ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಅದ್ಧೂರಿ ಸಿದ್ಧತೆಗಳು ನಡೆಯುತ್ತಿದ್ದು, ರಾಜ್ಯದ ಶಾಲೆಗಳಿಗೆ 14 ದಿನಗಳ ದಸರಾ ರಜೆಯನ್ನು (Dasara Holiday) ನೀಡಲಾಗಿದೆ. ಅಕ್ಟೋಬರ್ 3ರಿಂದ 16ರ ವರೆಗೆ ದಸರಾ ರಜೆ ಘೋಷಣೆ ಮಾಡಲಾಗಿದ್ದು, ಮಂಗಳೂರಿನ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ದಸರಾ ರಜೆಯಲ್ಲಿ ಮಾರ್ಪಾಡು ಮಾಡಲಾಗಿದೆ.
ಶಿಕ್ಷಣ ಇಲಾಖೆಯು ಕೋವಿಡ್ ಕಾರಣದಿಂದ ಶೈಕ್ಷಣಿಕ ಕಲಿಕೆಯನ್ನು ಸರಿದೂಗಿಸುವ ಸಲುವಾಗಿ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2022-23 ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಯನ್ನು ಜಾರಿಗೊಳಿಸಲಾಗಿತ್ತು.
ಆ ಪ್ರಕಾರ ಅಕ್ಟೋಬರ್ 3ರಿಂದ 16ರ ವರೆಗೆ ದಸರಾ ರಜೆಯನ್ನು ನೀಡಿತ್ತು. ಆದರೆ, ದಸರಾ ಹಬ್ಬಕ್ಕೆ ಪೂರಕವಾಗುವಂತೆ ದಸರಾ ರಜೆ ನೀಡಬೇಕೆಂದು ಶಾಸಕ ವೇದವ್ಯಾಸ ಕಾಮತ್ ಮನವಿ ಮಾಡಿದ್ದರು. ಹೀಗಾಗಿ ಮಂಗಳೂರು ವ್ಯಾಪ್ತಿಗೆ ಸೀಮಿತವಾಗುವಂತೆ ದಸರಾ ರಜೆಯನ್ನು ನವರಾತ್ರಿ ಹಬ್ಬಕ್ಕೆ ಪೂರಕವಾಗುವಂತೆ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 10ರವರೆಗೆ ದಸರೆ ರಜೆ ನೀಡಲಾಗುತ್ತಿದೆ. ಉಳಿದಂತೆ ಬೇರೆ ಜಿಲ್ಲೆಗಳಿಗೆ ಅಕ್ಟೋಬರ್ 3ರಿಂದ ದಸರಾ ರಜೆ ಅನ್ವಯವಾಗಲಿದೆ.
ಗಾಂಧಿ ಜಯಂತಿ ಆಚರಣೆಗೆ ಸೂಚನೆ
ಈ ಸಂಬಂಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಜಿಲ್ಲಾಧಿಕಾರಿಗೆ ಪತ್ರದ ಮೂಲಕ ಪರಿಶೀಲಿಸಿ ಶೈಕ್ಷಣಿಕ ಚಟುವಟಿಕೆಯನ್ನು ಸರಿದೂಗಿಸುವಂತೆ ಸೂಚಿಸಿದ್ದಾರೆ. ಜತೆಗೆ ಮಹಾತ್ಮ ಗಾಂಧಿ ಜಯಂತಿಯನ್ನು ಆಚರಿಸುವ ಷರತ್ತಿನ ಮೇರೆಗೆ ರಜೆಯನ್ನು ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲು ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯದ ಶಾಲೆಗಳ ಶೈಕ್ಷಣಿಕ ಚಟುವಟಿಕೆಯನ್ನು ನಿಗದಿಪಡಿಸಿ ಶೈಕ್ಷಣಿಕ ಮಾರ್ಗಸೂಚಿಯನ್ನು ಹೊರಡಿಸಲಾಗಿರುತ್ತದೆ. ಅದರಂತೆ ಮಾರ್ಗಸೂಚಿಯನ್ವಯ ಶಾಲಾರಂಭ, ಶಾಲಾ ಮುಕ್ತಾಯದ ದಿನ, ದಸರೆ, ಬೇಸಿಗೆ ರಜೆ ಹಾಗೂ ಕಿರು ಪರೀಕ್ಷೆ/ ಪರೀಕ್ಷೆ ನಡೆಸಬೇಕಾದ ಅವಧಿ ಇತ್ಯಾದಿ ವಿವರಗಳನ್ನು ಒಳಗೊಂಡಿರುತ್ತದೆ.
ಕೆಲವು ಸ್ಥಳೀಯ ಸನ್ನಿವೇಶಗಳಿಗೆ ತಕ್ಕಂತೆ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ನಿಗದಿಪಡಿಸಿದ ವೇಳಾಪಟ್ಟಿಯಲ್ಲಿ ಮಾರ್ಪಾಡು ಅಗತ್ಯವಿದ್ದಲ್ಲಿ ಸಂಬಂಧಿಸಿದ ಜಿಲ್ಲಾಧಿಕಾರಿಗಳು/ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಬದಲಾವಣೆಗಳನ್ನು ಮಾಡಿಕೊಳ್ಳಲು ಈಗಾಗಲೇ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ದಸರಾ ಸಿಹಿ ಸುದ್ದಿ | 2,500 ಪ್ರೌಢ ಶಾಲಾ ಶಿಕ್ಷಕರ ನೇಮಕಕ್ಕೆ ಸರ್ಕಾರ ತೀರ್ಮಾನ, ಶೀಘ್ರವೇ ಪ್ರಕ್ರಿಯೆ ಆರಂಭ