| ಅರವಿಂದ ಸಿಗದಾಳ್, ಮೇಲುಕೊಪ್ಪ
ಕಳೆದ ತಿಂಗಳು ಏರಿಕೆ ಗ್ರಾಫ್ (Arecanut Price) ಕಂಡು ರೈತರಲ್ಲಿ ಸಂತಸ ಮೂಡಿಸಿದ ಶಿವಮೊಗ್ಗ ಅಡಿಕೆ ಧಾರಣೆ, ಮೇ ತಿಂಗಳಿನ ಪ್ರಾರಂಭದಲ್ಲಿ ಮತ್ತೊಂದು ಸಣ್ಣ ಮೊತ್ತದ ಏರಿಕೆ ದಾಖಲಿಸಿ, ಕಳೆದೊಂದು ವಾರದಿಂದ ಇಳಿಮುಖದ ಧಾರಣೆಯ ಕಡೆಗೆ ವಾಲಿದೆ. ಚುನಾವಣೆಯ ಪಲಿತಾಂಶ ಮತ್ತು ಪೂರ್ಣ ಪ್ರಮಾಣದ ನೀತಿ ಸಂಹಿತೆ ತೆರವು ಕಾಣುವವರೆಗೆ ಬಹುಶಃ ಅಡಿಕೆ ಧಾರಣೆ ದೊಡ್ಡ ಮಟ್ಟದ ಏರಿಳಿತವನ್ನು ಕಾಣಲಿಕ್ಕಿಲ್ಲ. ಆದರೆ
ಕಳೆದ ವಾರ ಅಂದರೆ 14.05.2024ರಂದು ಗರಿಷ್ಠ ₹ 54,596 ದಾಖಲಿಸಿದ್ದ ರಾಶಿ ಇಡಿ ಧಾರಣೆ, ದಿನ ದಿನವೂ ಇಳಿಯುತ್ತ, ಇವತ್ತು ₹ 53,009 ಬಂದು ನಿಂತಿದೆ. ಸರಿ ಸುಮಾರು ₹ 1,500 ದರ ‘ಅಡಿಕೆ ರಾಶಿ ಇಡಿ’ಯಲ್ಲಿ ಕೊರತೆ ಕಾಣಿಸಿದೆ.
ಅಡಿಕೆ ರಾಶಿ ಇಡಿಯಲ್ಲಿ ₹1,500 ಇಳಿಮುಖವಾಗಿದ್ದರೆ, ಅಡಿಕೆ ಬೆಟ್ಟೆ ಧಾರಣೆಯಲ್ಲಿ ಕೇವಲ ₹.500 ಮಾತ್ರ ಇಳಿಕೆಯಾಗಿದ್ದು, ಆಲ್‌ಮೋಸ್ಟ್ ಸ್ಥಿರತೆಯನ್ನೇ ಉಳಿಸಿಕೊಂಡಿದೆ. ಇದೇ ಸಮಯದಲ್ಲಿ ಅಡಿಕೆ ಮಾರುಕಟ್ಟೆಗೆ ಬರುತ್ತಿರುವ ಆವಕವೂ (ಪೂರೈಕೆ) ಗಣನೀಯವಾಗಿ ಅತ್ತ-ಇತ್ತ ಆಗುತ್ತಿರುವುದು ಕಂಡು ಬಂದಿದೆ. ಅಡಿಕೆ ಆವಕ ಏರಿಳಿಕೆ ಆಗುತ್ತಿದ್ದರೂ, ಅಡಿಕೆ ಧಾರಣೆ ಮಾತ್ರ ಇಳಿಯುತ್ತಿರುವುದು ಒಂದು ವಿಶೇಷ.
ಶಿವಮೊಗ್ಗ APMC ದಾಖಲೆಗಳ ಪ್ರಕಾರ ಹೆಚ್ಚು ವ್ಯಾಪಾರವಾಗುವ ‘ರಾಶಿ ಇಡಿ ಅಡಿಕೆ’ ಆವಕದ ‘ಏರಿಳಿಕೆ’ ಹೀಗಿದೆ:
ದಿನಾಂಕ 14.05.2024 – 15,921 ಕ್ವಿಂಟಾಲ್
ದಿನಾಂಕ 15.05.2024 – 5,435 ಕ್ವಿಂಟಾಲ್
ದಿನಾಂಕ 16.05.2024 – 14,464ಕ್ವಿಂಟಾಲ್
ದಿನಾಂಕ 20.05.2024 – 3231 ಕ್ವಿಂಟಾಲ್
ದಿನಾಂಕ 21.05.2024 – 11,538 ಕ್ವಿಂಟಾಲ್
ರಾಶಿ ಇಡಿ ಧಾರಣೆ 53,009ಕ್ಕೆ ಇಳಿಕೆಯಾದಾಗ, ಗೊರಬಲು ಅಡಿಕೆ ₹.38,800 ಸನಿಹದಲ್ಲಿದೆ.
ಸಿಪ್ಪೆ ಗೋಟು ದರ ಏರಿಕೆ
ಈ ಎಲ್ಲ ವೆರೈಟಿಗಳ ಧಾರಣೆಯ ಇಳಿಕೆ ಕಾಣುತ್ತಿರುವಾಗ, ಸಿಪ್ಪೆ ಗೋಟು ದರ ಮಾತ್ರ ಸಣ್ಣ ಮಟ್ಟದ ಏರಿಕೆಯನ್ನು ದಾಖಲಿಸಿದೆ. APMC ಮಂಡಿ ಮತ್ತು ಸೊಸೈಟಿಗಳಲ್ಲಿ ಸಿಪ್ಪೆ ಗೋಟು ಅಡಿಕೆ ವ್ಯವಹಾರ ಬಹಳ ಕಮ್ಮಿ ಮತ್ತು ನಗದು ಮಾರುಕಟ್ಟೆಯಲ್ಲೇ ಹೆಚ್ಚಾಗಿ ಸಿಪ್ಪೆ ಗೋಟು ಅಡಿಕೆ ವ್ಯಾಪಾರ ಕಾಣುವುದು.
