Site icon Vistara News

Free Bus Service : 11 ತಿಂಗಳ ಮಗುವನ್ನು ಬಿಟ್ಟು ಪ್ರಿಯಕರನ ಬಳಿ ಓಡಿ ಬಂದ ಮಹಿಳೆ, ಇದಕ್ಕಿದೆ ಫ್ರೀ ಬಸ್‌ ಕನೆಕ್ಷನ್‌!

KSRTC love story

#image_title

ಪುತ್ತೂರು: ಮಹಿಳೆಯೊಬ್ಬರು ತನ್ನ 11 ತಿಂಗಳ ಮಗುವನ್ನು ತವರು ಮನೆಯಲ್ಲಿ ಬಿಟ್ಟು ನೂರಾರು ಕಿಲೋಮೀಟರ್‌ ಪ್ರಯಾಣಿಸಿ ತನ್ನ ಪ್ರಿಯಕರನನ್ನು (Love case) ಸೇರಿಕೊಂಡಿದ್ದಾಳೆ. ಇದೀಗ ಅವರಿಬ್ಬರು ಜತೆಯಾಗಿ ಪರಾಗಿಯಾಗಿದ್ದಾರೆ. ಅಂದ ಹಾಗೆ ಈ ಪರಾರಿ ಪ್ರಕರಣಕ್ಕೂ ಕರ್ನಾಟಕ ಸರ್ಕಾರ ಆರಂಭ ಮಾಡಿರುವ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಗೂ (Free Bus service) ಹತ್ತಿರದ ಕನೆಕ್ಷನ್‌ ಇದೆ ಎಂದರೆ ನೀವು ನಂಬಲೇಬೇಕು!

ಅಂದ ಹಾಗೆ ಇದು ಹುಬ್ಬಳ್ಳಿ ಟು ಪುತ್ತೂರು ಲವ್‌ ಸ್ಟೋರಿ! ಹುಬ್ಬಳ್ಳಿಯಲ್ಲಿರುವ ತನ್ನ ತವರು ಮನೆಯಲ್ಲಿ ಮಗುವನ್ನು ಬಿಟ್ಟ ಆ ಮಹಿಳೆ ಅಲ್ಲಿಂದ ನಾಪತ್ತೆಯಾಗಿದ್ದರು. ಆಕೆ ನೇರವಾಗಿ ಪುತ್ತೂರಿಗೇ ಬಂದಿರುತ್ತಾರೆ ಎಂಬ ಗುಮಾನಿಯೊಂದಿಗೆ ಮನೆಯವರು ರಾತ್ರೋರಾತ್ರಿ ಪುತ್ತೂರಿಗೆ ಧಾವಿಸಿದ್ದರು. ಅವರು ಪುತ್ತೂರಿನ ಕೋಡಿಂಬಾಡಿಗೆ ಬಂದು ಹುಡುಕಾಡಿದಾಗ ಅವರ ಸಂಶಯ ನಿಜವಾಗಿತ್ತು. ಯಾರು ಆಕೆಯ ಪ್ರಿಯಕರ ಎಂದು ಅವರೆಲ್ಲ ನಂಬಿದ್ದರೋ ಅವನೂ ನಾಪತ್ತೆಯಾಗಿದ್ದ. ಜೂನ್‌ 13ರ ರಾತ್ರಿ ಪುತ್ತೂರಿಗೆ ಬಂದು ಹುಡುಕಾಡಿದ ಅವರು ಬುಧವಾರ ಪೊಲೀಸ್‌ ಠಾಣೆಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ಅದು ಸರಿ, ಇದಕ್ಕೂ ಫ್ರೀ ಬಸ್‌ಗೂ ಏನು ಸಂಬಂಧ ಎನ್ನುವ ಕುತೂಹಲವೇ? ಮುಂದೆ ಓದಿ.

ಹುಬ್ಬಳ್ಳಿಯ ಮಹಿಳೆಯೊಬ್ಬರು ಅದೇ ಊರಿನ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆ ಹುಡುಗ ಪುತ್ತೂರಿನ ಕೋಡಿಂಬಾಡಿ ಭಾಗದಲ್ಲಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ಮನೆಯವರಿಗೆ ಮೊದಲೇ ಇತ್ತು. ಎಷ್ಟು ಬುದ್ಧಿ ಹೇಳಿದರೂ ಆಕೆ ಆತನ ಜತೆಗಿನ ಮೊಬೈಲ್‌ ಸಂಪರ್ಕವನ್ನು ತ್ಯಜಿಸಲು ಒಪ್ಪಿರಲಿಲ್ಲ.

