ಶಿರಸಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನನ್ನ ಪರವಾಗಿ ಮಾತನಾಡಿದ್ದರು. ಆದರೆ, ಈಗ ಅವರು ನಾನು ಪಕ್ಷ ತೊರೆದಿರುವ ಬಗ್ಗೆ ಅಕ್ಷಮ್ಯ ಅಪರಾಧ ಎಂದು ಹೇಳಿಕೆ ನೀಡುತ್ತಿರುವುದು ಅವರ ಮಾತಲ್ಲ. ಈಗ ಅವರು ನೀಡುತ್ತಿರುವ ಹೇಳಿಕೆ ಮೇಲಿನ ನಾಯಕರ ಕಾರಣದಿಂದಷ್ಟೇ. ಕೆಲವೊಂದು ವ್ಯಕ್ತಿಗಳ ಸ್ವಹಿತಾಸಕ್ತಿಯ ಕಾರಣದಿಂದ ಹೀಗಾಗಿದೆ. ಇನ್ನು ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟಿದ್ದು ಯಾಕೆ? ಆಗ ಅವರಿಗೆ ಪಕ್ಷ ಸೂಕ್ತ ಸ್ಥಾನಮಾನ ನೀಡಿರಲಿಲ್ಲವೇ? ಎಂದು ಪ್ರಶ್ನೆ ಮಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಈ ವಿಧಾನಸಭೆ ಚುನಾವಣೆಯಲ್ಲಿ (Karnataka Election 2023) ಕಾಂಗ್ರೆಸ್ ಸೇರ್ಪಡೆಗೊಂಡು ಸ್ಪರ್ಧೆ ಮಾಡುವುದು ಇಲ್ಲವೇ ಪಕ್ಷೇತರವಾಗಿ ಸ್ಪರ್ಧೆ ಮಾಡುವ ಕುರಿತು ನಾನು ಹುಬ್ಬಳ್ಳಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಾಜೀನಾಮೆ ನೀಡಿ ಆಗಮಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಪಕ್ಷ ಎಲ್ಲ ಸ್ಥಾನಮಾನವನ್ನು ಕೊಟ್ಟರೂ ನಾನು ಪಕ್ಷ ತೊರೆಯುತ್ತಿರುವುದರ ಬಗ್ಗೆ ಯಡಿಯೂರಪ್ಪ ಅವರು ಈ ಮಾತನಾಡುತ್ತಿದ್ದಾರೆ. ಹಾಗಾದರೆ ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರಿಗೂ ಪಕ್ಷ ಸೂಕ್ತ ಸ್ಥಾನಮಾನವನ್ನು ಕೊಟ್ಟಿತ್ತು. ಆದರೆ, ಅವರು ಯಾಕೆ ಬಿಜೆಪಿ ಬಿಟ್ಟು ಕೆಜೆಪಿಯನ್ನು ಕಟ್ಟಿದರು ಎಂದು ಪ್ರಶ್ನೆ ಮಾಡಿದರು.
ನಾನು ಈ ಹಿಂದೆ ನಿರ್ಧಾರ ಮಾಡಿದಂತೆ ರಾಜೀನಾಮೆ ನೀಡುತ್ತಿದ್ದೇನೆ. ಬಿಜೆಪಿ ನಾಯಕರು ಶನಿವಾರ (ಏ. 15) ನನ್ನನ್ನು ಸಂಪರ್ಕ ಮಾಡಿದ್ದರು. ಆದರೆ, ಅವರು ನನ್ನ ಬೇಡಿಕೆಯನ್ನು ಈಡೇರಿಸುವ ಕೆಲವನ್ನು ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ಭಾನುವಾರ ಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಶೆಟ್ಟರ್ ತಿಳಿಸಿದರು.
