ಮೈಸೂರು: ಮಳೆ ಬಂದರೆ ಹಾವುಗಳು ಎಲ್ಲಾದರೂ ಬೆಚ್ಚಗಿನ ಜಾಗವನ್ನು ಹುಡುಕಿಕೊಳ್ಳುತ್ತವೆ ಅಂತಾರೆ. ಮೈಸೂರಿನಲ್ಲಿ ತೋಳದ ಹಾವೊಂದು (wolf snake) ಮನೆಯ ಗೇಟಿನಲ್ಲಿರುವ ಅಂಚೆ ಪೆಟ್ಟಿಗೆಯೊಳಗೆ ಬೆಚ್ಚಗೆ ಆಶ್ರಯ ಪಡೆದು ಆತಂಕಕ್ಕೆ ಕಾರಣವಾಯಿತು.
ಅದು ಮೈಸೂರಿನ ರಾಮಕೃಷ್ಣ ನಗರದ ಐ ಬ್ಲಾಕ್‌ನ ಒಂದು ಮನೆ. ಆ ಮನೆಯ ಗೃಹಿಣಿ ಮನೆಯ ಗೇಟಿನಲ್ಲೇ ವಿನ್ಯಾಸಗೊಳಿಸಿರುವ ಪೋಸ್ಟ್ ಬಾಕ್ಸ್‌ನಲ್ಲಿ ಏನಾದರೂ ಪತ್ರ ಇದೆಯಾ ಎಂದು ನೋಡಲು ಬಾಗಿಲು ತೆರೆದು ಮೆಲ್ಲಗೆ ಕೈ ಹಾಕಿದರು. ಆದರೆ, ಅವರ ಕೈಗೆ ಸಿಕ್ಕಿದ್ದು ಪತ್ರವಲ್ಲ, ಏನೋ ತಣ್ಣಗಿನ ವಸ್ತು!
ಏನಪ್ಪಾ ಇದು ಎಂದು ಸರಿಯಾಗಿ ನೋಡಿದರೆ, ಒಳಗೆ ಇಟ್ಟಿದ್ದ ರಂಗೋಲಿ ಡಬ್ಬಿಯಲ್ಲಿ ಸಣ್ಣದೊಂದು ಹಾವು ಮಲಗಿತ್ತು. ಮೈಸೂರಲ್ಲಿ ಸಣ್ಣಗೆ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಅದು ಅಲ್ಲಿ ಬಂದು ಮಲಗಿದೆ ಅನಿಸುತ್ತದೆ.
ಮನೆಯವರು ಕೂಡಲೇ ಮೈಸೂರಿನ ಉರಗ ರಕ್ಷಕ ಉಮೇಶ್ ಅವರಿಗೆ ಕರೆ ಮಾಡಿ ಕರೆಸಿಕೊಂಡರು. ಉಮೇಶ್ ಅವರು ರಂಗೋಲಿ ಡಬ್ಬಿಯನ್ನು ಕೆಳಗೆ ಬೀಳಿಸಿ ಅದರಿಂದ ಹೊರಬಿದ್ದ ಹಾವನ್ನು ಒಂದು ಬಾಕ್ಸ್‌ನಲ್ಲಿ ತುಂಬಿಕೊಂಡರು.
ಏನಿದು ತೋಳ ಹಾವು?
ಈ ಹಾವಿನ ಹೆಸರು ತೋಳದ ಹಾವು ಎಂದಾದರೂ ಅದು ಅಪಾಯಕಾರಿಯಲ್ಲದ ವಿಷರಹಿತ ಹಾವು. ಸಾಧು ಸ್ವಭಾವದ ಸಣ್ಣ ಗಾತ್ರದ ಈ ಹಾವುಗಳು ಹೆಚ್ಚು ಮನೆ ಹತ್ತಿರವೇ ಇರುತ್ತವೆ. ಹಲ್ಲಿ, ಕಪ್ಪೆಗಳನ್ನೆಲ್ಲ ತಿಂದು ಬದುಕುತ್ತವೆ. ಕೆಲವರು ಇದನ್ನು ಕೈಯಲ್ಲೂ ಹಿಡಿಯುತ್ತಾರೆ.
ಇದನ್ನೂ ಓದಿ | ಮೈಸೂರು ರಾಜವಂಶಸ್ಥರ ಸರಳತೆಗೆ ಜನತೆಯ ಬಹುಪರಾಕ್