ಬೆಂಗಳೂರು: ಇನ್ನು ಎರಡು ದಿನ ಕಾಯಿರಿ, ಬಿಬಿಎಂಪಿಯಲ್ಲಿ (BBMP) ಏನು ನಡೆಯುತ್ತಿದೆ ಎಂಬುದನ್ನು ನಿಮ್ಮ ಮುಂದೆ ಇಡುತ್ತೇನೆ. ಆದರೆ, ಯಾವುದೇ ದಾಖಲೆ ಬಿಡುಗಡೆ ಮಾಡುವುದಿಲ್ಲ. ನಾನು ಪೆನ್‌ಡ್ರೈವ್ ಬಿಡುಗಡೆ ಮಾಡಿದರೆ ನಕಲಿ ಅಂತಾರೆ. ಸಿಒಡಿಯನ್ನು ಜತೆಯಲ್ಲಿಯೇ ಇಟ್ಟುಕೊಂಡಿದ್ದಾರೆ. ದಾಖಲೆ ಬಿಡುಗಡೆ ಮಾಡಿದರೆ ಸಿಒಡಿ ತನಿಖೆ (COD investigation) ಅಂತಾರೆ. ಅಧಿಕಾರಿಗಳು ಇವರು ಹೇಳಿದ ಹಾಗೆ ವರದಿ ಕೊಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ನನ್ನ ಹತ್ತಿರ ಇರುವುದು ಖಾಲಿ ಪೆನ್‌ಡ್ರೈವ್ ಅಲ್ಲ. ಇವರು ನನ್ನ ಬಗ್ಗೆ ಹಿಟ್ ಆ್ಯಂಡ್ ರನ್ ಅಂತ ಮಾತನಾಡುತ್ತಾರೆ. 1983ರಲ್ಲಿ ವೀರಪ್ಪ ಮೊಯ್ಲಿ ಟೇಪ್ (Veerappa Moily tape) ಅಂತಾನೇ ನಡೆಯಿತು. ಅದು ಏನಾದ್ರೂ ತಾರ್ಕಿಕ ಅಂತ್ಯ ಕಂಡಿತಾ? ಫೇಕ್ ಟೇಪ್ ಅಂದರು. ಸಿಎಂ ಸಿದ್ದರಾಮಯ್ಯ (CM Siddaramaiah) ಅವರೇ ರಾಜ್ಯಪಾಲರಿಗೆ ನಾನು ಲೆಟರ್ ಬರೆದೆನಾ? ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗೆ (Chief Secretary of Karnataka) ಸಹ ಪತ್ರ ಬರೆದಿದ್ದಾರೆ. ಸಿಎಸ್‌ಗೂ ಪತ್ರ ಬರೆದಿದ್ದಾರೆ. ನಾನು ರಾಜ್ಯಪಾಲರ ಮೇಲೆ ಪ್ರಭಾವ ಬೆಳೆಸುವ ಮಟ್ಟಿಗೆ ಇದ್ದೇನಾ? ಇದರ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ಮಾಡುತ್ತಾರೆ. ಅಧಿಕಾರ ಮತ್ತು ದುಡ್ಡು ಇರುವವರ ನಡುವೆ ಸತ್ಯ ಹೊರ ಬರುತ್ತಾ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಇದನ್ನೂ ಓದಿ: PM Speech: ಪರಿವಾರವಾದದ ವಿರುದ್ಧ ಮೋದಿ ಗುಡುಗು; ಕೆಂಪು ಕೋಟೆ ಮೇಲೆ ನಿಂತು ಪ್ರತಿಪಕ್ಷಗಳಿಗೆ ವಾಗ್ಬಾಣ
ಕರ್ನಾಟಕಕ್ಕೆ ಬಂದಿದೆ ಆಪತ್ತು
