ಮಂಡ್ಯ: ಬಸ್ ಸರಿಯಾದ ಟೈಮಿಗೆ ಹೊರಡದೆ ಇದ್ದರೆ ಎಂಥವರಿಗಾದರೂ ಸಿಟ್ಟು ಬರುತ್ತದೆ. ಅದೂ ಬೆಳಗ್ಗೆ ಬೆಳಗ್ಗೆ, ಆಫೀಸ್‌ಗೆ ಹೋಗುವವರು, ಕಾಲೇಜಿಗೆ ಹೋಗುವವರು ಒಂದೊಂದು ಸೆಕೆಂಡ್ ಲೆಕ್ಕದಲ್ಲಿ ಟೈಮ್ ಮ್ಯಾನೇಜ್‌ಮೆಂಟ್ ಮಾಡಿಕೊಂಡು ಹೋಗ್ತಾರೆ. ಹಾಗಿರುವಾಗ ಒಂದು ಬಸ್ ನಿತ್ಯದ ಟೈಮಿಗಿಂತ ಅರ್ಧ ಗಂಟೆ ತಡವಾಗಿ ಹೊರಡುತ್ತದೆ ಅಂದ್ರೆ ಪ್ರಯಾಣಿಸಕರಿಗೆ ಬೆಂಕಿ ಹತ್ತಿದಂತೆ ಆಗಲ್ವಾ?
ಸೋಮವಾರ ಬೆಳಗ್ಗೆ ಶ್ರೀರಂಗಪಟ್ಟಣ ಬಸ್ ನಿಲ್ದಾಣದಲ್ಲಿ ಆಗಿದ್ದೂ ಅದೇ. ಪ್ರತಿದಿನ ಬೆಳಗ್ಗೆ ೭.೩೦ಕ್ಕೆ ಹೊರಡುತ್ತಿದ್ದ ಶ್ರೀರಂಗ ಪಟ್ಟಣ- ಮೈಸೂರು ಬಸ್ ಟೈಮಿಗೆ ಸರಿಯಾಗಿ ಹೊರಡದೆ ಇದ್ದುದರಿಂದ ಮಹಿಳೆಯರು ಸಿಟ್ಟಿಗೆದ್ದೇ ಬಿಟ್ಟರು. ಕಂಡಕ್ಟರ್ ಮತ್ತು ಡ್ರೈವರ್ ಆವಾಜ್ ಹಾಕಿಯೇ ಬಿಟ್ಟರು. ಅದರಲ್ಲೂ ಇವರೆಲ್ಲ ಟೆನ್ಶನ್‌ನಲ್ಲಿದ್ದರೆ ಆರಾಮವಾಗಿ ಸಿಗರೇಟು ಸೇದುತ್ತಿದ್ದ ಡ್ರೈವರ್‌ಗಂತೂ ಸಖತ್ ಕ್ಲಾಸ್ ತೆಗೆದುಕೊಂಡರು.
೭,೫೦ ದಾಟಿದರೂ ಇನ್ನೂ ಬಸ್ (ಕೆಎ 09 ಎಫ್ 4784) ಹೊರಡಿಸುತ್ತಿಲ್ಲ ಎಂದು ಮಹಿಳೆಯರು ಸಿಟ್ಟುಗೊಂಡಾಗ ಬಸ್ ೮.೦೦ ಗಂಟೆಗೆ ಹೊರಡೋದು ಎಂದು ಡ್ರೈವರ್ ಹೇಳಿದ. ಇದು ಮಹಿಳೆಯರನ್ನು ಇನ್ನಷ್ಟು ಕೆರಳಿಸಿತು. ಡ್ಯೂಟಿಗೆ ಹೋಗೊಕೆ ತಡವಾಗುತ್ತಿದೆ ಬೇಗ ಬನ್ನಿ ಎಂದು ಮಹಿಳಾ ಪ್ರಯಾಣಿಕರು ಕರೆದರೆ ಬಸ್ ಚಾಲಕ ಹಾಗೂ ನಿರ್ವಾಹಕ ಉಡಾಫೆ ಉತ್ತರ ನೀಡಿದ್ದರು. ನಮ್ ಟೈಮಿಗೇ ನಾವು ಹೊರಡೋದು ಅಂತ ಹೇಳಿದ್ದರು.
ಆಗ ಮಹಿಳೆಯರು ಯಾವ ಟೈಮ್ ನಿಮ್ದು.. ದಿನಾ ೭.೩೦ಕ್ಕೆ ಹೊರಡೋ ಗಾಡಿ ಇದು. ಹೊಸಬ್ರಾ ನೀವು, ನೀವು ಹೊಸಬರೇ ಇರಬಹುದು. ನಾವು ದಿನಾ ಪ್ರಯಾಣ ಮಾಡೋರು ಅಂತ ತರಾಟೆಗೆ ತೆಗೆದುಕೊಂಡರು. ಮಾತಿನ ಮಧ್ಯೆ ನಿರ್ವಾಹಕ ಮಹಿಳೆಯೊಬ್ಬರಿಗೆ ಏನು ಬೊಗಳ್ತಾ ಇದ್ದೀರಿ ಅಂತ ಕೇಳಿದ್ದೇ ಜಗಳ ತಾರಕಕ್ಕೇರಿತು. ʻಮರ್ಯಾದೆ ಕೊಟ್ಟು ಮಾತನಾಡಿ, ಅವರ್ಯಾರು ಗೊತ್ತಾ? ಮರ್ಯಾದೆ ಕೊಟ್ಟು ಮಾತನಾಡಿ. ಅವರ ವಯಸ್ಸಿಗೆ ಬೆಲೆ ಕೊಡಿ. ಅವರು ರಿಟೈಯರ್ಡ್ ಟೀಚರುʼʼ ಎಂದು ಹೇಳಿ ನಿರ್ವಾಹಕನನ್ನು ದಬಾಯಿಸಿದರು.
ʻನೋಡಿ ಮೇಡಂ.. ನಂಗೆ ನೀವು ಹೇಳಿದ ಹಾಗೆ ಬಸ್ ಬಿಡೋಕೆ ಆಗೊಲ್ಲ. ನಾನು ಟಿಸಿ ಕೊಟ್ಟಿರೋ ಟೈಮ್ ಪಾಲಿಸೋದು. ಎಂಟು ಗಂಟೆ ಅಂತ ಕೊಟ್ಟಿದ್ದಾರೆ. ಅದೇ ಟೈಮಿಗೆ ಹೊರಡಿಸ್ತೀನಿʼ ಅಂತ ನಿರ್ವಾಹಕ ಹೇಳಿದ. ಅಂತಿಮವಾಗಿ ಮಹಿಳೆಯರ ಆವಾಜ್‌ಗೆ ಕಂಗೆಟ್ಟ ಚಾಲಕ ಬಸ್‌ನ್ನು ನಿಧಾನವಾಗಿ ಚಲಾಯಿಸಲು ಶುರು ಮಾಡಿದ.
ಇದನ್ನೂ ಓದಿ | ಪತ್ನಿ ಎದುರಿಗೆ ಆವಾಜ್ ಹಾಕಿದ ಯುವಕನ ಹತ್ಯೆ ಮಾಡಿದ ರೌಡಿ ಶೀಟರ್!