Site icon Vistara News

ಕೇಜ್ರಿವಾಲ್‌ ನೀಲಿಕಣ್ಣಿನ ಹುಡಗನಿಗೆ ಕೇಂದ್ರ ಮಂತ್ರಿ ಸ್ಥಾನ ಸುಲಭ ಸಾಧ್ಯವೇ?

ಬೆಂಗಳೂರು: ರಾಘವ್‌ ಚಡ್ಡಾ. ರಾಜ್ಯಸಭೆಯಲ್ಲಿ ಆಪ್ ಪಕ್ಷದ ಉಪನಾಯಕರಾಗಿರುವ ಇವರು, ಶುಕ್ರವಾರವಷ್ಟೇ ಬಿಜೆಪಿಗೆ ಸೇರ್ಪಡೆಯಾದರು. ಆಪ್‌ ಪಕ್ಷ ಕಟ್ಟುವ ನಿಟ್ಟಿನಲ್ಲಿ ಇವರದು ಪ್ರಮುಖ ಪಾತ್ರವಿದೆ. ರಾಜ್ಯಸಭೆಯಲ್ಲಿ ಆಪ್‌ ಪಕ್ಷದ ಉಪನಾಯಕರಾಗಿದ್ದ ರಾಘವ್‌, ‌ಇತ್ತೀಚೆಗೆ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದರು. ನಿರೀಕ್ಷೆಯಂತೆ ಶುಕ್ರವಾರ ಬಿಜೆಪಿ ಪಕ್ಷವನ್ನು ಆಪ್‌ ಪಕ್ಷದ ಇತರೆ 7 ಮಂದಿ ರಾಜ್ಯ ಸಭೆ ಸದಸ್ಯರೊಂದಿಗೆ ಬಿಜೆಪಿಗೆ ಪಾದಾರ್ಪಣೆ ಮಾಡಿದ್ದಾರೆ.


ಹಾಗೆ‌ ನೋಡಿದರೆ, ಆಮ್ ಆದ್ಮಿ ಪಕ್ಷದಲ್ಲಿ ಆರಂಭದ ದಿನಗಳಿಂದಲೂ ಪಕ್ಷ ಕಟ್ಟಲು ಮುಖ್ಯ ಪಾತ್ರ ವಹಿಸಿದ್ದ ರಾಘವ್ ಚಡ್ಡಾ, ಲಂಡನ್​​ನಲ್ಲಿ ಸಿಎ ಪದವಿ ಪಡೆದವರು. 23ನೇ ವಯಸ್ಸಿನಲ್ಲಿಯೇ ಅರವಿಂದ್ ಕೇಜ್ರಿವಾಲ್ ಅವರ ಪಕ್ಷ ಸೇರಿಕೊಂಡು ರಾಜಕೀಯಕ್ಕೆ ಎಂಟ್ರಿಯಾದರು. ಅಂದಿನಿಂದ 15 ವರ್ಷ ಆಪ್​​ನಲ್ಲಿಯೇ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ ರಾಘವ್ ಚಡ್ಡಾ ದೆಹಲಿ ಬಳಿಕ ಪಂಜಾಬ್​​ನಲ್ಲಿ ಆಮ್ ಆದ್ಮಿ ಪಕ್ಷ ನೆಲೆಯೂರಲು ಮುಖ್ಯಪಾತ್ರ ವಹಿಸಿದ್ದರು.