ನನಗೆ ಯಾವ ದೊಡ್ಡ ಹುದ್ದೆ ಬೇಡ. ನನಗೆ ಶಾಸಕನಾಗಿ ಕೆಲಸ ಮಾಡುವ ಅವಕಾಶ ಕೊಟ್ಟರೆ ಸಾಕಿತ್ತು. ಪಕ್ಷಕ್ಕೆ ಸಹಕಾರ ಕೊಟ್ಟು ಸಂಘಟನೆ ಮಾಡಿದ್ದೇನೆ. ನನಗೆ ಯಾವುದೇ ಮುನ್ಸೂಚನೆ ಇಲ್ಲದೆ ಈ ರೀತಿ ಮಾಡಿರೋದು ಬೇಸರ ತರಿಸಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿದೆ. ಮೂಲವಾಗಿ ಬಿಜೆಪಿಯಲ್ಲಿದ್ದೋರನ್ನು ಹೊರಗಡೆ ಹಾಕಲಾಗುತ್ತಿದೆ. ಇದು ಮಾನಸಿಕವಾಗಿ ಬೇಸರ ತರಿಸಿದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ಕರೆ ಮಾಡಿಲ್ಲ
ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾವ ಕಾಂಗ್ರೆಸ್ ನಾಯಕರೂ ಕರೆ ಮಾಡಿಲ್ಲ. ನಾನು ಹುಬ್ಬಳ್ಳಿಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇನೆ. ಅಲ್ಲಿಗೆ ಹೋದ ಮೇಲೆ ಹೇಳುತ್ತೇನೆ ಎಂದು ಶಿರಸಿಯಲ್ಲಿ ಶೆಟ್ಟರ್ ಪ್ರತಿಕ್ರಿಯೆ ನೀಡಿದರು.
ಕೇಂದ್ರ ಮಂತ್ರಿ ಮಾಡುತ್ತೇವೆಂದರೂ ಕೇಳದಿರುವುದು ಅಕ್ಷಮ್ಯ ಅಪರಾಧ: ಯಡಿಯೂರಪ್ಪ
ಬೆಂಗಳೂರು: ಭಾರತೀಯ ಜನತಾ ಪಕ್ಷವು ಎಲ್ಲವನ್ನೂ ನೀಡಿದ್ದರೂ ಆ ಋಣವನ್ನು ತೀರಿಸದೆ ಇದೀಗ ಕಾಂಗ್ರೆಸ್‌ಗೆ ಹೊರಟಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್ ನಡೆ ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದ್ದಾರೆ. ಹಾಗೆಯೇ, ಈ ಹಿಂದೆ ಪಕ್ಷವನ್ನು ಬಿಟ್ಟು ಹೋಗಿದ್ದು ನನ್ನ ಅಕ್ಷಮ್ಯ ಅಪರಾಧ ಎಂದಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಹಳೆ ಬೇರು, ಹೊಸ ಚಿಗುರು ಸೇರಿ ಬೆಳೆಸಬೇಕಿದೆ. ಈ ಪಕ್ಷವು ನನಗೆ, ಶೆಟ್ಟರ್ ಅವರಿಗೆ, ಲಕ್ಷ್ಮಣ ಸವದಿ ಅವರಿಗೆ ಹಾಗೂ ಈಶ್ವರಪ್ಪ ಅವರಿಗೆ ಅನೇಕ ಅವಕಾಶ ನೀಡಿದೆ. ನನ್ನಂತಹ ಸಾಮಾನ್ಯ ಕಾರ್ಯಕರ್ತ ರಾಜ್ಯದ ಎಲ್ಲೇ ಹೋದರೂ ವಿಶ್ವಾಸ ಗಳಿಸಲು ಬಿಜೆಪಿಯೇ ಕಾರಣ ಎನ್ನುವುದನ್ನು ನಾನು ಮರೆತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Karnataka Election 2023: ಜಗದೀಶ್ ಶೆಟ್ಟರ್ ಅಂತಹ ದೊಡ್ಡ ನಾಯಕರು ನಮ್ಮ ಪಕ್ಷಕ್ಕೆ ಬೇಡ: ಎಚ್.ಡಿ. ಕುಮಾರಸ್ವಾಮಿ
ನಂಬಿಕೆ ದ್ರೋಹ, ವಿಶ್ವಾಸ ದ್ರೋಹ
ಲಕ್ಷ್ಮಣ ಸವದಿ ಅವರನ್ನು ಬಿಜೆಪಿಗೆ ಕರೆತಂದು ಅವರು ಶಾಸಕರಾದರು, ಸಚಿವರಾದರು, ಚುನಾವಣೆಯಲ್ಲಿ ಸೋತ ನಂತರ ವಿಧಾನ ಪರಿಷತ್ ಸದಸ್ಯರಾಗಿಸಿ ಉಪ ಮುಖ್ಯಮಂತ್ರಿ ಮಾಡಿ, ಕೋರ್ ಕಮಿಟಿ ಸದಸ್ಯರಾಗಿಯೂ ಮಾಡಿದ್ದೇವೆ. ನಾವು ಅವರಿಗೆ ಏನು ಕಡಿಮೆ ಮಾಡಿದ್ದೆವು? ಇನ್ನೂ ಐದು ವರ್ಷ ಎರಡು ತಿಂಗಳು ಸವದಿ ಎಂಎಲ್‌ಸಿ ಆಗಿ ಮುಂದುವರಿಯಬಹುದಾಗಿತ್ತು. ಈ ಹಿಂದಿನಂತೆಯೇ ಅವರನ್ನು ಮತ್ತೆ ಸಚಿವರಾಗಿ ಮಾಡಲು ಅಡ್ಡಿ ಇರಲಿಲ್ಲ. ಏನು ಅನ್ಯಾಯ ಆಗಿತ್ತು ನಿಮಗೆ ಎಂದು ಸವದಿ ಹಾಗೂ ಬೆಂಬಲಿಗರು ಹೇಳಬೇಕು. ಇದು ನಂಬಿಕೆ ದ್ರೋಹ, ವಿಶ್ವಾಸ ದ್ರೋಹ. ಜನರನ್ನು ಅವರು ಕ್ಷಮಿಸುವುದಿಲ್ಲ. ಅವರನ್ನು ಗುರುತಿಸಿದ್ದು ಬಿಜೆಪಿ ಎಂದರು.
