Site icon Vistara News

Video Viral: ನಾಗರಹೊಳೆ ಸಫಾರಿಯಲ್ಲಿ ಕಾಣಿಸಿಕೊಂಡ ಬಿಳಿ ಜಿಂಕೆ; ನೋಡಲಿದು ಕ್ಯೂಟ್‌ ಕ್ಯೂಟ್‌!

White deer spotted at Nagarahole

ಮೈಸೂರು: ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ಹೋಗುವವರಿಗೆ ಈಗಂತೂ ಕಣ್ಣಿಗೆ ಹಬ್ಬವಾಗಿದೆ. ಒಂದಲ್ಲಾ ಒಂದು ದೃಶ್ಯಗಳು ಕಣ್ಮನ ಸೆಳೆಯುತ್ತಲೇ ಇವೆ. ಈ ಮೊದಲು ಕಪ್ಪು ಚಿರತೆಯೊಂದು ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು. ಈಗ ಬಿಳಿ ಬಣ್ಣದ ಜಿಂಕೆಯೊಂದು (White deer) ಕಾಣಿಸಿಕೊಂಡಿದೆ. ಈ ವಿಡಿಯೊ ಈಗ ವೈರಲ್‌ (Video Viral) ಆಗಿದೆ.

ಎಚ್‌.ಡಿ.ಕೋಟೆ ತಾಲೂಕಿನ ಅಂತರಸಂತೆ ವಲಯದ ತಾರಕ ಜಲಾಶಯದ ಹಿನ್ನೀರು ಪ್ರದೇಶದ ಜಿಂಕೆ ಗುಂಪಿನಲ್ಲಿ ಬಿಳಿ ಬಣ್ಣದ ಜಿಂಕೆಯೊಂದು ಕಾಣಿಸಿಕೊಂಡಿದ್ದು, ಪ್ರವಾಸಿಗರು ಸಖತ್‌ ಖುಷಿಯಾಗಿದ್ದಾರೆ. ಇದರ ಫೋಟೊ, ವಿಡಿಯೊ ತೆಗೆದು ಖುಷಿಪಟ್ಟಿದ್ದಾರೆ.

ನಾಗರಹೊಳೆ ಅಭಯಾರಣ್ಯದ ಪ್ರವೇಶದ್ವಾರ

ಜೀವ ವೈವಿಧ್ಯತೆಯ ಬಹುದೊಡ್ಡ ತಾಣವೇ ಆಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹಲವಾರು ಪ್ರಾಣಿಗಳು, ಪಕ್ಷಿಗಳು ಕಣ್ಮನ ಸೆಳೆಯುತ್ತವೆ. ಈಗ ಬಿಳಿ ಬಣ್ಣದ ಚುಕ್ಕಿ ಜಿಂಕೆಯು ವನ್ಯಜೀವಿ ಆಸಕ್ತರಲ್ಲಿ ಕುತೂಹಲವನ್ನು ಮೂಡಿಸಿದೆ. ವನ್ಯ ಪ್ರಾಣಿಗಳ ವರ್ಣದ್ರವ್ಯದಲ್ಲಿನ ವ್ಯತ್ಯಾಸದಿಂದ ಪ್ರಾಣಿಗಳ ಬಣ್ಣದಲ್ಲಿ ಬದಲಾವಣೆಯಾಗಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Weather Report: ವೀಕೆಂಡ್‌ನಲ್ಲಿ ಕರಾವಳಿಯಲ್ಲಿ ಭಾರಿ ಮಳೆ ಎಚ್ಚರಿಕೆ; ಈ ಜಿಲ್ಲೆಗಳಿಗೂ ಅಲರ್ಟ್

ನಾಗರಹೊಳೆಯಲ್ಲಿ ಹುಲಿಗಳ ದರ್ಶನ

ಹಲವು ವಿಶೇಷತೆಯ ನಾಗರಹೊಳೆ ಅಭಯಾರಣ್ಯ

ಮೈಸೂರು ಹಾಗೂ ತಮಿಳುನಾಡಿನ ನೀಲಗಿರಿ ಪರ್ವತಗಳ ನಡುವೆ ಬರುವ ಈ ನಾಗರಹೊಳೆ ಅಭಯಾರಣ್ಯವು 640 ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಇಲ್ಲಿ ಹಲವಾರು ವನ್ಯಜೀವಿಗಳು ನೆಲೆಸಿವೆ. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವು ಕರ್ನಾಟಕದ ಪ್ರಮುಖ ಹುಲಿ ಮೀಸಲು ಪ್ರದೇಶವಾಗಿದ್ದಲ್ಲದೆ, ಪ್ರಾಜೆಕ್ಟ್ ಟೈಗರ್ ಮತ್ತು ಪ್ರಾಜೆಕ್ಟ್ ಎಲಿಫೆಂಟ್ ಅಡಿಯಲ್ಲಿ ಸಂರಕ್ಷಣೆಯ ಪ್ರಮುಖ ಕೇಂದ್ರ ಇದಾಗಿದೆ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ.