ಕೇಜ್ರಿವಾಲ್‌ರ ನೀಲಿಕಣ್ಣಿನ ಹುಡುಗ


ಅರವಿಂದ್ ಕೇಜ್ರಿವಾಲ್ ಅವರ ಅತ್ಯಾಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ರಾಘವ್ ಚಡ್ಡಾ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ನಿರೀಕ್ಷೆ ಹಲವರಿಗಿತ್ತು. ಆದರೆ, ರಾಘವ್ ಚಡ್ಡಾ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಯಿತು. ರಾಜ್ಯಸಭಾ ಉಪನಾಯಕನ ಸ್ಥಾನದಿಂದಲೂ ಅವರನ್ನು ವಜಾಗೊಳಿಸಲಾಯಿತು. ಅರವಿಂದ್ ಕೇಜ್ರಿವಾಲ್ ಜೈಲಿಗೆ ಹೋದ ನಂತರ ಪಕ್ಷದೊಳಗೆ ನಾನಾ ಬದಲಾವಣೆಗಳಾದವು. ಇದರಿಂದ ಬೇಸರಗೊಂಡಿದ್ದ ರಾಘವ್ ಚಡ್ಡಾ ಪಕ್ಷದೊಳಗೇ ಇದ್ದರೂ ಪಕ್ಷದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು.


ಕೇಜ್ರಿವಾಲ್ ಅವರೊಂದಿಗಿನ ಆಪ್ತ ಸಂಬಂಧದ ಕಾರಣಕ್ಕೆ ರಾಘವ್ ಚಡ್ಡಾ ಅವರನ್ನು ಕೇಜ್ರಿವಾಲ್​ರ “ನೀಲಿ ಕಣ್ಣಿನ ಹುಡುಗ” ಎಂದು ಕರೆಯಲಾಗುತ್ತಿತ್ತು. 2022ರಲ್ಲಿ ರಾಘವ್ ಪಂಜಾಬ್‌ನಿಂದ ರಾಜ್ಯಸಭೆ ಸಂಸದರಾದರು. 33ನೇ ವಯಸ್ಸಿನಲ್ಲಿ ಅವರು ರಾಜ್ಯಸಭೆಯ ಕಿರಿಯ ಸದಸ್ಯರಾಗಿ ಸಂಸತ್ ಪ್ರವೇಶಿಸಿದರು. 2023ರಲ್ಲಿ ಅವರನ್ನು ಸಂಜಯ್ ಸಿಂಗ್ ಬದಲಿಗೆ ರಾಜ್ಯಸಭೆಯಲ್ಲಿ ಎಎಪಿಯ ನಾಯಕರನ್ನಾಗಿ ನೇಮಿಸಲಾಯಿತು.


ಅರವಿಂದ್ ಕೇಜ್ರಿವಾಲ್ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರವೂ ಆಮ್ ಆದ್ಮಿ ಪಕ್ಷದಲ್ಲಿ ರಾಘವ್ ಚಡ್ಡಾ ಅವರನ್ನು ನಿರ್ಲಕ್ಷ್ಯ ಮಾಡಲಾಯಿತು. ರಾಜ್ಯಸಭಾ ಉಪನಾಯಕನ ಹುದ್ದೆಯಿಂದ ಅವರನ್ನು ವಜಾಗೊಳಿಸಿದ ನಂತರ ಪಕ್ಷದೊಳಗಿನ ಆಂತರಿಕ ಸಮರ ಎಲ್ಲರ ಎದುರು ಬಯಲಾಗಿತ್ತು. ಅದಕ್ಕೂ ಮೊದಲಿನಿಂದಲೂ ರಾಘವ್ ಚಡ್ಡಾ ಪಕ್ಷದ ಪ್ರಮುಖ ಕಾರ್ಯಕ್ರಮಗಳು ಮತ್ತು ಪ್ರಚಾರದಿಂದ ಗೈರುಹಾಜರಾಗಿದ್ದರು. ಪಂಜಾಬ್‌ನ ಉಸ್ತುವಾರಿ ಸ್ಥಾನದಿಂದಲೂ ಅವರನ್ನು ತೆಗೆದುಹಾಕಲಾಯಿತು. ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಬಂಧನದಂತಹ ನಿರ್ಣಾಯಕ ಸಮಯದಲ್ಲಿ ರಾಘವ್ ಪಕ್ಷವನ್ನು ಬೆಂಬಲಿಸಲಿಲ್ಲ ಎಂದು ಎಎಪಿ ನಾಯಕರು ಆರೋಪಿಸಿದರು. ಪಂಜಾಬ್ ಸರ್ಕಾರದ ವ್ಯವಹಾರಗಳಲ್ಲಿ ಅವರು ಅತಿಕ್ರಮಣ ಮಾಡಿದ್ದಾರೆ ಎಂಬ ಆರೋಪವೂ ಇತ್ತು.


ಇದೆಲ್ಲದರ ಪರಿಣಾಮ ಎಂಬಂತೆ ಇದೀಗ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸೇರುವ ಮುನ್ನ ಅವರು ಆಪ್‌ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಆದರೆ ಇದೀಗ ಅಲ್ಲಿ ಸಿದ್ದಾಂತಗಳೊಂದಿಗೆ ರಾಜಿ ಮಾಡಿಕೊಳ್ಳುವ ಗುಣ ಬೆಳೆದಿದೆ ಎಂದಿದ್ದಾರೆ. ಹಾಗಿದ್ದರೆ ಈಗ ತಾವು ಕಾಲಿಟ್ಟಿರುವ ಬಿಜೆಪಿಯಲ್ಲಿ ಸಿದ್ದಾಂತಗಳ ರಾಜಿ ಆಗುವುದಿಲ್ಲವೇ ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
ಹಾಗೆ ನೋಡಿದರೆ ಆಪ್‌ ಪಕ್ಷದಿಂದ ಪ್ರಶಾಂತ್‌ ಭೂಷಣ್‌, ಯೋಗೇಂದ್ರ ಯಾದವ್‌ , ಆಶಿತೋಷ್‌ ಮೊದಲಾದವರು ಹೊರ ಬಂದರು. ಆದರೆ ಅವರು ಯಾವುದೇ ಪಕ್ಷ ಸೇರಲಿಲ್ಲ, ತಮ್ಮ ಪಾಡಿಗೆ ತಾವು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಆದರೆ ಆಪ್‌ ಪಕ್ಷದಿಂದ ಹೊರ ಬಂದ ರಾಘವ್‌ ಚಡ್ಡಾ ಸೇರಿದಂತೆ ಒಂದು ವರ್ಗದ ನಾಯಕರು ಮಾತ್ರ ಬಿಜೆಪಿಗೆ ಸೇರ್ಪಡೆಯಾಗಿರುವುದು ಗಮನಾರ್ಹವಾಗಿದೆ.


ರಾಘವ್‌ ಚಡ್ಡಾ ಸೇರ್ಪಡೆ: ಬಿಜೆಪಿಗೆ ಲಾಭವೇ ?


ಆಪ್‌ ಪಕ್ಷ ಅಧಿಕಾರದಲ್ಲಿರುವ ಪಂಜಾಬ್‌ ನಲ್ಲಿ ಇದರ ಪ್ರಭಾವ ಬೀರದೇ ಇರದು. ಇದೀಗ ರಾಘವ್‌ ಚಡ್ಡಾ ಅವರೊಂದಿಗೆ ಬಿಜೆಪಿ ಸೇರಿರುವ ರಾಜ್ಯ ಸಭೆಯ ಸಂಸದರ ಪೈಕಿ ಸಂದೀಪ್‌ ಪಾಠಕ್‌ ಅವರು ಪ್ರಮುಖರು. ಚುನಾವಣಾ ತಂತ್ರ-ರಣತಂತ್ರ ರೂಪಿಸುವಲ್ಲಿ ಇವರ ಪಾತ್ರ ಮಹತ್ತರವಾದದ್ದು. ಪಂಜಾಬ್‌ ಸಿಎಂ ಕಚೇರಿ ನಿರ್ವಹಣೆಯಲ್ಲಿಯೂ ಇವರ ಪಾತ್ರ ಹಿರಿದು. ಅದನ್ನು ಹೊರತುಪಡಿಸಿದರೆ ಪರಿಣಿತಿ ಚಡ್ಡಾ ಅವರ ಪತಿ ರಾಘವ್‌ ಚಡ್ಡಾ ಕೂಡ ಬಿಜೆಪಿಗೆ ವರವಾಗಬಲ್ಲರು. ಆದರೆ ಇವರೊಂದಿಗೆ ಬಿಜೆಪಿ ಸೇರ್ಪಡೆಯಾಗಿರುವ ಇತರರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನಲಾಗುತ್ತಿದೆ.