ಜಗದೀಶ ಶೆಟ್ಟರ್ ಜನಸಂಘದ ಕಾಲದಿಂದ ಜನಸಂಘದ ಕಾಲದಿಂದ ಬಿಜೆಪಿಯಲ್ಲಿರುವವರು. ವಿರೋಧ ಪಕ್ಷದ ನಾಯಕ, ಮಂತ್ರಿ ಜತೆಗೆ ಮುಖ್ಯಮಂತ್ರಿಯನ್ನಾಗಿಯೂ ಮಾಡಲಾಯಿತು. ಬಿಬಿ ಶಿವಪ್ಪ ಅವರನ್ನು ಎದುರು ಹಾಕಿಕೊಂಡು, ಒಬ್ಬ ಯುವಕ ಬೆಳೆಯಬೇಕು ಎಂಬ ಕಾರಣಕ್ಕೆ ಜಗದೀಶ ಶೆಟ್ಟರ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲಾಯಿತು ಎಂದರು.
ನಾನು ಹಾಗೂ ಅನಂತಕುಮಾರ್, ಅವರ ಬೆನ್ನಿಗೆ ನಿಂತಿದ್ದೆವು. ನಾವೇ ಅವರನ್ನು ಮುಖ್ಯಮಂತ್ರಿಯನ್ನಾಗಿಯೂ ಮಾಡಿದ್ದೆವು. ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಮುನ್ನಡೆಯುತ್ತಿರುವ ಸಮಯದಲ್ಲಿ ನಾವು ಅವರೊಂದಿಗೆ ಹೆಜ್ಜೆ ಹಾಕಬೇಕಾಗಿತ್ತು. ಜಗದೀಶ ಶೆಟ್ಟರ್ ಅವರ ಹೇಳಿಕೆ ಹಾಗೂ ಅವರ ನಿರ್ಧಾರ, ಅವರು ನಂಬಿಕೊಂಡಿರುವ ವಿಚಾರಕ್ಕೆ ತದ್ವಿರುದ್ಧವಾಗಿದೆ. ಸ್ಥಾನಮಾನ ಸಿಗಲಿ, ಸಿಗದೇ ಇರಲಿ ದೇಶಕ್ಕಾಗಿ ಕೆಲಸ ಮಾಡುವಂತಹದ್ದು ನಾವು ನಡೆದುಕೊಂಡುಬಂದಿರುವ ದಾರಿ. ಜಗದೀಶ್ ಶೆಟ್ಟರ್ ಅವರನ್ನು ರಾಜ್ಯದ ಜನತೆ ಗುರುತು ಮಾಡಿದ್ದು ಭಾರತೀಯ ಜನತಾ ಪಾರ್ಟಿ ಮೂಲಕ. ಪಕ್ಷವಿಲ್ಲದೆ ವ್ಯಕ್ತಿ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಕ್ಷಮ್ಯ ಅಪರಾಧ
ಧರ್ಮೇಂಧ್ರ ಪ್ರಧಾನ್, ಪ್ರಲ್ಹಾದ್ ಜೋಶಿ ಸ್ವತಃ ಜಗದೀಶ ಶೆಟ್ಟರ್ ಅವರ ಮನೆಗೆ ಹೋಗಿ, ರಾಜ್ಯಸಭಾ ಸದಸ್ಯರನ್ನು ಮಾಡಿ ಮಂತ್ರಿ ಮಾಡೋಣ ಎಂದು ಮಾತನಾಡಿ ಬಂದಿದ್ದಾರೆ. ಆ ಭಾಗದ ಜನರಿಗೆ ಕೈಜೋಡಿಸಿ ಪ್ರಾರ್ಥನೆ ಮಡುತ್ತೇನೆ, ಇಷ್ಟೆಲ್ಲದರ ನಂತರವೂ ಹಠ ಮಾಡಿ ಕಾಂಗ್ರೆಸ್ ಜತೆ ಕೈಜೋಡಿಸಲು ಹೊರಟಿರುವುದು ಅಕ್ಷಮ್ಯ ಅಪರಾಧ. ಅವರಿಗೆ ಏನೂ ಕಡಿಮೆ ಮಾಡಿಲ್ಲ. ಆದರೂ ಈ ನಿರ್ಧಾರವು ಪಕ್ಷಕ್ಕೆ ಮಾಡಿರುವ ದ್ರೋಹ. ಇದನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ. ನಾನು 80 ವರ್ಷವಾದರೂ ಓಡಾಟ ಮಾಡುತ್ತಿರುವುದು ಇಲ್ಲಿನ ವಿಚಾರಕ್ಕಾಗಿ, ಬಲಿಷ್ಠ ಸರ್ಕಾರಕ್ಕಾಗಿ. ಅದಕ್ಕಾಗಿ ನನ್ನ ಸಂಪೂರ್ಣ ಸಮಯವನ್ನು ತೆಗೆದಿಟ್ಟಿದ್ದೇನೆ ಎಂದು ಹೇಳಿದರು.
ಜಗತ್ತಿನ ಯಾವುದೇ ಶಕ್ತಿಯೂ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದು ಸೂರ್ಯ ಚಂದ್ರರಿರುವಷ್ಟೆ ಸತ್ಯ. ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂದು ಎಲ್ಲ ಜಾತಿ, ಸಮುದಾಯಗಳಿಗೆ ಅವಕಾಶ ನೀಡಲಾಗಿದೆ. ಬಿಜೆಪಿಯಲ್ಲಿ ಹೊಸತನ, ಹೊಸ ಹುರುಪು, ಹೊಸ ರಕ್ತ ಬರಲು ನಾವು ದಾರಿ ಮಾಡಬೇಕು. ಬಿಜೆಪಿ ನಿಮಗೆ ಎಲ್ಲವನ್ನೂ ಕೊಟ್ಟಿದೆ, ಆ ಋಣವನ್ನು ತೀರುಸವ ಕೆಲಸ ಮಾಡಬೇಕು ಎಂದರು.
ಇದನ್ನೂ ಓದಿ: Karnataka Election 2023: ಇನ್ನೊಂದು ಪೀಳಿಗೆಗೆ ಅವಕಾಶ ಕೊಡುವುದಕ್ಕಾಗಿ ಶೆಟ್ಟರ್‌ಗೆ ಟಿಕೆಟ್ ತಪ್ಪಿದೆ: ಸಿಎಂ ಬೊಮ್ಮಾಯಿ
ಕೆ.ಎಸ್. ಈಶ್ವರಪ್ಪ, ರಘುಪತಿ ಭಟ್ ಹಾಗೂ ಎಸ್. ಅಂಗಾರ ಅವರು ಪಕ್ಷದ ತೀರ್ಮಾನವನ್ನು ಗೌರವಿಸಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು. ಪಕ್ಷ ಎಲ್ಲವನ್ನೂ ಕೊಟಿದ್ದರೂ ಯಡಿಯೂರಪ್ಪ ಅವರೇ ಪಕ್ಷ ಬಿಟ್ಟಿದ್ದರು ಎಂಬ ಶೆಟ್ಟರ್ ಮಾತಿಗೆ ಪ್ರತಿಕ್ರಿಯಿಸಿ, ಅದು ನಾನು ಮಾಡಿದ ಅಕ್ಷಮ್ಯ ಅಪರಾಧ. ಇದಕ್ಕೆ ಈಗಾಗಲೇ ರಾಜ್ಯದ ಜನರ ಕ್ಷಮೆ ಕೇಳಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.