ಬೆಳಗಾವಿ: ಪತ್ನಿಯೊಬ್ಬಳು ಉಪ್ಪಿಟ್ಟಿನಲ್ಲಿ ವಿಷ ಹಾಕಿ ಗಂಡನನ್ನು ಕೊಲ್ಲಲು ಯತ್ನಿಸಿರುವ ಘಟನೆ ((Murder Attempt)) ಜಿಲ್ಲೆಯ ಸವದತ್ತಿ ತಾಲೂಕಿನ ಗೋರೆಬಾಳ ಗ್ರಾಮದಲ್ಲಿ ನಡೆದಿದೆ. ವಿಷಪೂರಿತ ಉಪ್ಪಿಟ್ಟು ತಿಂದು ಮನೆಯಲ್ಲಿದ್ದ ಬೆಕ್ಕು, ನಾಯಿ ಮೃತಪಟ್ಟಿದ್ದು, ಗಂಡ ಅಸ್ವಸ್ಥನಾಗಿ ಆಸ್ಪತ್ರೆ ಸೇರಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ನಿಂಗಪ್ಪ ಪಕೀರಪ್ಪ ಹಮಾನಿ (35) ಉಪ್ಪಿಟ್ಟು ತಿಂದು ಆಸ್ಪತ್ರೆ ಸೇರಿರುವ ಪತಿ, ಸಾವಕ್ಕ ನಿಂಗಪ್ಪ ಹಮಾನಿ (32) ಪತಿಗೆ ಉಪ್ಪಿಟ್ಟಿನಲ್ಲಿ ವಿಷ ಉಣಿಸಿತ ಪತ್ನಿ. ಉಪ್ಪಿಟ್ಟು ತಿಂದು ಅಸ್ವಸ್ಥನಾಗಿರುವ ಪಕೀರಪ್ಪ ಹಮಾನಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ | Murder Case: ಕೋರ್ಟ್‌ಗೆ ಶರಣಾದ ವಿಲ್ಸನ್ ಗಾರ್ಡನ್ ನಾಗ, ಡಬ್ಬಲ್ ಮೀಟರ್ ಮೋಹನ ; ತಿರುಪತಿ ರೌಂಡ್ಸ್ ಬಳಿಕ ಸರೆಂಡರ್
ತನ್ನ ಸಹೋದರ ಪಕೀರಪ್ಪ ಲಕ್ಷ್ಮಣ ಸಿಂದೋಗಿ ಜತೆ ಸೇರಿ ಗಂಡನಿಗೆ ಚಟ್ಟ ಕಟ್ಟಲು ಸಾವಕ್ಕ ಪ್ಲ್ಯಾನ್ ಮಾಡಿದ್ದಳು. ಗಂಡನ ಹೆಸರಿನಲ್ಲಿದ್ದ ಎರಡು ಎಕರೆ ಜಮೀನು ತನಗೆ ಸೇರಬೇಕು ಈ ರೀತಿಯ ತಂತ್ರ ಹೂಡಿದ್ದಳು ಎನ್ನಲಾಗಿದೆ. ಗಂಡ ಸತ್ತರೆ ತನಗೆ ಆಸ್ತಿ ಸೇರುತ್ತದೆ ಎಂಬ ದುರುದ್ದೇಶದಿಂದ ಐನಾತಿ ಪತ್ನಿ ಕೃತ್ಯ ಎಸಗಿದ್ದಾಳೆ. ಪ್ರಕರಣದಲ್ಲಿ ಪತ್ನಿ ಸಾವಕ್ಕ ಹಾಗೂ ಆಕೆಯ ಸಹೋದರ ಪಕೀರಪ್ಪ ಲಕ್ಷ್ಮಣ ಸಿಂದೋಗಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ವಿಡಿಯೊ ವಿಚಾರಕ್ಕೆ ಸ್ನೇಹಿತನ ಕೊಲೆಗೈದು ರುಂಡದೊಂದಿಗೆ ಗ್ರಾಮಕ್ಕೆ ಬಂದ!
ಚಿಕ್ಕೋಡಿ(ಬೆಳಗಾವಿ): ಸ್ನೇಹಿತನ ಕೊಲೆ ಮಾಡಿ ರುಂಡದೊಂದಿಗೆ ಯುವಕನೊಬ್ಬ ಗ್ರಾಮಕ್ಕೆ ಬಂದ ಭಯಾನಕ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಹೊರವಲಯದ ಬಡಬ್ಯಾಕೂಡ್‌ನಲ್ಲಿ ನಡೆದಿದೆ. ಖಾಸಗಿ ವಿಡಿಯೊ ವಿಚಾರಕ್ಕೆ ಇಲ್ಲಿನ ಬಸ್ತವಾಡ ಹೊರವಲಯ ಅರಣ್ಯ ಪ್ರದೇಶದಲ್ಲಿ ಯುವಕನನ್ನು ಕೊಲೆ (Murder Case) ಮಾಡಲಾಗಿದೆ.