ರಾಘವ್‌ ಚಡ್ಡಾ ಏಳು ಮಂದಿ ಸಂಸದರನ್ನು ತಮ್ಮೊಂದಿಗೆ ಕೇಸರಿ ಪಕ್ಷಕ್ಕೆ ಕರೆತಂದ ಹಿನ್ನೆಲೆಯಲ್ಲಿ ಅವರಿಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ಸ್ಥಾನವಕಾಶ ದೊರೆಯಬಹುದು. ಏಕೆಂದರೆ ಪ್ರಸ್ತುತ ರಾಘವ್‌ ಅವರ ರಾಜ್ಯಸಭೆ ಕಾಲಾವಧಿ ಇನ್ನೆರಡು ವರ್ಷವರೆಗೆ ಬಾಕಿ ಇದೆ. ಮತ್ತೆ ಅವರನ್ನು ರಾಜ್ಯಸಭೆಯಲ್ಲಿ ಸ್ಥಾನವಕಾಶ ಕಲ್ಪಿಸಬಹುದು. ಆದರೆ ಸದ್ಯಕ್ಕೆ ಆ ಸಾಧ್ಯತೆ ಕಡಿಮೆ ಎಂಬುದು ಬಿಜೆಪಿ ಮೂಲಗಳ ಅಭಿಪ್ರಾಯ.


ರಾಜ್ಯಸಭೆಯಲ್ಲಿ ಬಿಜೆಪಿಯ ಬಲ ಇದೀಗ 142ಕ್ಕೇರಿದಂತಾಗಿದೆ. ಮೂರನೇ ಎರಡರಷ್ಟು ಬಹುಮತಕ್ಕಾಗಿ ಬಿಜೆಪಿಗೆ ರಾಜ್ಯಸಭೆಯಲ್ಲಿ ಇನ್ನೂ 20 ಸದಸ್ಯರ ಬಲ ಅವಶ್ಯ.. ಇದರಲ್ಲಿ ಬಿಜೆಪಿ ಸಫಲವಾದರೆ ಲೋಕಸಭೆ ಮತ್ತು ರಾಜ್ಯಸಭೆ ಈ ಎರಡೂ ಸದನಗಳಲ್ಲಿ ಅಂದರೆ ಸಂಸತ್ತಿನ ಉಭಯ ಸದನಗಳಲ್ಲಿ ಯಾವುದೇ ವಿಧೇಯಕ ಪಾಸು ಮಾಡಿಕೊಳ್ಳುವುದು ಬಿಜೆಪಿ ಸುಲಭ ಸಾಧ್ಯವಾಗಲಿದೆ. ಸಂಸತ್ತಿನ ಮೇಲ್ಮನೆಯಲ್ಲಿ ಪ್ರಸ್ತುತ ವಿಪಕ್ಷಗಳ ಸ್ಥಾನ 113ರಷ್ಟಿದೆ. ಆದರೆ ರಾಜ್ಯಸಭೆಯಲ್ಲಿ ಕೊರತೆ ಇರುವ ಇನ್ನೂ 20 ಸದಸ್ಯರನ್ನು ಸೆಳೆಯುವುದು ಕೇಸರಿ ಪಕ್ಷಕ್ಕೆ ಅಷ್ಟು ಸುಲಭ ಸಾಧ್ಯವಲ್ಲ ಎಂದೂ ಹೇಳಲಾಗುತ್ತಿದೆ.


ಒಟ್ಟಾರೆ, ರಾಘವ್‌ ಚಡ್ಡಾ ಅವರ ಬಿಜೆಪಿ ಸೇರ್ಪಡೆ ಆಪ್‌ ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಮತ್ತು ಅವರ ತಂಡಕ್ಕೆ ದೊಡ್ಡ ಆಘಾತ ಎನ್ನುವುದರಲ್ಲಿ ಎರಡು ಮಾತಿಲ್ಲ.

Exit mobile version