Site icon Vistara News

ಆಪ್ತ ಸ್ನೇಹಿತೆಯ ಮನೆಯಿಂದಲೇ 10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು, ನಂಬಿಕೆ ಇಟ್ಟು ತೋರಿಸಿದ್ದೇ ತಪ್ಪಾಯ್ತು!

Geetha

ಬೆಂಗಳೂರು: ಈ ಕಾಲದಲ್ಲಿ ಯಾರನ್ನು ನಂಬುವುದು? ಯಾರನ್ನು ಬಿಡುವುದು? ಹೀಗೆ ತುಂಬಾ ಸಲ ಮಾತನಾಡಿಕೊಳ್ಳುತ್ತೇವೆ. ಇದಕ್ಕೆ ಪೂರಕವಾದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಅವರಿಬ್ಬರೂ ಆಪ್ತ ಸ್ನೇಹಿತೆಯರು. ಮನೆಗೆ ಬಂದಿದ್ದ ಗೆಳತಿಗೆ ತನ್ನ ಚಿನ್ನಾಭರಣಗಳನ್ನೆಲ್ಲ ತೋರಿಸಿದಳು. ಮರುದಿನ ಬೆಳಗ್ಗೆ ಎದ್ದು ನೋಡಿದರೆ ಗೆಳತಿಯೂ ಇಲ್ಲ, ಚಿನ್ನಾಭರಣವೂ ಇಲ್ಲ!

ಹೀಗೊಂದು ಘಟನೆ ನಡೆದಿರುವುದು ಬೆಂಗಳೂರಿನ ವಿದ್ಯಾರಣ್ಯ ಪುರದಲ್ಲಿ, ಲಕ್ಷ್ಮಿ ಎಂಬವರ ಮನೆಯಲ್ಲಿ. ಕದ್ದುಕೊಂಡು ಹೋಗಿರುವುದು ಅವಳದೇ ಸ್ನೇಹಿತೆ ಗೀತಾ!

ಇತ್ತೀಚೆಗೆ ಲಕ್ಷ್ಮಿ ಹೊಸ ಚಿನ್ನಾಭರಣವನ್ನ ಕೊಂಡುಕೊಂಡಿದ್ದರು. ಹೀಗಾಗಿ ಹೊಸ ಒಡವೆ ಡಿಸೈನ್ ನೋಡಬೇಕೆಂದು ಹೇಳಿಕೊಂಡಿದ್ದಳು ಗೀತಾ. ಮನೆಗೆ ಬಾ ಎಂದು ಲಕ್ಷ್ಮಿಯೂ ಕರೆದಿದ್ದಳು. ಆವತ್ತು ಗೀತಾ ಲಕ್ಷ್ಮಿಯ ಮನೆಗೆ ಬಂದಿದ್ದಳು. ಮನೆಗೆ ಬಂದ ಗೆಳತಿಯನ್ನು ಸಹಜವಾಗಿ ಇವತ್ತು ಇದ್ದು ನಾಳೆ ಹೋಗು ಅಂದಿದ್ದಾರೆ ಲಕ್ಷ್ಮಿ. ರಾತ್ರಿ ಮಾತನಾಡುತ್ತಾ ಮಾತನಾಡುತ್ತಾ ಸ್ನೇಹಿತೆ ಎಂಬ ಕಾರಣಕ್ಕೆ ತನ್ನ ಮನೆಯಲ್ಲಿದ್ದ ಅಷ್ಟೂ ಚಿನ್ನಾಭರಣವನ್ನ ಗೀತಾಳ ಮುಂದಿಟ್ಟಿದ್ದಾರೆ ಲಕ್ಷ್ಮಿ.

ಅಷ್ಟೆಲ್ಲ ಒಡವೆಗಳನ್ನ ನೋಡುತ್ತಿದ್ದಂತೆಯೇ ಅದನ್ನು ಲಪಟಾಯಿಸುವ ಸಂಚು ರೂಪಿಸಿದ್ದಳು ಗೀತಾ. ರಾತ್ರಿ ವೇಳೆ ಕಳ್ಳತನ ಮಾಡಿ ಪರಾರಿಯಾಗಿದ್ದಳು. ಮರು ದಿನ ಬೆಳಗ್ಗೆ ಎದ್ದು ನೋಡಿದರೆ ಗೀತಾನೂ ಇಲ್ಲ. ಚಿನ್ನಾನೂ ಇಲ್ಲ!

ಒಡವೆ ಹಾಗು ಗೀತಾ ರಾತ್ರೋರಾತ್ರಿ ಪರಾರಿಯಾದ ಬಗ್ಗೆ ಲಕ್ಷ್ಮಿ ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯ ಜಾಡು ಹಿಡಿದ ಪೊಲೀಸರು ಗೀತಾಳನ್ನ ಮೈಸೂರಿನಲ್ಲಿ ಬಂಧಿಸಿ 10 ಲಕ್ಷ ಮೌಲ್ಯದ 216 ಗ್ರಾಂ ಚಿನ್ನಾಭವರಣವನ್ನು ವಶಕ್ಕೆ ಪಡೆದಿದ್ದಾರೆ.

ಹಣಕಾಸಿನ ತೊಂದರೆಯಿತ್ತು. ಹೀಗಾಗಿ ಕಳ್ಳತನಕ್ಕೆ ಮುಂದಾಗಿರುವುದಾಗಿ ಗೀತಾ ಹೇಳಿಕೊಂಡಿದ್ದಾಳೆ. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ‌.

ಇದನ್ನೂ ಓದಿ| sunday thieves! | ಪ್ರತಿ ಸಂಡೇ ಗ್ರಾಹಕರ ಸೋಗಲ್ಲಿಅಂಗಡಿಗೆ ಹೋಗಿ ಮೊಬೈಲ್‌ ಕಳವು ಮಾಡ್ತಿದ್ದ ಬಾಲಾರೋಪಿಗಳ ಸೆರೆ

Exit mobile version