Site icon Vistara News

Hoskote News: ಹೊಸಕೋಟೆಯಲ್ಲಿ ದೇವಸ್ಥಾನ ಪ್ರಸಾದ ಸೇವಿಸಿ ಮಹಿಳೆ ಸಾವು, ನೂರಾರು ಮಂದಿ ಅಸ್ವಸ್ಥ

Prasadam

ಹೊಸಕೋಟೆ: ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ನೂರಾರು ಮಂದಿ ಅಸ್ವಸ್ಥಗೊಂಡು, ಒಬ್ಬ ಮಹಿಳೆ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ (Hoskote News) ನಡೆದಿದೆ. ಅವಲಹಳ್ಳಿ, ನಂದಗುಡಿ, ಹಾಗೂ ಹೊಸಕೋಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಸಾದ ಸೇವಿಸಿದ ಬಳಿಕ ಹಲವರು ಅಸ್ವಸ್ಥಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಹನುಮ ಜಯಂತಿ ಪ್ರಯುಕ್ತ ಹೊಸಕೋಟೆಯ ವೆಂಕಟರಮಣಸ್ವಾಮಿ, ಊರುಬಾಗಿಲು ಆಂಜನೇಯ ಸ್ವಾಮಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಭಾನುವಾರ ಸಂಜೆ ನೂರಾರು ಭಕ್ತರು ಪುಳಿಯೋಗರೆ, ಪಾಯಸ, ಲಡ್ಡು ಪ್ರಸಾದ ಸೇವಿಸಿದ್ದರು. ಈ ಪೈಕಿ ಹಲವರು ರಾತ್ರಿ ಅಸ್ವಸ್ಥಗೊಂಡಿದ್ದಾರೆ.

ಹೊಸಕೋಟೆಯ ಕಾವೇರಿ ನಗರದ ನಿವಾಸಿ ಸಿದ್ದಗಂಗಮ್ಮ (60) ಎಂಬುವವರ ಸ್ಥಿತಿ ಗಂಭೀರವಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಿಲಿಕಾನ್‌ ಸಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಹಿಳೆಗೆ ಪತಿ ಶಿವಣ್ಣ ದೇವಸ್ಥಾನದಲ್ಲಿ ನೀಡಿದ್ದ ಲಡ್ಡು ಪ್ರಸಾದ ತಂದುಕೊಟ್ಟಿದ್ದರು. ಅದನ್ನು ತಿಂದ ನಂತರ ಬೆಳಗ್ಗೆ ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ಇವರಂತೆ 35ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ | Murder Case: ಆಕೆಗಾಗಿಯೇ ಲಿಂಗ ಬದಲಾಯಿಸಿಕೊಂಡರೂ ಸಿಗದವಳನ್ನು ಜೀವಂತ ಸುಟ್ಟು ಕೊಂದ ಪಾಪಿ!

ಮಹಿಳೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಪ್ರಸಾದ ಸೇವಿಸಿದ ಬಳಿಕ ಹಲವರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಆಸ್ಪತ್ರೆಗಳಿಗೆ ತೆರಳಿ ತಾಲೂಕು ವೈದ್ಯಾಧಿಕಾರಿ ಮಾಹಿತಿ ಪಡೆಯುತ್ತಿದ್ದಾರೆ. ಪ್ರಸಾದದ ಮಾದರಿಯನ್ನು ಪರೀಕ್ಷೆ ಮಾಡಿದ ನಂತರ ಕಾರಣ ತಿಳಿದುಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ: ಶಾಸಕ ಶರತ್ ಬಚ್ಚೇಗೌಡ

ಪ್ರಕರಣದ ಬಗ್ಗೆ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರು ಪ್ರತಿಕ್ರಿಯಿಸಿ, ನಾವು ಇಲ್ಲಿ ಯಾರ ಮೇಲೂ ಬೆರಳು ಮಾಡಿ ತೋರಿಸಲ್ಲ. ನಮ್ಮ ಗಮನ ಈಗ ಅಸ್ವಸ್ಥರಾದ ಜನರಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡುವುದಾಗಿದೆ. ಆರು ಆಸ್ಪತ್ರೆಗಳಲ್ಲಿ 135 ಜನರು ದಾಖಲಾಗಿದ್ದಾರೆ. ಆದರೆ ತಾಲೂಕಿನ ಪೂರ್ತಿ ಈ ರೀತಿ ಆಗಿಲ್ಲ. ದೇವಸ್ಥಾನ ಪ್ರಸಾದದಿಂದ ಈ ರೀತಿ ಆಗಿದೆ ಅಂತ ಹೇಳೋಕೆ ಆಗಲ್ಲ. ಆತಂಕ ಪಡುವ ಅಗತ್ಯವಿಲ್ಲ, ಇದಕ್ಕೆ ನಿಖರ ಕಾರಣ ಏನು ಅಂತ ತಿಳಿದುಕೊಳ್ಳಲು ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Assault Case : ಕುಡುಕರಿಗೆ No Entry ಎಂದಿದ್ದಕ್ಕೆ ಮೆಟ್ರೋ ಸಿಬ್ಬಂದಿಗೆ ಹಲ್ಲೆ

ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನಿಗಾ ವಹಿಸಲು ಹೇಳಲಾಗಿದೆ. ನೂರಕ್ಕೆ ನೂರರಷ್ಟು ತನಿಖೆ ಮಾಡುತ್ತೇವೆ, ಇದರ ಹಿಂದಿನ ಕಾರಣ ಕಲೆ ಹಾಕುತ್ತೇವೆ. ಸದ್ಯ ಹೊಸಕೋಟೆಯಲ್ಲಿರುವ ದೇವಸ್ಥಾನಗಳಲ್ಲಿ ದರ್ಶನ ಹೊರತುಪಡಿಸಿ, ತೀರ್ಥ ಪ್ರಸಾದ ನೀಡದಿರಲು ಸೂಚನೆ ನೀಡಿದ್ದೇವೆ. ಸದ್ಯ ಮೃತಪಟ್ಟ ಮಹಿಳೆ ಎಲ್ಲಿ ಪ್ರಸಾದ ಸೇವನೆ ಮಾಡಿದ್ದರು ಎಂಬುವುದರ ಮೇಲೆ ತನಿಖೆ ಆರಂಭ ಆಗುತ್ತದೆ. ಇನ್ನೂ 35 ಜನರ ಸ್ಥಿತಿ ಗಂಭೀರವಾಗಿದೆ, ಆದರೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.

Exit mobile version