Site icon Vistara News

ಬ್ರಾಹ್ಮಣರು ಯಾಕೆ ಸಿಎಂ ಆಗಬಾರದು; ಅವರು ಭಾರತದ ಪ್ರಜೆಗಳಲ್ಲವೇ: ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶ್ನೆ

Pejawar Vishwaprasanna Theertha Swamiji

ಮಂಡ್ಯ: ಪ್ರತಿ ಚುನಾವಣೆ ಬಂದಾಗಲೂ ಬ್ರಾಹ್ಮಣರನ್ನು ಗುರಿ ಮಾಡಲಾಗುತ್ತದೆ. ಬ್ರಾಹ್ಮಣರು ಯಾಕೆ ಮುಖ್ಯಮಂತ್ರಿ ಆಗಬಾರದು? ಅವರು ಭಾರತದ ಪ್ರಜೆಗಳಲ್ಲವೇ? ಬ್ರಾಹ್ಮಣರಿಗೆ ಸಂಖ್ಯಾ ಬಲ ಇಲ್ಲ, ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಬ್ರಾಹ್ಮಣರ ವಿರುದ್ಧ ಇಂಥ ಹೇಳಿಕೆ ಬರುತ್ತಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಮದ್ದೂರಿನಲ್ಲಿ ಮಾತನಾಡಿದ ಶ್ರೀಗಳು, ಬ್ರಾಹ್ಮಣರ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು. ಹಿಂದಿನಿಂದಲೂ ಬ್ರಾಹ್ಮಣರ ವಿರುದ್ಧದ ಹೇಳಿಕೆಗಳು ಕೇಳಿಬರುತ್ತಿದೆ. ಪ್ರತಿ ಚುನಾವಣೆ ಬಂದಾಗ ಇದು ಹೆಚ್ಚಾಗುತ್ತದೆ. ಬ್ರಾಹ್ಮಣರು ಯಾರೂ ಧ್ವನಿ ಎತ್ತಿ ಮಾತನಾಡುವುದಿಲ್ಲ. ರಾಜ್ಯದಲ್ಲಿ ಬ್ರಾಹ್ಮಣ ಶಾಸಕರು ಎಷ್ಟು ಜನ ಇದ್ದಾರೆ? ಎಷ್ಟು ಮಂದಿಗೆ ಟಿಕೆಟ್ ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದರು.

ಮಾತನಾಡುವವರು ಏನು ಬೇಕಾದರೂ ಮಾತನಾಡುತ್ತಾರೆ. ಹಿನ್ನೆಲೆ ಅಥವಾ ಪುರಾವೆ ಇಟ್ಟುಕೊಂಡು ಮಾತನಾಡಬೇಕು. ಒಂದು ವೇಳೆ ಬ್ರಾಹ್ಮಣರು ಮುಖ್ಯಮಂತ್ರಿ ಆಗುವುದಾದರೆ ಆಗಲಿ. ಬ್ರಾಹ್ಮಣರಿಂದಲೆ ಗಾಂಧೀಜಿ ಹತ್ಯೆ ಎಂಬ ವಿಚಾರದ ಬಗ್ಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪ್ರಸ್ತಾಪ ಮಾಡಿದ್ದಾರೆ. ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಸಮಾಜವನ್ನು ದೂಷಿಸುವುದು ಸರಿಯೇ? ಹಾಗಾದರೆ ಇತರೆ ಸಮಾಜದಲ್ಲಿ ನಡೆದ ವಿಚಾರವನ್ನು ಏಕೆ ಸಾಮೂಹೀಕರಣ ಮಾಡುತ್ತಿಲ್ಲ ಎಂದು ಪೇಜಾವರ ಶ್ರೀಗಳು ಪ್ರಶ್ನೆ ಮಾಡಿದರು.

ಇದನ್ನೂ ಓದಿ: Modi In Karnataka: ಶಿವಕುಮಾರ ಸ್ವಾಮೀಜಿಗಳ ಪರಂಪರೆಯನ್ನು ಸಿದ್ದಲಿಂಗ ಶ್ರೀ ಮುಂದುವರಿಸಿದ್ದಾರೆ: ಪ್ರಧಾನಿ ಮೋದಿ ಶ್ಲಾಘನೆ

ಬ್ರಾಹ್ಮಣ ಸಮಾಜವನ್ನು ದೂರಬೇಕು ಎಂದು ಯಾವುದಾದರೂ ಒಂದು ನೆಪ ಮಾಡಿ ದೂರುತ್ತಾರೆ. ಪ್ರಜಾಪ್ರಭುತ್ವ ಸಮಾಜದಲ್ಲಿ ಯಾರಿಗೂ ಅನ್ಯಾಯವಾಗಬಾರದು. ಇವತ್ತು ಯಾವುದೋ ಸಮಾಜ, ಧರ್ಮದ ಪರವಾಗಿ ಸರ್ಕಾರ ನಡೆಯುವುದಾದರೆ, ಅನ್ಯಾಯವಾದಾಗ ಒಂದು ಧರ್ಮದ ವಿರುದ್ಧ ಮತ್ತೊಂದು ಧರ್ಮ ಪುಟಿದೇಳಬೇಕು. ಪ್ರಜಾಪ್ರಭುತ್ವ ಸಮಾಜದಲ್ಲಿ ಈ ರೀತಿ ಒಂದು ಧರ್ಮವನ್ನು ದೂಷಿಸುವುದು ಸರಿಯಲ್ಲ. ಯಾವ ಧರ್ಮದವರಿಗೂ ಅನ್ಯಾಯ ಆಗಬಾರದು ಎಂದು ಶ್ರೀಗಳು ಹೇಳಿದರು.

Exit mobile version