ಹುಬ್ಬಳ್ಳಿ: ವಿದ್ಯುತ್ ದರ ಏರಿಕೆ ವಿರೋಧಿಸಿ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕರೆ ನೀಡಿದ್ದ ರಾಜ್ಯ ಬಂದ್‌ಗೆ (Karnataka Bandh) ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧೆಡೆ ಉದ್ಯಮಿಗಳು ಹಾಗೂ ವರ್ತಕರ ಸಂಘಗಳಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ
ಹುಬ್ಬಳ್ಳಿ: ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವಿದ್ಯುತ್ ದರ ಏರಿಕೆ ವಿರೋಧಿಸಿ ರಾಜ್ಯ ಬಂದ್‌ಗೆ ಕರೆ ನೀಡಿತ್ತು. ಬಂದ್‌ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯಮಗಳು, ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದವು. ಗೋಕುಲ ರಸ್ತೆ, ತಾರಿಹಾಳ ಇಂಡಸ್ಟ್ರಿಯಲ್ ಏರಿಯಾ ಸಂಪೂರ್ಣ ಬಂದ್ ಆಗಿತ್ತು.
ಸರ್ಕಾರ ಕೂಡಲೆ ವಿದ್ಯುತ್ ದರ ಏರಿಕೆ ನಿರ್ಧಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದ ಕೈಗಾರಿಕೋದ್ಯಮಿಗಳು, ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆಗೆ ಕಾರಣವೆಂದು ಕೆಇಆರ್‌ಸಿ ಕಡೆ ಬೆರಳು ತೋರಿಸುವುದು ನಿಲ್ಲಿಸಬೇಕು. ಸಣ್ಣ ಕೈಗಾರಿಕೆಗಳು ಈಗಾಗಲೇ ಸಂಕಷ್ಟಕ್ಕೆ ಸಿಲುಕಿವೆ. ವಿದ್ಯುತ್ ದರ ದುಪ್ಪಟ್ಟು ಮಾಡಿರುವುದರಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತೆ ಎಂದು ಆಕ್ರೋಶ ಹೊರಹಾಕಿದರು.
ಧಾರವಾಡದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ
ಧಾರವಾಡ: ವಿದ್ಯುತ್ ದರ ಏರಿಕೆ ಖಂಡಿಸಿ ಧಾರವಾಡ ವಾಣಿಜ್ಯೋದ್ಯಮ ಸಂಘ ಸೇರಿ ಹುಬ್ಬಳ್ಳಿ- ಧಾರವಾಡದ 40ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆ ನಡೆಸಿದವು. ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ಮೂಲಕ ತೆರಳಿದ ನೂರಾರು ವರ್ತಕರು, ಉದ್ಯಮಿಗಳು, ಈ ಕೂಡಲೇ ವಿದ್ಯುತ್ ದರ ಏರಿಕೆ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಶೀಘ್ರವೇ ವಾಣಿಜ್ಯೋದ್ಯಮ ಸಂಸ್ಥೆಗಳ ಜತೆ ಸಭೆ ನಡೆಸಬೇಕು. ಬೆಂಗಳೂರು ಕೇಂದ್ರಿತ ಸಂಘಟನೆಗಳನಷ್ಟೇ ಅಲ್ಲದೇ ಉತ್ತರ ಕರ್ನಾಟಕದ ಸಂಘದವರನ್ನು ಕರೆದು ಸಭೆ ಮಾಡಬೇಕು. ನಾವು ಸರ್ಕಾರಕ್ಕೆ ಯಾವುದೇ ಗಡುವು ಕೊಡುವುದಿಲ್ಲ. ಇವತ್ತಿನ ಬಂದ್ ನೋಡಿಯಾದರೂ, ವಿದ್ಯುತ್ ದರ ಇಳಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಗಣಿನಾಡು ಬಳ್ಳಾರಿಯಲ್ಲಿ ಮಿಶ್ರ ಪ್ರತಿಕ್ರಿಯೆ
ಬಳ್ಳಾರಿ: ಕರ್ನಾಟಕ ಬಂದ್‌ಗೆ ಗಣಿನಾಡು ಬಳ್ಳಾರಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ವಿದ್ಯುತ್ ದರ್ ಏರಿಕೆ ಖಂಡಿಸಿ ಚೇಂಬರ್ ಆಫ್ ಕಾಮರ್ಸ್ ಬಂದ್‌ಗೆ ಕರೆ ನೀಡಿತ್ತು. ಇದರಿಂದ ಹೋಟೆಲ್, ವಾಣಿಜ್ಯ ಮಳಿಗೆಗಳು ಸೇರಿದಂತೆ ವ್ಯಾಪಾರ ವಹಿವಾಟು ಸ್ಥಬ್ದವಾಗಿತ್ತು.
