ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿರುವ ಬಿಜೆಪಿ ಎಂಎಲ್‌ಸಿ ಎಚ್. ವಿಶ್ವನಾಥ್ ಅವರು ಕಾಂಗ್ರೆಸ್ ಪಕ್ಷವನ್ನು ಸೇರುತ್ತಾರೆ (Gharwapsi politics) ಎಂಬ ಸುದ್ದಿ ಜೋರಾಗಿ ಹರಡುತ್ತಿದೆ. ಇದು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿರುವ ಹಲವು ನಾಯಕರ ಘರ್ ವಾಪ್ಸಿಯ ಮುನ್ನುಡಿ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.
ಈ ವಿಚಾರವಾಗಿ ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಹಳ್ಳಿ ಹಕ್ಕಿ ʻಕಾದು ನೋಡಿʼ ಎಂದು ಹೇಳುವ ಮೂಲಕ ಕುತೂಹಲ ಉಳಿಸಿಕೊಂಡಿದೆ. ವಿಸ್ತಾರ ನ್ಯೂಸ್ ನಡೆಸಿದ ಚಿಟ್‌ಚಾಟ್ ಇಲ್ಲಿದೆ.
ವಿಸ್ತಾರ: ಬಿಜೆಪಿ ಎಂಎಲ್ಸಿ ಆಗಿಯೂ, ಎಐಸಿಸಿ ಅಧ್ಯಕ್ಷರನ್ನ ಭೇಟಿ ಮಾಡಿದ್ದೀರಿ. ನೀವು ಬಿಜೆಪಿ ಬಿಡ್ತೀರಿ ಎಂಬ ಸುದ್ದಿ ಹರಡಿದೆ.
ವಿಶ್ವನಾಥ್: ಭಾರತದ ರಾಜಕಾರಣದಲ್ಲಿ ಸಹಿಷ್ಣುತೆ ಬಹಳ ಮುಖ್ಯ. ನಮ್ಮ ರಾಜ್ಯದ ಹಿರಿಯರು, ಅನುಭವಿಗಳೂ ಆದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಬೇರೆ ಸಭೆಗಾಗಿ ದಿಲ್ಲಿಗೆ ಹೋದಾಗ ಅವರನ್ನು ಭೇಟಿ ಮಾಡಿ ಹೂವು ಕೊಟ್ಟು ಅಭಿನಂದನೆ ಹೇಳಿದೆ. ಇದು ಸೌಜನ್ಯ ಅಷ್ಟೇ. ಇದರಲ್ಲಿ ತಪ್ಪೇನಿದೆ? ಬೊಮ್ಮಾಯಿ ಕೂಡಾ ವಿಷ್ ಮಾಡಿದ್ರು. ಹಾಗಂತ ಬೊಮ್ಮಾಯಿ ಕಾಂಗ್ರೆಸ್ ಸೇರ್ತಾರಾ? ಇದೆಲ್ಲವೂ ತಪ್ಪು ತಿಳುವಳಿಕೆ. ಒಬ್ಬ ಶೋಷಿತ ಸಮುದಾಯದವರು ಎಐಸಿಸಿ ಅಧ್ಯಕ್ಷರಾಗಿದ್ದು ಸಂತೋಷ. ಅದಕ್ಕೆ ಭೇಟಿ ಮಾಡಿದ್ದೇನೆ.
ವಿಸ್ತಾರ: ಹೌದು, ಭೇಟಿ ವೇಳೆ ರಾಜಕೀಯ ಚರ್ಚೆ ಆಗಿದೆಯಾ ಎಂಬ ಪ್ರಶ್ನೆ ಈಗ ಕೇಳಿಬರುತ್ತಿದೆ.
ವಿಶ್ವನಾಥ್: ಬೇರೆ ಬೇರೆ ಅಭಿವೃದ್ಧಿ ವಿಚಾರ, ರಾಜ್ಯದ ರಾಜಕಾರಣ, ಆರ್ಥಿಕ ನೀತಿಗಳ ಬಗ್ಗೆ ಚರ್ಚೆ ಆಗಿದೆ.
ವಿಸ್ತಾರ: ಬಿಜೆಪಿಯಲ್ಲಿ ಎಚ್. ವಿಶ್ವನಾಥ್ ಮೂಲೆಗುಂಪು ಆಗಿದ್ದಾರೆ. ಇಂತಹ ಸಂದರ್ಭದಲ್ಲಿ ಪುತ್ರನ ಭವಿಷ್ಯಕ್ಕಾಗಿ ಈ ಭೇಟಿ ಅಂತಿದಾರೆ ಕೆಲವರು.