ದೇಶ ಅಪಾಯದ ಸ್ಥಿತಿಯಲ್ಲಿದೆ. ದೇಶದ ಭದ್ರತೆ, ಆರ್ಥಿಕತೆ ಹಾಳಾಗಿದೆ ಎಂದು ಡಿ.ಕೆ. ಶಿವಕುಮಾರ್ ಭಾಷಣ ಮಾಡುತ್ತಾರೆ. ಅವರು ಹೇಳಿದಂತೆ ದೇಶದ ಭದ್ರತೆ ಹಾಳಾಗಿದೆ ಎಂದೇ ಅಂದುಕೊಳ್ಳೋಣ ಬಿಡಿ. ಆದರೆ, ರಾಜ್ಯದ ಭದ್ರತೆ ಏನಾಗಿದೆ? ಅದರ ಬಗ್ಗೆ ಡಿಕೆಶಿ ಮೊದಲು ಮಾತನಾಡಲಿ. ಆ ಗುತ್ತಿಗೆದಾರ ಅಂದು ಅಜ್ಜಯ್ಯನ ಮೇಲೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದರು. ಆದರೆ, ಸೋಮವಾರ (ಆಗಸ್ಟ್ 14) ಹೇಳಿಕೆ ಬದಲಿಸಿ, ನಾನು ಮನನೊಂದು ಹಾಗೆ ಹೇಳಿದೆ ಅಂತಾನೆ. ಆ ಗುತ್ತಿಗೆದಾರ ಯಾರನ್ನು ಎಷ್ಟು ಗಂಟೆಗೆ ಎಲ್ಲಿ ಭೇಟಿ ಮಾಡಿದ ಅಂತ ಹೇಳಲಾ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು. ಹಾಗಾದರೆ ಗುತ್ತಿಗೆದಾರ ಹೇಮಂತ್‌ಗೆ ಬೆದರಿಕೆ ಹಾಕಲಾಗಿದೆಯಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಎಚ್‌ಡಿಕೆ ಅದನ್ನೇ ನಾನು ಹೇಳುತ್ತಾ ಇರೋದು. ಇವರು ರಾಜ್ಯದಲ್ಲಿನ ಜನರ ಭದ್ರತೆ ಏನಾಗಿದೆ ಎಂಬುದನ್ನು ಹೇಳಲಿ. ಮೊದಲು ಆ ಗುತ್ತಿಗೆದಾರ ಯಾಕೆ ಉಲ್ಟಾ ಹೊಡೆಯುತ್ತಿದ್ದಾರೆ ಎಂಬುದು ಮುಖ್ಯ. ಇದೇ ಕರ್ನಾಟಕಕ್ಕೆ ಬಂದಿರುವ ಆಪತ್ತು ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಅವರಿಗೆ ಮಾತ್ರ ಅಜ್ಜಯ್ಯನ ರಕ್ಷಣೆ ಇರೋದಾ? ನಮಗೆ ಇಲ್ಲವೇ? ನಾವು ರಕ್ಷಣೆಗಾಗಿ ಹುಡಕಬೇಕು. ಮುಂದಿನ 10-20 ವರ್ಷ ನಾವೇ ಅಂತ ಹೇಳುತ್ತಿದ್ದಾರೆ. ಸದನದಲ್ಲಿ ಆಗ ಬಿ.ಎಸ್. ಯಡಿಯೂರಪ್ಪ ಅವರು ಮುಂದಿನ 20 ವರ್ಷ ತಾವೇ ಅಧಿಕಾರದಲ್ಲಿ ಇರೋದು ಅಂತ ಹೇಳಿದರು. ಆ ಮಾತು ಸದನದಲ್ಲಿ ರೆಕಾರ್ಡ್ ಕೂಡಾ ಆಗಿದೆ. ಈಗ ನೀವು 20 ವರ್ಷ ನಮ್ಮದೇ ಅಧಿಕಾರ ಅಂತ ಹೇಳುತ್ತಿದ್ದೀರ ಎಂದು ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
ದುಡ್ಡಿದ್ದರೆ ಏನು ಬೇಕಾದರೂ ಮಾಡಬಹುದಾ?