ಬಳ್ಳಾರಿಯ ಪ್ರಮುಖ ವ್ಯವಹಾರ ಸ್ಥಳ ಬೆಂಗಳೂರು ರಸ್ತೆ ಸಂಪೂರ್ಣ ಬಂದ್ ಮಾಡಲಾಗಿತ್ತು. ಚೇಂಬರ್ ಆಫ್ ಕಾಮರ್ಸ್‌ನಿಂದ ರಾಯಲ್ ವೃತ್ತದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನಗರದಲ್ಲಿ ಶಾಲಾ ವಾಹನ ಹಾಗೂ ಆಟೋ, ಬಸ್‌ಗಳ ಸಂಚಾರ ಯಾಥಾಸ್ಥಿತಿಯಲ್ಲಿತ್ತು. ಸಾರ್ವಜನಿಕ ಕಚೇರಿಗಳು, ಆಸ್ಪತ್ರೆಗಳು, ಮೆಡಿಕಲ್ ಶಾಪ್ ಹಾಗೂ ಬ್ಯಾಂಕ್‌ಗಳು ಕಾರ್ಯ ನಿರ್ವಹಣೆ ಎಂದಿನಂತಿತ್ತು.
ಬಾದಾಮಿಯಲ್ಲಿ ರಾಜ್ಯಪಾರಿಗೆ ಮನವಿ ಪತ್ರ ರವಾನೆ
ಬಾಗಲಕೋಟೆ: ವಿದ್ಯುತ್ ದರ ಏರಿಕೆ ವಿರೋಧಿಸಿ ಕರ್ನಾಟಕ ವಾಣಿಜ್ಯ ಸಂಸ್ಥೆ ಕರೆ ನೀಡಿದ್ದ ಬಂದ್‌ಗೆ ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಬೆಂಬಲ ನೀಡಿತ್ತು. ಹೀಗಾಗಿ ಬಾದಾಮಿಯಲ್ಲಿ ನೂರಾರು ಪ್ರತಿಭಟನಾಕಾರರು, ಅಂಬೇಡ್ಕರ್ ವೃತ್ತದಿಂದ ಪಿಎಲ್‌ಡಿ ಬ್ಯಾಂಕ್ ಆವರಣದವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದರು. ಅಲ್ಲಿ ವಿದ್ಯುತ್ ದರ ಇಳಿಕೆಗೆ ಆಗ್ರಹಿಸಿ ತಹಸೀಲ್ದಾರ್ ಜಿ.ಬಿ.ಮಜ್ಜಗಿ ಮೂಲಕ ರಾಜ್ಯಪಾರಿಗೆ ಮನವಿ ಸಲ್ಲಿಸಿದರು.
ವಿದ್ಯುತ್ ದರ ಇಳಿಸದಿದ್ರೆ ನಾವು ಬಿಲ್ ಕಟ್ಟಲ್ಲ
ಯಾದಗಿರಿ: ವಿದ್ಯುತ್ ಬಿಲ್ ದರ ಏರಿಕೆ ವಿರುದ್ಧ ನಗರದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದ ಪ್ರತಿಭಟನಾಕಾರರು, ವಿದ್ಯುತ್ ದರ ಕಡಿಮೆ ಮಾಡಬೇಕು, ಕಡಿಮೆ ಮಾಡದೇ ಇದ್ದರೆ ನಾವು ಬಿಲ್ ಕಟ್ಟಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ | Power Tariff: ಪ್ರತಿಭಟನೆಗೆ ಬೆದರಿದ ಸರ್ಕಾರ: ವಿದ್ಯುತ್ ದರ ಇಳಿಕೆ ಮುನ್ಸೂಚನೆ ನೀಡಿದ ಸಚಿವ
ಕೊಪ್ಪಳದಲ್ಲಿ ಜಿಲ್ಲಾಧಿಕಾರಿಗೆ ಮನವಿ
ಕೊಪ್ಪಳ: ವಿದ್ಯುತ್ ಬಿಲ್ ಏರಿಕೆ ಖಂಡಿಸಿ ಕೊಪ್ಪಳದಲ್ಲಿ ವರ್ತಕ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಗಡಿಯಾರ ಕಂಬದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಮೆರವಣಿಗೆಯಲ್ಲಿ ತೆರಳಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ ಮಾಡಲಾಯಿತು.