ವಿಶ್ವನಾಥ್: ನಾನು ಯಾವ ಪುತ್ರನ ಭವಿಷ್ಯದ ಬಗ್ಗೆಯೂ ಯೋಚಿಸಿ ಹೋಗಿಲ್ಲ. ನಮ್ಮ ತಂದೆ ಎಂಪಿನಾ, ಮಂತ್ರಿನಾ? ಸಾಮಾನ್ಯ ರೈತರಾಗಿದ್ದರು. ಅವರ ಮಗನನ್ನು ಜನರು ಬೆಳಿಸಿಲ್ಲವಾ? ಜನ ಅದರ ತೀರ್ಮಾನ ಮಾಡುತ್ತಾರೆ.
ವಿಸ್ತಾರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಎಚ್. ವಿಶ್ವನಾಥ್ ಅವರನ್ನು ಸಂಪರ್ಕ ಮಾಡಿದ್ದಾರಂತೆ…
ವಿಶ್ವನಾಥ್: ಡಿಕೆ ಶಿವಕುಮಾರ್ ಅವರು ಕೆಂಪೇಗೌಡರ ಜಯಂತಿಗಾಗಿ ಹುಣಸೂರಿಗೆ ಬಂದಾಗ ನಾನೂ ಅವರು ಕಾಂಗ್ರೆಸ್ ಶಾಸಕ ಮಂಜುನಾಥ್ ಮನೆಗೆ ಊಟಕ್ಕೆ ಹೋಗಿದ್ವಿ. ಹಾಗಾಂತ ಡಿಕೆಶಿ ಜೊತೆ ಕಾಂಗ್ರೆಸ್‌ಗೆ ಹೋದೆ ಅನ್ನಲು ಆಗುತ್ತಾ?
ವಿಸ್ತಾರ: ಸಿದ್ದರಾಮಯ್ಯ ಅವರ ಜೊತೆಗಿನ ಮುನಿಸು ಕಡಿಮೆ ಆಯ್ತಾ? ಸಂಬಂಧ ಸುಧಾರಿಸಿದೆಯಾ?
ವಿಶ್ವನಾಥ್: ನಾನು ಸಿದ್ದರಾಮಯ್ಯ ಜೊತೆ ಮುನಿಸಿಕೊಂಡಿಲ್ಲ. ಸಿದ್ದರಾಮಯ್ಯ ಮೇಲೆ ದ್ವೇಷನೂ ಇಲ್ಲ ,ಕೋಪಾನು ಇಲ್ಲ. ಸಿದ್ದರಾಮಯ್ಯ ಒಬ್ಬರು ರಾಜ್ಯ ನಾಯಕ. ಮಾಜಿ ಸಿಎಂ. ಈಗ ವಿಪಕ್ಷ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಅವರ ಜೊತೆ ಯಾವುದೇ ಮುನಿಸಿಲ್ಲ, ಎಂತದ್ದೂ ಇಲ್ಲ.
ವಿಸ್ತಾರ: ಹಳ್ಳಿ ಹಕ್ಕಿ ಬಳಗ ಕಟ್ಟಿಕೊಂಡು ಕಾಂಗ್ರೆಸ್ ಸೇರುವ ಪ್ರಯತ್ನ ಮಾಡುತ್ತಿದೆ ಅಂತಾರಲ್ಲಾ..
ವಿಶ್ವನಾಥ್: ಅದು ಚರ್ಚೆ ಅಷ್ಟೇ, ಆ ರೀತಿಯ ಪ್ರಯತ್ನಗಳು ಸದ್ಯಕ್ಕೆ ಇಲ್ಲ.
ವಿಸ್ತಾರ: 2023ರ ಚುನಾವಣಾ ಸಂದರ್ಭದಲ್ಲಿ ವಿಶ್ವನಾಥ್ ನಡೆ ಕುತೂಹಲ ಮೂಡಿಸಿದೆ ಅಲ್ವಾ?
ವಿಶ್ವನಾಥ್: ರಾಜಕಾರಣದಲ್ಲಿ ಕುತೂಹಲ ಇರಬೇಕು. ರಾಜಕಾರಣದಲ್ಲಿ ಕುತೂಹಲ ಇರ್ತವೆ. ಬೇರೆ ಬೇರೆ ಅರ್ಥ ಕಲ್ಪಿಸಬಾರದು.
ವಿಸ್ತಾರ: 2023ರ ಚುನಾವಣೆಗೆ ದಾಳ ಉರುಳಿಸಲು ಸಿದ್ಧರಾಗಿದ್ದೀರಾ?
ವಿಶ್ವನಾಥ್: ಭಾರತದ ರಾಜಕಾರಣವೇ ಒಂದು ದಾಳ(ನಗು)
ಇದನ್ನೂ ಓದಿ | Gharwapsi politics | ಕಾಂಗ್ರೆಸ್‌ನಲ್ಲಿ ಶುರುವಾಯ್ತು ಘರ್ ವಾಪ್ಸಿ ಆಂದೋಲನ: ಖರ್ಗೆ ಭೇಟಿಯಾದ ಎಚ್. ವಿಶ್ವನಾಥ್