ಚಿಕ್ಕೋಡಿ: ಗಂಡನ ಮನೆಯಲ್ಲಿ ಚಿನ್ನಾಭರಣ, ನಗದು ಕದ್ದು ತವರು ಮನೆಗೆ ಕಳುಹಿಸಿ ಕಳವಿನ ಕಥೆ ಹೆಣೆದ ಸೊಸೆಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಘಟಪ್ರಭಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಆಗಸ್ಟ್ 18ರಂದು ಮನೆಯಲ್ಲಿದ್ದ 18 ತೊಲೆ ಚಿನ್ನಾಭರಣ, 1 ಲಕ್ಷ ರೂ. ನಗದು ಕಳವು ನಡೆದಿತ್ತು. ಈ ಬಗ್ಗೆ ಮನೆಯ ಸೊಸೆ ಮತ್ತು ಮಾವ ಬಂದು ಘಟಪ್ರಭಾ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರಿಗೆ ಇದರಲ್ಲಿ ಹೊರಗಿನವರಿಗಿಂತ ಒಳಗಿನವರ ಕೈವಾಡವೇ ಹೆಚ್ಚಿದೆ ಎನ್ನುವ ಸಂಶಯ ಬಂದಿತ್ತು. ಯಾಕೆಂದರೆ, ಮನೆಯೊಳಗೆ ಕಳವು ನಡೆದ ಬಗ್ಗೆ ದೊಡ್ಡ ಕುರುಹುಗಳು ಏನೂ ಇರಲಿಲ್ಲ.
ಸೊಸೆಯ ವಿಚಾರಣೆ ನಡೆಸಿದ ಪೊಲೀಸರಿಗೆ ಆಕೆ ಮನೆಯ ಚಿನ್ನಾಭರಣಗಳನ್ನು ವ್ಯಕ್ತಿಯೊಬ್ಬನ ಸಹಾಯದಿಂದ ತವರು ಮನೆಗೆ ಸಾಗಿಸಿದ್ದಾಳೆ ಎಂಬುದು ತಿಳಿಯಿತು. ಪರಿಚಯದ ಒಬ್ಬ ವ್ಯಕ್ತಿಯ ಕೈಯಲ್ಲಿ ಈಕೆ ಚಿನ್ನಾಭರಣ ಕಳುಹಿಸಿದ್ದು, ಈಗ ಆತನನ್ನೂ ಬಂಧಿಸಲಾಗಿದೆ.
ಫೋನ್‌ನಲ್ಲಿ ಸಿಕ್ಕಿಬಿದ್ದಳು
ಪೊಲೀಸರಿಗೆ ಸೊಸೆಯ ಮೇಲೆ ಡೌಟ್ ಇತ್ತಾದರೂ ಅದು ಪ್ರೂವ್ ಆಗಿದ್ದು ಒಂದು ಫೋನ್ ಕಾಲ್ ಮೂಲಕ. ಮನೆಯಲ್ಲಿ ನಡೆದ ಕಳವಿಗೆ ಸಂಬಂಧಿಸಿ ಪೊಲೀಸರು ತನ್ನ ಮೇಲೆ ಕಣ್ಣಿಟ್ಟಿದ್ದಾಳೆ ಎನ್ನುವುದು ತಿಳಿಯುತ್ತಿದ್ದಂತೆಯೇ ಸೊಸೆಗೆ ಆತಂಕ ಶುರುವಾಗಿದೆ. ಇನ್ನು ತನ್ನ ತವರು ಮನೆಗೆ ಹೋಗಿ ತಪಾಸಣೆ ನಡೆಸಬಹುದೇನೋ ಎನ್ನುವ ಭಯ ಶುರುವಾಗಿದೆ. ಆಗ ಆಕೆ ಚಿನ್ನಾಭರಣವನ್ನು ತೆಗೆದುಕೊಂಡು ಹೋಗಿದ್ದ ವ್ಯಕ್ತಿಗೆ ಕರೆ ಮಾಡಿ ತವರಿನಲ್ಲಿ ಇಟ್ಟಿದ್ದ ಚಿನ್ನಾಭರಣವನ್ನು ಅಲ್ಲಿಂದ ಪಡೆದು ನೀನೇ ತಂದಿಟ್ಟುಕೋ ಎಂದು ಹೇಳಿದ್ದಾಳೆ. ಇದು ಆಕೆಯೇ ಕದ್ದು ಸಾಗಿಸಿದ್ದು ಎನ್ನುವುದು ಪ್ರೂವ್ ಆಯಿತು.
ಕೊನೆಗೆ ಸರಿಯಾಗಿ ವಿಚಾರಣೆ ಮಾಡಿದಾಗ ಒಪ್ಪಿಕೊಂಡಳು. ಅಲ್ಲಿಗೆ ಇಬ್ಬರು ಸೇರಿದ ಮಾಡಿದ ಕಿತಾಪತಿ ಬಯಲಾಯಿತು. ಈಗ ಇಬ್ಬರೂ ಬಂಧನಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ | ಹೊಳೆನರಸೀಪುರದಲ್ಲಿ ಸರಣಿ ಅಂಗಡಿ ಕಳವು