ಸೋಮವಾರ ಕಾಂಗ್ರೆಸ್ ನಾಯಕರ ಸಭೆ ನಡೆಸಲಾಯಿತು. ಅಲ್ಲಿ 20 ಸ್ಥಾನ ಗೆಲ್ಲಲು ಸಭೆ ಮಾಡಿದ್ದಾರೆ. ಸಭೆಯಲ್ಲಿ ಸಿಎಂ, ಡಿಸಿಎಂ ವೀರಾವೇಷದಲ್ಲಿ ಮಾತನಾಡಿದ್ದಾರೆ. ಅವರ ಹಿನ್ನೆಲೆ ಜಗಜ್ಜಾಹೀರಾಗಿದೆ. ನನಗೆ ಬುದ್ಧಿ ಭ್ರಮಣೆ ಆಗಿದೆ ಅಂದರು. ನನ್ನ ಆರೋಗ್ಯ ನೋಡಿಕೊಳ್ಳಲು ನನ್ನ ಕುಟುಂಬದಲ್ಲಿ ಡಾಕ್ಟರ್‌ಗಳಿದ್ದಾರೆ. ಇವರೆಲ್ಲರೂ ಎಲ್ಲಿ ಇದ್ದರು? ಹೇಗೆ ಬಂದರು ಅನ್ನೋದು ನನಗೆ ಗೊತ್ತಿದೆ. ಇಂಥ ಸರ್ಕಾರ ಹಿಂದೆ ಬಂದಿಲ್ಲ ಮುಂದೆ ಬರುವುದೂ ಇಲ್ಲ. ಇವರು 40 ಪರ್ಸೆಂಟ್ ಕೇಳುತ್ತಾರೆಂದು ಕಂಟ್ರ್ಯಾಕ್ಟರ್ ಅಸೋಸಿಯೇಷನ್‌ವರು ಹೇಳಿದರು. ಬಾಣಲೆಯಿಂದ ಬೆಂಕಿಗೆ ಬಿದ್ದಿದ್ದೀವಿ ಅಂತ ಹೇಳಿದ್ದಾರೆಂದರೆ ಏನರ್ಥ? ಎಂದು ಪ್ರಶ್ನೆ ಮಾಡಿದ ಎಚ್.ಡಿ. ಕುಮಾರಸ್ವಾಮಿ, ಕಾಂಬೋಡಿಯಾಗೆ ಹೋಗುವುದಕ್ಕಿಂತ ಮುಂಚೆ 23 ಜನ ಕಾಂಟ್ರ್ಯಾಕ್ಟರ್ ಬಂದಿದ್ದರು. ಶಾಸಕರೊಬ್ಬರ ಮಧ್ಯಸ್ಥಿಕೆಯಲ್ಲಿ ಹೇಳಿಕೆ ಕೊಡಿಸಿದ್ದಾರೆ. ದುಡ್ಡಿದ್ದರೆ ಏನು ಬೇಕಾದರೂ ಮಾಡಬಹುದು ಅಂದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಪ್ಯಾನ್ ಇಂಡಿಯಾ ಸಿನಿಮಾದಂತೆ ಇಂದಿನ ರಾಜಕೀಯ
ಒಂದು ಅಂತ್ಯ ಅನ್ನೋದು ಇದೆ. ಸಿನಿಮಾ ತೆಗೆದಾಗ ಅಂತ್ಯ ಅನ್ನೋದು ಇರಲೇಬೇಕಲ್ಲವೇ? ಆದರೆ, ಇಂದು ಪ್ಯಾನ್ ಇಂಡಿಯಾದ ಸಿನಿಮಾಗಳು (Pan India Cinema) ಅಂತ್ಯ ಆಗುತ್ತಿಲ್ಲ. ಭಾಗ 1, ಭಾಗ 2 ಅಂತ ಬರುತ್ತಿವೆ. ಈಗಿನ ರಾಜಕೀಯವೂ ಹಾಗೇ ಆಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಆಗ ಸಿಎಂ ಆದಾಗ ಯಾಕೆ ಮಾಡಲಿಲ್ಲ?
