ಚಿಕ್ಕೋಡಿ: ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ (Jain Muni Murder) ಆರೋಪಿಗಳಾದ ಎ1 ಆರೋಪಿ ನಾರಾಯಣ ಮಾಳಿ, ಎ2 ಹಸನ್ ದಲಾಯತ್ ಪೊಲೀಸ್ ಕಸ್ಟಡಿ ಅವಧಿ ಸೋಮವಾರ ಅಂತ್ಯವಾಗಿದೆ. ಹೀಗಾಗಿ ಹಸನ್ ದಲಾಯತ್‌ನನ್ನು ಭೇಟಿ ಮಾಡಲು ತಂದೆ ಮಕ್ಬೂಲ್ ದಲಾಯತ್ ಚಿಕ್ಕೋಡಿ ಡಿವೈಎಸ್‌ಪಿ ಕಚೇರಿಗೆ ಬಂದಿದ್ದರು.
ಈ ವೇಳೆ ಮಾತನಾಡಿದ ಮಕ್ಬೂಲ್ ದಲಾಯತ್, ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಮಗನನ್ನು ಬೆಳಗಾವಿ ಜೈಲಿಗೆ ಕರೆದೊಯ್ಯುತ್ತಿದ್ದಾರೆ. ಹೀಗಾಗಿ ಮಗ ಹಸನ್ ಭೇಟಿಗೆ ಬಂದಿದ್ದೇನೆ. ನಾನು ಬೇರೆಯವರ ಗದ್ದೆಯಲ್ಲಿ ಕಸ ತೆಗೆದು ಜೀವನ ಮಾಡುತ್ತೇನೆ. ಮಗ ಹೀಗೆ ಮಾಡಿದ್ರೆ ಏನು ಮಾಡುವುದು ಹೇಳಿ? ದುಡಿದು ತಿನ್ನೋ ಮನುಷ್ಯ ನಾನು. ಇವನ ಸಹವಾಸ ಬೇಡ ಅಂತ ಬೇರೆ ಮನೆ ಮಾಡಿಕೊಂಡು ವಾಸವಿದ್ದೆ ಎಂದು ತಿಳಿಸಿದ್ದಾರೆ.
ನಾನು ಲಾರಿ ಓಡಿಸುತ್ತಾ ತಿಂಗಳುಗಟ್ಟಲೇ ಹೋಗುತ್ತೇನೆ ಬಾ ಎಂದು ಹಸನ್ ಹೇಳಿದ್ದ. ಅವನಿಗೆ ನಾರಾಯಣ ಮಾಳಿ ಜತೆ ಮೂರ್ನಾಲ್ಕು ವರ್ಷದ ಗೆಳೆತನವಿತ್ತು. ಹೊಲಕ್ಕೆ ಕೀಟನಾಶಕ ಸಿಂಪಡನೆ ಮಾಡಲು ಹೋಗುತ್ತಿದ್ದೇನೆ ಎಂದು ಜೈನ ಮುನಿ ಹತ್ಯೆಯಾದ ರಾತ್ರಿ ಹೋಗಿದ್ದ. ಅವರು ದುಡ್ಡು ಕೊಡಲ್ಲ, ಹೋಗಬೇಡ ಎಂದು ಆತನ ಪತ್ನಿ ಹೇಳಿದ್ದಳು. ಸೊಸೆ ಹೋಗಬೇಡ ಎಂದರೂ ಆಕೆಯ ಮಾತು ಕೇಳದೆ ಹೋದ. ಮನೆಗೆ ವಾಪಸ್ ಬಂದಾಗಲೂ ನಮಗೆ ಏನೂ ಹೇಳಿರಲಿಲ್ಲ. ರಾತ್ರಿ ಹತ್ತು ಗಂಟೆಗೆ ಪೊಲೀಸರು ಮನೆಗೆ ಬಂದಾಗ ವಿಚಾರ ಗೊತ್ತಾಯಿತು ಎಂದು ಮಗ ಹಸನ್ ಮಾಡಿದ ಕೃತ್ಯ ನೆನೆದು ಹಸನ್ ತಂದೆ ಮಕ್ಬೂಲ್ ದಲಾಯತ್ ಭಾವುಕರಾಗಿದ್ದಾರೆ.
