Site icon Vistara News

Yathindra Siddaramaiah : ಯತೀಂದ್ರ ಸಿದ್ದರಾಮಯ್ಯ ಲಿಸ್ಟ್‌ ತಿದ್ದಿದ ಮಹದೇವ್‌ ಯಾರು!?

Yathindra Siddaramaiah

ಮೈಸೂರು/ಬೆಂಗಳೂರು: ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಸಿದ್ಧ ಮಾಡಿದ ಪಟ್ಟಿಯನ್ನು ತಿದ್ದಿದ ಆರೋಪ ಎದುರಿಸುತ್ತಿರುವ ಆರ್‌. ಮಹದೇವ್‌ (R Mahadev OSD to CM) ಯಾರು ಎಂಬ ಚರ್ಚೆ ಈಗ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಯತೀಂದ್ರ ಸಿದ್ದರಾಮಯ್ಯ ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ನೀಡಲೆಂದು ಸಿದ್ಧಪಡಿಸಿದ್ದ ನಾಲ್ಕೈದು ಹೆಸರುಗಳ ಪಟ್ಟಿಯಲ್ಲಿ ವಿವೇಕಾನಂದ ಎಂಬವರ ಹೆಸರನ್ನು ಹೆಚ್ಚುವರಿಯಾಗಿ ಸೇರಿಸಲಾಗಿದ್ದು, ಭಾರಿ ಸದ್ದು ಮಾಡಿದೆ. ಇದು ಸಿಎಂ ಅವರ ಸಹಿಗಾಗಿ ಕಳುಹಿಸಿದ ವರ್ಗಾವಣೆ ಪಟ್ಟಿ ಇರಬಹುದು ಎಂದು ಶಂಕಿಸಲಾಗಿದೆ. ಇದರಲ್ಲಿ ಹೆಚ್ಚುವರಿ ಹೆಸರು ಸೇರಿಸಿದ್ದಕ್ಕಾಗಿ ಈಗ ಮಹದೇವ್‌ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ. ಹಾಗಿದ್ದರೆ ಈ ಮಹದೇವ್‌ ಯಾರು?

ಏನಿದು ಹೆಸರು ಸೇರಿಸಿ ಪಟ್ಟಿ ತಿದ್ದಿದ ಆರೋಪ?

ಮೈಸೂರು ತಾಲೂಕಿನ ಕೀಳನಪುರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿದ್ದ ವೇಳೆ ಸಿದ್ದರಾಮಯ್ಯ ಅವರಿಂದ ಬಂದ ಫೋನ್‌ ಕರೆಗೆ ಉತ್ತರಿಸುವ ವೇಳೆ ಯತೀಂದ್ರ ಸಿದ್ದರಾಮಯ್ಯ ಎಡವಟ್ಟು ಮಾಡಿಕೊಂಡಿದ್ದಾರೆ. ಸಾರ್ವಜನಿಕರ ಮುಂದೆಯೇ ತಾನು ನೀಡಿದ ಲಿಸ್ಟ್ ಬಗ್ಗೆ ಅವರು ತಂದೆಯ ಜತೆ ಮಾತುಕತೆ ನಡೆಸಿದ್ದರು. ಫೋನ್‌ ಮಾಡಿ ಮಾತನಾಡಿದ ಯತೀಂದ್ರ, ತಾನು ನೀಡಿದ ಲಿಸ್ಟ್​ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ವಿವೇಕಾನಂದರ ಹೆಸರು ಎತ್ತಿದ್ದು, ಇದಕ್ಕೆ ಯಾರು ಎಂದು ಯತೀಂದ್ರ ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಬೇರೊಂದು ಲಿಸ್ಟ್​ ನೀಡಿದ ಬಗ್ಗೆ ಅಸಮಾಧಾನಗೊಂಡ ಯತೀಂದ್ರ, ನಾನು ಕೊಟ್ಟಿರುವುದೇ ಐದು ಅಂತ ಹೇಳಿ ಮಹದೇವರಿಗೆ‌ ಫೋನ್ ನೀಡುವಂತೆ ಸಿದ್ದರಾಮಯ್ಯಗೆ ಸೂಚಿಸುತ್ತಾರೆ.. ಬಳಿಕ ಮಹದೇವ್ ಜೊತೆ ಮಾತನಾಡಿದ ಯತೀಂದ್ರ, ʼಮಹದೇವ್​ ಯಾಕೆ ಯಾವ್ದ್ಯಾವುದು ಕೊಡ್ತಾ ಇದ್ದೀರಿ? ಮತ್ತೆ ಇದೆಲ್ಲ ಯಾರು ಕೊಡ್ತಿರೋದುʼ ಅಂತ ಪ್ರಶ್ನೆ ಮಾಡಿದ್ದಾರೆ. ʼಅದೆಲ್ಲ ಬೇಡ. ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ ಅಷ್ಟೇ ಮಾತ್ರ ಮಾಡಿʼ ಅಂತ ಯತೀಂದ್ರ ಸೂಚಿಸಿರುವ ವಿಡಿಯೋ ಈಗ ಸದ್ದು ಮಾಡುತ್ತಿದೆ.

