ತುಮಕೂರು: ಹೆಂಡತಿಯ ಮೋಜು ಮಸ್ತಿ, ಮಕ್ಕಳ ಬಗ್ಗೆ ಅವಳಿಗಿರುವ ನಿರ್ಲಕ್ಷ್ಯದಿಂದ ಬೇಸತ್ತ ವ್ಯಕ್ತಿಯೊಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾನೂ ಕುಡಿದಿದ್ದಾರೆ. ಈ ಸಾವಿನ ಆಟದಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದರೆ ಮೂರು ಪುಟಾಣಿ ಮಕ್ಕಳು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.
ಇಂಥದೊಂದು ಹೃದಯವಿದ್ರಾವಕ ಘಟನೆ ನಡೆದಿರುವುದು ತುಮಕೂರಿನ ಪಿ.ಎಚ್. ಕಾಲೊನಿಯಲ್ಲಿ. ಮಕ್ಕಳೀಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ. ತುಮಕೂರಿನ ಪಿ.ಎಚ್. ಕಾಲೊನಿಯ ಸಮೀವುಲ್ಲಾ ಮೃತ ವ್ಯಕ್ತಿ. ಆತನ ಪತ್ನಿ, ಪ್ರಸಕ್ತ ದುಬೈಯಲ್ಲಿ ಮನೆ ಕೆಲಸ ಮಾಡುತ್ತಿರುವ ಸಾಯಿರಾ ಬಾನು ಈ ಪ್ರಕರಣದ ಖಳನಾಯಕಿ.
ಏನಿದು ದುರಂತ ಕಥೆ?
ಸಮಿಯುಲ್ಲಾ ಮತ್ತು ಸಾಯಿರಾ ಬಾನು ವಿವಾಹ ಸುಮಾರು ೧೫ ವರ್ಷದ ಹಿಂದೆ ಅದ್ಧೂರಿಯಾಗಿ ನಡೆದಿತ್ತು. ತುಂಬ ಸುಂದರವಾದ ಈ ಸಂಸಾರದಲ್ಲಿ ಮೂರು ಮಕ್ಕಳು ಹುಟ್ಟಿದ್ದರು. ಎರಡು ಗಂಡು ಮತ್ತು ಒಂದು ಒಂದು ಹೆಣ್ಣು ಮಗು. ದೊಡ್ಡವಳಿಗೆ ೧೨ ವರ್ಷ. ಸಣ್ಣ ಮಗುವಿಗೆ ಇನ್ನೂ ಏಳೆಂಟು ವರ್ಷ ಇರಬಹುದು.
ಚೆನ್ನಾಗಿದ್ದ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದು ತೀರಾ ಇತ್ತೀಚೆಗೆ. ನಾಲ್ಕು ವರ್ಷದ ಹಿಂದೆ ಸಾಯಿರಾ ಬಾನು ಉದ್ಯೋಗವನ್ನು ಅರಸಿ ಸೌದಿಗೆ ಹೋದ ಬಳಿಕ ಬದುಕು ದಿಕ್ಕು ಬದಲಿಸಿದೆ.
ಮೋಜು ಮಸ್ತಿಯ ವ್ಯೂಹಕ್ಕೆ ಸಿಲುಕಿದಳೇ?
ನಾಲ್ಕು ವರ್ಷದ ಹಿಂದೆ ಪುಟ್ಟ ಮಗುವನ್ನು ಬಿಟ್ಟು ಸಾಯಿರಾ ಬಾನು ಸೌದಿಗೆ ಹಾರಿದಾಗ ಸಮಿಯುಲ್ಲಾನೂ ಖುಷಿಪಟ್ಟಿದ್ದ. ಯಾಕೆಂದರೆ, ಮೂರು ಮಕ್ಕಳ ಮುಂದಿನ ಬದುಕಿನ ಹಿನ್ನೆಲೆಯಲ್ಲಿ ಒಂದು ಆಸರೆ ಆಗಬಹುದು ಎಂದು ಅವನಿಗೂ ಅನಿಸಿರಬಹುದು. ಹಾಗಾಗಿ ಖುಷಿಯಿಂದಲೇ ಕಳುಹಿಸಿಕೊಟ್ಟಿದ್ದ. ಆದರೆ, ಯಾವಾಗ ಆಕೆ ಮರಳಿ ಬರಲು ಒಪ್ಪದೆ ಹೋದಳೋ ಸಮಿಯುಲ್ಲಾನಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಆಕೆಯ ಮೋಜಿನ ಜೀವನ ಅವನನ್ನು ಕಂಗಾಲು ಮಾಡಿತ್ತು.