ನಾಗರಹೊಳೆಯ ಜಂಗಲ್‌ ಲಾಡ್ಜಸ್‌ನ ಒಂದು ನೋಟ

ವಿಶ್ವದ ಅತಿದೊಡ್ಡ ಏಷ್ಯಾಟಿಕ್ ಆನೆಗಳ ಹಿಂಡಿಗೆ ಆತಿಥ್ಯ ವಹಿಸಿರುವ ಹೆಗ್ಗಳಿಕೆಗೂ ಈ ಅಭಯಾರಣ್ಯ ಪಾತ್ರವಾಗಿದೆ. ಜತೆಗೆ ಇಲ್ಲಿ ಅಸಂಖ್ಯಾತ ಜಾತಿಯ ಪಕ್ಷಿ, ಪ್ರಾಣಿ ಸಂಕುಲಗಳು, ಕ್ರೂರ ಪ್ರಾಣಿಗಳು, ಸರೀಸೃಪಗಳು, ಕಾಡೆಮ್ಮೆ , ಜಿಂಕೆ, ಕರಡಿಗಳು ಮತ್ತು ಸಣ್ಣ ಪ್ರಾಣಿಗಳು ಸೇರಿದಂತೆ ಸಸ್ಯ ಸಂಪತ್ತು ಹೇರಳವಾಗಿದೆ.

ಇಲ್ಲಿರುವ ಪ್ರಮುಖ ವನ್ಯಜೀವಿಗಳಾವುವು?

ಈ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ಸಫಾರಿಗೆ ಹೊರಟರೆ ಬಂಗಾಳ ಹುಲಿಗಳು ಮತ್ತು ಏಷ್ಯಾಟಿಕ್ ಆನೆಗಳನ್ನು ಕಾಣಬಹುದು. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಡು ನಾಯಿಗಳು, ಚಿರತೆಗಳು ಮತ್ತು ಕರಡಿಗಳಿವೆ. ಅಲ್ಲದೆ, ಕಾಡೆಮ್ಮೆ, ಕಾಡು ಹಂದಿ, ಸಾಂಬಾರ್ ಜಿಂಕೆ, ಕೃಷ್ಣ ಮೃಗ, ಚುಕ್ಕೆ ಜಿಂಕೆಗಳು ಸೇರಿದಂತೆ ಹಲವಾರು ಜಾತಿಯ ಪಕ್ಷಿಗಳನ್ನೂ ಕಾಣಬಹುದಾಗಿದೆ.

ಇದನ್ನೂ ಓದಿ: Viral News: ರೋಡಲ್ಲಿ ನಿಂತು ಮಾತಾಡಕ್ಕಿಲ್ವಾ ಎಂದು ಚುಡಾಯಿಸಿದ; ನನ್‌ ಚಪ್ಪಲಿ ಮಾತಾಡತ್ತೆ ಅಂತ ಮೆಟ್ಟಲ್ಲಿ ಚಚ್ಚಿದಳು!

ಅರಣ್ಯ ಸಫಾರಿಗೆ ಇದೆ ಸಮಯ

ಅರಣ್ಯ ಇಲಾಖೆಯು ಪ್ರತಿದಿನ ಎರಡು ಬಾರಿ ವನ್ಯಜೀವಿ ಸಫಾರಿಗೆ ಸಮಯವನ್ನು ನಿಗದಿ ಮಾಡಿದೆ. ಬೆಳಗ್ಗೆ 6 ರಿಂದ 8 ರವರೆಗೆ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆವರೆಗೆ ಇರಲಿದೆ. ನಾಂಚಿ ಗೇಟ್ (ಕುಟ್ಟ) ಮತ್ತು ವೀರನಹೊಸಳ್ಳಿ ಗೇಟ್‌ನಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಮುಂಗಡ ಬುಕ್ಕಿಂಗ್‌ ವ್ಯವಸ್ಥೆಯೂ ಇದೆ.

Exit mobile version