ಈ ನಡುವೆ, ತವರು ಮನೆಯಲ್ಲಿದ್ದ ಆಕೆ ದಿಢೀರನೆ ತನ್ನ ಮಗುವನ್ನು ತೊರೆದು ನಾಪತ್ತೆಯಾಗಿದ್ದಳು. ಫೋನ್ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಆಕೆ ತಪ್ಪಿಸಿಕೊಂಡು ಆತನ ಬಳಿಗೆ ಹೋಗಿರಬಹುದು ಎಂದು ಭಾವಿಸಿ ಆಕೆಯ ತವರು ಮನೆಯವರು ಪುತ್ತೂರಿಗೆ ಬಂದಿದ್ದಾರೆ.

ಮನೆಯವರು ಜೂನ್‌ 13ರಂದು ರಾತ್ರಿ ಸುಮಾರು 11 ಗಂಟೆಯ ವೇಳೆ ಕೋಡಿಂಬಾಡಿಗೆ ಬಂದಿದ್ದಾರೆ. ಪರಿಚಯವಿಲ್ಲದ ಜನರು ವ್ಯಕ್ತಿಯೋರ್ವನನ್ನು ಹುಡುಕಾಟ ನಡೆಸುತ್ತಿದ್ದಾರೆ ಎಂಬ ವಿಚಾರ ತಿಳಿದ ಕೋಡಿಂಬಾಡಿ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರ್ ಅವರು ಅವರಿಂದ ಮಾಹಿತಿ ಪಡೆದುಕೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ನೀಡಿದ ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಪೊಲಿಸರು ಬಂದಿದ್ದು ಪೊಲೀಸರು ಅವರ ಜೊತೆ ಹುಡುಕಾಟ ಆರಂಭಿಸಿದ್ದಾರೆ. ಆದರೆ ಕೋಡಿಂಬಾಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಆತ ಅಲ್ಲಿಂದ ಪರಾರಿಯಾಗಿದ್ದ. ಹುಡುಕಾಟ ನಡೆಸಿದ ಅವರು ಕೊನೆಗೆ ಪುತ್ತೂರಿಗೆ ಬಂದು ನಗರ ಠಾಣೆಯಲ್ಲಿ ಸೇರಿಕೊಂಡಿದ್ದರು. ಬಳಿಕ ಪೊಲೀಸರು ಟವರ್ ಲೊಕೇಶನ್ ಪತ್ತೆ ಮಾಡಿದಾಗ ಅವರಿಬ್ಬರೂ ಸಿದ್ಧಕಟ್ಟೆಯಲ್ಲಿರುವುದಾಗಿ ಮಾಹಿತಿ ಲಭ್ಯವಾಗಿದ್ದು ಸಿದ್ಧಕಟ್ಟೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಪುತ್ತೂರಿನ ಕೋಡಿಂಬಾಡಿಯಲ್ಲಿ ಹುಡುಕಾಟ

ಗ್ರಾಪಂ ಸದಸ್ಯನ ಕಾಳಜಿಗೆ ಪ್ರಶಂಸೆ

ಪರವೂರಿಂದ ಮಗಳನ್ನು ಹುಡುಕಿಕೊಂಡು ಬಂದ ಕುಟುಂಬಸ್ಥರಿಗೆ ತಕ್ಷಣಕ್ಕೆ ನೆರವಿಗೆ ಸಿಕ್ಕಿದ್ದು ಕೋಡಿಂಬಾಡಿ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರ್. ತಡ ರಾತ್ರಿ ಯಾರೂ ಇಲ್ಲದ ವೇಳೆ ಊರು ಕೇರಿ ಗೊತ್ತಿಲ್ಲದ ಆ ಕುಟುಂಬಕ್ಕೆ ಗ್ರಾಪಂ ಸದಸ್ಯ ನೆರವಾಗಿದ್ದಾರೆ. ನಾಪತ್ತೆಯಾಗಿದ್ದ ಮಗಳನ್ನು ಹುಡುಕುವಲ್ಲಿ ಸಹಕಾರ ನೀಡಿದ್ದಲ್ಲದೆ ಪೊಲೀಸರನ್ನು ಕರೆಸಿ ಕುಟುಂಬಕ್ಕೆ ಸಂಪೂರ್ಣ ನೆರವು ನೀಡಿದ್ದು ಹುಬ್ಬಳ್ಳಿಯಿಂದ ಬಂದ ಕುಟುಂಬ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರ್ ಅವರ ಸಹಾಯಕ್ಕೆ ಧನ್ಯವಾದ ಹೇಳಿದೆ. ಯುವಕ ಮತ್ತು ಮಹಿಳೆಯನ್ನು ಪತ್ತೆ ಹಚ್ಚುವ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.

ಉಚಿತ ಬಸ್ಸಿನಲ್ಲಿ ಬಂದಿದ್ದಳು

ಅಂದಹಾಗೆ, ಈ ಲವ್‌ ಕೇಸಿಗೂ ರಾಜ್ಯ ಸರ್ಕಾರದ ಉಚಿತ ಬಸ್ ಪ್ರಯಾಣ ಅವಕಾಶಕ್ಕೂ ಏನು ಸಂಬಂಧ ಎನ್ನುವ ವಿಚಾರವನ್ನು ಈಗ ಹೇಳುತ್ತೇವೆ ಕೇಳಿ..

