸ್ಥಿತಿಯಲ್ಲಿ ಮೆದುಳು ರವಾನಿಸುವ ಸಂದೇಶವು ರಕ್ತನಾಳ ಮೂಲಕ ಶಿಶ್ನಕ್ಕೆ ಪೂರೈಕೆಯಾಗುತ್ತದೆ. ಆಗ ಶಿಶ್ನವು ನಿಮಿರುತ್ತದೆ. ಈ ಪ್ರಕ್ರಿಯೆಯು ಆರೋಪಿತನಲ್ಲಿ ಹೇಗೆ ನಡೆಯತ್ತದೆ ಎಂಬುದನ್ನು ಈ ಎನ್‌ಪಿಟಿ ಪರೀಕ್ಷೆಯಲ್ಲಿ ತಿಳಿದುಕೊಳ್ಳಲಾಗುತ್ತದೆ.
ಪರೀಕ್ಷೆ ಅಗತ್ಯ: ಸುಪ್ರೀಂ ಕೋರ್ಟ್
ಈ ಹಿಂದೆ ನಿತ್ಯಾನಂದ ಸ್ವಾಮಿ ಪ್ರಕರಣದಲ್ಲಿ ಪುರುಷತ್ವ ಪರೀಕ್ಷೆ ಬಗ್ಗೆ ಚರ್ಚೆಗಳು ನಡೆದಿದ್ದವು. ವಿಚಾರಣಾ ಕೋರ್ಟ್ ನಿರ್ದೇಶನದಂತೆ ಪುರುಷತ್ವ ಪರೀಕ್ಷೆಗೆ ನಿತ್ಯಾನಂದ ಒಳಗಾಗಬೇಕಿತ್ತು. ಆದರೆ, ಸ್ವಾಮಿ ನಿರಾಕರಿಸಿ ಪರೀಕ್ಷೆಯನ್ನು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗಿದ್ದರು. ಆಗ ಈ ಉನ್ನತ ನ್ಯಾಯಾಲಯವು, ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯ ಪುರುಷತ್ವ ಪರೀಕ್ಷೆ ನಡೆಸಬೇಕು ಎಂದು ಸ್ಪಷ್ಟವಾಗಿ ತಿಳಿಸಿತ್ತು.
ಪುರುಷತ್ವ ಪರೀಕ್ಷೆ ಅಗತ್ಯವೇ?
ಅತ್ಯಾಚಾರ ಪ್ರಕರಣಗಳಲ್ಲಿ ಪುರುಷತ್ವ ಪರೀಕ್ಷೆ ನಡೆಸುವ ಬಗ್ಗೆ ಕಾನೂನು ವಲಯದಲ್ಲೇ ಭಿನ್ನಾಭಿಪ್ರಾಯಗಳಿವೆ. ಪುರುಷತ್ವ ಪರೀಕ್ಷೆ ವೇಳೆ, ವ್ಯಕ್ತಿಯ ದೈಹಿಕ ಸಾಮರ್ಥ್ಯ ಮತ್ತು ವೀರ್ಯ ಹಾಗೂ ಹಾರ್ಮೋನ್‌ಗಳನ್ನು ಪರೀಕ್ಷಿಸಲಾಗುತ್ತದೆ. ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ಆರೋಪಿತ ವ್ಯಕ್ತಿ ಲೈಂಗಿಕ ಸಾಮರ್ಥ್ಯವನ್ನು ಹೊಂದಿದ್ದಾನೆಂದು ಘೋಷಿಸಬಹುದು. ಆದರೆ, ಕೆಲವೊಂದು ಪ್ರಕರಣಗಳಲ್ಲಿ ಆರೋಪಿತ ಲೈಂಗಿಕ ಕ್ರಿಯೆ ನಡೆಸಲು ಸಮರ್ಥನಾಗಿದ್ದರೂ ಹಾರ್ಮೋನ್ ಅಥವಾ ವೀಯರ್ಯ ಶಕ್ತಿಹೀನ ಆಗಿರಬಹುದು. ಆಗ ಅಸಮರ್ಥನೆಂದು ಘೋಷಿಸಿದರೆ, ಸಂತ್ರಸ್ತೆಗೆ ಇದರಿಂದ ಅನ್ಯಾಯವಾದಂತಾಗುತ್ತದೆ ಎಂಬ ವಾದವೂ ಇದೆ. ಪುರುಷತ್ವ ಪರೀಕ್ಷೆ ಎನ್ನುವುದು ಬಹಳ ಸಂಕೀರ್ಣತೆಯಿಂದ ಕೂಡಿದೆ. ಅದನ್ನು ಒಂದೇ ಮಾನದಂಡದ ಮೇಲೆ ನಿರ್ಧರಿಸಲು ಸಾಧ್ಯವಿಲ್ಲ. ಹಾಗಾಗಿ ಈ ಪರೀಕ್ಷೆಯ ಸಿಂಧುತ್ವದ ಬಗ್ಗೆ ಹಲವರಲ್ಲಿ ಅನುಮಾನಗಳಿವೆ.
ವಿವಾದಿತ ದೇವಮಾನವರ ಕೇಸ್
ಆಸಾರಾಮ್ ಬಾಪು, ನಿತ್ಯಾನಂದ ಸ್ವಾಮಿ ಪ್ರಕರಣಗಳಲ್ಲಿ ಪುರುಷತ್ವ ಪರೀಕ್ಷೆ ಭಾರಿ ಸದ್ದು ಮಾಡಿತ್ತು. ನಿತ್ಯಾನಂದ ಸ್ವಾಮಿಯಂತೂ ತಾನು ಲೈಂಗಿಕ ಕ್ರಿಯೆ ನಡೆಸಲು ಸಮರ್ಥನಲ್ಲ ಎಂದು ಘೋಷಿಸಿಕೊಂಡಿದ್ದ. ಆಗ, ಕೋರ್ಟ್ ನಿತ್ಯಾನಂದ ಸ್ವಾಮಿಯ ವಾದವನ್ನು ತಳ್ಳಿ ಹಾಕಿ, ಪುರುಷತ್ವ ಪರಿಕ್ಷೆಗೆ ಹಾಜರಾಗುವಂತೆ ಸೂಚಿಸಿತ್ತು. 2015ರಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು. ಅದೇ ರೀತಿ, ಆಸಾರಾಮ್ ಬಾಪು ಕೂಡ ಬಾಲಕಿಯ ಮೇಲೆ ನಡೆಸಿದ ಅತ್ಯಾಚಾರ ಪ್ರಕರಣದಲ್ಲಿ ಕೋರ್ಟ್ ಈ ಪರೀಕ್ಷೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ದಾತಿ ಮಹಾರಾಜ್ ಸೇರಿ ಇನ್ನೂ ಹಲವರ ಪ್ರಕರಣದಲ್ಲಿ ಈ ಪರೀಕ್ಷೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಜಿಲ್ಲಾಸ್ಪತ್ರೆಯಲ್ಲಿ ನಡೆಯಿತು ಶ್ರೀಗಳ ಲೈಂಗಿಕ ಶಕ್ತಿ ಪರೀಕ್ಷೆ