ಇದನ್ನೂ ಓದಿ: Yathindra Siddaramaih : ಯತೀಂದ್ರ ವರ್ಗಾವಣೆ ದಂಧೆಗೆ ಸಾಕ್ಷಿ; ಸಿಎಂ ರಾಜೀನಾಮೆಗೆ HDK ಆಗ್ರಹ

ಈ ಮಹದೇವ್‌ ಯಾರೆಂದರೆ..

ಡಾ.ಯತೀಂದ್ರ ಸಿದ್ದರಾಮಯ್ಯ ವಿಡಿಯೋದಲ್ಲಿ ಪ್ರಸ್ತಾಪ ಆಗಿರುವ ಮಹದೇವ್ ಯಾರೆಂದರೆ ಅವರು ಮುಖ್ಯಮಂತ್ರಿ ಕಚೇರಿಯ ವಿಶೇಷಾಧಿಕಾರಿ ಆರ್.ಮಹದೇವ್. ಆರ್.ಮಹದೇವ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಎಸ್‌ಡಿ. ಒಎಸ್‌ಡಿ ಅಂದ್ರೆ ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ.

ಮಹದೇವ್ ಮೂಲತಃ ಸಿದ್ದರಾಮನಹುಂಡಿ ಗ್ರಾಮದವರಾಗಿದ್ದು, ಬೆಂಗಳೂರಿನಲ್ಲಿ ಉಪನೋಂದಣಾಧಿ ಕಾರಿಯಾಗಿದ್ದರು. ಸಿಎಂ ಅವರು ಮುಖ್ಯಮಂತ್ರಿಯಾದ ಬಳಿಕ ಹುಟ್ಟೂರಿನ ಅಧಿಕಾರಿಯನ್ನೇ ಆಯಕಟ್ಟಿನ ಹುದ್ದೆಗೆ ನಿಯೋಜಿಸಿಕೊಂಡಿದ್ದರು.

ಇವರು ಸಿದ್ದರಾಮಯ್ಯ ಅವರಿಗೆ ಓಎಸ್‌ಡಿ ಆಗಿದ್ದರೂ ಯತೀಂದ್ರ ಸಿದ್ದರಾಮಯ್ಯ ಅವರ ಕೆಲಸವನ್ನೇ ಹೆಚ್ಚಾಗಿ ಮಾಡುತ್ತಾರೆ ಎಂಬ ಆರೋಪವಿದೆ. ಇವರು ಸಿದ್ದರಾಮಯ್ಯ, ಯತೀಂದ್ರ ಸಿದ್ದರಾಮಯ್ಯ ಟೀಮ್‌ಗೆ ಆಪ್ತರಾಗಿರುವ ಅಧಿಕಾರಿ.

ಮಹದೇವ್ ವಿರುದ್ದ ಹಲವು ಸಚಿವರಿಂದ ಸಿಎಂಗೆ ದೂರು

ಆರ್‌. ಮಹದೇವ್‌ ಅವರ ವಿರುದ್ಧ ಹಲವು ಸಚಿವರು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ. ಮಹದೇವ್‌ ಅವರು ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸಚಿವರು ದೂರಿದ್ದರು.

ಅದರಲ್ಲೂ ಮುಖ್ಯವಾಗಿ ಸಂತೋಷ್‌ ಲಾಡ್‌ ಅವರು ಮಹದೇವ್‌ ವಿರುದ್ಧ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಮಹದೇವ್‌ ಸಚಿವ ಸಂತೋಷ್ ಲಾಡ್ ಗೂ ಮಾಹಿತಿ ನೀಡದೇ ವರ್ಗಾವಣೆ ಪಟ್ಟಿ ರೆಡಿ ಮಾಡಿದ್ದರು ಎಂದು ಆರೋಪಿಸಲಾಗಿದೆ.

ವರ್ಗಾವಣೆಗೆ ಸಿಎಂ ಅನುಮೋದನೆ ಪಡೆದುಕೊಳ್ಳುವ ವೇಳೆ ಹೆಚ್ಚುವರಿ ಲಿಸ್ಟ್ ರೆಡಿ ಮಾಡುತ್ತಿದ್ದ ಆರೋಪವನ್ನು ಮಹದೇವ್‌ ಎದುರಿಸುತ್ತಿದ್ದಾರೆ. ಅಂದರೆ ಸಂತೋಷ್ ಲಾಡ್ ಅವರಿಗೂ ಮಾಹಿತಿ ನೀಡದೇ 40 ಮಂದಿಯ ಲಿಸ್ಟ್ ರೆಡಿ ಮಾಡಿದ್ದರು ಮಹದೇವ್‌. ಇದರ ಬಗ್ಗೆ ಧ್ವನಿ ಎತ್ತಿದ್ದ ಸಂತೋಷ್‌ ಲಾಡ್‌ ಮಹದೇವ್‌ ಅವರನ್ನು ತಕ್ಷಣ ಬದಲಿಸುವಂತೆ ಆಗ್ರಹಿಸಿದ್ದರು.

Exit mobile version