ಹುಬ್ಬಳ್ಳಿ : 31 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿ ಬಂಧನಕ್ಕೆ ಒಳಗಾದ ಶ್ರೀಕಾಂತ್ ಪೂಜಾರಿ (Shrikant Poojari) ವಿರುದ್ಧ 16 ಕೇಸ್‌ಗಳಿವೆ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Central Minister Pralhad Joshi) ತೀವ್ರವಾಗಿ ಟೀಕಿಸಿದ್ದಾರೆ. ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸ್ ಇವೆ ಎಂದು ಯಾವ ಆಧಾರದ ಮೇಲೆ ಹೇಳಿದ್ರಿ? ಎಲ್ಲಿದೆ ತೋರ್ಸಿ ಎಂದು ಅವರು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.
ʻʻನಿಮ್ದು ಒಂದು ಸರಕಾರ ಏನ್ರೀ ಸಿದ್ದರಾಮಯ್ಯನವರೇ? ಎಲ್ಲಿದೀರಿ ನೀವು? ಶ್ರೀಕಾಂತ್ ಮೇಲೆ ಈಗ ಯಾವ ಕೇಸ್‌ಗಳೂ ಇಲ್ಲ.. ಬಾಯಿಗೆ ಬಂದದ್ದನ್ನು ಮಾತನಾಡುವುದು ಯಾವ ರೀತಿಯ ಸರ್ವಾಧಿಕಾರ? ಈ ತರಹ ಮಾತಾಡೋದು ಒಬ್ಬ ಮುಖ್ಯಮಂತ್ರಿಗೆ ಸರಿಯಲ್ಲʼʼ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ʻʻಹುಚ್ಚುಹುಚ್ಚು ಮಾಡಿ ಯಾರನ್ನೋ ಅರೆಸ್ಟ್ ಮಾಡಿದ್ದಾರೆ. ಇನ್ನೂ ಹಲವು ಜನರನ್ನು ಬಂಧಿಸಲು ಮುಂದಾಗಿದ್ದಾರೆ. ಇದು ಸರ್ಕಾರ ನಡೆಸುವ ರೀತಿಯಲ್ಲ. ಒಂದು ಕೋಮಿನ ಮತಕ್ಕಾಗಿ ಬೇರೆ ಧರ್ಮದವರನ್ನು ಈ ರೀತಿ ಸಿಕ್ಕಿಸಿಹಾಕುವುದು ಸರಿಯಲ್ಲ ಎಂದು ಹೇಳಿದ ಅವರು, ರಾಮ ಮಂದಿರ ನಿರ್ಮಾಣ ಆಗಿದೆ ಎನ್ನುವ ಹೊಟ್ಟೆಕಿಚ್ಚಿನಿಂದ ಏನೋ ಮಾಡಲು ಹೋಗಿ ಕಾಂಗ್ರೆಸ್ ಕೈ ಸುಟ್ಟುಕೊಂಡಿದೆʼʼ ಎಂದರು.
ಜನವರಿ 22ರಂದು ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಯಾರೂ ಬರಬಾರದು ಎಂದು ದುಷ್ಟ ಯೋಚನೆ ಸರ್ಕಾರಕ್ಕೆ ಇರುವಂತಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ʻʻದೇಶದಲ್ಲಿ ಹಿಂದೂಗಳ ಮೆಜಾರಿಟಿ ಇದೆ. ಹಿಂದೂಗಳಲ್ಲಿ ಅತ್ಯಂತ ಸಹಜವಾಗಿ ಜಾತ್ಯತೀತತೆ ಇದೆ. ನಾವು ಯಾವ ದೇವರನ್ನು ಬೇಕಾದರೂ ಪೂಜಿಸಬಹುದುʼ ಎಂದು ಹೇಳಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹೀಗೆ ಮಾಡುತ್ತಾ ಹೋದರೆ ಕಾಂಗ್ರೆಸ್ ಈ ಬಾರಿಯೂ ದೇಶದಲ್ಲಿ ಅಧಿಕೃತ ವಿರೋಧ ಪಕ್ಷವೂ ಆಗಲ್ಲ ಎಂದು ಹೇಳಿದರು.
ಇದನ್ನೂ ಓದಿ: CM Siddaramaiah : ಕಾಂಗ್ರೆಸ್ ಅಂತ್ಯ; ಆಶೀರ್ವಾದ ಮಾಡೋ ವಯಸ್ಸಲ್ಲಿ ಶಾಪ ಕೊಡಬಹುದೇ ಗೌಡ್ರೇ ಎಂದ ಸಿದ್ದರಾಮಯ್ಯ
ಮ್ಯೂಸಿಯಂಗಳಿಗೆ ಬಾಂಬ್ ಬೆದರಿಕೆ ವಿಚಾರದಲ್ಲಿ ಕಠಿಣ ಕ್ರಮ
ರಾಜ್ಯದ ಹಲವಾರು ಮ್ಯೂಸಿಯಂಗಳಿಗೆ ಬಾಂಬ್ ಬೆದರಿಕೆ ಎದುರಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯಾವುದೇ ತಪ್ಪುಗಳು ನಡೆಯದಂತೆ ಸಮಗ್ರ ತನಿಖೆ ಮಾಡಬೇಕು. ಮೇಲ್ ಹಾಕಿ ಬೆದರಿಕೆ ಒಡ್ಡಿದವರು ಯಾವ ಜಾತಿಯವರು ಅಂತಾ ನೋಡಬಾರದು. ಯಾರೇ ಮಾಡಿದರೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.