Site icon Vistara News

Wood Smuggling: ವಿಕ್ರಮ್ ಸಿಂಹ ಕೇಸ್‌ನಲ್ಲಿ ಕಾನೂನು ಪ್ರಕಾರ ಕ್ರಮ: ಸಿಎಂ ಸಿದ್ದರಾಮಯ್ಯ

CM Siddaramaiah

ಬೆಂಗಳೂರು: ನಿರಪರಾಧಿಗಳಿಗೆ ಯಾರಿಗೂ ತೊಂದರೆ ಆಗಲು ಬಿಡಲ್ಲ. ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಶಿಕ್ಷೆ ಆಗುತ್ತದೆ? ತಪ್ಪು ಮಾಡದವರ ಮೇಲೆ ಯಾಕೆ ಕ್ರಮ ಆಗುತ್ತದೆ? ಏನೇ ಮಾಡಿದರೂ ನಮ್ಮ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅರಣ್ಯದಲ್ಲಿ ಮರ ಕಳವು ಆರೋಪದಲ್ಲಿ (Wood Smuggling) ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಅವರ ಸಹೋದರ ವಿಕ್ರಮ್ ಸಿಂಹ (Vikram Simha) ಅವರನ್ನು ಬಂಧಿಸಿರುವ ಪ್ರಕರಣಕ್ಕೆ ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ ಎಂದು ಉತ್ತರಿಸಿದ್ದಾರೆ.

ಇನ್ನು ಈ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯೆ ನೀಡಿ, ನಾವು ಯಾರನ್ನೂ ಟಾರ್ಗೆಟ್ ಮಾಡಿಲ್ಲ. ಅವರ ಹೇಳಿಕೆ ನೋಡಿದ ತಕ್ಷಣ ನಾನು ಮಾಹಿತಿಯನ್ನು ಪಡೆದುಕೊಂಡೆ. ಅವರ ಖಾಸಗಿ ಜಮೀನಿನಲ್ಲಿ ಮರ ಇದ್ದು ಅನುಮತಿ ಪಡೆದಿದ್ದರೆ ಯಾವುದೇ ಕೇಸ್ ಇಲ್ಲ. ಗಂಧದ ಮರ ಕಡಿದರೂ ತಪ್ಪಲ್ಲ. ಆದರೆ, ಅನುಮತಿ ಪಡೆದುಕೊಂಡಿರಬೇಕು, ಆದರೆ, ಸರ್ಕಾರಿ ಜಮೀನಿನಲ್ಲಿ ಮರ ಕಡಿದರೆ ಮಾತ್ರ ತಪ್ಪು. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಪ್ರತಿಕ್ರಿಯೆ ನೀಡಿ, ಅಕ್ರಮವಾಗಿ ಮರ ಕಡಿದಿರುವುದು ನಿಜ ಅಲ್ವಾ. ಕಾನೂನಿದೆ, ಕಾನೂನಾತ್ಮವಾಗಿ ಮರ ಕಡಿಯಬೇಕು. ಅನುಮತಿ ಇಲ್ಲದೆ ಮರವನ್ನು ಕಡಿದಿದ್ದಾರೆ. ಈಗ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ನನ್ನ ಅಮ್ಮ, ತಂಗೀನೂ ಅರೆಸ್ಟ್‌ ಮಾಡ್ಸಿ ಸರ್‌; ಸಿದ್ದರಾಮಯ್ಯ ವಿರುದ್ಧ ಪ್ರತಾಪ್‌ ಆಕ್ರೋಶ

