Site icon Vistara News

ಡಿಕೆಶಿ ಭೇಟಿ ಮಾಡಿಸಿ ಪ್ಲೀಸ್‌ ಎಂದು ಕಣ್ಣೀರು ಹಾಕುತ್ತಿರುವ ಮಧ್ಯಪ್ರದೇಶದ ಮಹಿಳೆ

DK SHIVAKUMAR

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ ಮಂಗಳವಾರ ವಿಶೇಷ ಘಟನೆಯೊಂದು ನಡೆಯಿತು. ಆಗಸ್ಟ್‌ ೧೫ರಂದು ಕಾಂಗ್ರೆಸ್‌ ಬೆಂಗಳೂರಿನಲ್ಲಿ ಆಯೋಜಿಸಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿ ಚರ್ಚೆಗಾಗಿ ಸಭೆಯೊಂದು ಆಯೋಜನೆಗೊಂಡಿತ್ತು.

ಈ ವೇಳೆ ಕೆಪಿಸಿಸಿ ಕಚೇರಿಯ ಬಾಗಿಲಲ್ಲಿ ಮಹಿಳೆಯೊಬ್ಬರು ಅಳುತ್ತಿದ್ದರು. ಅವರ ಬೇಡಿಕೆ ಒಂದೇ ಆಗಿತ್ತು. ದಯವಿಟ್ಟು ಡಿ.ಕೆ. ಶಿವಕುಮಾರ್‌ ಅವರ ಜತೆ ಭೇಟಿ ಮಾಡಿಸಿ ಪ್ಲೀಸ್‌ ಎಂದು ಅವರು ಮನವಿ ಮಾಡುತ್ತಿದ್ದರು.

ಅವರು ಬಾಗಿಲಲ್ಲಿ ನಿಂತು ಕಂಡವರನ್ನೆಲ್ಲ ʻಡಿಕೆ ಶಿವಕುಮಾರ್‌ ಅವರ ಜತೆ ಭೇಟಿ ಮಾಡಿಸಿʼ ಎಂದು ಗೋಗರೆಯುತ್ತಾ ಕಣ್ಣೀರು ಹಾಕುತ್ತಿದ್ದರು. ಅತ್ತು ಅತ್ತು ಅವರ ಕಣ್ಣುಗಳು ಊದಿಕೊಂಡಿದ್ದವು.
ಆದರೆ, ಭೇಟಿಯ ಕಾರಣವನ್ನು ಈ ಮಹಿಳೆ ತಿಳಿಸಿರಲಿಲ್ಲ. ಹೀಗಾಗಿ ಯಾರೂ ಕೂಡಾ ಡಿ.ಕೆ.ಶಿ ಅವರಿಗೆ ವಿಷಯ ತಿಳಿಸುವ ಧೈರ್ಯ ಮಾಡಿರಲಿಲ್ಲ.

ಈ ನಡುವೆ ಸಭೆ ಮುಗಿದ ಬಳಿಕ ಡಿ.ಕೆ. ಶಿವಕುಮಾರ್‌ ಅವರ ಭೇಟಿ ಮಾಡಿಸುತ್ತೇವೆ ಎಂದು ಭರವಸೆ ನೀಡಿ ಆಕೆಯನ್ನು ಒಂದು ಕೋಣೆಯಲ್ಲಿ ಕೂರಿಸಲಾಯಿತು. ಕೊನೆಗೆ ಮಹಮ್ಮದ್‌ ನಲಪಾಡ್‌ ಅವರು ಕೂಡಾ ಬಂದು ಸಮಾಧಾನ ಹೇಳಿದರು.

ಡಿ.ಕೆ. ಶಿವಕುಮಾರ್‌ ಅವರಿಗೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ. ಮಹಿಳೆ ಯಾವುದೋ ಸಮಸ್ಯೆ ಎದುರಿಸುತ್ತಿದ್ದು, ಅದಕ್ಕೆ ಡಿ.ಕೆ.ಶಿ ಅವರಿಂದ ಪರಿಹಾರ ದೊರೆಯಬಹುದು ಎಂಬ ಆಸೆಯಿಂದ ಆ ಮಹಿಳೆ ಇಲ್ಲಿಗೆ ಬಂದಿರಬಹುದು ಎಂದು ಹೇಳಲಾಗುತ್ತಿದೆ.

Exit mobile version