ರಾಮನಗರ: ಮನೆಯಲ್ಲಿ ನಾಯಿಯೊಂದಿದ್ದರೆ ಏನೋ ಧೈರ್ಯ. ಸಾಮಾನ್ಯವಾಗಿ ನಾಯಿ ಇರುವ ಮನೆಗಳಿಗೆ ಬರಲು ಎಂಥವರೂ ಹೆದರಬೇಕು. ಅಷ್ಟರ ಮಟ್ಟಿಗೆ ನಾಯಿ ಮೇಲಿನ ಭಯವೂ ಇರಲಿದೆ. ಇನ್ನು ಹಳ್ಳಿ ಪ್ರದೇಶಗಳಲ್ಲಿ ಬಹುತೇಕರ ಮನೆಯಲ್ಲಿ ಶ್ವಾನಗಳನ್ನು ಸಾಕಿಕೊಂಡಿರುತ್ತಾರೆ. ಮನೆಯ ಗಡಿ ಕಾಯುವುದು ಇದೇ ನಾಯಿಯೇ ಆಗಿರುತ್ತದೆ. ಈಗ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ನಾಯಿಯೊಂದರ ವಿಡಿಯೊ ಸಖತ್ ವೈರಲ್ (Video Viral) ಆಗಿದೆ. ಆ ಪುಟ್ಟ ನಾಯಿಯು ಆನೆಯನ್ನೇ ಎದುರಿಸಿದೆ! ಆನೆಗೆ ಸಖತ್ ತೊಂದರೆ ಕೊಟ್ಟಿದೆ, ಕೀಟಲೆ ಮಾಡಿದೆ, ಕಿಚಾಯಿಸಿದೆ.
ಕನಕಪುರ ತಾಲೂಕಿನ ಭೂಹಳ್ಳಿ ಗ್ರಾಮದ ಕೋಣಗುಂದಿ ಬಳಿ ಕಾಡಾನೆಯೊಂದು ಕಾಣಿಸಿಕೊಂಡಿತ್ತು. ಇದೇ ಸಂದರ್ಭದಲ್ಲಿ ಗ್ರಾಮದ ಬಾಬು ಎಂಬುವವರು ತಮ್ಮ ಶ್ವಾನವನ್ನು ಕರೆದುಕೊಂಡು ತಮ್ಮ ಜಮೀನಿಗೆ ಹೋಗಿದ್ದರು. ಆಗ ಅಲ್ಲಿ ಕಾಡಾನೆಯೊಂದು ಕಂಡಿದೆ. ಅದನ್ನು ನೋಡಿ ಬಾಬು ಹೆದರಿದ್ದಾರೆ. ಆದರೆ, ಜತೆಯಲ್ಲಿದ್ದ ಶ್ವಾನ ಹೆದರಬೇಕಲ್ಲ. ಅದಕ್ಕೆ ಎಲ್ಲಿಲ್ಲದ ಧೈರ್ಯ, ತನ್ನ ಪಕ್ಕದಲ್ಲಿ ಒಡೆಯ ಇದ್ದಾನೆಂಬುದು ಆ ಧೈರ್ಯಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಿತ್ತು. ಹೀಗಾಗಿ ಏಕಾಏಕಿ ಆನೆಯತ್ತ ನುಗ್ಗಿದೆ. ಆನೆ ಎದುರು ನಿಂತು ಜೋರಾಗಿ ಬೊಗಳಿದೆ. ಹೆದರಿಸಲು ಪ್ರಯತ್ನವನ್ನೂ ಪಟ್ಟಿದೆ.
ಇದನ್ನು ನೋಡಿ ಮೊದಲು ನಿರ್ಲಕ್ಷ್ಯ ಮಾಡಿದ ಆನೆಯು ಬಳಿಕ ಇರಿಸುಮುರಿಸಾಗಿ ನಾಯಿಯತ್ತ ದಾಂಗುಡಿ ಇಟ್ಟಿದೆ. ನಾಯಿಯನ್ನು ಆನೆಯು ಓಡಿಸಿಕೊಂಡು ಬಂದಿದೆ. ಅದರಿಂದ ತಪ್ಪಿಸಿಕೊಳ್ಳುವ ಶ್ವಾನವು ಪುನಃ ಆನೆ ವಿರುದ್ಧ ಕೂಗಿದೆ. ಹೀಗೆ ಒಮ್ಮೆ ಆನೆ ಅಟ್ಟಿಸಿಕೊಂಡು ಬಂದರೆ, ಓಡಿ ತಪ್ಪಿಸಿಕೊಳ್ಳುವ ಶ್ವಾನವು ಪುನಃ ಆನೆಯ ಹಿಂದೆ ಬೀಳುತ್ತದೆ. ಆದರೆ, ಕೊನೆ ಕೊನೆಗೆ ನಾಯಿಗೆ ಇದೊಂದು ಆಟವೂ ಆಗಿದೆ ಎಂಬುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.
ಆನೆ ವಾಪಸ್
ಸ್ವಲ್ಪ ಹೊತ್ತು ಅಲ್ಲೇ ಇದ್ದ ಆನೆಯು ಕೊನೆಗೆ ಈ ನಾಯಿಯ ಕಾಟವನ್ನು ತಾಳಲಾರದೇ ಅಲ್ಲಿಂದ ಕಾಲ್ಕಿತ್ತಿದೆ ಎಂದು ಹೇಳಲಾಗಿದೆ. ಹೀಗಾಗಿ ಆನೆಯನ್ನೇ ಓಡಿಸಿದ ನಾಯಿಯು ಈಗ ಬಹಳ ಸುದ್ದಿಯಲ್ಲಿದೆ. ಈ ಎಲ್ಲ ವೃತ್ತಾಂತವನ್ನೂ ಸಹ ಬಾಬು ಅವರು ಮೊಬೈಲ್ ಮೂಲಕ ರೆಕಾರ್ಡ್ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ | Viral News | ಗೋಡಂಬಿ ಉದ್ಯಾನದಲ್ಲಿ ಮದ್ಯ ಕುಡಿದ 24 ಆನೆಗಳು ಮಾಡಿದ್ದೇನು? ಸ್ಥಳೀಯರು ಡ್ರಮ್ ಬಡಿಯಬೇಕಾಯ್ತು !