ಮೈಸೂರು: ನನ್ನನ್ನು ಮುಗಿಸಲು ಎಲ್ಲ ಪ್ರಯತ್ನ ಮಾಡುತ್ತಿದ್ದೀರಿ. ಕೊನೆಗೆ ನನ್ನ ಜೀವ ತೆಗೆಯಬಹುದು ಅಷ್ಟೆ. ನನ್ನ ತಮ್ಮನನ್ನು ಸಿಕ್ಕಿಸಿ ಹಾಕಿದ್ದೀರಿ.. ಬೇಕಿದ್ದರೆ ನನ್ನ ವಯಸ್ಸಾದ ಅಮ್ಮ ಇದ್ದಾರೆ, ತಂಗಿ ಇದ್ದಾಳೆ, ಅವರನ್ನೂ ಅರೆಸ್ಟ್‌ ಮಾಡ್ಸಿ ಸರ್‌.. ನಿಮಗೆ ನಿಮ್ಮ ಮಗ ಎಂಪಿ ಆಗಬೇಕು ಅಷ್ಟೇ ಅಲ್ವಾ?; ಹೀಗೆಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಮುಂದೆ ಭಾವುಕರಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮೈಸೂರು ಸಂಸದ ಪ್ರತಾಪ್‌ ಸಿಂಹ (MP Pratapsimha).

ಅಕ್ರಮ ಮರ ಕಳವು ಪ್ರಕರಣದಲ್ಲಿ ಹಾಸನ ಪೊಲೀಸರು ಪ್ರತಾಪ್‌ಸಿಂಹ ಅವರ ಸಹೋದರ ವಿಕ್ರಮ್‌ ಸಿಂಹ (Brother Vikramasimha) ಅವರನ್ನು ಬಂಧಿಸಿದ್ದಾರೆ. ಇದು ಪ್ರತಾಪ್‌ ಸಿಂಹ ಅವರಿಗೆ ತುಂಬಾ ನೋವುಂಟು ಮಾಡಿದ್ದು. ಒಂದು ರಾಜಕೀಯಕ್ಕಾಗಿ ಹೀಗೆಲ್ಲ ಮಾಡುತ್ತಾರಾ ಎಂದು ಅವರು ಪ್ರಶ್ನಿಸಿದ್ದಾರೆ. ಅದರ ಜತೆಗೆ ಏನೇ ಮಾಡಿದರೂ ನಾನು ಗೆದ್ದು ಬರ್ತೇನೆ ಎಂಬ ವಿಶ್ವಾಸವನು ಅವರು ವ್ಯಕ್ತಪಡಿಸಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಸಂಸತ್‌ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಮನೋರಂಜನ್‌ ಗೆ ಪಾಸ್‌ ನೀಡಿದ ಆರೋಪದಲ್ಲೇ ಹೈರಾಣಾಗಿರುವ ಪ್ರತಾಪ್‌ ಸಿಂಹ ಅವರಿಗೆ ಈಗ ತಮ್ಮನ ಬಂಧನವೂ ಭಾರಿ ನೋವುಂಟು ಮಾಡಿದೆ.

ಭಾನುವಾರ ಮೈಸೂರಿನಲ್ಲಿ ತಮ್ಮನ ಬಂಧನದ ಪ್ರಕರಣದ ಹಿಂದೆ ಇರುವ ರಾಜಕೀಯವನ್ನು ಅವರು ಎಳೆ ಎಳೆಯಾಗಿ ಬಿಚ್ಚಿಟ್ಟರು. ಇದೆಲ್ಲವೂ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗಾಗಿ ಈ ರೀತಿಯ ನಾಟಕಗಳನ್ನು ಕ್ರಿಯೇಟ್‌ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನನ್ನ ತೇಜೋವಧೆ ಮಾಡಿದ್ದಾಯ್ತು.. ಈಗ ನನ್ನ ಕುಟುಂಬ ಟಾರ್ಗೆಟ್‌