ಅಕ್ಬರ್ ಜಮಾದಾರ್ (21) ಕೊಲೆಯಾದವ. ಬಡಬ್ಯಾಕೂಡ್ ನಿವಾಸಿ ಮಹಾಂತೇಶ ಪೂಜಾರ್ (23) ಕೊಲೆ ಆರೋಪಿ. ಕೊಲೆಯಾದ ಅಕ್ಬರ್, ಹಂತಕ ಮಹಾಂತೇಶ ಇಬ್ಬರೂ ಸ್ನೇಹಿತರಾಗಿದ್ದಾರೆ. ಆರೋಪಿ ಮಹಾಂತೇಶ್ ಯುವತಿಯೊಬ್ಬಳ ಜತೆಗಿನ ಖಾಸಗಿ ವಿಡಿಯೊವನ್ನು ತನ್ನದೇ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ಹಣಕಾಸಿನ ವೈಷಮ್ಯ ಇದ್ದ ಹಿನ್ನೆಲೆಯಲ್ಲಿ ಆ ಮೊಬೈಲ್ ಅನ್ನು ಅಕ್ಬರ್ ಕಸಿದುಕೊಂಡಿದ್ದ. ಆದರೆ, ರಹಸ್ಯ ವಿಡಿಯೊ ಎಲ್ಲಿ ಬಹಿರಂಗವಾಗುತ್ತದೋ ಎಂದು ಅಕ್ಬರ್‌ನನ್ನು ಮಹಾಂತೇಶ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ | Custodial death: ವಿಚಾರಣೆಗೆ ಕರೆತಂದ ಮನೆಕಳವು ಆರೋಪಿ ಪೊಲೀಸ್ ಠಾಣೆಯಲ್ಲಿ ಸಾವು
ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ಅಕ್ಬರ್ ಮೃತದೇಹ ಸ್ಥಳಾಂತರ ಮಾಡಲಾಗಿದೆ. ಆಸ್ಪತ್ರೆ ಬಳಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಗುರುವಾರ ಮಧ್ಯರಾತ್ರಿ ಆರೋಪಿ ಮಹಾಂತೇಶನನ್ನು ಹಾರೂಗೇರಿ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಮೊದಲು ಮೃತ ಅಕ್ಬರ್, ಹಂತಕ ಮಹಾಂತೇಶ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಎಮ್ಮೆ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರ ವಿರುದ್ಧವೂ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಎಸ್‌ಪಿ ಡಾ.ಸಂಜೀವ್ ಪಾಟೀಲ್ ಪ್ರತಿಕ್ರಿಯಿಸಿ, ಗುರುವಾರ ರಾತ್ರಿ ಬಸ್ತವಾಡ ಅರಣ್ಯಪ್ರದೇಶದಲ್ಲಿ ಯುವಕನ ಕೊಲೆಯಾಗಿರುವ ಬಗ್ಗೆ ಮಾಹಿತಿ ಬಂತು. ಕೊಲೆಯಾದ ಅಕ್ಬರ್ ಜಮಾದಾರ್ ತಾಯಿ ಖೈರೂನ್ ದೂರು ನೀಡಿದ್ದಾರೆ. ಕೊಲೆಯಾದ ಅಕ್ಬರ್ ಜಮಾದಾರ್, ಆರೋಪಿ ಮಹಾಂತೇಶ ಪೂಜಾರ್ ಇಬ್ಬರೂ ಸ್ನೇಹಿತರು. ಒಂದು ವರ್ಷದಿಂದ ಇಬ್ಬರ ಮಧ್ಯೆ ಹಣಕಾಸು ವ್ಯವಹಾರ ಇತ್ತು. ನೆನ್ನೆ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಮದ್ಯಪಾನ ಮಾಡಿಸಿ ಹರಿತವಾದ ಆಯುಧರಿಂದ ಇರಿದು ಕೊಲೆ ಮಾಡಿದ್ದಾನೆ. ಪ್ರಕರಣದ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Woman dead : ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ನೀರಿಗೆ ಬಿದ್ದು ಸಾವು
ಕೊಲೆಯಾದ ಅಕ್ಬರ್ ರುಂಡದ ಜತೆ ಆರೋಪಿ ಊರಿನಲ್ಲಿ ತಿರುಗಾಡಿದ ಬಗ್ಗೆ ಖಚಿತ ಮಾಹಿತಿ ಇಲ್ಲ. ಆರೋಪಿ ಮಹಾಂತೇಶ ಮೊಬೈಲ್‌ನನ್ನು ಅಕ್ಬರ್ ಪಡೆದಿದ್ದ ಎಂಬ ಮಾಹಿತಿ ಇದೆ. ಆ ಮೊಬೈಲ್‌ನಲ್ಲಿ ಆರೋಪಿ ಮಹಾಂತೇಶ ತನ್ನ ಖಾಸಗಿ ಕ್ಷಣದ ವಿಡಿಯೊ ರೆಕಾರ್ಡ್ ಮಾಡಿದ್ದನಂತೆ. ಆ ಮೊಬೈಲ್ ಸಹ ಜಪ್ತಿ ಮಾಡಿದ್ದು ಎಫ್‌ಎಸ್‌ಎಲ್‌ಗೆ ಕಳುಹಿಸಿ ತಪಾಸಣೆ ನಡೆಸಲಾಗುವುದು. ಎಮ್ಮೆಗಳ ಕಳ್ಳತನ ಸಂಬಂಧ ಆರೋಪಿತ ವ್ಯಕ್ತಿ ಮೇಲೆ ಮೂರು ಪ್ರಕರಣ, ಮೃತ ವ್ಯಕ್ತಿಯ ಮೇಲೂ ಎರಡು ಪ್ರಕರಣಗಳಿವೆ ಎಂದು ಎಸ್‌ಪಿ ತಿಳಿಸಿದ್ದಾರೆ.