ನಾಲ್ಕು ವರ್ಷದ ಹಿಂದೆ ಸೌದಿಗೆ ಹೋದ ಸಾಯಿರಾ ಬಾನು ಒಮ್ಮೆಯೂ ಮರಳಿ ಬಂದಿಲ್ಲ ಎನ್ನುತ್ತಾರೆ ಸಮಿಯುಲ್ಲಾ ಕುಟುಂಬದವರು. ಈ ನಡುವೆ ಸಾಯಿರಾ ಬಾನು ಸಮೀಯುಲ್ಲಾನನ್ನು ಅಣಕಿಸಲು ಆರಂಭಿಸಿದ್ದಾಳೆ. ಊರಿಗೆ ಬಾ ಎಂದು ಸಮಿಯುಲ್ಲಾ ಹಲವು ಬಾರಿ ಕೇಳಿಕೊಂಡಿದ್ದಾನೆ. ಆದರೆ, ಅಲ್ಲೇನಿದೆ ಊರಲ್ಲಿ, ನಾನಿಲ್ಲಿ ಹೇಗಿದ್ದೇನೆ ಗೊತ್ತಾ ಅಂತ ಹೇಳುತ್ತಾ ತಾನಿರುವ ಈಗಿನ ಸ್ಥಿತಿಯನ್ನು, ಐಷಾರಾಮಿ ಬದುಕನ್ನು ಆಕೆ ಸಮಿಯುಲ್ಲಾನ ಮುಂದೆ ತೆರೆದಿಟ್ಟಿದ್ದಾಳೆ.
ಮಕ್ಕಳ ಅಳುವೂ ಆಕೆಗೆ ಕೇಳಿಸಲಿಲ್ಲ
ಸೌದಿಯಲ್ಲಿ ಮನೆ ಕೆಲಸ ಮಾಡುತ್ತಾ ಆಕೆ ಈ ಮನೆಯನ್ನು ಎಷ್ಟರ ಮಟ್ಟಿಗೆ ಮರೆತಿದ್ದಳೆಂದರೆ ಊರಿಗೆ ಬರುವುದೇ ಇಲ್ಲ ಎನ್ನುತ್ತಿದ್ದಳು. ಆದರೆ, ಸಮಿಯುಲ್ಲಾ ಬಂದು ಬಿಡು ಒಮ್ಮೆ ಎಂದು ಗೋಗರೆದಿದ್ದ. ಅವಳು ಒಪ್ಪಿರಲಿಲ್ಲ. ಸಮಿಯುಲ್ಲಾ ಮಾತ್ರವಲ್ಲ ಮಕ್ಕಳು ಕೂಡಾ ಅಮ್ಮಾ ಬಾ ಎಂದು ಗೋಗರೆದಿದ್ದರು. ಅದರೆ, ಮಕ್ಕಳ ಕಣ್ಣೀರಿಗೂ ಸಾಯಿರಾ ಬಾನುವಿನ ಮನಸ್ಸು ಕರಗಿರಲಿಲ್ಲ.
ಸಾವಿಗೆ ಮೊರೆ ಹೋದ ಕುಟುಂಬ
ಈ ನಡುವೆ, ಸಾಯಿರಾ ಬಾನುವಿನ ಐಷಾರಾಮಿತನ, ಮೋಜು ಮಸ್ತಿ, ಮತ್ತೆ ಬರುವುದಿಲ್ಲ ಎಂಬ ಹೇಳಿಕೆಗೆ ಮಕ್ಕಳು ಹಾಕಿದ ಕಣ್ಣೀರು ಎಲ್ಲವನ್ನೂ ನೋಡಿದ ಸಮಿಯುಲ್ಲಾ ಕೊನೆಗೆ ಮಕ್ಕಳೊಂದಿಗೆ ತಾನೂ ಪ್ರಾಣ ಕಳೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದ. ಗುರುವಾರ ಮನೆಯಲ್ಲೇ ವಿಷವನ್ನು ಸೇವಿಸಿದ್ದ. ಈ ವಿಷಯ ಇತರರಿಗೆ ತಿಳಿದು ಅವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಾರ್ಗ ಮಧ್ಯೆಯೇ ಸಮಿಯುಲ್ಲಾ ಪ್ರಾಣ ಕಳೆದುಕೊಂಡಿದ್ದಾನೆ. ಮಕ್ಕಳು ಸಾವು ಬದುಕಿನ ನಡುವೆ ನರಳಾಡುತ್ತಿದ್ದಾರೆ.