ನನಗೆ ಯೋಗ್ಯತೆ ಇಲ್ಲ, ನಿಮಗೆ ಇದೆ ಅಂತ ತಾನೇ ಜನ ಈಗ ನಿಮ್ಮನ್ನು ಕೂರಿಸಿದ್ದಾರೆ. ಗರೀಭಿ ಹಠಾವೋ ಅಂತ ಹೇಳಿಕೊಂಡು ಆಗ ಅಧಿಕಾರಕ್ಕೆ ಬಂದಿರಿ. ಹಸಿದವರಿಗೆ ಅನ್ನ ಕೊಡುತ್ತೇವೆ ಎಂದು ರಾಜಸ್ಥಾನದ ಸಿಎಂ ಹೇಳುತ್ತಾರೆ. ಅವರು ಎಷ್ಟು ಭಾರಿ ಸಿಎಂ ಆಗಿದ್ದರು. ಆಗ ಯಾಕೆ ಮಾಡಲಿಲ್ಲ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಜನ ಏಕೆ ಮತ ಹಾಕಿದ್ದಾರೆಂದು ಮುಂದೆ ಗೊತ್ತಾಗತ್ತೆ
ಬಿಜೆಪಿಗೆ ನಾನು ಅಡಿಯಾಳಲ್ಲ, ನಿಮ್ಮ ತಪ್ಪನ್ನ ತಪ್ಪು ಅಂತಾ ಹೇಳೋಕೆ ಆಗದಿದ್ದರೆ ಆ ಜಾಗದಲ್ಲಿ ಏಕೆ ಕೂರಬೇಕು? ಜನ ನನ್ನ ಆ ಸ್ಥಾನದಲ್ಲಿ ಕೂರಿಸಿದ್ದಾರೆ. ನನಗೆ ಹೊಟ್ಟೆ ಹುರಿಯೋ, ತಲೆನೋವೋ, ಬುದ್ಧಿಭ್ರಮಣೆಯೋ ಆಗಿದೆಯೋ ಅದಕ್ಕೆ ಔಷಧಿ ತೆಗೆದುಕೊಳ್ಳುತ್ತೇನೆ. ಜನ ಗ್ಯಾರಂಟಿ ನಂಬಿ ಮತ ಹಾಕಿದ್ದಾರೋ ಗೊತ್ತಿಲ್ಲ, ಮುಂದೆ ಗೊತ್ತಾಗುತ್ತದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿ ಭಾಷಣ
2ಜಿ ಮತ್ತು ಕಲ್ಲಿದ್ದಲು ಹಗರಣ ನಡೆದಿದೆ ಎಂದು ಬಿಜೆಪಿಯವರು ಆರೋಪ ಮಾಡಿದರು. ಅದರ ಬಗ್ಗೆ ತನಿಖೆ ಮಾಡಿದರಾ? ಅಧಿಕಾರಕ್ಕೆ ಬಂದು 10 ವರ್ಷ ಆಗುತ್ತಾ ಬಂದಿದೆ. 1985-86ರಲ್ಲಿ ನಡೆದಿದ್ದ ಬೋಫೋರ್ಸ್ ಹಗರಣದ ಸತ್ಯಾಂಶ ಹೊರ ಬಂತಾ? ಯಾವುದೇ ಸತ್ಯಾಂಶ ಹೊರಬಂದಿಲ್ಲ. ಈಗ ಎಲ್ಲದಕ್ಕೂ ಸಾಕ್ಷಿ ಕೊಡಿ ಅಂತಾರೆ ಕೇಳುತ್ತಾರೆ. ಯಾವುದಕ್ಕೆ ಸಾಕ್ಷಿ ಕೋಡೋಣ? ನಮ್ಮ ಕರ್ನಾಟಕ ಕಾಂಗ್ರೆಸ್ ಅನ್ನು ಎಟಿಎಂ ಮಾಡಿಕೊಂಡಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಇದನ್ನೂ ಓದಿ: Independence day 2023 : ಅಭಿವೃದ್ಧಿಗೆ ಕರ್ನಾಟಕ ಮಾದರಿ; ಗ್ಯಾರಂಟಿ ಸಮರ್ಥನೆ ಮಾಡಿದ ಸಿದ್ದರಾಮಯ್ಯ
ಅವತ್ತಿನ ಜನತಾ ಪಕ್ಷದ ಒಂದು ತುಣುಕು ಜನತಾದಳ ಎಸ್ ಆಗಿದೆ. ಇನ್ನೂ ರಾಜ್ಯದ ಜನಗಳ ಆಶೀರ್ವಾದ ನಮ್ಮ ಮೇಲಿದೆ. ನಾವು ಆರೂವರೆ ಕೋಟಿ ಜನರ ವಕ್ತಾರನಾಗಿ ಕೆಲಸ ಮಾಡುತ್ತೇವೆ. ನಾನು ಇಡೀ ರಾಜ್ಯದ ಜನರ ವಕ್ತಾರನಾಗಿದ್ದೇನೆ. ಈ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ದೃಢ ಸಂಕಲ್ಪವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು. ಈ ಮೂಲಕ ನಾವು ಹೋರಾಟ ಆರಂಭ ಮಾಡೋಣ ಎಂದು ಎಚ್.ಡಿ. ಕುಮಾರಸ್ವಾಮಿ ಕರೆ ನೀಡಿದರು.