ʻʻಸಿದ್ದರಾಮಯ್ಯ ಸರ್ ನೀವೊಬ್ಬ ಬ್ರಿಲಿಯಂಟ್ ಫಾದರ್, ಬ್ರಿಲಿಯಂಟ್ ಪೊಲಿಟೀಷಿಯನ್. ನಿಮ್ಮ ಮಗನನ್ನು ಎಂ.ಪಿ. ಮಾಡಿಕೊಳ್ಳುವ ಸಲುವಾಗಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದೀರಿ. ಎಫ್.ಐ.ಆರ್.ನಲ್ಲಿ ಹೆಸರಿಲ್ಲದಿದ್ದರು ನನ್ನ ತಮ್ಮನನ್ನು ಅರೆಸ್ಟ್ ಮಾಡಿಸಿದ್ದೀರಿ. ಮನೆಯಲ್ಲಿ ನನ್ನ ವಯೋವೃದ್ಧ ತಾಯಿ ಇದ್ದಾಳೆ. ನನ್ನ ತಂಗಿ ಇದ್ದಾಳೆ‌ ಅವರನ್ನು ಅರೆಸ್ಟ್ ಮಾಡಿಬಿಡಿ. ನನ್ನ ತೇಜೋವಧೆ ಮಾಡಿದ್ದಾಯ್ತು. ಈಗ ನನ್ನ ಕುಟುಂಬವನ್ನು ಮುಗಿಸಲು ಪ್ರಯತ್ನ ಮಾಡುತ್ತಿದ್ದೀರಿ.ʼʼ ಎಂದು ಹೇಳಿರುವ ಪ್ರತಾಪ್‌ ಸಿಂಹ ಅವರು, ಆದ್ರೆ ಒಂದು ನೆನಪಿಟ್ಟುಕೊಳ್ಳಿ, ಇದ್ಯಾವುದಕ್ಕೂ ನಾನು ಜಗ್ಗುವ ಮಗನಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಮಗನಿಗಾಗಿ ನೀವು ಯಾರನ್ನು ಬೇಕಾದರೂ ತುಳಿಯುತ್ತೀರಿ

ʻʻಮಾನ್ಯ ಸಿದ್ದರಾಮಯ್ಯ ಅವರಿಗೆ ಸಾಷ್ಟಾಂಗ ನಮಸ್ಕಾರಗಳು. ನಿಮ್ಮನ್ನು ನಾನು ಎರಡು ವಿಚಾರಕ್ಕೆ ಶ್ಲಾಘನೆ ಮಾಡಬೇಕು. ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ, ಮಗನನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲು ಯಾರನ್ನು ಬೇಕಾದರೂ ತುಳಿಯುತ್ತೀರಿ. ಇದನ್ನು ನಿಮ್ಮಿಂದ ಕಲಿಯಬೇಕು. ನೀವೊಬ್ಬ ಬ್ರಿಲಿಯೆಂಟ್ ಫಾದರ್.
ನಿಜಕ್ಕೂ‌ ನಿಮ್ಮನ್ನು ಮೆಚ್ಚಿದ್ದೇನೆ. ನಿಮ್ಮಂತಹ ತಂದೆ ಜಗತ್ತಿನಲ್ಲಿ ಯಾರಿಗೂ ಸಿಗಲ್ಲ. ಎಲ್ಲಾ ಮಕ್ಕಳಿಗೂ ನಿಮ್ಮಂತಹ ತಂದೆ ಸಿಗಲ್ಲ. ಮಗನ ಭವಿಷ್ಯಕ್ಕೆ ಪ್ರತಾಪ್ ಸಿಂಹ ಅಡ್ಡಿ‌ ಆಗಿದ್ದಾನೆ ಅಂತ ನನ್ನನ್ನು ಮುಗಿಸಲು ಮುಂದಾಗಿದ್ದೀರಿʼʼ ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ.