ಆಗಾಗ ವಿಡಿಯೊ ಕಾಲ್ ಮಾಡುತ್ತಿದ್ದ ಸಾಯಿರಾ ಬಾನು ಸಿಗರೇಟು ಸೇದುತ್ತಾ, ಪಾರ್ಟಿಗಳನ್ನು ತೋರಿಸುತ್ತಾ ಮೋಜಿನ ಜೀವನದ ಝಲಕ್‌ಗಳನ್ನು ತೋರಿಸಿದ್ದಳು. ಈ ಬಗ್ಗೆ ಅವರಿಬ್ಬರ ನಡುವಿನ ವಿಡಿಯೊ ಕಾಲ್ ಡಿಟೇಲ್ಸ್‌ಗಳು ಕಥೆಗಳನ್ನೇ ಹೇಳುತ್ತಿವೆ. ಆಕೆ ಅಲ್ಲಿ ಐಷಾರಾಮಿ ಬದುಕಿಗೆ ಸೆಟ್ ಆಗಿದ್ದರಿಂದ ಈ ಕಡೆಗೆ ತಲೆ ಹಾಕಿ ಮಲಗುವ ಮೂಡ್‌ನಲ್ಲೆ ಇದ್ದಂತಿರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ವಿಡಿಯೊ ಕಾಲ್‌ನಲ್ಲಿ ಮೋಜು ಮಸ್ತಿ ಮಾಡುತ್ತಾ ಪತಿಯನ್ನು ರೇಗಿಸುತ್ತಿದ್ದಳು ಎನ್ನಲಾಗಿದೆ.
ಈ ನಡುವೆ ಸಮಿಯುಲ್ಲಾ ಹೆಂಡತಿ ವಿಚಾರದಲ್ಲಿ ಪೊಲೀಸರಿಗೂ ದೂರು ನೀಡಿದ್ದ. ಪೊಲೀಸರು ಕ್ರಮ ಕೈಗೊಳ್ಳಲಿಲ್ಲ ಎಂದು ಮೃತನ ಕುಟುಂಬಿಕರು ಆರೋಪಿಸಿದ್ದಾರೆ. ಆದರೆ, ಸೌದಿಯಲ್ಲಿರುವ ಹೆಂಡತಿಯನ್ನು ಕರೆತರುವ ವಿಚಾರದಲ್ಲಿ ಪೊಲೀಸರು ಮಧ್ಯ ಪ್ರವೇಶ ಮಾಡುವುದು ಹೇಗೆ ಎನ್ನುವ ಪ್ರಶ್ನೆಯೂ ಕಾಡುತ್ತಿದೆ. ಈ ನಡುವೆ, ಸಮಿಯುಲ್ಲಾ ಇಷ್ಟೆಲ್ಲ ಕಷ್ಟಪಡುವ ಬದಲು ಮಕ್ಕಳ ಬದುಕನ್ನು ದೃಷ್ಟಿಯಲ್ಲಿಟ್ಟುಕೊಂಡು ಹೆಂಡತಿಯ ಬಗ್ಗೆ ಯೋಚನೆ ಮಾಡದೆ ತಾನೇ ಬದುಕಬಹುದಾಗಿತ್ತು. ಅದಲ್ಲದೆ ಆತನಿಗೆ ಇನ್ನೊಂದು ಮದುವೆ ಆಗುವ ಅವಕಾಶವೂ ಇತ್ತು ಎಂಬ ಅಭಿಪ್ರಾಯವಿದೆ. ಇದೆಲ್ಲದರ ಆಚೆಗೆ ಈ ಎಲ್ಲ ವಿದ್ಯಮಾನಗಳ ವಿಚಾರದಲ್ಲಿ ಸೌದಿಯಲ್ಲಿರುವ ಸಾಯಿರಾ ಬಾನುವಿನ ಹೇಳಿಕೆ ಏನಿದೆ? ಯಾಕಾಗಿ ಅವಳು ಸೌದಿ ಬಿಟ್ಟು ಬರುವುದೇ ಇಲ್ಲ ಎಂದು ತೀರ್ಮಾನಿಸಿದ್ದಳು? ನಿಜವಾಗಿಯೂ ಅವಳು ಮೋಜು ಮಸ್ತಿನ ಬದುಕಿಗೆ ಅಡಿಕ್ಟ್ ಆಗಿದ್ದಳಾ? ಅಲ್ಲಿ ಅವಳಿಗೆ ಆ ಮಟ್ಟದ ಆಕರ್ಷಣೆ ಏನಿತ್ತು ಎನ್ನುವ ಪ್ರಶ್ನೆಗಳಿಗೆ ಅವಳೇ ಉತ್ತರ ಕೊಡಬೇಕಾಗುತ್ತದೆ.
ಇದನ್ನೂ ಓದಿ| ಕುಟುಂಬ ಕಲಹ 11 ಮಂದಿಯ ಕೊಲೆಯಲ್ಲಿ ಅಂತ್ಯ