ಪ್ರತೀ ವರ್ಷವೂ ನಗದು ಮಾರುಕಟ್ಟೆಯಲ್ಲಿ ಮೇ 15 ರ ನಂತರ ಸಿಪ್ಪೆ ಗೋಟು ಅಡಿಕೆ ಚೇತರಿಕೆ ಕಾಣುವುದು ಎಂದು ನಂಬಿಕೆ ಮತ್ತು ವಾಡಿಕೆಯಾಗಿದೆ. ಅದರಂತೆ ಮೇ 15 ರಿಂದ ಸಿಪ್ಪೆ ಗೋಟು ಅಡಿಕೆ ಏರಿಕೆಯೊಂದಿಗೆ ₹.19,000 ದಲ್ಲಿ ವ್ಯಾಪಾರ ನೆಡೆಯುತ್ತಿದೆ ಎಂದು ವರದಿಯಾಗಿದೆ. (ಸಿಪ್ಪೆ ಗೋಟಿನ ಅಡಿಕೆಗೆ ಬಿಲ್ಲ ಇರುವುದಿಲ್ಲ. ಅಧಿಕೃತವಾಗಿ APMC ಯಲ್ಲಿ ಇದರ ವ್ಯವಹಾರ ಕಡಿಮೆ ಇರುವುದರಿಂದ, ವ್ಯಾಪಾರಸ್ತರು/ಏಜಂಟರು ನೇರವಾಗಿ ರೈತರ ಅಂಗಳದಲ್ಲೇ ಖರೀಧಿ ಮಾಡುವುದರಿಂದ ವ್ಯಾವಹಾರಿಕ ದಾಖಲೆಗಳು ಎಲ್ಲಾ ಕಡೆ ಇರುವುದು ಕಮ್ಮಿ.)
ಸಿಪ್ಪೆ ಗೋಟು ದರ ಇನ್ನಷ್ಟು ಏರುವ ನಿರೀಕ್ಷೆಯಿದ್ದು, ಸದ್ಯದಲ್ಲೇ ಓಪನ್ ನಗದು ಮಾರುಕಟ್ಟೆಯಲ್ಲಿ ₹.20,000 ದಾಟುವ ನಿರೀಕ್ಷೆ ರೈತರದು.
ಅಡಿಕೆ ಬೆಳೆಗಾರರ ನಿರೀಕ್ಷೆ ಮತ್ತು ಅಭಿಪ್ರಾಯ ಪ್ರಕಾರ, ಎಲ್ಲಾ ವೆರೈಟಿ ಅಡಿಕೆಗಳ (ಹಸ, ಬೆಟ್ಟೆ, ಇಡಿ, ಗೊರಬಲು, ಸಿಪ್ಪೆ ಗೋಟು) ಧಾರಣೆಗಳು ಚುನಾವಣೆ ನೀತಿ ಸಂಹಿತೆ ತೆರವುಗೊಂಡ ಮೇಲೆ, ವ್ಯಾಪಾರ ವಹಿವಾಟು ತೀವ್ರತೆ ಪಡೆದು, ಧಾರಣೆ ಗ್ರಾಫ್ ಮೇಲ್ಮುಖವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.
ಉಪ ಬೆಳೆ ಧಾರಣೆ ಏರಿಕೆ
ಅಡಿಕೆ ಬೆಲೇ ಏರಿಳಿತವಾಗುವ ಸಮಯದಲ್ಲಿ, ಅಡಿಕೆಯ ತೋಟದಲ್ಲಿನ ಉಪ ಬೆಳೆಯಾದ ಕಾಳು ಮೆಣಸು ಧಾರಣೆ ಗಣನೀಯವಾಗಿ ಏರುತ್ತಿದ್ದು, ಕಳೆದ ವಾರ ₹.56,500 (ಕ್ವಿಂಟಾಲಿಗೆ) ಇದ್ದ ದರ, ಇವತ್ತು ₹.60,000 ದಾಟಿದೆ. ವಿಯಟ್ಣಾಮ್‌ನಲ್ಲಿ ಕಾಳು ಮೆಣಸು ಬೆಳೆ ತೀವ್ರ ಕುಸಿತ ಕಂಡ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದು, ಭಾರತದ ಕಾಳು ಮೆಣಸಿಗೆ ಜಾಕ್ ಪಾಟ್ ಧಾರಣೆ ಸಿಗಲಿದೆ ಎಂದು ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ. ಬಹುಶಃ ಎಲ್ಲ ಧಾರಣೆಗಳ ಗಣನೀಯ ಏರಿಳಿತಗಳಿಗೂ ಚಾಲನೆ ಸಿಗುವುದು ಜೂನ್ ನಾಲ್ಕರ ನಂತರ? ಮಲೆನಾಡಿನ ರಾಶಿ ಇಡಿ ಅಡಿಕೆ ಧಾರಣೆ ‘ಅಬ್ಕಿ ಬಾರ್ ₹ 60,000 ಪಾರ್’ ಆಗಲಿದೆಯಾ? ಕಾದು ನೋಡಬೇಕು!
ಇದನ್ನೂ ಓದಿ: Cocoa Price: ಅಡಿಕೆ ಮರದೆತ್ತರಕ್ಕೆ ಕೋಕೋ ಬೆಳೆಯ ಧಾರಣೆ! 800% ಏರಿಕೆ!