ಇದನ್ನೂ ಓದಿ | 40 ಕೋಟಿಯ ಒಡತಿಯನ್ನು ಕೊಂದ ಸಂಬಂಧಿಕರು; ಶವ ಸಾಗಿಸುವ ಯತ್ನ ವಿಫಲಗೊಳಿಸಿದ ಕ್ಯಾಬ್ ಡ್ರೈವರ್
ಇಬ್ಬರು ಆರೋಪಿಗಳಿಗೆ ಜು.21ರವರೆಗೆ ನ್ಯಾಯಾಂಗ ಬಂಧನ
ಚಿಕ್ಕೋಡಿ: ಹಿರೇಕೋಡಿ ನಂದಿ ಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಕೇಸ್‌ನ ಆರೋಪಿಗಳಾದ ಎ1 ಆರೋಪಿ ನಾರಾಯಣ ಮಾಳಿ, ಎ2 ಆರೋಪಿ ಹಸನ್ ದಲಾಯತ್‌ಗೆ ಜುಲೈ 21ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಚಿಕ್ಕೋಡಿ ಪ್ರಧಾನ ದಿವಾಣಿ ನ್ಯಾಯಾಲಯ ಆದೇಶ ಹೊರಡಿಸಿದೆ.
7 ದಿನಗಳ ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪೊಲೀಸರು ಚಿಕ್ಕೋಡಿ ಪ್ರಧಾನ ದಿವಾಣಿ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಿದ್ದರು. ಪ್ರಕರಣ ವಿಚಾರಣೆ ನಡೆಸಿ ಇಬ್ಬರು ಆರೋಪಿಗಳಿಗೆ ಜುಲೈ 21ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಚಿಕ್ಕೋಡಿ ಪ್ರಧಾನ ದಿವಾಣಿ ನ್ಯಾಯಾಲಯ ನ್ಯಾಯಾಧೀಶ ಚಿದಾನಂದ ಬಡಿಗೇರ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಇಬ್ಬರು ಆರೋಪಿಗಳನ್ನು ಹಿಂಡಲಗಾ ಜೈಲಿಗೆ ರವಾನೆ ಮಾಡಲಾಗಿದೆ.
ಆರೋಪಿಗಳ ತೀವ್ರ ವಿಚಾರಣೆ
ತನಿಖಾಧಿಕಾರಿ ಚಿಕ್ಕೋಡಿ ಡಿಎಸ್‌ಪಿ ಬಸವರಾಜ ಯಲಿಗಾರ ನೇತೃತ್ವದಲ್ಲಿ ಎ1 ಆರೋಪಿ ನಾರಾಯಣ ಮಾಳಿ, ಎ2 ಆರೋಪಿ ಹಸನಸಾಬ್ ದಲಾಯತ್ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಎ1 ಆರೋಪಿ ಸಹೋದರ ಸೇರಿ 20ಕ್ಕೂ ಅಧಿಕ ಜನರನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಎ1 ಆರೋಪಿ ನಾರಾಯಣ ಮಾಳಿ ಸಹೋದರನನ್ನು ಎರಡು ದಿನ ಕರೆಯಿಸಿ ವಿಚಾರಣೆ ಮಾಡಲಾಗಿದೆ.
ಇದನ್ನೂ ಓದಿ | Road Accident : ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿ; 15ಕ್ಕೂ ಹೆಚ್ಚು ಮಂದಿಗೆ ಗಾಯ
ಅದೇ ರೀತಿ ಹಂತಕರ ಜತೆ ಸಂಪರ್ಕದಲ್ಲಿ ಇದ್ದವರ ಕರೆಯಿಸಿ ವಿಚಾರಣೆ ನಡೆಸಲಾಗಿದ್ದು, ಮತ್ತೊಂದೆಡೆ ಜೈನಮುನಿಗಳ ಜತೆಯೂ ನಿಕಟ ಸಂಪರ್ಕದಲ್ಲಿದ್ದವರ ವಿಚಾರಣೆಯೂ ನಡೆದಿದೆ. ವಿಚಾರಣೆ ವೇಳೆ ಸಾಕಷ್ಟು ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಈಗಾಗಲೇ ಹಣಕಾಸಿನ ವ್ಯವಹಾರದ ಬಗ್ಗೆ ಮಹತ್ವದ ಸಾಕ್ಷ್ಯ ಸಂಗ್ರಹಿಸಿರುವ ಪೊಲೀಸರು, ಕೃತ್ಯ ವೇಳೆ ಬಳಸಿದ್ದ ಮಾರಕಾಸ್ತ್ರ, ಶವ ಸಾಗಿಸಲು ಬಳಸಿದ್ದ ಬೈಕ್ ಜಪ್ತಿ ಮಾಡಿದ್ದಾರೆ. ಜೈನ ಮುನಿಗಳ ವೈಯಕ್ತಿಕ ಡೈರಿ ಸುಟ್ಟು ಹಾಕಿದ ಬೂದಿಯನ್ನು ಎಫ್‌ಎಸ್‌ಎಲ್‌ಗೆ ಪೊಲೀಸರು ರವಾನಿಸಿದ್ದಾರೆ.