ಎಲ್ಲವನ್ನೂ ಡೈವರ್ಟ್‌ ಮಾಡಲು ನನ್ನ ಪ್ರಕರಣ ಬಳಸಿಕೊಂಡಿರಿ

ʻʻಎರಡನೇ ಕಾರಣ, ನೀವು ಬ್ರಿಲಿಯೆಂಟ್ ಪಾಲಿಟಿಷಿಯನ್. ಬೆಳಗಾವಿಯಲ್ಲಿ ಹಿಂದುಳಿದ ಮಹಿಳೆಯನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದಾರೆ. ಆ ವಿಚಾರವನ್ನು ಪಾರ್ಲಿಮೆಂಟ್ ಪಾಸ್ ವಿಚಾರ ಇಟ್ಟುಕೊಂಡು ಡೈವರ್ಟ್ ಮಾಡ್ತೀರಿ. ಮೀಡಿಯಾ ಅಟೆನ್ಷನ್ ಡೈವರ್ಟ್ ಮಾಡಿದ್ರಿ. ನೀವು, ನಿಮ್ಮ ಸಚಿವ ಸಂಪುಟದ ಸದಸ್ಯರು, ಡಿಸಿಎಂ‌ ಎಲ್ಲರೂ ಪಾರ್ಲಿಮೆಂಟ್ ಪಾಸ್ ಇಟ್ಕೊಂಡು ಮಾತಾಡ್ತೀರಿ. ನಿಮಗೆ 40 ವರ್ಷದ ಅನುಭವವಿದೆ. ನನ್ನ ಹೆಸರು ಇಟ್ಟುಕೊಂಡು ತನಿಖೆ ನಡೆಸಬೇಕೆಂದು ವಿಷಯ ಹಸ್ತಾಂತರಿಸಿದಿರಿ. ಇಲ್ಲಿ ನಿಮ್ಮ ಮಗ ಸುಪುತ್ರ ಮಿನಿಟ್ ಕೊಡುವ ಬದಲು ನನ್ನ ವಿರುದ್ಧ ತನಿಖೆ‌‌ ಆಗಬೇಕು ಅಂತಾರೆ. ನಿನ್ನೆ ಆರೂವರೆ ಕೋಟಿ ಚೆಕ್ ಬೌನ್ಸ್ ಮಾಡಿದ್ದು ಸಚಿವ ಮಧು ಬಂಗಾರಪ್ಪ. ಆರು ತಿಂಗಳು ಜೈಲು ಸಜೆಗೆ ಒಳಗಾಗಿರುವುದು ಮಧು ಬಂಗಾರಪ್ಪ. ಆದರೆ ಅರೆಸ್ಟ್‌ ಆಗಿದ್ದು ಪ್ರತಾಪ್ ಸಿಂಹನ ತಮ್ಮʼʼ ಎಂದು ಪ್ರತಾಪ್‌ ಸಿಂಹ ಬೇಸರ ತೋಡಿಕೊಂಡರು.

ʻʻಡಿ.16ರಂದು ಬೇಲೂರಿನ ಜಮೀನಿನ ವಿಚಾರಕ್ಕೆ ನನ್ನ ತಮ್ಮನ ಹೆಸರು ಎಳೆದು ತಂದಿರಿ. ಮರವನ್ನು ಕಡಿದಿದ್ದಾರೆ‌ ಎಂದು ಎಫ್ ಐ ಆರ್ ದಾಖಲು ಮಾಡಲಾಯಿತು. ಪ್ರಕರಣದಲ್ಲಿ‌ ಜಯಮ್ಮ, ರಾಜೇಶ್ ಶೆಟ್ಟಿ, ರವಿ ಎಂಬವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ರವಿ ಎಂಬವರು ಸಹಾಯ ಮಾಡಿದ್ದು ಅವರು ಪರಾರಿ ಆಗಿದ್ದಾರೆ. ಈವರಗೆ ಮೂವರನ್ನು ಹಿಡಿಯಲು ಆಗಿಲ್ಲ.ʼʼ ಎಂದು ಪ್ರತಾಪ್‌ಸಿಂಹ ಹೇಳಿದರು.