ನಿಜವೆಂದರೆ, ಯುವಕನ ಜತೆಗೆ ಆಕೆಗೆ ಇರುವ ಸಂಬಂಧವನ್ನು ತಿಳಿದ ಮನೆಯವರು ಆಕೆಗೆ ಒಂದು ರೀತಿಯ ದಿಗ್ಬಂಧನವನ್ನೇ ವಿಧಿಸಿದ್ದರು. ಆಕೆಯನ್ನು ಎಲ್ಲಿಗೂ ಹೋಗಲು ಬಿಡುತ್ತಿರಲಿಲ್ಲ. ಆಕೆಯ ಕೈಗೆ ಹಣ ಸಿಗಲು ಬಿಡುತ್ತಿರಲಿಲ್ಲ. ಮೊಬೈಲ್‌ ಕೂಡಾ ದೂರ ಇಟ್ಟಿದ್ದರು.

ಈ ನಡುವೆ ಆಕೆಗೆ ಹೇಗೋ ಮೊಬೈಲ್‌ ಸಿಕ್ಕಿ ಆಕೆ ಅವನಿಗೆ ಕರೆ ಮಾಡಿದ್ದಾಳೆ. ಅವನು ನೀನು ಪುತ್ತೂರಿಗೆ ಬಂದು ಬಿಡು ಎಂದು ಹೇಳಿದ್ದಾನೆ. ಆದರೆ, ಕೈಯಲ್ಲಿ ನಯಾ ಪೈಸೆ ಇಲ್ಲ ಎಂದು ಆಕೆ ಗೋಗರೆದಿದ್ದಾಳೆ. ಆಗ ಆ ಯುವಕ, ನೀನು ಹೇಗಾದರೂ ಮಾಡಿ ಮನೆಯಿಂದ ಹೊರಗೆ ಬಂದು ಹುಬ್ಬಳ್ಳಿ ಬಸ್‌ ನಿಲ್ದಾಣಕ್ಕೆ ಬಾ. ಅಲ್ಲಿಂದ ಪುತ್ತೂರಿನ ಕಡೆಗೆ ಬಸ್ಸಿದೆ. ಒಂದು ಆಧಾರ್‌ ಕಾರ್ಡ್‌ ಕೈಯಲ್ಲಿ ಇರಲಿ. ಈಗ ಉಚಿತ ಪ್ರಯಾಣ ಇರುವುದರಿಂದ ನೀನು ಯಾವುದೇ ಚಿಂತೆ ಇಲ್ಲದೆ ಬರಬಹುದು ಎಂದಿದ್ದ ಎನ್ನಲಾಗಿದೆ. ಹೀಗಾಗಿ ಮಹಿಳೆ ಹುಬ್ಬಳ್ಳಿಯಿಂದ ಪುತ್ತೂರು ತನಕವೂ ಉಚಿತವಾಗಿಯೇ ಪ್ರಯಣ ಬೆಳೆಸಿದ್ದಳು ಎನ್ನಲಾಗಿದೆ.

ಫ್ರೀ ಬಸ್ಸಿದೆ ಬಾ ಎಂದು ಆತ ಹೇಳಿದ್ದರ ಬಗ್ಗೆ ನಮಗೆ ಮಾಹಿತಿ ಇತ್ತು. ಆದರೆ, ನಾವು ಆಕೆಯನ್ನು ಸಮಾಧಾನ ಮಾಡಿದ್ದೆವು. ಹಾಗೆಲ್ಲ ಹೋಗಬೇಡ ಎಂದು ಮನವಿ ಮಾಡಿದ್ದೆವು. ಆದರೆ ಆಕೆ ಅಷ್ಟು ಬೇಗ ನಮ್ಮ ಕಣ್ಣು ತಪ್ಪಿಸಿ ಬರುತ್ತಾಳೆ ಎಂದು ನಾವು ಗ್ರಹಿಸಿಯೇ ಇರಲಿಲ್ಲ ಎಂದು ಮಹಿಳೆಯ ತಾಯಿ ಕಣ್ಣೀರು ಹಾಕುತ್ತಿದ್ದರು.

ಇದನ್ನೂ ಓದಿ: Love Failure: ಇದೆಂಥ ಪ್ರೇಮ? ಮನೆಯಲ್ಲಿ ಒಪ್ಪದ್ದಕ್ಕೆ ವಿಷ ಕುಡಿದು ಸ್ಲೀಪರ್ ಕೋಚ್ ಬಸ್ಸಲ್ಲಿ ಮಲಗಿದರು!

Exit mobile version