ಮಂಡ್ಯದಲ್ಲಿ ಬೀದಿಗಿಳಿದ ಉದ್ಯಮಿಗಳು, ವರ್ತಕರು
ಮಂಡ್ಯ: ವಿದ್ಯುತ್ ದರ ಹೆಚ್ಚಳ ಖಂಡಿಸಿ ಸಕ್ಕರೆನಾಡು ಮಂಡ್ಯದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಅಂಗಡಿ-ಮುಂಗಟ್ಟು ಬಂದ್ ಮಾಡಿದ ಉದ್ಯಮಿಗಳು-ವರ್ತಕರು, ನಗರದ ಪೇಟೆ ಬೀದಿಯಿಂದ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದರು. ಅಲ್ಲಿ ಸರ್ಕಾರ ಹಾಗೂ ವಿದ್ಯುತ್ ನಿಗಮದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ದರ ಹೆಚ್ಚಳ ಮಾಡಿ ಸರ್ಕಾರ ವರ್ತಕರ ಮೇಲೆ ಚಪ್ಪಡಿ ಕಲ್ಲು ಎಳೆಯುತ್ತಿದೆ. ಅವೈಜ್ಞಾನಿಕ ವಿದ್ಯುತ್ ದರವನ್ನು ಸರ್ಕಾರ ಕೂಡಲೆ ಸರಿಪಡಿಸಬೇಕು. ಸರ್ಕಾರ ಉದ್ಯಮಿಗಳು ಹಾಗೂ ವರ್ತಕರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ವಿದ್ಯುತ್ ದರ ಕಡಿಮೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಗದಗದಲ್ಲಿ ವಾಣಿಜ್ಯೋದ್ಯಮಿಗಳ ಆಕ್ರೋಶ
ಗದಗ: ವಿದ್ಯುತ್ ಬಿಲ್ ಏರಿಕೆ ಖಂಡಿಸಿ ನಗರದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಘಟನೆಯಿಂದ ಪ್ರತಿಭಟನೆ ಪ್ರತಿಭಟನೆ ನಡೆಸಲಾಯಿತು. ಚೇಂಬರ್ ಆಫ್ ಕಾಮರ್ಸ್ ಕಚೇರಿಯಿಂದ ಮುಖ್ಯ ಮಾರುಕಟ್ಟೆ ಮೂಲಕ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಇನ್ನೂರಕ್ಕೂ ಹೆಚ್ಚು ಜನ ವಾಣಿಜ್ಯೋದ್ಯಮಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ | Free Bus Service: ಸೀಟಿಲ್ಲ ಎಂದು ಬಸ್ ನಿಲ್ಲಿಸದೇ ಹೋಗಿದ್ದ ಕಂಡಕ್ಟರ್ ಮೇಲೆ ಸಿಟ್ಟಲ್ಲಿ ಹಲ್ಲೆ; ನಾಲ್ವರ ಸೆರೆ
ವಿಜಯಪುರದಲ್ಲಿ ನೀರಸ ಪತ್ರಿಕ್ರಿಯೆ
ವಿಜಯಪುರ: ವಿದ್ಯುತ್ ಬೆಲೆ ಏರಿಕೆ ಖಂಡಿಸಿ ಮರ್ಚಂಟ್ಸ್ ಅಸೋಸಿಯೇಷನ್ ಹಾಗೂ ಎಪಿಎಂಸಿ ವರ್ತಕರು ಕರೆ ನೀಡಿದ್ದ ವಿಜಯಪುರ ಬಂದ್‌ಗೆ ನೀರಸ ಪತ್ರಿಕ್ರಿಯೆ ವ್ಯಕ್ತವಾಯಿತು.
ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿ ಚೌಕ್, ಬಸವೇಶ್ವರ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿಭಟನಾ ರ‍್ಯಾಲಿಯಲ್ಲಿ ತೆರಳಿದ ಪ್ರತಿಭಟನಾಕಾರರು, ವಿದ್ಯುತ್ ದರ ಇಳಿಕೆ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರು ಮೈಕ್‌ನಲ್ಲಿ ಕೂಗಿ ಅಂಗಡಿಗಳನ್ನು ಬಂದ್ ಮಾಡಿಸಿದರು. ಆದರೆ, ಎಲ್‌ಬಿಎಸ್ ಮಾರ್ಕೆಟ್‌ನಲ್ಲಿ ವ್ಯಾಪಾರಸ್ಥರು ಎಂದಿನಂತೆ ವಹಿವಾಟು ನಡೆಸುತ್ತಿದ್ದದ್ದು ಕಂಡುಬಂತು. ಆಗ ಪ್ರತಿಭಟನಾಕಾರರು ಒತ್ತಾಯಪೂರ್ವಕವಾಗಿ ಅಂಗಡಿಗಳನ್ನು ಬಂದ್ ಮಾಡಿಸಿದರು.