ʻʻಎಲ್ಲ ಮರಗಳನ್ನು ತಂದು ಹಾಸನದ ಅರಣ್ಯ ಭವನದಲ್ಲಿ ಇರಿಸಿದ್ದೀರಿ. ಡಿಸೆಂಬರ್‌ 24ನೇ ತಾರೀಖಿನವರಗೆ ನೀವು ಅವರನ್ನು ಬಂಧಿಸಲು ಸಾಧ್ಯವಾಗಿಲ್ಲ. ಈ ನಡುವೆ ಹನುಮ ಜಯಂತಿ‌ ಸಂದರ್ಭ ನಾನು ಒಂದು‌ ಹೇಳಿಕೆ ನೀಡಿದ್ದೆ.
ಅದಾದ ಎರಡೇ ಗಂಟೆಯಲ್ಲಿ ಪ್ರತಾಪ್ ಸಿಂಹನ ತಮ್ಮ ಮರಗಳ್ಳತನ ಮಾಡಿದ ಅಂತ ಕಾಂಗ್ರೆಸ್ ನವರು ಪೋಸ್ಟ್ ಹಾಕಿದ್ರಿ. ಎಫ್ ಐ ಆರ್ ನಲ್ಲಿ ನನ್ನ ತಮ್ಮನ ಹೆಸರೇ ಇಲ್ಲ. ಆದರೂ ಆತನನ್ನು ಬಂಧಿಸುವ ಮೂಲಕ ಪ್ರತಾಪ್ ಸಿಂಹನನ್ನ ಮುಗಿಸುವ ಯತ್ನ ಮಾಡಿದ್ದೀರಿ.ʼʼ ಎಂದು ಹೇಳಿದ್ದಾರೆ.

ʻʻನನ್ನ ತಮ್ಮ ತಲೆ ಮರೆಸಿಕೊಂಡಿದ್ದಾನಾ? ಎರಡು‌ ದಿನ ಮೊದಲೇ ನನ್ನ ತಮ್ಮ ಅರಣ್ಯ ಇಲಾಖೆಗೆ ತೆರಳಿ ಹೇಳಿಕೆ ದಾಖಲಿಸಿದ್ದಾನೆ. ಆತನ ವಿರುದ್ಧ ಎಫ್‌ಐ ಆರ್ ಆಗಿಲ್ಲ. ಆತ ತಲೆ ಮರೆಸಿಕೊಂಡಿರಲಿಲ್ಲ. ಯಾಕೆ‌ ದಾರಿ ತಪ್ಪಿಸುತ್ತಿದ್ದೀರಿ? ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ಪ್ರತಾಪ್ ಸಿಂಹನನ್ನು ಎಲ್ಲಾ‌ ರೀತಿ ತುಳಿಯುವ ಪ್ರಯತ್ನ ಮಾಡ್ತೀರಿ? ನನ್ನ ಚಾರಿತ್ರ್ಯ ವಧೆ ಮಾಡ್ತೀರಿ? ನನ್ನ ಕುಟುಂಬದವರನ್ನು ಬೀದಿಗೆ ಎಳೆ ತರುತ್ತಿದ್ದೀರಿ?ʼʼ ಎಂದು ಪ್ರತಾಪ್‌ ಸಿಂಹ ಪ್ರಶ್ನಿಸಿದ್ದಾರೆ.

ತಮ್ಮನ ಮೇಲೆ ಸುಳ್ಳು ಕೇಸು ಹಾಕಿಸಿದ್ದೀರಿ

ʻʻನಿನ್ನೆ ಮೂರು ಗಂಟೆಗೆ ಅರೆಸ್ಟ್ ಮಾಡಿದ್ದೀರಿ.? ಆದರೆ ಈವರೆಗೆ ಯಾಕೆ‌ ಕೋರ್ಟಿಗೆ ಪ್ರೊಡ್ಯೂಸ್ ಮಾಡಿಲ್ಲ.
ಪಿಸಿಎಫ್‌ಗೆ ಕರೆ ಮಾಡಿ‌ ಮಾತನಾಡುತ್ತಿದ್ದೀನಿ, ನಿಮ್ಮ ತಮ್ಮನಿಗೆ ತೊಂದರೆ ಕೊಡಲ್ಲ ಅಂತಿದಾರೆ. ಇಷ್ಟೊತ್ತು ಯಾಕೆ ಇಟ್ಕೊಂಡಿದ್ದೀರಿ.? ನನ್ನ ಮೇಲೆ‌ ಎರಡು‌ ಕ್ರಿಮಿನಲ್‌ ಕೇಸ್ ಹಾಕಿದ್ದೀರಿ. ಅಡಿಷನಲ್‌ ಎಸ್ಪಿ ಮೇಲೆ ಕಾರು ಹತ್ತಿಸಿದ ಅಂತ ಎಫ್‌ಐಆರ್ ಹಾಕಿಸಿದ್ದೀರಿ. ಈಗ ನನ್ನ ಕುಟುಂಬ ಎಳೆದು ತಂದಿದ್ದೀರಿ. ನಮ್ಮ ವಯೋವೃದ್ಧ ತಾಯಿ, ತಂಗಿ ಅರೆಸ್ಟ್ ಮಾಡಿ. ನಿಮ್ಮ‌ ಕುಟುಂಬ ರಾಜಕಾರಣವೇ ಮುಂದುವರಿಯಲಿʼʼ ಎಂದು ಆಕ್ರೋಶದಿಂದ ಹೇಳಿದ್ದಾರೆ ಪ್ರತಾಪ್‌ ಸಿಂಹ.

ಇದನ್ನೂ ಓದಿ: Wood Smuggling: ಸಂಸದ ಪ್ರತಾಪ್ ಸಿಂಹ ಸಹೋದರನ ಬಂಧನ; ಅರಣ್ಯದಲ್ಲಿ ಮರ ಕಳವು ಆರೋಪ

ʻʻನಿಮಗೆ ಬಹಳಷ್ಟು‌ ದಾರಿಗಳಿಲ್ಲ ಸರ್. ತಾಯಿ ಚಾಮುಂಡಿ, ಕಾವೇರಿ ತಾಯಿ ಬಿಡಲ್ಲ. ಮೈಸೂರು- ಕೊಡಗು ಜನರು ಬಿಡಲ್ಲ.”ʼ ಎಂದು ನೋವಿನಿಂದ ಹೇಳಿದ್ದಾರೆ ಪ್ರತಾಪ್‌ ಸಿಂಹ.

ಏನಿದು ಪ್ರಕರಣ?

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಂದಗೊಂಡನಹಳ್ಳಿಯಲ್ಲಿ ಮರಗಳ ಮಾರಣಹೋಮ ಆರೋಪದಲ್ಲಿ ವಿಕ್ರಮ್ ಸಿಂಹ ಅವರನ್ನು ಬಂಧಿಸಲಾಗಿದೆ. ಸದ್ಯ ಕೋಟ್ಯಂತರ ರೂಪಾಯಿ ಮೌಲ್ಯದ 126 ಮರಗಳನ್ನು ಕಡಿದು ಸಾಗಿಸಿದ ಆರೋಪ ವಿಕ್ರಮ್ ಸಿಂಹ ಅವರ ಮೇಲಿದೆ. ಹೀಗಾಗಿ ವಿಕ್ರಮ್ ಸಿಂಹ ವಿರುದ್ಧ ಕೇಸ್ ದಾಖಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ವಿಕ್ರಮ ವಿಚಾರಣೆ ಮಾಡಲಾಗುತ್ತಿದೆ. ಈ ಪ್ರಕರಣವೀಗ ರಾಜಕೀಯ ಬಣ್ಣವನ್ನು ಪಡೆದುಕೊಂಡಿದೆ.

Exit mobile version